ಕನ್ನಡ ಸುದ್ದಿ  /  Lifestyle  /  Health News Suffering From Health Problems Use These 10 Nutritious Vegetables In Your Diet Healthy Vegetables Bgy

ಪದೇ ಪದೇ ಅನಾರೋಗ್ಯ ಕಾಡ್ತಾ ಇದ್ಯಾ; ಪೋಷಕಾಂಶಯುಕ್ತ ಈ 10 ತರಕಾರಿಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸೋದು ಮರಿಬೇಡಿ

ಪದೇ ಪದೇ ಅನಾರೋಗ್ಯ ಕಾಡ್ತಾ ಇದೇ ಅಂದ್ರೆ ದೇಹದಲ್ಲಿ ಪೋಷಕಾಂಶಗಳ ಕೊರತೆಯೂ ಕಾರಣವಿರಬಹುದು. ಅದಕ್ಕಾಗಿ ನಾವು ವೈದ್ಯರ ಬಳಿಗೇ ಹೋಗಬೇಕು ಅಂತೇನಿಲ್ಲ. ಆಹಾರಗಳ ಮೂಲಕವೂ ಪೋಷಕಾಂಶವನ್ನು ಪಡೆಯಬಹುದು. ಅದ್ಭುತ ಪೋಷಕಾಂಶ ಹೊಂದಿರುವ ಈ 10 ತರಕಾರಿಗಳನ್ನು ನಿಮ್ಮ ಆಹಾರಕ್ರಮದಲ್ಲಿ ತಪ್ಪದೇ ಸೇವಿಸಿ.

ಪದೇ ಪದೇ ಅನಾರೋಗ್ಯ ಕಾಡ್ತಾ ಇದ್ಯಾ; ಪೋಷಕಾಂಶಯುಕ್ತ ಈ 10 ತರಕಾರಿಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸೋದು ಮರಿಬೇಡಿ
ಪದೇ ಪದೇ ಅನಾರೋಗ್ಯ ಕಾಡ್ತಾ ಇದ್ಯಾ; ಪೋಷಕಾಂಶಯುಕ್ತ ಈ 10 ತರಕಾರಿಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸೋದು ಮರಿಬೇಡಿ

ಆರೋಗ್ಯ ವಿಚಾರದಲ್ಲಿ ಆಹಾರದ ಪಾತ್ರವೂ ಮಹತ್ವದ್ದು. ನಾವು ಸೇವಿಸುವ ಆಹಾರಗಳು ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತವೆ. ಕೆಲವೊಮ್ಮೆ ನಾವು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರೆ ಅದಕ್ಕೆ ಪೋಷಕಾಂಶದ ಕೊರತೆಯೂ ಕಾರಣವಿರಬಹುದು. ಇದನ್ನು ನಾವು ಸೇವಿಸುವ ಆಹಾರಗಳಿಂದ ಪೂರೈಸಿಕೊಳ್ಳಬಹುದು.

ನಾವು ಪ್ರತಿನಿತ್ಯ ಸೇವಿಸುವ ತರಕಾರಿಗಳಲ್ಲಿ ಸಾಕಷ್ಟು ಪೋಷಕಾಂಶಗಳಿರುತ್ತವೆ. ಅವುಗಳು ದೇಹಕ್ಕೆ ಅಗತ್ಯವಿರುವ ವಿಟಮಿನ್‌, ಮಿನರಲ್ಸ್‌ಗಳನ್ನು ಒದಗಿಸುತ್ತವೆ. ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು, ಪ್ರೋಟೀನ್ ಮತ್ತು ಫೈಬರ್ನಂತಹ ಪೌಷ್ಟಿಕಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ 10 ಹಣ್ಣು, ತರಕಾರಿಗಳ ಬಗ್ಗೆ ಇಲ್ಲಿದೆ ಮಾಹಿತಿ.

1. ಬೆಂಡೆಕಾಯಿ: ಬೆಂಡೆಕಾಯಿಯಲ್ಲಿ ಕಡಿಮೆ ಕ್ಯಾಲೊರಿಯಿದ್ದು, ಇದರ ಸೇವನೆಯು ತೂಕ ಇಳಿಕೆಗೆ ಅತ್ಯುತ್ತಮ. ಇದರಲ್ಲಿರುವ ನಾರಿನಾಂಶವು ಜೀರ್ಣಕ್ರಿಯೆಗೆ ಒಳ್ಳೆಯದು. ಮಧುಮೇಹ ತಡೆಗಟ್ಟುವಲ್ಲಿ ಸಹಾಯ ಮಾಡುವ ಬೆಂಡೆಕಾಯಿಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುವುದರ ಜೊತೆಗೆ ಕ್ಯಾನ್ಸರ್‌ ಅನ್ನು ಸಹ ತಡೆಯಬಲ್ಲದು.

2. ಹೂಕೋಸು: ಹೂಕೋಸು ಸೇವನೆಯಿಂದ ದೊರಕುವ ಆರೋಗ್ಯ ಪ್ರಯೋಜನಗಳು ಹಲವು. ಅಧ್ಯಯನಗಳ ಪ್ರಕಾರ, ಸ್ತನ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಮತ್ತು ಅಂಡಾಶಯದ ಕ್ಯಾನ್ಸರ್ ಸೇರಿದಂತೆ ವಿವಿಧ ರೀತಿಯ ಕ್ಯಾನ್ಸರ್ ಅನ್ನು ತಡೆಯುವ ಶಕ್ತಿ ಹೂಕೋಸಿಗಿದೆ. ಕಡಿಮೆ ಕ್ಯಾಲೊರಿ ಹೊಂದಿರುವ ಈ ತರಕಾರಿಯಲ್ಲಿ ಹೇರಳವಾಗಿ ವಿಟಮಿನ್‌ ಬಿ ಅಂಶವಿದೆ. ಜೊತೆಗೆ ಮ್ಯಾಂಗನೀಸ್, ಮೆಗ್ನೀಸಿಯಮ್, ಫಾಸ್ಫರಸ್ ಮತ್ತು ಪೊಟ್ಯಾಸಿಯಮ್‌ನಂತಹ ಅಗತ್ಯ ಖನಿಜಗಳನ್ನು ಹೊಂದಿದೆ.

3. ಹಾಗಲಕಾಯಿ: ಕಹಿ ಗುಣವನ್ನು ಹೊಂದಿರುವ ಹಾಗಲಕಾಯಿ ಆರೋಗ್ಯಕ್ಕೆ ಬಹು ಉಪಕಾರಿ. ಮಧುಮೇಹ ಸಮಸ್ಯೆ ಇರುವವರು ಹಾಗಲಕಾಯಿ ರಸ ಸೇವನೆ ಮಾಡಿದರೆ ತುಂಬಾ ಪ್ರಯೋಜನವಿದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವ ಜೊತೆಗೆ ದೇಹದ ಕೊಲೆಸ್ಟ್ರಾಲ್ ಮಟ್ಟ ಕೂಡ ನಿಯಂತ್ರಣವಾಗುತ್ತದೆ. ದೇಹದ ತೂಕ ಕಡಿಮೆ ಮಾಡುವಲ್ಲಿ ಹಾಗಲಕಾಯಿ ಪಾತ್ರವನ್ನು ಮರೆಯುವಂತಿಲ್ಲ. ಒಟ್ಟಾರೆ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಗೆ ಅತ್ಯುತ್ತಮ ಆಹಾರ.

4. ಫ್ರೆಂಚ್ ಬೀನ್ಸ್: ಅತ್ಯುತ್ತಮ ನಾರಿನಾಂಶದ ಮೂಲವಾಗಿರುವ ಫ್ರೆಂಚ್ ಬೀನ್ಸ್ ಜೀರ್ಣಕ್ರಿಯೆಯನ್ನು ಸುಧಾರಿಸುವ ಉತ್ತಮ ಮೂಲವಾಗಿದೆ. ತೂಕ ನಷ್ಟವನ್ನು ಉತ್ತೇಜಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

5. ಎಲೆಕೋಸು: ಎಲೆಕೋಸಿನಲ್ಲಿ ವಿಟಮಿನ್ ಸಿ ಅಂಶಗಳಿದ್ದು, ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಯಮಿತವಾಗಿ ಇದರ ಸೇವನೆಯಿಂದ ಅನಾರೋಗ್ಯದ ಸಮಸ್ಯೆಯನ್ನು ದೂರ ಮಾಡಬಹುದು. ಈ ತರಕಾರಿಯಲ್ಲಿರುವ ಪೋಷಕಾಂಶಗಳು ಮತ್ತು ಖನಿಜಗಳು ವಿವಿಧ ರೀತಿಯ ಕ್ಯಾನ್ಸರ್ ಅನ್ನು ತಡೆಯುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಇದಲ್ಲದೆ, ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ಒಳ್ಳೆಯದು.

6. ಸೀಬೆಕಾಯಿ: ಸೀಬೆಕಾಯಿ ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಯಕೃತ್ತಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಸೀಬೆಕಾಯಿಯಲ್ಲಿ ಕಾರ್ಬೊಹೈಡ್ರೇಡ್ ಮತ್ತು ನಾರಿನಂಶ ಇರುವುದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು ಹಾಗೂ ಬೊಜ್ಜನ್ನು ನಿಯಂತ್ರಿಸುತ್ತದೆ. ಮಲಬದ್ಧತೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವ ಸೀಬೆ ಮೂತ್ರಪಿಂಡಗಳು ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಪೈಲ್ಸ್‌ಗೆ ಸೀಬೆಯ ಸೇವನೆ ಮನೆಮದ್ದಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸೀಬೆಕಾಯಿ ನೈಸರ್ಗಿಕ ಪರಿಹಾರವಾಗಿಯೂ ಕಾರ್ಯನಿರ್ವಹಿಸುತ್ತದೆ.

7. ಪಾಲಕ್‌ ಸೊಪ್ಪು: ಹಸಿರು ತರಕಾರಿಗಳಲ್ಲಿ ಪಾಲಕ್ ಸೊಪ್ಪು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಈ ಸೊಪ್ಪಿನಲ್ಲಿ ಸಹಜವಾದ ಔಷಧೀಯ ಗುಣಗಳಿವೆ. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಬಿ, ಸಿ, ಇ, ಪೊಟ್ಯಾಷಿಯಂ, ಕಬ್ಬಿಣ ಮತ್ತು ಒಮೆಗಾ 3 ಕೊಬ್ಬಿನ ಆಮ್ಲಗಳು ಹೇರಳವಾಗಿರುತ್ತದೆ. ಇದರ ಸೇವನೆಯಿಂದ ಆರೋಗ್ಯಕ್ಕೆ ಬೇಕಾದ ಉತ್ತಮ ಪೋಷಕಾಂಶಗಳನ್ನು ಪಡೆಯಬಹುದಾಗಿದೆ. ಇದರಲ್ಲಿ ಕಬ್ಬಿಣಾಂಶ ಹೆಚ್ಚಾಗಿರುವುದರಿಂದ, ಇದು ರಕ್ತವನ್ನು ಶುದ್ಧಗೊಳಿಸುವುದಲ್ಲದೆ, ಎಲುಬುಗಳನ್ನು ಗಟ್ಟಿಗೊಳಿಸುತ್ತದೆ. ಪಾಲಕ್ ಸೊಪ್ಪಿನಲ್ಲಿ ನಾರಿನಂಶ ಹೆಚ್ಚಿರುತ್ತದೆ. ಹಾಗೆಯೇ ಇದು ಪ್ರೋಟಿನ್, ಕಬ್ಬಿಣಾಂಶದ ಆಗರ. ಪ್ರತಿನಿತ್ಯ ಇದರ ಸೇವನೆಯಿಂದ ನಮ್ಮ ದೇಹದಲ್ಲಿ ರಕ್ತದ ಚಲನೆಯನ್ನು ಸರಾಗವಾಗಿಸಬಹುದು. ಒಣ ಚರ್ಮದ ಸಮಸ್ಯೆ, ಕೆಂಪು ಗುಳ್ಳೆ ಮತ್ತು ತುರಿಕೆ ಸಮಸ್ಯೆ ಇದ್ದವರು ಪಾಲಕ್ ಸೊಪ್ಪು ಸೇವಿಸುವುದು ಉತ್ತಮ.

8. ಮೆಂತ್ಯ ಸೊಪ್ಪು: ರುಚಿಯಲ್ಲಿ ಕಹಿಯಾದರೂ ಮೆಂತ್ಯ ಸೊಪ್ಪಿನ ಸೇವನೆ ಆರೋಗ್ಯಕರ. ಮೆಂತ್ಯಸೊಪ್ಪಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಮತ್ತು ಬೀಟಾ ಕೆರೋಟಿನ್ ಅತ್ಯಧಿಕವಾಗಿದೆ. ಇವುಗಳ ಸಂಯೋಜನೆ ನಿಮ್ಮ ಶರೀರದಲ್ಲಿ ರೋಗನಿರೋಧಕ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ಸಾಮಾನ್ಯ ಕಾಯಿಲೆಗಳ ವಿರುದ್ಧ ಹೋರಾಡಲು ನೆರವಾಗುತ್ತದೆ. ಜೊತೆಗೆ, ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ನಿಮ್ಮ ಚರ್ಮಕ್ಕೆ ಹೊಳಪು ಮತ್ತು ಯೌವ್ವನ ನೀಡುತ್ತದೆ. ಕೊಲೆಸ್ಟ್ರಾಲ್ ಮತ್ತು ಮಧುಮೇಹದ ವಿರುದ್ಧ ಹೋರಾಡಲು ಸಹಕಾರಿಯಾಗಿರುವ ಮೆಂತ್ಯ ಸೊಪ್ಪು, ಚರ್ಮದ ಮೇಲಿನ ಕಲೆಯನ್ನು ಕಡಿಮೆ ಮಾಡಲು ಹಾಗೂ ಉದ್ದನೆಯ ಆರೋಗ್ಯಕರ ಕೂದಲನ್ನು ಪಡೆಯಲು ನೆರವಾಗುತ್ತದೆ.

9. ಬದನೆಕಾಯಿ: ನಾರಿನಾಂಶ ಸಮೃದ್ಧವಾಗಿರುವ ಬದನೆಕಾಯಿ ಸೇವನೆಯು ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿರಿಸಲು ಸಹಕಾರಿಯಾಗಿರುವ ಈ ತರಕಾರಿ, ದೇಹದ ತೂಕ ನಿರ್ವಹಣೆಯಲ್ಲಿ ಹೆಚ್ಚಿನ ಪಾತ್ರ ವಹಿಸುತ್ತವೆ. ಇದರಲ್ಲಿರುವ ಸಂಯುಕ್ತಗಳು ಕ್ಯಾನ್ಸರ್ ಅನ್ನು ತಡೆಯುತ್ತದೆ, ವಯಸ್ಸಾಗುವುದನ್ನು ನಿಧಾನಗೊಳಿಸುತ್ತದೆ, ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಮೆದುಳನ್ನು ಆರೋಗ್ಯಕರವಾಗಿರಿಸುತ್ತದೆ.

10. ಕುಂಬಳಕಾಯಿ: ಕಬ್ಬಿಣಾಂಶ ಸಮೃದ್ಧವಾಗಿರುವ ಕುಂಬಳಕಾಯಿಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯವಿದೆ. ಕುಂಬಳಕಾಯಿಯಲ್ಲಿ ವಿಟಮಿನ್ ಎ ಸಮೃದ್ಧವಾಗಿದ್ದು, ಕಣ್ಣುಗಳ ದೃಷ್ಟಿಗೆ ಉತ್ತಮ ಆಯ್ಕೆ. ಕುಂಬಳಕಾಯಿಯಲ್ಲಿ ಆಂಟಿ-ಆಕ್ಸಿಡೆಂಟ್, ಆಂಟಿ-ಡಯಾಬಿಟಿಕ್ ಗುಣಲಕ್ಷಣಗಳು ಸೇರಿದಂತೆ ಉರಿಯೂತ ಶಮನಕಾರಿ ಗುಣಗಳಿವೆ. ಕುಂಬಳಕಾಯಿಯು ಕ್ಯಾರೋಟಿನಾಯ್ಡ್ ಸಂಯುಕ್ತವನ್ನು ಹೊಂದಿದ್ದು, ಇದು ಅಸ್ತಮಾದಂತಹ ಉಸಿರಾಟದ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತೆ. ಜೊತೆಗೆ ಖಿನ್ನತೆ-ಶಮನಕಾರಿ ಗುಣಲಕ್ಷಣಗಳನ್ನು ಹೊಂದಿದೆ.

ಒಟ್ಟಿನಲ್ಲಿ ಕಲುಷಿತ ವಾತಾವರಣ, ಕಲಬೆರಕೆ ಆಹಾರ ಪದಾರ್ಥಗಳ ಸೇವನೆಯಿಂದಾಗಿ ಆರೋಗ್ಯ ಸಮಸ್ಯೆಗಳೇ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಆರೋಗ್ಯಕರವಾಗಿರುವ, ಪೋಷಕಾಂಶಭರಿತವಾಗಿರುವ ತರಕಾರಿಗಳನ್ನು ಬಳಸುವುದು ಒಳ್ಳೆಯದು. ಇದರಿಂದಾಗಿ ಆರೋಗ್ಯದ ಜೊತೆಗೆ ಆಯಸ್ಸೂ ಹೆಚ್ಚಿಲಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)