ಸೀಗೆ ಕಾಯಿಯಲ್ಲ ಇದು ಸೀಗೆ ಸೊಪ್ಪು, ಅದ್ಭುತ ರುಚಿ ಹೊಂದಿರುವ ಈ ಕಾಡು ಸೊಪ್ಪು ಆರೋಗ್ಯದ ಗಣಿಯೂ ಹೌದು; ಕೃಷ್ಣ ಪ್ರಸಾದ್ ಗೋವಿಂದಯ್ಯ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ಸೀಗೆ ಕಾಯಿಯಲ್ಲ ಇದು ಸೀಗೆ ಸೊಪ್ಪು, ಅದ್ಭುತ ರುಚಿ ಹೊಂದಿರುವ ಈ ಕಾಡು ಸೊಪ್ಪು ಆರೋಗ್ಯದ ಗಣಿಯೂ ಹೌದು; ಕೃಷ್ಣ ಪ್ರಸಾದ್ ಗೋವಿಂದಯ್ಯ ಬರಹ

ಸೀಗೆ ಕಾಯಿಯಲ್ಲ ಇದು ಸೀಗೆ ಸೊಪ್ಪು, ಅದ್ಭುತ ರುಚಿ ಹೊಂದಿರುವ ಈ ಕಾಡು ಸೊಪ್ಪು ಆರೋಗ್ಯದ ಗಣಿಯೂ ಹೌದು; ಕೃಷ್ಣ ಪ್ರಸಾದ್ ಗೋವಿಂದಯ್ಯ ಬರಹ

ಸೀಗೆ ಸೊಪ್ಪು ನಿಮಗೆ ಗೊತ್ತಾ? ಈ ಪ್ರಶ್ನೆ ಕೇಳಿದ್ರೆ ಬಹುಶಃ ಕರ್ನಾಟಕದ ಎಲ್ಲಾ ಭಾಗದವರಿಗೂ ತಿಳಿಯಲಿಕ್ಕಿಲ್ಲ. ಇದು ಖಂಡಿತ ಸೀಗೆ ಕಾಯಿ ಗಿಡವಲ್ಲ. ಕಾಡಿನ ಭಾಗದಲ್ಲಿ ಸಿಗುವ ಈ ಸೊಪ್ಪಿನ ರುಚಿ ಅದ್ಭುತ, ಇದು ಆರೋಗ್ಯದ ಗಣಿಯೂ ಹೌದು. ಈ ಸೊಪ್ಪು ಬೇಕೆಂದರೆ ಮೈಸೂರಿನ ನಂಜರಾಜ ಬಹದ್ದೂರು ಛತ್ರದಲ್ಲಿ ನಡೆಯುವ ಸೊಪ್ಪು ಮೇಳಕ್ಕೆ ಹೋಗಬೇಕು.

ಸೀಗೆ ಸೊಪ್ಪು
ಸೀಗೆ ಸೊಪ್ಪು

ಕಾಡು ಹಾಗೂ ಬಯಲು ಪ್ರದೇಶಗಳಲ್ಲಿ ಬೆಳೆಯುವ ಹಲವಾರು ಸೊಪ್ಪುಗಳು ಆರೋಗ್ಯಕ್ಕೆ ಅಮೃತದಂತೆ ಎನ್ನುವುದು ಸುಳ್ಳಲ್ಲ. ಅದೆಷ್ಟೋ ಸೊಪ್ಪುಗಳ ಬಗ್ಗೆ ನಮಗೆ ಅರಿವೇ ಇರುವುದಿಲ್ಲ, ಕಾಡು ಸೊಪ್ಪು ಎಂದು ನಾವು ನಿರ್ಲಕ್ಷ್ಯ ಮಾಡುತ್ತೇವೆ. ಆದರೆ ಇಂತಹ ಸೊಪ್ಪುಗಳಿಂದ ತಯಾರಿಸುವ ಖಾದ್ಯಗಳ ರುಚಿಯೂ ಅದ್ಭುತ. ಅಂತಹ ಸೊಪ್ಪಿನ ಸಾಲಿಗೆ ಸೇರುವುದು ಸೀಗೆ ಸೊಪ್ಪು.

ಮೈಸೂರು ಭಾಗದಲ್ಲಿ ಬೆಳೆಯುವ ಈ ಕಾಡು ಸೊಪ್ಪಿನ ಬಗ್ಗೆ ಹಲವರಿಗೆ ತಿಳಿದಿಲ್ಲ. ಇದರಿಂದ ಬಸ್ಸಾರು, ಪಲ್ಯ ಮಾಡಿದ ತಿನ್ನುತ್ತಾರೆ. ಇದರ ಸೇವನೆಯಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ. ಗರ್ಭಿಣಿಯರಿಗೆ ಈ ಸ್ವಲ್ಪ ಬಹಳ ಉತ್ತಮ. ಸೀಗೆ ಸೊಪ್ಪು ಎಂದರೇನು, ಇದರ ಆರೋಗ್ಯ ಪ್ರಯೋಜನಗಳೇನು, ಇದು ಎಲ್ಲಿ ಸಿಗುತ್ತೆ ಎಂಬ ವಿವರವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ ಕೆಪಿ ಎಂದೇ ಖ್ಯಾತಿಯಾಗಿರುವ ಕೃಷ್ಣ ಪ್ರಸಾದ್ ಗೋವಿಂದಯ್ಯ. ಅವರ ಬರಹವನ್ನು ನೀವು ಓದಿ, ಸೀಗೆ ಸೊಪ್ಪಿನ ಮಹತ್ವ ತಿಳಿಯಿರಿ.

ಕೆಪಿ ಅವರ ಬರಹ

ನಾವು ತೋಟ ಮಾಡಿದ ಹೊಸತು. ನಮ್ಮ ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕೊಳ್ಳೇಗಾಲ ಕಾಡಿನ ಪುಟ್ಟರಾಜು ಅವರ ಊರಿಂದ ಮುಳ್ಳಿನ ಗಿಡವೊಂದನ್ನು ತಂದು ಬೇಲಿ ಪಕ್ಕ ನೆಟ್ಟಿದ್ದರು. ತಲೆಗೆ ಹಾಕುವ ಸೀಗೆಕಾಯಿ ಗಿಡವಿರಬೇಕೆಂದು ನಾನೂ ಸುಮ್ಮನಾಗಿದ್ದೆ.

ಎರಡು ಮೂರು ವರ್ಷಗಳಾದರೂ ಸೀಗೆಕಾಯಿ ಬಿಡಲಿಲ್ಲ.'ಏ ಪುಟ್ಟರಾಜು, ಇದೇನು ಇಷ್ಟು ವರ್ಷ ಆದ್ರೂ ಸೀಗೆಕಾಯಿ ಬಿಡಲೇ ಇಲ್ಲವಲ್ಲ' ಎಂದೆ. 'ಅಯ್ಯೋ, ಇದು ತಲೆಗೆ ಹಾಕೋ ಸೀಗೇ ಕಾಯಿ ಅಲ್ಲ. ಊಟಕ್ಕೆ ಬಳಸೋ ಸೀಗೆ ಮೆಳೆ' ಎಂದು ನಕ್ಕರು. ಅವತ್ತೇ ಸೀಗೆ ಸೊಪ್ಪಿನ ಬಸ್ಸಾರು ಮಾಡಿಸಿದರು. ಹೊಸ ರುಚಿಗೆ ನಾನು ಫಿದಾ ಆದೆ.

ಸೀಗೆ ಸೊಪ್ಪಿನ ಸಾರು ಊಟ ಮಾಡೋದ್ರಿಂದ ಉಷ್ಣ ನಿವಾರಣೆಯಾಗ್ತದೆ, ಜೀರ್ಣಶಕ್ತಿ ವೃದ್ದಿಸುತ್ತದೆ. ಬಾಣಂತಿಯರಿಗಂತೂ ಇದು ಔಷಧೀಯ ಸೊಪ್ಪು.

ಮುಂಗಾರಿನ ಕಾಲಕ್ಕೆ ಕಾಡು ಹಳ್ಳಿಗಳಲ್ಲಿ ಸುತ್ತಾಡುವಾಗಲೆಲ್ಲಾ ಸೀಗೆ ಸೊಪ್ಪಿನ ಸಾರು ಮಾಡಿದ್ದೇವೆ. ಊಟ ಮಾಡಿಕೊಂಡು ಹೋಗಿ ಸಾ!' ಎಂದು ನಮ್ಮ ಮಹಿಳಾ ಸಂಘಗಳ ಸದಸ್ಯರು ಊಟಕ್ಕೆ ಒತ್ತಾಯಿಸುವುದು ಸಾಮಾನ್ಯ.

21-22 ಸೆಪ್ಟೆಂಬರ್‌ ನಂಜರಾಜ ಬಹದ್ದೂರು ಛತ್ರದಲ್ಲಿ ನಡೆಯಲಿರುವ 'ಸೊಪ್ಪಿನ ಮೇಳ'ಕ್ಕೆ ಸೀಗೆ ಸೊಪ್ಪು ಬರಲಿದೆ.

ಕನಕಪುರ ಕಾಡಿನ ಕೊಳಗೊಂಡನಹಳ್ಳಿಯ K M Nagaraju ನಿಮಗಾಗಿ ಸೀಗೆ ಕುಡಿ (acacia sinuata) ತರಲಿದ್ದಾರೆ. ಕಾಡಿನ ಕಾರೆ ಸೊಪ್ಪು, ಬೆಂಡ್ಲಿ ಸೊಪ್ಪು, ಅಕ್ಕೋಜಿ ಸೊಪ್ಪು ಮೊದಲಾದವುದಗಳ ಬೆರಕೆ ಸೊಪ್ಪು ತರ್ತಿದಾರೆ.

ಶನಿವಾರವೇ ಬಂದು ಬಿಡಿ. ಭಾನುವಾರ ಬಂದು ಸೊಪ್ಪು ಸಿಗಲಿಲ್ಲ ಎಂದು ನಿರಾಶರಾಗಬೇಡಿ. ಪೋಸ್ಟನ್ನು ಹೆಚ್ಚೆಚ್ಚು ಶೇರ್ ಮಾಡುವ ಮೂಲಕ ಕಾಡು ಹಳ್ಳಿಗರ ಪ್ರಯತ್ನಕ್ಕೆ ಬೆಂಬಲವಾಗಿ ನಿಲ್ಲಿ.

ಕೃಷ್ಣ ಪ್ರಸಾದ್ ಅವರು ಸೆಪ್ಟೆಂಬರ್ 15 ರಂದು ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಈಗಾಗಲೇ ಹಲವರು ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.

ಕೃಷ್ಣ ಪ್ರಸಾದ್ ಅವರ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು

‘ಇದು ಸಿಗೆಸೊಪ್ಪು ಸಾರ್, ನಮ್ಮ ಪುಣಜನೂರು ವಲಯ ಅರಣ್ಯ ಪ್ರದೇಶದಲ್ಲಿ ಕಾರೆಪಾಳ್ಳ್ಯ ಅಂತ ಕರ್ನಾಟಕ ಗಡಿ ಹಂಚಿಕೊಂಡಿದೆ ಇಲ್ಲಿನ ಸೊಲಿಗರು ಮತ್ತು ಬೆಡಕಂಪಣದವರು ಇದರ ಸೊಪ್ಪು ತಂದು ಬಸ್ಸಾರು ಮಾಡಿ ರಾಗಿ ಮುದ್ದೆ ಮಾಡಿ ನನಗೆ ಹಾಕಿದ್ದರು. ಸ್ವಲ್ಪ ಮುಳ್ಳು ಹಾಗೆ ಬಾಯಿಗೆ ಸಿಗುತ್ತದೆ ಆದರೆ ಆರೋಗ್ಯ ತುಂಬಾ ಉಪಕಾರಿ ಎಂದು ಹೇಳಿದರು. ಮತ್ತೆ ಇನ್ನೊಂದು ಉಪಯೋಗ ಇದೆ ಇದರ ಬಳ್ಳಿಪಟ್ಟೆ ಇದೆಯಲ್ಲಾ ಆನೆಗೆ ಒಳ್ಳೆಯ ಅಹಾರ ಅಲ್ಲದೆ ಇದರ ಪಟ್ಟೆಯಲ್ಲಿ ಉರಿ ಮಾಡಿ ಮೀನು ಹಿಡಿಯುವ ಬಲೆ ಮಾಡುತ್ತಾರೆ. ಆದರೆ ಇತ್ತೀಚೆಗೆ ಏಕೋ ಏನೋ ಇದು ಕಾಣೆಯಾಗಿದೆ. ನಮ್ಮ ಕಾಡಿನಲ್ಲಿ ಎಷ್ಟೊ ಆರೋಗ್ಯಕರ ಆಹಾರ ಪದಾರ್ಥಗಳನ್ನು ಇದೆ, ಆದರೆ ಇದನ್ನು ಉಪಯೋಗಿಸುವ ವಿಧಾನ ಗೊತ್ತಿಲ್ಲ ಸಾರ್‘ ಎಂದು ಡಿಎಸ್‌ ದೊರೆಸ್ವಾಮಿ ಎನ್ನುವವರು ಸೀಗೆ ಸೊಪ್ಪಿನ ಬಗ್ಗೆ ಕಾಮೆಂಟ್‌ನಲ್ಲಿ ವಿವರಣೆ ನೀಡಿದ್ದಾರೆ.

ಸೀಗೆ ಸೊಪ್ಪಿನ ಬಗ್ಗೆ ಪುಟ್ಟಸ್ವಾಮಿ ಕೆ ಎನ್ನುವವರು ಕಾಮೆಂಟ್ ಮಾಡಿದ್ದು ಹೀಗಿ: ನಮ್ಮ ಬಾಲ್ಯದಲ್ಲಿ ಮುಂಗಾರು ಮಳೆಗೆ ಚಿಗುರುವ ಸೀಗೆ ಸೊಪ್ಪು ಮತ್ತು ಕಳಲೆಯಲ್ಲಿ ಮಾಡಿದ ಖಾದ್ಯಗಳು ರುಚಿ ಮೊಗ್ಗುಗಳನ್ನು ಅರಳಿಸುತ್ತಾ ನೀಡುತ್ತಿದ್ದ ಸವಿಗೆ ಹೋಲಿಕೆಯೇ ಇಲ್ಲ. ಅಂಥ ಅನುಪಮ ರುಚಿ. ಈಗಲೂ ವರ್ಷಕ್ಕೆ ಒಂದೆರಡು ಬಾರಿ ಕಳಲೆ ಪಲ್ಯ. ಹಾಲು ಬೆರೆಸಿ ಮಾಡಿದ ಸೀಗೆ ಸೊಪ್ಪಿನ ಉಪ್ಪುಸಾರು ಇಲ್ಲದೆ ವರ್ಷವೊಂದು ಪೂರ್ತಿಯಾಗದು.

ಸೆಪ್ಟೆಂಬರ್ 21, 22 ಮೈಸೂರಿನಲ್ಲಿ ಸೊಪ್ಪು ಮೇಳ
ಸೆಪ್ಟೆಂಬರ್ 21, 22 ಮೈಸೂರಿನಲ್ಲಿ ಸೊಪ್ಪು ಮೇಳ

‘ತುಮಕೂರು ಜಿಲ್ಲೆ ಸಿದ್ಧರಬೆಟ್ಟದಲ್ಲಿ ಸಾಮಾನ್ಯ. ರಾಗಿ ಮುದ್ದೆ ಜೊತೆ ಚೆನ್ನಾಗಿರುತ್ತದೆ. ಸೀಗೆ ಸೊಪ್ಪಿನ ಸಾರು ಮಾಡಿದವರು, ಸೇವಿಸಿದವರು ವಿಶೇಷವಾದ ಅಡುಗೆ ರೀತಿ ಹೇಳಿ ಕೊಳ್ಳುತ್ತಾರೆ. ಮಾಹಿತಿ ಸಿಕ್ಕರೆ ಸಾಕು ಹುಡುಕಿಕೊಂಡು ಹೋಗಿ ಊಟ ಮಾಡುತ್ತೆನೆ‘ ಪದ್ಮರಾಭ ಎಚ್‌ಜೆ ಕಾಮೆಂಟ್ ಮಾಡಿದ್ದಾರೆ.

‘ಈ ಸಿಗೆ ಕುಡಿ ಸಿಗೆ ಪಲ್ಯೆ ನಮ್ಮ ಕಪ್ಪತ್ತಗುಡ್ಡದೊಳಗೆ ಬಹಳಷ್ಟು ಸಿಗುತ್ತದೆ ಇದರ ಪಲ್ಯದ ರುಚಿಯನ್ನ ನೋಡಿದವರು ಮಾತ್ರ ಈ ಸಿಗೆ ಕುಡಿಯನ್ನ ಉಪಯೋಗ ಮಾಡುತ್ತಾರೆ ಇಲ್ಲಾಂದ್ರೇ ಇಲ್ಲಾರಿ‘ ಎಂದು ಕಲಕಪ್ಪ ಜಲ್ಲಿಗೇರಿ ಗದಗದ ಕಪ್ಪತ್ತಗುಡ್ಡದಲ್ಲೂ ಈ ಸೀಗೆ ಸೊಪ್ಪು ಸಿಗುತ್ತದೆ ಎಂದು ಕಾಮೆಂಟ್ ಮೂಲಕ ತಿಳಿಸಿದ್ದಾರೆ.

Whats_app_banner