ಕನ್ನಡ ಸುದ್ದಿ  /  ಜೀವನಶೈಲಿ  /  ಬೇಸಿಗೆಯಲ್ಲಿ ಗರ್ಭಿಣಿಯರನ್ನು ಕಾಡಬಹುದು ನೂರಾರು ಸಮಸ್ಯೆ; ಗರ್ಭಾವಸ್ಥೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸಲಹೆಗಳನ್ನು ತಪ್ಪದೇ ಪಾಲಿಸಿ

ಬೇಸಿಗೆಯಲ್ಲಿ ಗರ್ಭಿಣಿಯರನ್ನು ಕಾಡಬಹುದು ನೂರಾರು ಸಮಸ್ಯೆ; ಗರ್ಭಾವಸ್ಥೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸಲಹೆಗಳನ್ನು ತಪ್ಪದೇ ಪಾಲಿಸಿ

ಬೇಸಿಗೆಯ ದಿನಗಳು ಗರ್ಭಿಣಿಯರಿಗೆ ಸಾಕಷ್ಟು ಸವಾಲುಗಳು ಎದುರಾಗುವಂತೆ ಮಾಡಬಹುದು. ಹೆಚ್ಚಿದ ಆದ್ರತೆಯು ನಿರ್ಜಲೀಕರಣ ಸಮಸ್ಯೆ ಸೇರಿದಂತೆ ಹಲವು ತೊಂದರೆಗಳನ್ನು ಉಂಟು ಮಾಡಬಹುದು. ಬೇಸಿಗೆಯಲ್ಲಿ ಗರ್ಭಿಣಿಯರು ಪಾಲಿಸಬೇಕಾದ ಕ್ರಮಗಳು ಬಗ್ಗೆ ಡಾ. ಮೀನಾ ಮುತ್ತಯ್ಯ ಅವರು ನೀಡಿದ ಸಲಹೆಗಳು ಇಲ್ಲಿವೆ.

ಗರ್ಭಾವಸ್ಥೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಲಹೆಗಳನ್ನು ತಪ್ಪದೇ ಪಾಲಿಸಿ
ಗರ್ಭಾವಸ್ಥೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಲಹೆಗಳನ್ನು ತಪ್ಪದೇ ಪಾಲಿಸಿ

ಬೇಸಿಗೆಯು ಗರ್ಭಿಣಿಯರಿಗೆ ಸವಾಲಿನ ಕಾಲ ಎನ್ನುವುದು ಸುಳ್ಳಲ್ಲ. ಹೆಚ್ಚಿದ ಆರ್ದ್ರತೆ ಮತ್ತು ಏರುತ್ತಿರುವ ತಾಪಮಾನದ ಕಾರಣದಿಂದಾಗಿ ಗರ್ಭಿಣಿಯರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾರೆ. ಈ ಸಮಯದಲ್ಲಿ ಗರ್ಭಿಣಿಯರು ಆರೋಗ್ಯಕರವಾಗಿ ಹಾಗೂ ಸಮಾಧಾನದಿಂದಿರಲು ಒಂದಿಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು. ಬೇಸಿಗೆಯಲ್ಲಿ ಗರ್ಭಿಣಿಯರು ಎದುರಿಸುತ್ತಿರುವ ಸವಾಲುಗಳೇನು, ಗರ್ಭಿಣಿಯರ ಆರೈಕೆ ಹೇಗಿರಬೇಕು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಗರ್ಭಿಣಿಯರು ಬೇಸಿಗೆಯಲ್ಲಿ ಹೀಗೆ ನಿರ್ವಹಿಸಿ

ಹೆಚ್ಚಿದ ಆರ್ದ್ರತೆಯಿಂದಾಗಿ ನಿರ್ಜಲೀಕರಣ ಕಾಡುವುದು ಸಹಜ. ಇದು ಗರ್ಭಿಣಿಯರಿಗೆ ಅಪಾಯ. ಹಾಗಾಗಿ ಇದನ್ನ ನಿರ್ವಹಿಸುವುದು ಅಗತ್ಯವಾಗಿರುತ್ತದೆ. ದೇಹವನ್ನು ಹೈಡ್ರೇಟ್‌ ಆಗಿರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಗರ್ಭಾವಸ್ಥೆಯನ್ನು ಸಂಕೀರ್ಣಗೊಳಿಸುವಂತಹ ಅತಿಯಾದ ರಕ್ತದೊತ್ತಡ ಅಥವಾ ಮೂತ್ರಸಂಬಂಧಿತ ರೋಗಗಳಂತಹ ನಿರ್ದಿಷ್ಟ ಆರೋಗ್ಯ ಸ್ಥಿತಿಗಳಿಲ್ಲದಿದ್ದಲ್ಲಿ, ಪ್ರತಿನಿತ್ಯ ಕನಿಷ್ಠ 8 ರಿಂದ 12 ಲೋಟಗಳಷ್ಟು (3 ಲೀಟರ್‌ಗಳು) ನೀರು ಕುಡಿಯುವುದನ್ನು ಪರಿಗಣಿಸಬೇಕಾಗುತ್ತದೆ.

ಬೇಸಿಗೆಯಲ್ಲಿ ಗರ್ಭಿಣಿಯರ ಆಹಾರ ಹೀಗಿರಲಿ 

ನೀರಿಗೆ ಪೂರಕವಾಗಿ, ಹೆಚ್ಚು ನೀರಿನಾಂಶ ಹೊಂದಿರುವ ಹಣ್ಣು, ತರಕಾರಿಗಳನ್ನು ಆಹಾರದಲ್ಲಿ ಬಳಸುವುದು ಸೂಕ್ತ. ಕಲ್ಲಂಗಡಿ ಹಣ್ಣು ಮತ್ತು ಕಿತ್ತಳೆ ಹಣ್ಣುಗಳು ಕೇವಲ ನೀರಿನಾಂಶವನ್ನು ಒದಗಿಸುವುದಲ್ಲದೇ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಹೆಚ್ಚಿನ ಪ್ರಮಾಣದ ಪೊಟ್ಯಾಷಿಯಂ ಮಟ್ಟದೊಂದಿಗೆ ರಕ್ತದೊತ್ತಡ ಅಥವಾ ಇತರ ಯಾವುದೇ ಮೂತ್ರಸಂಬಂಧಿ ರೋಗಗಳಿಲ್ಲದಿದ್ದಲ್ಲಿ ಎಳನೀರು ಬೇಸಿಗೆ ಅವಧಿಯ ಗರ್ಭಾವಸ್ಥೆಗೆ ತುಂಬಾ ಉತ್ತಮವಾಗಿರುತ್ತದೆ. ಆದರೆ ಮಧುಮೇಹ, ಅಥವಾ ಹೃದಯ ಸಂಬಂಧಿ ಸಮಸ್ಯೆಯಿರುವ ಗರ್ಭಿಣಿಯರು ತಮ್ಮ ಆಹಾರ ಪದ್ಧತಿಗಳಲ್ಲಿ ಬದಲಾವಣೆ ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸಿ ಸಮಾಲೋಚಿಸುವುದು ಮುಖ್ಯವಾಗುತ್ತದೆ.

ತರಕಾರಿ ವಿಷಯಕ್ಕೆ ಬಂದಾಗ, ಹೆಚ್ಚಿನ ನೀರಿನಂಶವಿರುವ ಸೋರೆಕಾಯಿ(ಲೋಕಿ), ಹೀರೆಕಾಯಿ, ಸೌತೆಕಾಯಿ, ಸೀಮೆಬದನೆಕಾಯಿ ಮತ್ತು ಸೆಲೆರಿಯನ್ನು ಆಯ್ಕೆ ಮಾಡಿಕೊಳ್ಳುವುದು ತುಂಬಾ ಒಳ್ಳೆಯದು. ಮಾತ್ರವಲ್ಲದೇ ಇದು ಹೈಡ್ರೇಷನ್ ಮಟ್ಟವನ್ನು ನಿರ್ವಹಿಸಲು ಸಹಕಾರಿಯಾಗುತ್ತದೆ. ರಾಗಿ, ಜೋಳ ಮತ್ತು ಕಿರುಧಾನ್ಯಗಳು ಒಳಗೊಂಡಂತೆ ಧಾನ್ಯಗಳನ್ನು ಆಹಾರದಲ್ಲಿ ಹೆಚ್ಚೆಚ್ಚು ಬಳಕೆ ಮಾಡುವುದರಿಂದ ಅದು ದೇಹದ ತಾಪಮಾನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಸಕ್ಕರೆ ಅಂಶ ಇರುವ ಆಹಾರ ಸೇವನೆ ಬೇಡ 

ಹಲವರು ಬಿಸಿ ವಾತಾವರಣದಲ್ಲಿ ಐಸ್‌ಕ್ರೀನಂತಹ ತಂಪಗಿರುವ ಪದಾರ್ಥಗಳನ್ನು ತಿನ್ನಲು ಬಯಸುತ್ತಾರೆ. ಆದಾಗ್ಯೂ, ವಿಶೇಷವಾಗಿ ಮಧುಮೇಹವಿರುವ ನಿರೀಕ್ಷಿತ ತಾಯಂದಿರು ಈ ಹೆಚ್ಚು ಪ್ರಮಾಣದ ಸಕ್ಕರೆ ಅಂಶವಿರುವ ವಸ್ತುಗಳನ್ನು ತೆಗೆದುಕೊಳ್ಳುವಾಗ ಎಚ್ಚರದಿಂದಿರಬೇಕು. ಪಾನೀಯಗಳ ಸಂಬಂಧಿಸಿದಂತೆ, ಯಾವುದೇ ಆಡೆಡ್ ಪ್ರಿಸರ್ವೇಟಿವ್‌ಗಳು ಅಥವಾ ಸಕ್ಕರೆ ಅಂಶ ಹೊಂದಿರದಿರುವ ಕಾರಣ ತಾಜಾ ಹಣ್ಣಿನ ಜೂಸ್‌ಗಳನ್ನು ಕುಡಿಯಬಹುದು. ಪ್ಯಾಕೇಟ್‌ನಲ್ಲಿರುವ ಪಾನೀಯಗಳು ಕುಡಿಯಲು ಯೋಗ್ಯವಲ್ಲ.

ಉಷ್ಣ ವಾತಾವರಣದಲ್ಲಿ ಆರಾಮವಾಗಿರಲು ಸೂಕ್ತ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ. ಹತ್ತಿ ಅಥವಾ ಲೆನಿನ್ ಬಟ್ಟೆಗಳು ತಿಳಿ ಬಣ್ಣದಿಂದಿದ್ದು ಉಸಿರಾಡಲು ಅನುಕೂಲಕರವಾಗಿದ್ದು, ಅವು ಸೂರ್ಯನ ಬೆಳಕನ್ನು ಪ್ರತಿಫಲಿಸಲು ಅನುಕೂಲಕರವಾಗಿರುವುದರಿಂದ ದೇಹವನ್ನು ತಂಪಗಿಡುತ್ತವೆ. ಅಲ್ಲದೇ ಚರ್ಮದ ಮಡಿಕೆಗಳಲ್ಲಿ ಪೌಡರ್‌ಗಳ ಬಳಕೆ, ಸನ್‌ಗ್ಲಾಸ್ ಬಳಕೆ ಮತ್ತು ಉದ್ದನೆಯ ತೋಳಿನ ಬಟ್ಟೆಗಳು ಇವು ಸೂರ್ಯನ ವಿಕಿರಣಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ.

ಮೊಸರು ಎಲ್ಲಕ್ಕೂ ಉತ್ತಮ 

ಬೇಸಿಗೆಯ ತಿಂಗಳುಗಳಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ಕೂಡ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಅಜೀರ್ಣ ಮತ್ತು ಅತಿಸಾರ ಬೇಸಿಗೆಯಲ್ಲಿ ಹೆಚ್ಚು ಕಂಡುಬರುತ್ತಿದ್ದು, ನಗರದಲ್ಲಿ ಕಾಲರಾ ಪ್ರಕರಣಗಳು ಕೂಡ ಕಾಣಬರುತ್ತದೆ. ಅತಿಸಾರ ಮತ್ತು ಇತರ ಜಲಸಂಬಂಧಿ ಸೋಂಕುಗಳನ್ನು ತಪ್ಪಿಸಲು ಕುದಿಸಿ ತಣ್ಣಗಾಗಿಸಿದ ನೀರು ಕುಡಿಯುವುದನ್ನು ಅಭ್ಯಾಸ ಮಾಡುವುದು ಒಳ್ಳೆಯದು. ಹೊರಗಡೆ ಹೋಗುವಾಗ ತಪ್ಪದೇ ಮನೆಯಿಂದಲೇ ಕುದಿಸಿ ಆರಿಸಿ ನೀರು ತೆಗೆದುಕೊಂಡು ಹೋಗಿ. ಅಂತೆಯೇ ಮೊಸರು ಮತ್ತು ಹಾಲು ಸೇವನೆ ಉತ್ತಮವಾಗಿದ್ದು, ಪ್ರೊಬಯೋಟಿಕ್ಸ್ ಹಾಲಿನ ಉತ್ಪನ್ನದಲ್ಲಿ ಇರುವುದರಿಂದ ಜೀರ್ಣ ವ್ಯವಸ್ಥೆಗೆ ಅದು ಉತ್ತಮವಾಗಿರುತ್ತದೆ. ಬೇಸಿಗೆಯ ಅವಧಿಯಲ್ಲಿ ನವಜಾತ ಶಿಶುಗಳಿಗೆ ಎದೆಹಾಲೂಡಿಕೆಯು ಉತ್ತಮವಾಗಿದ್ದು, ಅದು ಮಗುವನ್ನು ಹೈಡೇಟೆಡ್ ಮತ್ತು ಪೋಷಣೆಯಿಂದಿರಿಸಲು ಉತ್ತಮ ವಿಧಾನವಾಗಿದೆ. ದೇಹದಲ್ಲಿ ಉಷ್ಣಬೊಕ್ಕೆಗಳು ಕಾಣಿಸಿಕೊಳ್ಳುವುದು ಕಳವಳಕ್ಕೆ ಕಾರಣವಾಗಬಹುದು, ಇದನ್ನು ಹಗುರವಾದ ಬಟ್ಟೆ ಮತ್ತು ಹೆಚ್ಚು ಕಾಳಜಿ ವಹಿಸುವ ಮೂಲಕ ನಿರ್ವಹಣೆ ಮಾಡಬಹುದು.

ಬೇಸಿಗೆಯು ನಿರೀಕ್ಷಿತ ತಾಯಂದಿರಿಗೆ ಹೊರಾಂಗಣದಲ್ಲಿ ಆನಂದಿಸಲು ಉತ್ತಮ ಸಮಯವಾಗಿದೆ. ಅವರು ಮನೆಯಲ್ಲಿಯೇ ಉಳಿಯಬೇಕಾಗಿಲ್ಲ ಆದರೆ ಉಷ್ಣವಾತಾವರಣವನ್ನು ನಿರ್ವಹಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಅವರ ಆರೋಗ್ಯ ಹಾಗೂ ಯೋಗಕ್ಷೇಮಕ್ಕೆ ಆದ್ಯತೆ ನೀಡುವುದು ಅತ್ಯಂತ ಮಹತ್ವದ್ದಾಗಿದೆ.

(ಲೇಖನ: ಡಾ. ಮೀನಾ ಮುತ್ತಯ್ಯ, ಸಮಾಲೋಚಕರು - ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ, ಮಣಿಪಾಲ್ ಆಸ್ಪತ್ರೆ ಹಳೆ ಏರ್‌ಪೋರ್ಟ್ ರಸ್ತೆ ಮತ್ತು ಸರ್ಜಾಪುರ ಬೆಂಗಳೂರು)