ಕನ್ನಡ ಸುದ್ದಿ  /  Lifestyle  /  Health News Summer Health Best Time To Drink Healthy Coconut Water What Is Good Time To Drink Coconut Water Bgy

Coconut Water: ಯಾವ ಸಮಯದಲ್ಲಿ ಎಳನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ, ಇದರಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿಯಿರಿ

ಎಳನೀರು ಕುಡಿಯೋದು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದ್ರೆ ಯಾವ ಸಮಯದಲ್ಲಿ ಎಳನೀರು ಕುಡಿಬೇಕು ಅನ್ನೋದು ಕೂಡ ಮುಖ್ಯ. ಯಾವ ಹೊತ್ತಿನಲ್ಲಿ ಕುಡಿದ್ರೆ ಹೆಚ್ಚು ಪ್ರಯೋಜನ ಎಂಬುದು ನಿಮಗೆ ಗೊತ್ತಿಲ್ಲ ಅಂದ್ರೆ ಈ ಸ್ಟೋರಿ ನೋಡಿ.

ಯಾವ ಸಮಯದಲ್ಲಿ ಎಳನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ, ಇದರಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿಯಿರಿ
ಯಾವ ಸಮಯದಲ್ಲಿ ಎಳನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ, ಇದರಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿಯಿರಿ

ಎಳನೀರನ್ನು ಅನೇಕರು ಪವಾಡ ಪಾನೀಯವೆಂದು ಪರಿಗಣಿಸಿದ್ದಾರೆ. ಅನೇಕ ರೋಗಗಳಿಗೆ ಔಷಧಿಯಾಗಿ ಕಾರ್ಯನಿರ್ವಹಿಸುವ ಎಳನೀರು ಬೇಸಿಗೆಯ ಶಾಖವನ್ನು ಎದುರಿಸಲು ಅತ್ಯುತ್ತಮ ಪಾನೀಯಗಳಲ್ಲಿ ಒಂದಾಗಿದೆ. ಕಡಿಮೆ ಕ್ಯಾಲೋರಿಗಳನ್ನು ಹೊಂದಿದ ಎಳನೀರು ನೈಸರ್ಗಿಕ ಕಿಣ್ವಗಳು ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳನ್ನು ಹೊಂದಿದೆ. ಎಳನೀರು ಮ್ಯಾಂಗನೀಸ್, ವಿಟಮಿನ್ ಸಿ, ಕ್ಯಾಲ್ಸಿಯಂ ಹಾಗೂ ನಾರಿನಾಂಶದಂತಹ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಹಾಗಾಗಿ ಪ್ರತಿನಿತ್ಯ ಎಳನೀರು ಕುಡಿಯುವುದು ಬಹಳ ಅವಶ್ಯ. ಆದ್ರೆ ಸರಿಯಾದ ಸಮಯದಲ್ಲಿ ಎಳನೀರು ಕುಡಿಯುವುದರಿಂದ ನೀವು ಪಡೆಯಬಹುದಾದ ಆರೋಗ್ಯ ಪ್ರಯೋಜನಗಳು ದ್ವಿಗುಣಗೊಳ್ಳುತ್ತದೆ.

ಎಳನೀರನ್ನು ಕುಡಿಯಲು ಉತ್ತಮ ಸಮಯ

ದಾಹ ಶಮನ ಮಾಡುವ ಎಳನೀರನ್ನು ಸೇವಿಸಲು ಯಾವುದೇ ಸಮಯದ ಮಿತಿಯಿಲ್ಲ. ನೀವು ಇದನ್ನು ಹಗಲು, ರಾತ್ರಿಯಲ್ಲಿಯೂ ಸಹ ಕುಡಿಯಬಹುದು. ಆದರೆ ಕೆಲವು ನಿರ್ದಿಷ್ಟ ಸಮಯದಲ್ಲಿ ಅದನ್ನು ಕುಡಿಯುವುದರಿಂದ ಆರೋಗ್ಯ ವೃದ್ಧಿಗೆ ಸಹಾಯ ಮಾಡುತ್ತದೆ ಎನ್ನುತ್ತಾರೆ ತಜ್ಞರು.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದು ನೋಡಿ

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರನ್ನು ಕುಡಿಯುವುದರಿಂದ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಯಾಕೆಂದರೆ ಇದರಲ್ಲಿ ಲಾರಿಕ್ ಆಮ್ಲವಿದ್ದು, ಇದು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ತೂಕ ನಷ್ಟವನ್ನು ಸುಲಭಗೊಳಿಸುತ್ತದೆ. ನಿರ್ಜಲೀಕರಣ ಮತ್ತು ಮಲಬದ್ಧತೆಯ ವಿರುದ್ಧ ಹೋರಾಡಲು ಗರ್ಭಿಣಿಯರಿಗೆ ಎಳನೀರನ್ನು ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ. ಇದು ಗರ್ಭಾವಸ್ಥೆಯ ಸಾಮಾನ್ಯ ಲಕ್ಷಣಗಳಾದ ಬೆಳಗಿನ ಬೇನೆ ಮತ್ತು ಎದೆ ಉರಿಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

ವರ್ಕ್‌ ಔಟ್‌ ಮಾಡುವ ಮುನ್ನ ಅಥವಾ ನಂತರ

ಎಳನೀರು ಸೇವನೆಯಿಂದ ನಿಮ್ಮ ದೇಹ ನಿರ್ಜಲೀಕರಣಗೊಳ್ಳುವುದನ್ನು ತಪ್ಪಿಸಬಹುದು ಮತ್ತು ವ್ಯಾಯಾಮಕ್ಕೂ ಮೊದಲು ಎಳನೀರು ಕುಡಿಯುವುದರಿಂದ ಶಕ್ತಿ ಹೆಚ್ಚುತ್ತದೆ. ವ್ಯಾಯಾಮದ ನಂತರ, ಎಲೆಕ್ಟ್ರೋಲೈಟ್‌ಗಳನ್ನು ಮರುಪೂರಣಗೊಳಿಸಲು ಎಳನೀರಿನ ಸೇವನೆ ಸಹಾಯ ಮಾಡುತ್ತದೆ. ಅಲ್ಲದೆ ಆಯಾಸ ಮತ್ತು ಬಳಲಿಕೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಅತ್ಯುತ್ತಮ ಶಕ್ತಿ ವರ್ಧಕ ಪಾನೀಯಗಳಲ್ಲಿ ಒಂದಾಗಿದೆ.

ಊಟಕ್ಕೂ ಮೊದಲು

ಊಟಕ್ಕೆ ಮುಂಚೆ ಒಂದು ಗ್ಲಾಸ್ ಎಳನೀರನ್ನು ಕುಡಿಯುವುದರಿಂದ ಹೊಟ್ಟೆ ತುಂಬುತ್ತದೆ. ಇದು ಅತಿಯಾದ ಆಹಾರ ಸೇವನೆಗೆ ಬ್ರೇಕ್‌ ಹಾಕುತ್ತದೆ. ಎಳನೀರಿನಲ್ಲಿ ಕಡಿಮೆ ಕ್ಯಾಲೋರಿಗಳಿದ್ದು ಜೀರ್ಣಕ್ರಿಯೆಗೂ ಸುಲಭ. ಎಳನೀರನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ, ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸುತ್ತದೆ.

ಮಲಗುವ ಮುನ್ನ ಒಂದು ಲೋಟ ಎಳನೀರನ್ನು ಸೇವಿಸಿ

ಎಳನೀರಿನ ಸಿಹಿ ಮತ್ತು ಆಹ್ಲಾದಕರ ಸುಗಂಧವು ಮಾನಸಿಕ ಒತ್ತಡಕ್ಕೂ ರಾಮಬಾಣದಂತೆ ಕಾರ್ಯನಿರ್ವಹಿಸುವುದಾಗಿ ಅಧ್ಯಯನದಿಂದ ತಿಳಿದುಬಂದಿದೆ. ಅದು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಮ್ಮ ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ. ಒತ್ತಡದ ವಿರುದ್ಧ ಹೋರಾಡಲು ಮತ್ತು ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಮಲಗುವ ಮೊದಲು ಸ್ವಲ್ಪ ಎಳನೀರನ್ನು ಕುಡಿಯಿರಿ. ಇದಲ್ಲದೆ, ನಿಮ್ಮ ಮೂತ್ರನಾಳವನ್ನು ಶುದ್ಧೀಕರಿಸಲು ಎಳನೀರಿನ ಸೇವನೆ ಸಹಾಯ ಮಾಡುತ್ತದೆ. ಹೀಗಾಗಿ ಸೋಂಕುಗಳು ಮತ್ತು ಮೂತ್ರಪಿಂಡದ ಸಮಸ್ಯೆಗಳನ್ನು ತಡೆಯುತ್ತದೆ.

ಉತ್ತಮ ಹ್ಯಾಂಗೊವರ್ ಚಿಕಿತ್ಸೆ

ಕುಡಿತದ ಹ್ಯಾಂಗೊವರ್‌ನಿಂದ ಹೊರ ಬರಲು ಎಳನೀರು ಅತ್ಯುತ್ತಮ ಔಷಧಿ. ಅತಿಯಾದ ಆಲ್ಕೋಹಾಲ್‌ ಸೇವನೆಯಿಂದ ನಿರ್ಜಲೀಕರಣ ಉಂಟಾಗಬಹುದು. ಇದರಿಂದ ಮರುದಿನ ಬೆಳಿಗ್ಗೆ ತಲೆನೋವು ಮತ್ತು ವಾಕರಿಕೆಗೆ ಕಾಣಿಸಬಹುದು. ಇದಕ್ಕೆ ಪರಿಹಾರ ನೀಡುವ ಸಾಮರ್ಥ್ಯ ಎಳನೀರಿಗಿದೆ.

ಒಟ್ಟಿನಲ್ಲಿ ಆರೋಗ್ಯಕರ ಎಳನೀರನ್ನು ನಿರ್ದಿಷ್ಟ ವೇಳೆಯಲ್ಲಿ ಕುಡಿಯುವುದರಿಂದ ಇದರ ಉತ್ತಮ ಫಲಿತಾಂಶವನ್ನು ನಾವು ಪಡೆದುಕೊಳ್ಳಬಹುದು. ಬೇರೆ ಬೇರೆ ಸಂದರ್ಭಕ್ಕೆ ತಕ್ಕಂತೆ ಎಳನೀರು ನಮ್ಮ ಆರೋಗ್ಯದ ಅಗತ್ಯವನ್ನು ಪೂರೈಸುತ್ತದೆ.

(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ