Heat Wave: ಏರುತ್ತಿದೆ ತಾಪಮಾನ ಕೆಡುತ್ತಿದೆ ಆರೋಗ್ಯ; ಬಿಸಿ ಗಾಳಿಯಿಂದ ದೇಹವನ್ನು ರಕ್ಷಿಸಿಕೊಳ್ಳಲು ಈ ಸಲಹೆಗಳನ್ನು ತಪ್ಪದೇ ಪಾಲಿಸಿ-health news summer health heat wave raising temperature tips for preventing heat related illness heatstroke rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Heat Wave: ಏರುತ್ತಿದೆ ತಾಪಮಾನ ಕೆಡುತ್ತಿದೆ ಆರೋಗ್ಯ; ಬಿಸಿ ಗಾಳಿಯಿಂದ ದೇಹವನ್ನು ರಕ್ಷಿಸಿಕೊಳ್ಳಲು ಈ ಸಲಹೆಗಳನ್ನು ತಪ್ಪದೇ ಪಾಲಿಸಿ

Heat Wave: ಏರುತ್ತಿದೆ ತಾಪಮಾನ ಕೆಡುತ್ತಿದೆ ಆರೋಗ್ಯ; ಬಿಸಿ ಗಾಳಿಯಿಂದ ದೇಹವನ್ನು ರಕ್ಷಿಸಿಕೊಳ್ಳಲು ಈ ಸಲಹೆಗಳನ್ನು ತಪ್ಪದೇ ಪಾಲಿಸಿ

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ತಾಪಮಾನ ಏರಿಕೆಯಾಗಿ, ಬಿಸಿ ಗಾಳಿ ಬೀಸುತ್ತಿದೆ. ಬಳ್ಳಾರಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಬಿಸಿ ಗಾಳಿಯ ಪರಿಣಾಮ ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಬಿಸಿ ಗಾಳಿಯಿಂದ ದೇಹವನ್ನು ರಕ್ಷಿಸಿಕೊಳ್ಳುವುದು ಹೇಗೆ, ಬಿಸಿ ಗಾಳಿಯಿಂದ ಏನೆಲ್ಲ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂಬಿತ್ಯಾದಿ ವಿವರ ಇಲ್ಲಿದೆ.

ಬಿಸಿ ಗಾಳಿಯಿಂದ ದೇಹವನ್ನು ರಕ್ಷಿಸಿಕೊಳ್ಳಲು ಈ ಸಲಹೆಗಳನ್ನು ತಪ್ಪದೇ ಪಾಲಿಸಿ
ಬಿಸಿ ಗಾಳಿಯಿಂದ ದೇಹವನ್ನು ರಕ್ಷಿಸಿಕೊಳ್ಳಲು ಈ ಸಲಹೆಗಳನ್ನು ತಪ್ಪದೇ ಪಾಲಿಸಿ

ಈ ವರ್ಷ ಬಿಸಿಲ ಬೇಗೆ ಜೋರಾಗಿದೆ. ಹಿಂದೆಂದಿಗಿಂತಲೂ ತಾಪಮಾನ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ದೇಶದಾದ್ಯಂತ ಹಲವು ರಾಜ್ಯಗಳಲ್ಲಿ ಬಿಸಿಗಾಳಿ ಬೀಸುವ ಮುನ್ಸೂಚನೆ ನೀಡಿದೆ ಹವಾಮಾನ ಇಲಾಖೆ. ಕರ್ನಾಟಕದ ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿಸಿಗಾಳಿಯ ಕಾರಣದಿಂದ ಮಕ್ಕಳು ಸೇರಿದಂತೆ ಹಲವರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಬಿಸಿಗಾಳಿಯು ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ. ಕಲಬುರಗಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಯಾದಗಿರಿ, ಕೊಪ್ಪಳ ಜಿಲ್ಲೆಗಳಲ್ಲಿ ಬಿಸಿ ಗಾಳಿ ಬೀಸುವ ಬಗ್ಗೆ ಮುನ್ಸೂಚನೆ ಇದೆ.

ಬಿಸಿಗಾಳಿಯಿಂದ ಎದುರಾಗುವ ಆರೋಗ್ಯ ಸಮಸ್ಯೆಗಳು

ಬಿಸಿಗಾಳಿ ಹಾಗೂ ಅತಿಯಾದ ಬಿಸಿಲು ಎರಡೂ ಸೇರಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಈ ಸಮಯದಲ್ಲಿ ಪ್ರಮುಖ ಕಾಡುವುದು ನಿರ್ಜಲೀಕರಣ. ಜೊತೆಗೆ ಶಾಖಸೆಳೆತ (Heat Cramps) ಹಾಗೂ ಶಾಖಾಘಾತದಂತಹ ಸಮಸ್ಯೆಗಳು ಹೆಚ್ಚುತ್ತವೆ. ತಲೆಸುತ್ತು, ವಾಂತಿ, ವಾಕರಿಕೆ, ಅತಿಯಾದ ಬಳಲಿಕೆ, ಮೂರ್ಛೆ ಹೋಗುವುದು, ಉಸಿರಾಟದಲ್ಲಿ ವ್ಯತ್ಯಯ ಹೀಗೆ ಹಲವು ಸಮಸ್ಯೆಗಳು ಎದುರಾಗಬಹುದು. ಕೆಲವೊಮ್ಮೆ ಅತಿಯಾದ ಬಿಸಿಲು, ಬಿಸಿಗಾಳಿಯಿಂದ ಶಾಖಾಘಾತ ಉಂಟಾಗಿ ಇದು ಪ್ರಾಣಕ್ಕೂ ಸಂಚು ತರಬಹುದು. ಹೀಗಾಗಿ ಸಾಕಷ್ಟು ಎಚ್ಚರ ವಹಿಸುವುದು ಅಗತ್ಯ.

ಬಿಸಿಗಾಳಿಯಿಂದ ಆರೋಗ್ಯ ರಕ್ಷಿಸಿಕೊಳ್ಳಲು ಈ ಮಾರ್ಗ ಅನುಸರಿಸಿ

ಮನೆಯ ಒಳಗೆ ತಂಪಾಗಿರುವಂತೆ ನೋಡಿಕೊಳ್ಳಿ: ಬಿಸಿಗಾಳಿಯ ಪ್ರಭಾವದಿಂದ ರಕ್ಷಿಸಿಕೊಳ್ಳಲು ಮೊದಲು ಮನೆಯೊಳಗೆ ತಂಪಾಗಿ ಇರುವಂತೆ ನೋಡಿಕೊಳ್ಳಬೇಕು. ಕಿಟಕಿಗಳನ್ನು ತೆರೆದಿಡಿ. ಆದರೆ ಮಧ್ಯಾಹ್ನದ ವೇಳೆಯಲ್ಲಿ ಸೂರ್ಯನ ಕಿರಣಗಳು ನೇರವಾಗಿ ಮನೆಯೊಳಗೆ ಬೀಳದಂತೆ ನೋಡಿಕೊಳ್ಳಿ. ಏರ್‌ಕಂಡೀಷನರ್‌ ಅಥವಾ ಏರ್‌ಕೂಲರ್‌ ಬಳಸಿ. ಒಳಾಂಗಣ ಸಸ್ಯಗಳನ್ನು ಇರಿಸಿ. ಸಾಧ್ಯವಾದರೆ ದಿನಕ್ಕೊಮ್ಮೆ ಮನೆಯ ಕಾಂಪೌಂಡ್‌ ಸುತ್ತಲೂ ಹಾಗೂ ಟೆರೆಸ್‌ ಮೇಲೆ ನೀರು ಹನಿಸಿ.

ಹೊರಾಂಗಣ ಚಟುವಟಿಕೆಗಳಿಗೆ ಸಮಯ ನಿಗದಿ ಮಾಡಿಕೊಳ್ಳಿ: ಅತಿಯಾದ ತಾಪಾಮಾನ ಹಾಗೂ ಬಿಸಿಗಾಳಿಯ ಸಂದರ್ಭ ಹೊರಗಡೆ ತಿರುಗಾಡುವುದರಿಂದ ಅಪಾಯ ಹೆಚ್ಚು. ಹಾಗಾಗಿ ಸಾಧ್ಯವಾದಷ್ಟು ಹೊರಾಂಗಣ ಚಟುವಟಿಕೆಗಳಿಗೆ ಸಮಯ ನಿಗದಿ ಮಾಡಿಕೊಳ್ಳಿ. ಬೆಳ್ಳಿಗ್ಗೆ 12 ಗಂಟೆಯ ಒಳಗೆ ಹಾಗೂ ಸಂಜೆ 4 ಗಂಟೆಯ ನಂತರ ಹೊರಗಡೆ ಹೋಗಿ. ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಹೊರಗಡೆ ಹೋಗುವುದನ್ನು ತಪ್ಪಿಸಿ. ಗಾಳಿಯಾಡುವ ಬಟ್ಟೆ: ತಾಪಾಮಾನ ಏರಿಕೆ ಹಾಗೂ ಬಿಸಿಗಾಳಿ ಬೀಸುವ ಸಮಯದಲ್ಲಿ ಸೂಕ್ತ ಬಟ್ಟೆ ಧರಿಸುವುದು ಮುಖ್ಯವಾಗುತ್ತದೆ. ತೆಳುವಾದ, ದೇಹಕ್ಕೆ ಹಗುರ ಎನ್ನಿಸುವ ಬಟ್ಟೆ ಧರಿಸಿ. ಬಿಗಿಯಾದ ಬಟ್ಟೆಯನ್ನು ತಪ್ಪಿಯೂ ಧರಿಸಬೇಡಿ. ಗಾಳಿಯಾಡುವಂತಿರುವ ಬಟ್ಟೆ ಧರಿಸುವುದು ಮುಖ್ಯವಾಗುತ್ತದೆ.

ದೈಹಿಕ ವ್ಯಾಯಾಮಗಳಿಗೆ ಮಿತಿ ಹೇರಿ: ಬಿಸಿಗಾಳಿ ಹೆಚ್ಚುವ ಸಂದರ್ಭ ಅತಿಯಾಗಿ ಏಕ್ಸ್‌ಸೈಜ್‌ ಮಾಡುವುದು ಕೂಡ ಅಪಾಯ. ಈ ವಾತಾವರಣದಲ್ಲಿ ಅತಿಯಾದ ದೇಹ ದಂಡಿಸುವುದರಿಂದ ಸುಸ್ತು ಕಾಡಬಹುದು, ಇದು ನಿರ್ಜಲೀಕರಣಕ್ಕೂ ಕಾರಣವಾಗುತ್ತದೆ. ಈ ವಾತಾವರಣದಲ್ಲಿ ಅತಿಯಾಗಿ ವ್ಯಾಯಾಮ ಮಾಡುವುದರಿಂದ ಕೆಲವೊಮ್ಮೆ ಹೃದಯ ಬಡಿತದಲ್ಲಿ ಏರುಪೇರಾಗಿ ಉಸಿರುಗಟ್ಟುವಂತೆ ಮಾಡಬಹುದು.

ಸನ್‌ಸ್ಕ್ರೀನ್‌ ಬಳಕೆ ಮರೆಯದಿರಿ: ಸನ್‌ಸ್ಕ್ರೀನ್‌ ಕೇವಲ ಚರ್ಮದ ಅಂದ ಹೆಚ್ಚಿಸುವುದು ಮಾತ್ರವಲ್ಲ, ಇದು ಬಿಸಿಗಾಳಿ ಹಾಗೂ ತಾಪಮಾನ ಏರಿಕೆಯಿಂದ ಉಂಟಾಗುವ ಚರ್ಮದ ಸಮಸ್ಯೆಗಳ ನಿವಾರಣೆಗೂ ಸಹಕಾರಿ. ಇದು ಚರ್ಮದ ತೇವಾಂಶ ಹೆಚ್ಚಲು ಕೂಡ ನೆರವಾಗುತ್ತದೆ. ಮನೆಯಿಂದ ಹೊರಗಡೆ ಹೋಗುವಾಗ ತಪ್ಪದೇ ಸನ್‌ಸ್ಕ್ರೀನ್‌ ಬಳಸಿ. ನಿಮ್ಮ ಸನ್‌ಸ್ಕ್ರೀನ್‌ನಲ್ಲಿ ಎಸ್‌ಪಿಎಫ್‌ ಅಂಶ ಇರುವಂತೆ ನೋಡಿಕೊಳ್ಳಿ. ಮನೆಯಿಂದ ಹೊರಡುವ ಅರ್ಧ ಗಂಟೆ ಮೊದಲು ಕ್ರೀಮ್‌ ಹಚ್ಚಿ.

ಮಕ್ಕಳು ಹಾಗೂ ಪ್ರಾಣಿಗಳಲ್ಲಿ ಕಾರಿನಲ್ಲಿ ಬಿಡದಿರಿ: ಈ ಸಮಯದಲ್ಲಿ ನಿಲ್ಲಿಸಿರುವ ಕಾರಿನೊಳಗೆ ತಪ್ಪಿಯೂ ಮಕ್ಕಳು ಹಾಗೂ ಸಾಕುಪ್ರಾಣಿಗಳನ್ನು ಬಿಡದಿರಿ. ಬಿಸಿಲಿನಲ್ಲಿ ನಿಲ್ಲಿಸಿರುವ ಕಾರಿನೊಳಗೆ ಬಿಸಿ ಹೆಚ್ಚಿರುತ್ತದೆ, ಇಂತಹ ಸಂದರ್ಭ ಮಕ್ಕಳನ್ನು ಕಾರಿನೊಳಗೆ ಬಿಟ್ಟು ಗ್ಲಾಸ್‌ ಮುಚ್ಚುವುದರಿಂದ ಮಕ್ಕಳು ಉಸಿರಾಟದ ಸಮಸ್ಯೆ ಎದುರಿಸಬಹುದು. ಸಾಧ್ಯವಾದಷ್ಟು ನಿಮ್ಮ ಕಾರ್‌ ಅನ್ನು ನೆರಳಿನಲ್ಲೇ ಪಾರ್ಕ್‌ ಮಾಡಿ.

ಸಾಕಷ್ಟು ನೀರು ಕುಡಿಯಿರಿ: ಬೇಸಿಗೆಯಲ್ಲಿ ಅತಿಯಾದ ಬಿಸಿಲು ಹಾಗೂ ಬಿಸಿಗಾಳಿಯ ಕಾರಣದಿಂದ ನಿರ್ಜಲೀಕರಣ ಸಮಸ್ಯೆ ಎದುರಾಗುವುದು ಸಹಜ. ನಿಜರ್ಲೀಕರಣದಿಂದ ಇನ್ನಿತರ ಹಲವು ಸಮಸ್ಯೆಗಳು ಎದುರಾಗಬಹುದು. ಹಾಗಾಗಿ ಸಾಕಷ್ಟು ನೀರು ಕುಡಿಯಬೇಕು. ದಿನದಲ್ಲಿ ಕನಿಷ್ಠ 4 ಲೀಟರ್‌ ನೀರು ಕುಡಿಯಿರಿ.

ಅತಿಯಾದ ಸಿಹಿ, ಆಲ್ಕೋಹಾಲಿಕ್‌ ಅಂಶ ಇರುವ ಪಾನೀಯಗಳ ಸೇವನೆ ಸಲ್ಲ: ಸಿಹಿ ಅಂಶ ಹೆಚ್ಚಿರುವ ಹಾಗೂ ಆಲ್ಕೋಹಾಲಿಕ್‌ ಅಂಶ ಇರುವ ಆಹಾರ ಪದಾರ್ಥಗಳ ಸೇವನೆಗೆ ಕಡಿವಾಣ ಹಾಕಿ. ಇದು ನಿರ್ಜಲೀಕರಣ ಸಮಸ್ಯೆಯನ್ನು ಹೆಚ್ಚಿಸಬಹುದು.

ಹೀಗಿರಲಿ ಆಹಾರ: ಬೇಸಿಗೆಯಲ್ಲಿ ಅದರಲ್ಲೂ ತಾಪಮಾನ ಏರಿಕೆಯಾಗಿರುವ ಸಂದರ್ಭ ನೀರಿನಾಂಶ ಹಾಗೂ ನಾರಿನಾಂಶ ಅಧಿಕವಾಗಿರುವ ಆಹಾರ ಪದಾರ್ಥಗಳ ಸೇವನೆಗೆ ಒತ್ತು ನೀಡಿ. ಕಲ್ಲಂಗಡಿ, ಸೌತೆಕಾಯಿ, ಕರ್ಜೂರ, ಟೊಮೆಟೊ, ಸೊಪ್ಪುಗಳ ಸೇವನೆಗೆ ಒತ್ತು ನೀಡಿ.

ಬಿಸಿ ಗಾಳಿಯಿಂದ ದೇಹವನ್ನು ರಕ್ಷಿಸಿಕೊಳ್ಳಲು ಸಾಧ್ಯವಾದಷ್ಟು ಮೇಲೆ ತಿಳಿಸಿರುವ ಈ ಕ್ರಮಗಳನ್ನು ಪಾಲಿಸಿ. ಆಗಾಗ ತಣ್ಣೀರು ಸ್ನಾನ ಮಾಡುವುದು ಕೂಡ ಬಿಸಿಗಾಳಿಯಿಂದ ದೇಹವನ್ನು ರಕ್ಷಿಸಿಕೊಳ್ಳಲು ಇರುವ ಉತ್ತಮ ಮಾರ್ಗ.