ಕನ್ನಡ ಸುದ್ದಿ  /  Lifestyle  /  Health News Summer Foods What Is Hyperthermia How To Avoid It What Are The Foods That Reduce Body Heat Arc

Hyperthermia: ಏನಿದು ಹೈಪರ್ಥರ್ಮಿಯಾ? ಬಿಸಿಲ ಬೇಗೆ ನೀಗಿ ದೇಹ ತಂಪಾಗಲು ಈ ಸೂಪರ್‌ಫುಡ್‌ಗಳ ಸೇವನೆಗೆ ಆದ್ಯತೆ ನೀಡಿ

Summer Foods: ದೇಶದಲ್ಲಿ ತಾಪಮಾನ ಏರಿಕೆಯಾಗಿರುವ ಜೊತೆಗೆ ಬಿಸಿಗಾಳಿಯ ಪ್ರಮಾಣವು ಹೆಚ್ಚಿದೆ. ಈ ದಿನಗಳಲ್ಲಿ ಹೈಪರ್ಥರ್ಮಿಯಾದಂತಹ ಸಮಸ್ಯೆಗಳು ಉದ್ಭವವಾಗುವುದು ಸಹಜ. ಅತಿಯಾದ ಬಿಸಿಲಿನಿಂದ ದೇಹವನ್ನು ರಕ್ಷಿಸಿಕೊಳ್ಳಲು ಈ ಕೆಲವು ಸೂಪರ್‌ಫುಡ್‌ಗಳ ಸೇವನೆಗೆ ಆದ್ಯತೆ ನೀಡಬೇಕು.

ಏನಿದು ಹೈಪರ್ಥರ್ಮಿಯಾ? ಬಿಸಿಲ ಬೇಗೆ ನೀಗಿ ದೇಹ ತಂಪಾಗಲು ಈ ಸೂಪರ್‌ಫುಡ್‌ಗಳ ಸೇವನೆಗೆ ಆದ್ಯತೆ ನೀಡಿ
ಏನಿದು ಹೈಪರ್ಥರ್ಮಿಯಾ? ಬಿಸಿಲ ಬೇಗೆ ನೀಗಿ ದೇಹ ತಂಪಾಗಲು ಈ ಸೂಪರ್‌ಫುಡ್‌ಗಳ ಸೇವನೆಗೆ ಆದ್ಯತೆ ನೀಡಿ

ಈ ವರ್ಷ ಬಿಸಿಲಿನ ತಾಪ ಕೊಂಚ ಹೆಚ್ಚೇ ಇದೆ. ಎಲ್ಲೆಡೆ ಬಿಸಿಲು, ಉಷ್ಣಾಂಶ ಏರಿಕೆಯಾಗುತ್ತಿದೆ. ಸುಡು ಬಿಸಿಲಿನಿಂದಾಗಿ ದೇಹದ ಉಷ್ಣಾಂಶದಲ್ಲೂ ಹೆಚ್ಚಳವಾಗುತ್ತಿದೆ. ಬಹಳಷ್ಟು ಜನರು ಹೈಪರ್ಥರ್ಮಿಯಾ ಸ್ಥಿತಿ ತಲುಪುತ್ತಿದ್ದಾರೆ. ದೇಹದ ಉಷ್ಣತೆಯು ಸಾಮಾನ್ಯ ಸ್ಥಿತಿಗಿಂತ ಹೆಚ್ಚಾಗಿದ್ದರೆ ಅದನ್ನು ಹೈಪರ್ಥರ್ಮಿಯಾ ಎಂದು ಕರೆಯುತ್ತಾರೆ. ಇದು ಜ್ವರದಿಂದಾಗುವುದಲ್ಲ, ಸೂರ್ಯನ ಬಿಸಿಲಿಗೆ ಬಹಳ ಸಮಯದವರೆಗೆ ಒಡ್ಡಿಕೊಳ್ಳುವುದರಿಂದ ಆಗುವ ಸ್ಥಿತಿಯಿದು. ಬೇಸಿಗೆಯ ಅತ್ಯಂತ ಬಿಸಿ ವಾತಾವರಣದಿಂದ ದೇಹದಲ್ಲಿ ಈ ರೀತಿಯ ಅನುಭವವಾಗುತ್ತದೆ. ಹೈಪರ್ಥರ್ಮಿಯಾಕ್ಕೆ ನಿರ್ಜಲೀಕರಣವೇ ಪ್ರಮುಖ ಕಾರಣ. ಅತಿಯಾಗಿ ಬಿಸಿಲಿನಲ್ಲಿ ಓಡಾಡುವ ಜನರು ಇದಕ್ಕೆ ತುತ್ತಾಗುತ್ತಾರೆ. ಈಗಂತೂ ಬಿಸಿಲಿನ ತಾಪಮಾನವು ಅಸಹನೀಯ ಮಟ್ಟಕ್ಕೆ ಏರುತ್ತಿದೆ. ಇಂತಹ ಸಮಯದಲ್ಲಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ತುಂಬಾ ಮುಖ್ಯ. ಹಾಗಾಗಿ ಬಿಸಿಗಾಳಿ ಪ್ರಭಾವದ ಪರಿಣಾಮಗಳನ್ನು ತಪ್ಪಿಸಲು ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ. ದೇಹದ ಉಷ್ಣತೆಯನ್ನು ಸ್ಥಿರವಾಗಿರಿಸಿಕೊಳ್ಳಲು ಸಹಾಯ ಮಾಡುವ ಆಹಾರಗಳನ್ನು ಸೇವಿಸಬೇಕು. ಹಾಗಾದರೆ ಅಂತಹ ಆಹಾರಗಳು ಯಾವುದು ಇಲ್ಲಿದೆ ಓದಿ.

ಹೈಪರ್ಥರ್ಮಿಯಾದಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುವ ಆಹಾರಗಳು

ನೀರು: ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಇರುವ ಉತ್ತಮ ಮಾರ್ಗವೆಂದರೆ ಯಾವಾಗಲೂ ಹೈಡ್ರೇಟ್‌ ಆಗಿರುವುದು. ಅದಕ್ಕೆ ಪ್ರತಿದಿನವೂ 2.7 ಲೀಟರ್‌ನಿಂದ 3.7 ಲೀಟರ್‌ವರೆಗೆ ನೀರು ಕುಡಿಯಿರಿ. ಅದು ದೇಹವನ್ನು ಹೈಡ್ರೇಟ್‌ ಆಗಿರಲು ಸಹಾಯ ಮಾಡುತ್ತದೆ.

ಕಲ್ಲಂಗಡಿ ಹಣ್ಣು: ಕಲ್ಲಂಗಡಿ ಹಣ್ಣು ಅತಿ ಹೆಚ್ಚು ನೀರಿನಂಶವಿರುವ ಆಹಾರವಾಗಿದೆ. ಇದರಲ್ಲಿ ಸುಮಾರು ಶೇ 90 ರಷ್ಟು ನೀರಿದೆ. ಇದು ಆಂಟಿಆಕ್ಸಿಡೆಂಟ್‌ನಿಂದ ಸಮೃದ್ಧವಾಗಿರುವುದರಿಂದ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ.

ಈರುಳ್ಳಿ: ಈರುಳ್ಳಿಗಳು ದೇಹವನ್ನು ತಂಪಾಗಿರಿಸುವ ಕಾರ್ಯವನ್ನಷ್ಟೇ ಮಾಡುವುದಿಲ್ಲ, ಅದು ಸನ್‌ಸ್ಟ್ರೋಕ್‌ನಿಂದಲೂ ದೇಹವನ್ನು ರಕ್ಷಿಸುತ್ತದೆ. ಇದು ಬೇಸಿಗೆಯ ಸಾಮಾನ್ಯ ಕಾಯಿಲೆಗಳಿಂದಲೂ ದೇಹವನ್ನು ರಕ್ಷಿಸುವ ಸೂಪರ್‌ಫುಡ್‌ ಆಗಿದೆ.

ಸೌತೆಕಾಯಿ: ಕಲ್ಲಂಗಡಿ ಹಣ್ಣಿನಂತೆ ಸೌತೆಕಾಯಿಯೂ ಸಹ ಅತಿ ಹೆಚ್ಚು ನೀರಿನಂಶದಿಂದ ಕೂಡಿರುವ ತರಕಾರಿಯಾಗಿದೆ. ನಾರಿನಂಶದಿಂದ ಸಮೃದ್ಧವಾಗಿರುವುದರಿಂದ, ಬೇಸಿಗೆಯ ಅಜೀರ್ಣ ಸಮಸ್ಯೆಯನ್ನು ತಡೆಯುತ್ತದೆ.

ಮೊಸರು: ಮೊಸರು, ಬೇಸಿಗೆಯಲ್ಲಿ ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಬಹುದಾದ ಉತ್ತಮ ಡೈರಿ ಉತ್ಪನ್ನವಾಗಿದೆ. ಪ್ರೊಟೀನ್‌ ಭರಿತ ಆಹಾರಗಳಾದ ಮಾಂಸ, ಚಿಕನ್‌ಗಳು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತವೆ. ಮೊಸರಿನಲ್ಲಿ ಪ್ರೊಟೀನ್‌ ಅಧಿಕವಾಗಿದ್ದರೂ ಅದು ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ತಂಪಾಗಿರಿಸುತ್ತದೆ.

ಎಳನೀರು: ಬೇಸಿಗೆಯ ಸೂಪರ್‌ಫುಡ್‌ ಎಂದೇ ಹೆಸರುವಾಸಿಯಾಗಿರುವ ಎಳನೀರು ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಉತ್ತಮವಾಗಿದೆ. ನಿಮಗೆ ನೀರು ಕುಡಿಯಲು ಮನಸ್ಸಾಗದಿದ್ದರೆ ಎಳನೀರು ಅದಕ್ಕೆ ಒಳ್ಳೆಯ ಪರ್ಯಾಯ ಮಾರ್ಗವಾಗಿದೆ. ಇದರಲ್ಲಿ ವಿವಿಧ ಜೀವಸತ್ವಗಳಿದ್ದು, ಖನಿಜಗಳಿಂದ ಕೂಡಿದೆ. ಇದು ಬೇಸಿಗೆಯಲ್ಲಿ ದೇಹವನ್ನು ವಿವಿಧ ರೋಗಗಳಿಂದ ರಕ್ಷಿಸುತ್ತದೆ.

ಪುದೀನಾ ಎಲೆಗಳು: ಪುದಿನಾ ಎಲೆಗಳು ದೇಹವನ್ನು ರಿಫ್ರೆಶ್‌ ಮಾಡುವುದರ ಜೊತೆಗೆ ತಂಪಾಗಿರಿಸುತ್ತವೆ. ಬೇಸಿಗೆಯ ತಂಪು ಪಾನೀಯಗಳಾದ ಹಣ್ಣುಗಳ ಜ್ಯೂಸ್‌, ಲೆಮನ್‌ ಜ್ಯೂಸ್‌, ಐಸ್‌ ಟೀ ಮುಂತಾದವುಗಳಿಗೆ ಪುದೀನಾ ಎಲೆಗಳನ್ನು ಸೇರಿಸಿಕೊಳ್ಳಿ. ಜ್ಯೂಸ್‌ಗಳಿಗೆ ಪರಿಮಳ ಹೆಚ್ಚಿಸುವುದರ ಜೊತೆಗೆ ದೇಹವನ್ನು ತಂಪಾಗಿರಿಸುತ್ತದೆ.

ಅಲೋವೆರಾ: ಅಲೋವೆರಾವು ನೀರಿನಿಂದ ಕೂಡಿರುವ ಸಸ್ಯ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹವನ್ನು ತಂಪಾಗಿರಿಸಲು ಬಹಳ ಸಹಾಯ ಮಾಡುತ್ತದೆ. ಇದು ಉರಿಯೂತವನ್ನು ಗುಣಪಡಿಸುವ ಲಕ್ಷಣವನ್ನು ಹೊಂದಿದೆ. ಅಲೋವೆರಾ ಜೆಲ್‌ನ್ನು ನೇರವಾಗಿ ಚರ್ಮಕ್ಕೂ ಲೇಪಿಸಬಹುದು.

ಮಜ್ಜಿಗೆ: ಮಜ್ಜಿಗೆಯು ಮೊಸರಿನಷ್ಟೆ ಅದ್ಭುತ ಪ್ರಯೋಜನಗಳನ್ನು ಹೊಂದಿದೆ. ಪ್ರೋಟೀನ್‌ನಿಂದ ಕೂಡಿರುವ ಮಜ್ಜಿಗೆಯು ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸುತ್ತದೆ. ಬಿಸಿಲಿನ ದಿನಗಳಲ್ಲಿ ಕಾಣಿಸುವ ಕುರುಳಿನ ಸಮಸ್ಯೆಗಳಿಗೂ ಇದು ಉತ್ತಮವಾಗಿದೆ. ಇದು ದೇಹವನ್ನು ಬಹಳ ಬೇಗನೆ ರಿಫ್ರೆಶ್‌ಗೊಳಿಸುತ್ತದೆ.

ಸೊಪ್ಪು ತರಕಾರಿಗಳು: ಕ್ರೂಸಿಫರ್‌ ಅಥವಾ ಹಸಿರು ಎಲೆ ತರಕಾರಿಗಳೂ ಸಹ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಪಾಲಕ್‌, ಬ್ರೊಕೊಲಿ, ಕಾಲಿಫ್ಲವರ್‌, ಲೆಟಸ್‌, ಕ್ಯಾಬೇಜ್‌ ಮುಂತಾದ ತರಕಾರಿಗಳು ಹೆಚ್ಚಿನ ನೀರಿನಾಂಶ ಮತ್ತು ಜೀವಸತ್ವಗಳಿಂದ ಕೂಡಿದೆ.

ಅವಕಾಡೊ: ನೀವು ಡಯಟ್‌ನಲ್ಲಿದ್ದರೆ ಅವಕಾಡೊ ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಲು ಉತ್ತಮವಾಗಿದೆ. ಇದು ಆರೋಗ್ಯಕರ ಕೊಬ್ಬಿನಿಂದ ಕೂಡಿದೆ. ಇದು ದೇಹವನ್ನು ನಿರ್ಜಲೀಕರಣಗೊಳಿಸುವ ಇತರೆ ಕೊಬ್ಬಿನ ಆಹಾರಗಳಿಗಿಂತ ಭಿನ್ನವಾಗಿದೆ. ಇದು ದೇಹವನ್ನು ಹೈಡ್ರೀಕರಿಸಲು ಸಹಾಯ ಮಾಡುತ್ತದೆ. ದೇಹವು ಜೀವಸತ್ವಗಳನ್ನು ಹೀರಿಕೊಳ್ಳುವಂತೆ ಮಾಡುತ್ತದೆ.

ಸಿಟ್ರಸ್‌ ಹಣ್ಣುಗಳು: ದೇಹವನ್ನು ಹೈಡ್ರೇಟ್‌ ಮಾಡಲು ಸಿಟ್ರಸ್‌ ಹಣ್ಣುಗಳು ಉಪಯುಕ್ತವಾಗಿದೆ. ವಿಟಮಿನ್‌ ಸಿ ಯು ದೇಹವನ್ನು ಉಷ್ಣತೆಯಿಂದ ರಕ್ಷಿಸುತ್ತದೆ. ಸಿಟ್ರಸ್‌ ಹಣ್ಣುಗಳಾದ ಆರೆಂಜ್‌, ಲಿಂಬು, ಮೂಸಂಬಿ ಮುಂತಾದ ಹಣ್ಣುಗಳಿಂದ ತಯಾರಿಸಿದ ಪಾನೀಯಗಳನ್ನು ಸೇವಿಸುವುದು ಉತ್ತಮವಾಗಿದೆ.

ಬೇಸಿಗೆಯಲ್ಲಿ ನಾಲಿಗೆಗೆ ರುಚಿಸುವ ಆಹಾರಗಳನ್ನು ತಿನ್ನುವುದಕ್ಕಿಂತ ದೇಹಕ್ಕೆ ಹೆಚ್ಚಿನ ನೀರಿನಂಶ ಒದಗಿಸುವ ಆಹಾರಗಳನ್ನು ಸೇವಿಸಬೇಕು. ದೇಹದ ಉಷ್ಣತೆಯನ್ನು ಸ್ಥಿರವಾಗಿಡಲು ಮೇಲೆ ಹೇಳಿದ ಆಹಾರಗಳು ಉತ್ತಮವಾಗಿದೆ. ಇದಲ್ಲದೆ ಸಾಧ್ಯವಾದಷ್ಟು ಬೆಳಿಗ್ಗೆ 10 ರಿಂದ 5 ರವರೆಗೆ ಅಂದರೆ ಅತಿ ಬಿಸಿಲಿನ ಸಮಯದಲ್ಲಿ ಮನೆಯಲ್ಲಿಯೇ ಇರುವುದು ಉತ್ತಮ.