ನೀವು ದಿನದಲ್ಲಿ ಹೆಚ್ಚಿನ ಸಮಯ ಏಸಿಯಲ್ಲೇ ಕಳಿತೀರಾ? ಅತಿಯಾಗಿ ಏರ್‌ಕಂಡೀಷನರ್ ಬಳಸುವುದರಿಂದ ಏನೆಲ್ಲಾ ಸಮಸ್ಯೆಗಳಾಗುತ್ತವೆ ನೋಡಿ
ಇತ್ತೀಚಿನ ದಿನಗಳಲ್ಲಿ ಮನೆ, ಕಚೇರಿ, ಬಸ್, ಮೆಟ್ರೊ ಹೀಗೆ ನಮ್ಮ ಹೆಚ್ಚಿನ ಸಮಯವನ್ನು ಏಸಿಯೊಂದಿಗೆ ಕಳೆಯುತ್ತೇವೆ. ಮಳೆಗಾಲ, ಚಳಿಗಾಲದಲ್ಲೂ ಕೆಲವರಿಗೆ ಏಸಿ ಬೇಕು. ಆದರೆ ಅತಿಯಾಗಿ ಏಸಿಯಲ್ಲಿ ಸಮಯ ಕಳೆಯುವುದರಿಂದ ನಿಮಗೆ ಅರಿವಿಲ್ಲದೇ ನೀವು ಕಾಯಿಲೆಗೆ ಹತ್ತಿರವಾಗುತ್ತೀರಿ. ಏಸಿಯಲ್ಲಿ ಹೆಚ್ಚು ಸಮಯ ಕಳೆಯುವವರು ಎದುರಿಸುವ ಆರೋಗ್ಯ ಸಮಸ್ಯೆಗಳಿವು.

ಇತ್ತೀಚಿನ ದಿನಗಳಲ್ಲಿ ಜನರು ಏರ್ ಕಂಡೀಷನರ್ ಇಲ್ಲದೇ ಬದುಕುವುದಿಲ್ಲ ಎಂಬ ಸ್ಥಿತಿಗೆ ಬಂದಿದ್ದಾರೆ. ಬೇಸಿಗೆಗಾಲ ಮಾತ್ರವಲ್ಲ ಚಳಿಗಾಲ, ಮಳೆಗಾಲದಲ್ಲೂ ಏರ್ ಕಂಡೀಷನರ್ ಬಳಸುತ್ತಾರೆ. ನಾವು ಕೆಲಸ ಮಾಡುವ ಕಚೇರಿ, ಬಸ್, ಮೆಟ್ರೋಗಳಲ್ಲೂ ಏಸಿ ಇರುತ್ತದೆ. ಕೆಲವರು ಮನೆಯಲ್ಲೂ ಏರ್ ಕಂಡೀಷನರ್ ಬಳಸುತ್ತಾರೆ. ಇತ್ತೀಚಿನ ವರ್ಷಗಳಲ್ಲಂತೂ ತಾಪಮಾನ ಏರಿಕೆಯ ಕಾರಣದಿಂದ ಏಸಿ ಇಲ್ಲದೇ ಬದುಕುವುದು ಕಷ್ಟಸಾಧ್ಯ ಎಂಬಂತಾಗಿದೆ. ಆದರೆ ಅತಿಯಾಗಿ ಏಸಿ ಬಳಸುವುದರಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಇದು ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಏಸಿಯಿಂದ ದೇಹದ ಮೇಲಾಗುವ ಅಡ್ಡಪರಿಣಾಮಗಳಿವು
ಕಣ್ಣು ಮತ್ತು ಚರ್ಮ ಒಣಗುತ್ತದೆ: ಏಸಿ ಇರುವ ವಾತಾವರಣದಲ್ಲಿ ಗಾಳಿಯ ತೇವಾಂಶ ಕಡಿಮೆ ಇರುತ್ತದೆ. ಇದು ಚರ್ಮ ಹಾಗೂ ಕಣ್ಣು ಒಣಗುವಂತೆ ಕಾಡುತ್ತದೆ. ತೇವಾಂಶದ ಕೊರತೆಯು ಚರ್ಮ ಶುಷ್ಕವಾಗುವುದು, ತುರಿಕೆ ಮತ್ತು ಕಿರಿಕಿರಿಗೆ ಕಾರಣವಾಗುತ್ತದೆ. ಶುಷ್ಕ ಗಾಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಎಕ್ಸಿಮಾದಂತಹ ಈಗಾಗಲೇ ಅಸ್ತಿತ್ವದಲ್ಲಿರುವ ಚರ್ಮದ ರೋಗಗಳು ಉಲ್ಬಣಗೊಳ್ಳಬಹುದು. ಇದಲ್ಲದೇ ಕಣ್ಣುಗಳು ಕೂಡ ಶುಷ್ಕವಾಗಿ ಉರಿ, ತುರಿಕೆ, ಕಣ್ಣು ಕೆಂಪಾಗುವುದ ಇಂತಹ ಸಮಸ್ಯೆಗಳು ಎದುರಾಗುತ್ತವೆ.
ಸ್ನಾಯುಗಳ ಬಿಗಿತ, ಕೀಲು ನೋವು: ಏರ್ ಕಂಡೀಷನರ್‌ನಿಂದ ಉತ್ಪತ್ತಿಯಾಗುವ ತಂಪಾದ ಗಾಳಿಯು ಸ್ನಾಯುಗಳು ಹಾಗೂ ಕೀಲುಗಳು ಗಟ್ಟಿಯಾಗಲು ಕಾರಣವಾಗಬಹುದು. ಇದರಿಂದ ತಾಪಮಾನ ಬದಲಾವಣೆಗೆ ಜನರು ಹೊಂದಿಕೊಳ್ಳಲು ಕಷ್ಟಪಡಬಹುದು. ತಂಪಾದ ಗಾಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಸ್ನಾಯುಗಳು ಮತ್ತು ಕೀಲುಗಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ. ಇದು ಸ್ನಾಯುಗಳ ಬಿಗಿತ, ಅಸ್ವಸ್ಥತೆಗೆ ಕಾರಣವಾಗಬಹುದು. ಈಗಾಗಲೇ ಸಂಧಿವಾತದಂತಹ ಸಮಸ್ಯೆಗಳಿಂದ ಬಳಲುವವರು ಇನ್ನಷ್ಟು ತೊಂದರೆ ಎದುರಿಸಬಹುದು.
ಉಸಿರಾಟದ ಸಮಸ್ಯೆ: ಏರ್‌ಕಂಡೀಷನರ್ ಇರುವ ಜಾಗದಲ್ಲಿ ಗಾಳಿ ಹೊರಗೆ ಹೋಗುವುದಿಲ್ಲ. ಇದರಿಂದ ಧೂಳು ಸುತ್ತುವರಿದಿರುತ್ತದೆ. ಇದರಿಂದ ಅಲರ್ಜಿಯಂತಹ ಸಮಸ್ಯೆಗಳು ಹೆಚ್ಚಬಹುದು. ಆಸ್ತಮಾ ಅಥವಾ ಅಲರ್ಜಿಯಂತಹ ಉಸಿರಾಟದ ಸಮಸ್ಯೆ ಹೊಂದಿರುವ ಜನರು ದೀರ್ಘಕಾಲದವರೆಗೆ ಏರ್ ಕಂಡೀಷನರ್‌ಗೆ ಒಡ್ಡಿಕೊಂಡಾಗ ರೋಗಲಕ್ಷಣಗಳು ಹೆಚ್ಚಬಹುದು. ಇದಲ್ಲದೆ, ಹವಾನಿಯಂತ್ರಣಗಳಿಂದ ಕಳಪೆ ಗಾಳಿ ತಂಬಿರುವ ಸ್ಥಳಗಳಲ್ಲಿ ಉಸಿರಾಟದ ಸೋಂಕುಗಳ ಹರಡುವಿಕೆಗೆ ಹೆಚ್ಚಬಹುದು.
ಸೋಂಕಿನ ಅಪಾಯ ಹೆಚ್ಚುತ್ತದೆ: ಏರ್ ಕಂಡೀಷನರ್ ಅನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಇದ್ದರೆ ಅದು ಸೂಕ್ಷ್ಮಜೀವಿಗಳು ನೆಲೆಯಾಗಲು ಕಾರಣವಾಗಬಹುದು. ಇದರಿಂದ ಸೋಂಕಿನ ಅಪಾಯವು ಹೆಚ್ಚು. ಹಾಗಾಗಿ ಮಳೆಗಾಲದಂತಹ ಸಮಯದಲ್ಲೂ ಏಸಿ ಬಳಕೆ ಮಾಡುವುದರಿಂದ ಕಾಯಿಲೆಗಳು ಹೆಚ್ಚಬಹುದು.
ತಲೆನೋವು ಹಾಗೂ ಆಯಾಸ: ದೀರ್ಘಕಾಲ ಏಸಿಯಲ್ಲಿ ಸಮಯ ಕಳೆಯುವುದರಿಂದ ತಲೆನೋವು ಹಾಗೂ ಆಯಾಸ ಕಾಡಬಹುದು. ತಣ್ಣನೆಯ ಗಾಳಿಯು ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ, ಇದು ಮೆದುಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ ಇದರಿಂದ ತಲೆನೋವು ಕಾಣಿಸುತ್ತದೆ. ಹವಾನಿಯಂತ್ರಣಗಳಿಂದ ಕೃತಕ ತಂಪಾಗುವಿಕೆಯ ಪ್ರಕ್ರಿಯೆಯು ದೇಹದ ನೈಸರ್ಗಿಕ ಥರ್ಮೋರ್ಗ್ಯುಲೇಷನ್ ಪ್ರಕ್ರಿಯೆಗಳನ್ನು ಅಡ್ಡಿಪಡಿಸುತ್ತದೆ, ಇದರಿಂದ ವ್ಯಕ್ತಿ ಸಾಕಷ್ಟು ದಣಿದಂತೆ ಕಾಣುತ್ತಾರೆ.
ಈ ಕಾರಣಕ್ಕೆ ಬೇಸಿಗೆಕಾಲ, ಮಳೆಗಾಲ, ಚಳಿಗಾಲ ಯಾವುದೇ ಇರಲಿ ಹೆಚ್ಚು ಹೊತ್ತು ಏಸಿಯಲ್ಲಿ ಕಳೆಯುವ ಅಭ್ಯಾಸ ಬಿಡಬೇಕು. ದೀರ್ಘಕಾಲ ಏಸಿಯಲ್ಲಿ ಸಮಯ ಕಳೆಯುವುದರಿಂದ ಎದುರಾಗುವ ಸಮಸ್ಯೆಗಳು ಭವಿಷ್ಯಕ್ಕೆ ಮಾರಕವಾಗಬಹುದು. ಇದರಿಂದ ಆ ಕ್ಷಣಕ್ಕೆ ದೇಹಕ್ಕೆ ತಂಪಾದ್ರೂ ಭವಿಷ್ಯದಲ್ಲಿ ಇಲ್ಲದ ಆರೋಗ್ಯ ಸಮಸ್ಯೆಗಳು ಬರಲು ಕಾರಣವಾಗಬಹುದು. ಹಾಗಾಗಿ ಎಚ್ಚರ ಅಗತ್ಯ. ಬಿಸಿಲಿನ ಅತಿಯಾದ ತಾಪಮಾನ ಹೊರತುಪಡಿಸಿ ಉಳಿದ ದಿನಗಳಲ್ಲಿ ಏಸಿ ಬಳಸದೇ ಇರುವುದು ಉತ್ತಮ.
