ಜಾಸ್ತಿ ವರ್ಷ ಬದುಕ ಬೇಕು ಅಂದ್ರೆ ಏನು ಮಾಡ್ಬೇಕು; ಸದಾ ಕುಳಿತೇ ಇರುವುದು ಸಾವಿಗೆ ಹತ್ತಿರ ಆದಂತೆ ಎನ್ನುತ್ತೆ ಅಧ್ಯಯನ
ಕನ್ನಡ ಸುದ್ದಿ  /  ಜೀವನಶೈಲಿ  /  ಜಾಸ್ತಿ ವರ್ಷ ಬದುಕ ಬೇಕು ಅಂದ್ರೆ ಏನು ಮಾಡ್ಬೇಕು; ಸದಾ ಕುಳಿತೇ ಇರುವುದು ಸಾವಿಗೆ ಹತ್ತಿರ ಆದಂತೆ ಎನ್ನುತ್ತೆ ಅಧ್ಯಯನ

ಜಾಸ್ತಿ ವರ್ಷ ಬದುಕ ಬೇಕು ಅಂದ್ರೆ ಏನು ಮಾಡ್ಬೇಕು; ಸದಾ ಕುಳಿತೇ ಇರುವುದು ಸಾವಿಗೆ ಹತ್ತಿರ ಆದಂತೆ ಎನ್ನುತ್ತೆ ಅಧ್ಯಯನ

ದೀರ್ಘಕಾಲ ಕುಳಿತೇ ಇರುವುದು ಅಥವಾ ಸಾಕಷ್ಟು ಹೊತ್ತು ಕುಳಿತುಕೊಂಡು ಕೆಲಸ ಮಾಡ್ತೀರಾ ಅಂದ್ರೆ ಸಾವಿಗೆ ಇನ್ನಷ್ಟು ಹತ್ರ ಆಗ್ತಾ ಇದೀರಾ ಅಂತ ಅರ್ಥ ಎನ್ನುತ್ತೆ ಅಧ್ಯಯನ. ಹಾಗಾದ್ರೆ ಇದರಿಂದ ಎದುರಾಗುವ ಅಪಾಯ ಕಡಿಮೆಯಾಗಿ, ಆಯುಷ್ಯ ಹೆಚ್ಚಬೇಕು ಅಂದ್ರೆ ಏನು ಮಾಡಬೇಕು ನೋಡಿ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಇತ್ತೀಚಿನ ಅಧ್ಯಯನವೊಂದರ ಪ್ರಕಾರ 12 ಗಂಟೆಗೂ ಹೆಚ್ಚು ಕಾಲ ಕುಳಿತ ಕೆಲಸ ಮಾಡುವವರಲ್ಲಿ ಅಥವಾ ಕುಳಿತೇ ಇರುವವರಲ್ಲಿ ಶೇ 38ರಷ್ಟು ಬೇಗ ಸಾಯುವ ಸಾಧ್ಯತೆ ಇದೆ ಎಂಬುದು ಸಾಬೀತಾಗಿದೆ. ಈ ಅಪಾಯವನ್ನು ಎದುರಿಸಲು ನೀವು ಏನು ಮಾಡಬಹುದು ನೋಡಿ

ಇತ್ತೀಚಿನ ದಿನಗಳಲ್ಲಿ ಕೆಲಸದ ಅವಧಿಯ ವಿಚಾರದಲ್ಲಿ ಹೆಚ್ಚು ಹೆಚ್ಚು ಚರ್ಚೆಗಳು ನಡೆಯುತ್ತಲೇ ಇವೆ. ಕಳೆದ ಕೆಲವು ದಿನಗಳ ಹಿಂದೆ 9 ಗಂಟೆಗೂ ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವುದರಿಂದ ಮರೆವಿನ ಸಮಸ್ಯೆ ಎದುರಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿತ್ತು. ಇದೀಗ ಹೊಸ ಅಧ್ಯಯನದ ಪ್ರಕಾರ ದೀರ್ಘಕಾಲ ಕುಳಿತೇ ಕೆಲಸ ಮಾಡುವುದರಿಂದ ನಾವು ಇನ್ನಷ್ಟು ಸಾವಿಗೆ ಹತ್ತಿರ ಆಗುತ್ತಿದ್ದೇವೆ ಎಂದು ಅರ್ಥವಂತೆ.

ಡೆಸ್ಕ್‌ ಜಾಬ್‌ ಎಂದ ಮೇಲೆ ಕುಳಿತು ದಿನವಿಡೀ ಅಥವಾ ದೀರ್ಘಕಾಲ ಕುಳಿತೇ ಇರುವುದು ಸಹಜ. ಆದರೆ ದೀರ್ಘಕಾಲ ಕುಳಿತೇ ಇರುವುದರಿಂದ ಒಂದಲ್ಲ ಎರಡಲ್ಲ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇತ್ತೀಚೆಗೆ ಬ್ರಿಟಿಷ್‌ ಜರ್ನಲ್‌ ಆಫ್‌ ಸ್ಪೋರ್ಟ್ಸ್‌ ಮೆಡಿಸಿನ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವು ಹೊಸ ಅಂಶವೊಂದು ತಿಳಿಸಿದೆ. ಆ ಅಧ್ಯಯನದ ಪ್ರಕಾರ ನಮ್ಮ ದೈನಂದಿನ ದಿನಚರಿಯಲ್ಲಿ ಸಣ್ಣ ಸಣ್ಣ ವ್ಯಾಯಾಮದ ವಿರಾಮಗಳನ್ನು ಸೇರಿಸುವುದು ಜಡ ಜೀವನಶೈಲಿಯ ಅಪಾಯಗಳನ್ನು ಎದುರಿಸಲು ಸಹಾಯ ಮಾಡುತ್ತದೆ.

ಅಧ್ಯಯನ ಏನು ಹೇಳುತ್ತೆ? ವಿವರ

ನಾರ್ವೆಯ ಟೋಮ್ಸ್‌ ವಿಶ್ವವಿದ್ಯಾಲಯ ಮತ್ತು ಡೆನ್ಮಾರ್ಕ್‌ನ ಆರ್ಹಸ್‌ ವಿಶ್ವವಿದ್ಯಾಲಯದ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಇವರು ಸ್ಪೀಡನ್‌ ಹಾಗೂ ನಾರ್ವೆಯಲ್ಲಿ 50 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನವರಲ್ಲಿ ಸಣ್ಣ ಅಥವಾ ಸಂಕ್ಷಿಪ್ತ ವ್ಯಾಯಾಮ ಅವಧಿಗಳ ಪ್ರಯೋಜನಗಳ ಮೇಲೆ ಗಮನ ಹರಿಸಿದ್ದಾರೆ.

ಈ ಅಧ್ಯಯನದ ಫಲಿತಾಂಶದ ಪ್ರಕಾರ ದಿನದಲ್ಲಿ 12 ಗಂಟೆಗಳ ಕಾಲ ಕುಳಿತೇ ಇರುವವರು ಅಥವಾ ಕುಳಿತು ಕೆಲಸ ಮಾಡುವವರಲ್ಲಿ ಬೇಗ ಸಾಯುವವರ ಸಂಖ್ಯೆ ಶೇ 38ರಷ್ಟಿದೆ. ಆದರೆ ದೀರ್ಘಕಾಲ ಕುಳಿತೇ ಇದ್ದರೂ ಪ್ರತಿದಿನ ಕೇವಲ 20 ರಿಂದ 25 ನಿಮಿಷಗಳ ಕಾಲ ವ್ಯಾಯಾಮದಲ್ಲಿ ತೊಡಗಿಸುವ ಮೂಲಕ ಈ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ನೀವು ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವವರಾದರೆ ಈ ಬಗ್ಗೆ ಗಮನ ಹರಿಸುವುದು ಬಹಳ ಅವಶ್ಯ.

ಆ ಅಧ್ಯಯನ ಕಂಡುಕೊಂಡ ಇನ್ನೊಂದು ಸತ್ಯ ಎಂದರೆ ದೀರ್ಘಕಾಲ ಕುಳಿತೇ ಇರುವುದರಿಂದ ಸಾವಿಗೆ ಹತ್ತಿರವಾಗುವುದನ್ನು ತಪ್ಪಿಸಲು ತೀವ್ರತರದ ವ್ಯಾಯಾಮಗಳನ್ನೇ ಮಾಡಬೇಕು ಎಂದೇನಿಲ್ಲ. ಚುರುಕಾದ ನಡಿಗೆ (ಬ್ರಿಕ್ಸ್‌ ವಾಕ್‌), ಬೈಕ್‌ ರೈಡ್‌, ಮಕ್ಕಳು ಅಥವಾ ಸಾಕುಪ್ರಾಣಿಗಳೊಂದಿಗೆ ಆಟವಾಡುವುದು ಇಂತಹ ಸಣ್ಣ ಸಣ್ಣ ಚಟುವಟಿಕೆಗಳು ಗಮನಾರ್ಹವಾದ ವ್ಯತ್ಯಾಸವನ್ನು ಮಾಡಬಹುದು. ಸಹಜವಾಗಿ ಹೈಕಿಂಗ್‌ ಮತ್ತು ರನ್ನಿಂಗ್‌ನಂತಹ ಚಟುವಟಿಕೆ ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಇದರೊಂದಿಗೆ ಹಗುರವಾದ ನಡಿಗೆ ಕೂಡ ಸಕಾರಾತ್ಮಕ ಪರಿಣಾಮ ಬೀರಬಹುದು.

ಈ ಬಗ್ಗೆ ಮಾತನಾಡುವ ಫರಿದಾಬಾದ್‌ನ ಫೋರ್ಟಿಸ್‌ ಎಸ್ಕಾರ್ಟ್ಸ್‌ ಆಸ್ಪತ್ರೆಯ ಆಂತರಿಕ ವೈದ್ಯಕೀಯ ಸಲಹೆಗಾರ ಡಾ. ಅನುರಾಗ್‌ ಅಗರ್ವಾಲ್‌ ಈ ಸಂಶೋಧನೆಯನ್ನು ಬೆಂಬಲಿಸುತ್ತಾರೆ. ದೀರ್ಘಕಾಲ ಕುಳಿತೇ ಇರುವುದು ಅಥವಾ ಕುಳಿತು ಕೆಲಸ ಮಾಡುವುದರಿಂದ ಸ್ಥೂಲಕಾಯತೆ, ಹೃದ್ರೋಗ, ಮಧುಮೇಹದಂತಹ ಸಮಸ್ಯೆಗಳು ಮತ್ತು ವಿವಿಧ ಕ್ಯಾನ್ಸರ್‌ಗಳ ಅಪಾಯವೂ ಹೆಚ್ಚುವ ಸಾಧ್ಯತೆ ಇದೆ ಎಂಬುದನ್ನು ಈ ಹಿಂದೆಯೇ ಹಲವು ಅಧ್ಯಯನಗಳು ಸಾಬೀತು ಪಡಿಸಿವೆ ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ. ದೀರ್ಘಾವಧಿ ಕುಳಿತುಕೊಳ್ಳುವುದರಿಂದ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರಿಂದ ತೂಕ ಹೆಚ್ಚಳವಾಗುವುದು ಸಹಜ ಮತ್ತು ಇದು ಸಂಭಾವ್ಯ ಚಯಾಪಚಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ದೀರ್ಘಕಾಲ ಕುಳಿತೇ ಇರುವ ಋಣಾತ್ಮಕ ಪರಿಣಾಮಗಳನ್ನು ಎದುರಿಸಲು ನಿಯಮಿತ ವಿರಾಮಗಳು, ಸ್ಟ್ಯಾಂಡಿಂಗ್‌ ಡೆಸ್ಕ್‌ ಮತ್ತು ದಿನವಿಡೀ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಡಾ. ಅಗರ್ವಾಲ್‌ ಶಿಫಾರಸು ಮಾಡಿದ್ದಾರೆ.

ದೀರ್ಘಕಾಲ ಕುಳಿತು ಕೆಲಸ ಮಾಡುವವರು 20 ರಿಂ 25 ನಿಮಿಷ ವ್ಯಾಯಾಮ ಮಾಡುವುದರಿಂದಾಗುವ ಪ್ರಯೋಜನಗಳು

ದೀರ್ಘಾಯುಷ್ಯದ ಮೇಲೆ ಪರಿಣಾಮ: ನಿಯಮಿತ ವ್ಯಾಯಾಮವು ನಮ್ಮ ಜೀವಿತಾವಧಿಯನ್ನು ಹೆಚ್ಚಿಸುತ್ತದೆ ಎಂದು ಸಾಬೀತಾಗಿದೆ. ಪ್ರತಿದಿನ ಕೇವಲ 20 ರಿಂ 25 ನಿಮಿಷಗಳ ಕಾಲ ಮಧ್ಯಮತರದ ವ್ಯಾಯಾಮವು ಹಲವು ಪ್ರಯೋಜನಗಳನ್ನು ಹೊಂದಿದೆ. ಇದು ವಿವಿಧ ಆರೋಗ್ಯ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮೂಲಕ ಜೀವಿತಾಧಿಯನ್ನು ಹೆಚ್ಚಿಸಬಹುದು.

ರೋಗದ ಅಪಾಯವನ್ನು ಕಡಿಮೆ ಮಾಡುವುದು: ನಿಯಮಿತ ವ್ಯಾಯಾಮವು ಹೃದ್ರೋಗ, ಟೈಪ್‌ 2 ಡಯಾಬಿಟಿಸ್‌ ಮತ್ತು ಕೆಲವು ರೀತಿಯ ಕ್ಯಾನ್ಸರ್‌ನಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಇದು ತೂಕ ನಿರ್ವಹಣೆಯಲ್ಲೂ ಸಹಾಯ ಮಾಡುತ್ತದೆ. ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟದ ನಿಯಂತ್ರಣಕ್ಕೂ ಸಹಕಾರಿ.

ಮಾನಸಿಕ ಆರೋಗ್ಯ ಮತ್ತು ಅರಿವಿನ ಪ್ರಯೋಜನ: ವ್ಯಾಯಾಮವು ದೈಹಿಕ ಆರೋಗ್ಯ ಮೇಲೆ ಮಾತ್ರವಲ್ಲ, ಮಾನಸಿಕ ಆರೋಗ್ಯದ ಮೇಲೂ ಸಾಕಷ್ಟು ಪರಿಣಾಮ ಬೀರುತ್ತದೆ. ಇದರಿಂದ ಅರಿವಿನ ಕಾರ್ಯವನ್ನು ಹೆಚ್ಚಿಸುತ್ತದೆ. ಖಿನ್ನತೆ, ಆತಂಕ ಹಾಗೂ ಒತ್ತಡದಂತಹ ಅಪಾಯವನ್ನು ಕಡಿಮೆ ಮಾಡುವ ಮೂಲಕ ಒಟ್ಟಾರೆ ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ.

ಜೀವನದ ಗುಣಮಟ್ಟ ಸುಧಾರಣೆ: ನಿಯಮಿತವಾದ ವ್ಯಾಯಾಮವು ಒಟ್ಟಾರೆ ಫಿಟ್‌ನೆಸ್‌ ಅನ್ನು ಸುಧಾರಿಸುವ ಮೂಲಕ, ಶಕ್ತಿಯ ಮಟ್ಟವನ್ನು ಹೆಚ್ಚಿಸುವ ಮತ್ತು ಉತ್ತಮ ನಿದ್ರೆಯ ಮಾದರಿಗಳನ್ನು ಉತ್ತೇಜಿಸುವ ಮೂಲಕ ಜೀವನದ ಉನ್ನತ ಗುಣಮಟ್ಟಕ್ಕೆ ಸಾಕಷ್ಟು ಕೊಡುಗೆ ನೀಡುತ್ತದೆ.

ದೀರ್ಘವಧಿಯಲ್ಲಿ ಕುಳಿತು ಕೊಳ್ಳುವುದರಿಂದ ಎದುರಾಗುವ ಋಣಾತ್ಮಕ ಪರಿಣಾಮಗಳನ್ನು ಎದುರಿಸಲು, ಒಟ್ಟಾರೆ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮ ಸುಧಾರಿಸಲು ದಿನಚರಿಯಲ್ಲಿ ಲಘು ವ್ಯಾಯಾಮಗಳನ್ನು ರೂಢಿಸಿಕೊಳ್ಳುವುದು ಅತೀ ಅವಶ್ಯ ಎಂದು ಈ ಅಧ್ಯಯನಗಳು ತೋರಿಸಿವೆ.

Whats_app_banner