ಕನ್ನಡ ಸುದ್ದಿ  /  ಜೀವನಶೈಲಿ  /  Summer Tips: ಬೇಸಿಗೆಯಲ್ಲಿ ಹಿರಿಜೀವಿಗಳ ಆರೈಕೆಗೆ ನೀಡಿ ಒತ್ತು; ಬಿಸಿಗಾಳಿ, ಉರಿ ಬಿಸಿಲಿನಿಂದ ವಯಸ್ಸಾದವರ ರಕ್ಷಣೆಗೆ ಈ ಕ್ರಮ ಪಾಲಿಸಿ

Summer Tips: ಬೇಸಿಗೆಯಲ್ಲಿ ಹಿರಿಜೀವಿಗಳ ಆರೈಕೆಗೆ ನೀಡಿ ಒತ್ತು; ಬಿಸಿಗಾಳಿ, ಉರಿ ಬಿಸಿಲಿನಿಂದ ವಯಸ್ಸಾದವರ ರಕ್ಷಣೆಗೆ ಈ ಕ್ರಮ ಪಾಲಿಸಿ

ವಯಸ್ಸಾಗುತ್ತಿದ್ದಂತೆ ದೇಹದಲ್ಲಿ ಹಲವು ರೀತಿಯ ಬದಲಾವಣೆಗಳು ಉಂಟಾಗುತ್ತವೆ. ಅದರಲ್ಲೂ ಬದಲಾಗುವ ವಾತಾವರಣವು ಹಿರಿಜೀವಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಇತ್ತೀಚಿನ ಬಿಸಿಗಾಳಿ, ಏರುತ್ತಿರುವ ತಾಪಮಾನವು ವಯಸ್ಸಾದವರಲ್ಲಿ ಇಲ್ಲದ ಆರೋಗ್ಯ ಸಮಸ್ಯೆಗಳು ಉಂಟಾಗಲು ಕಾರಣವಾಗಬಹುದು. ಬಿಸಿಗಾಳಿ, ಬೇಸಿಗೆಯ ತಾಪಮಾನದಿಂದ ಹಿರಿಯರ ಆರೈಕೆಗೆ ಈ ಕ್ರಮಗಳನ್ನು ಪಾಲಿಸಿ.

ಬಿಸಿಗಾಳಿ, ಉರಿ ಬಿಸಿಲಿನಿಂದ ವಯಸ್ಸಾದವರ ರಕ್ಷಣೆಗೆ ಈ ಕ್ರಮ ಪಾಲಿಸಿ
ಬಿಸಿಗಾಳಿ, ಉರಿ ಬಿಸಿಲಿನಿಂದ ವಯಸ್ಸಾದವರ ರಕ್ಷಣೆಗೆ ಈ ಕ್ರಮ ಪಾಲಿಸಿ

ಬೇಸಿಗೆಯ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ. ಸೂರ್ಯನ ರಣಬಿಸಿಲು ಭೂಮಿಯನ್ನು ಕಾದ ಕೆಂಡವನ್ನಾಗಿಸಿದೆ. ಇನ್ನೊಂದೆಡೆ ಬಿಸಿಗಾಳಿಯು ಜನರನ್ನು ಹೈರಾಣಾಗಿಸಿದೆ. ಬಿಸಿಗಾಳಿ, ತಾಪಮಾನ ಏರಿಕೆಯು ವಯಸ್ಸಾದವರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುವಂತೆ ಮಾಡುತ್ತದೆ. ಅವರಲ್ಲಿ ನಿಶಕ್ತಿ ಕಾಡುವಂತೆ ಮಾಡುತ್ತದೆ. ವಯಸ್ಸಾದ ಮೇಲೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಕಡಿಮೆ ಇರುವ ಕಾರಣ ಸಮಸ್ಯೆಗಳು ಹೆಚ್ಚಬಹುದು. ಇನ್ನೊಂದೆಡೆ ಬಿಸಿಗಾಳಿಯ ಪ್ರಭಾವಕ್ಕೆ ದೇಹವು ಹೊಂದಿಕೊಳ್ಳದೇ ಇರಬಹುದು. ಇದರಿಂದಲೂ ಅಪಾಯ ಹೆಚ್ಚು. ಹಾಗಾಗಿ ಬೇಸಿಗೆಯ ದಿನಗಳಲ್ಲಿ ಹಿರಿಜೀವಗಳ ಆರೈಕೆಗೆ ಹೆಚ್ಚು ಗಮನ ನೀಡಬೇಕು. 

ಟ್ರೆಂಡಿಂಗ್​ ಸುದ್ದಿ

ಬೇಸಿಗೆಯಲ್ಲಿ ವಯಸ್ಸಾದವರನ್ನು ಕಾಡುವ ಸಾಮಾನ್ಯ ಸಮಸ್ಯೆಗಳಿವು

ಬಿಸಿಗಾಳಿಯ ವಯಸ್ಸಾದವರಲ್ಲಿ ಹಲವು ಆರೋಗ್ಯ ಸಮಸ್ಯೆಗಳನ್ನ ತಂದೊಡ್ಡಬಹುದು. ಅದರಲ್ಲಿ ಮುಖ್ಯವಾಗಿ

* ವಾಕರಿಕೆ

* ತಲೆ ತಿರುಗುವಿಕೆ

* ಆಯಾಸ ಮತ್ತು ಬಳಲಿಕೆ

* ತಲೆನೋವು

* ಸನ್‌ಬರ್ನ್‌

ಆ ಸಮಸ್ಯೆಗಳು ತಾತ್ಕಾಲಿಕವಾಗಿರುತ್ತವೆ. ಅವುಗಳಿಗೆ ಚಿಕಿತ್ಸೆ ನೀಡದೇ ಇದ್ದರೂ ತಾನಾಗಿಯೇ ಗುಣವಾಗುತ್ತವೆ. ಆದರೆ ಕೆಲವು ದೀರ್ಘಾವಧಿಯವರೆಗೆ ಪರಿಣಾಮ ಬೀರಬಹುದು.

ನಿರ್ಜಲೀಕರಣ: ದೇಹದಲ್ಲಿ ಅತಿಯಾದ ನೀರಿನ ಕೊರತೆಯು ನಿರ್ಜಲೀಕರಣ ಸಮಸ್ಯೆಯನ್ನು ಉಂಟು ಮಾಡಬಹುದು. ಇದು ದಣಿವು, ಬಾಯಿ ಒಣಗುವುದು, ತಲೆ ತಿರುಗುವುದು ಇಂತಹ ಸಮಸ್ಯೆಗಳನ್ನು ಉಂಟು ಮಾಡಬಹುದು. ನಮ್ಮ ಮನೆಯ ಹಿರಿಯರಲ್ಲೂ ಈ ಲಕ್ಷಣಗಳು ಕಾಣಿಸಿದರೆ ತಕ್ಷಣಕ್ಕೆ ಅವರಿಗೆ ತಜ್ಞರಿಂದ ಚಿಕಿತ್ಸೆ ಕೊಡಿಸಿ, ನಿರ್ಲಕ್ಷ್ಯ ಮಾಡಿದರೆ ಜೀವಕ್ಕೆ ತುತ್ತು ಬರುವ ಸಾಧ್ಯತೆ ಇದೆ.

ದೇಹ ಬಿಸಿಯಾಗುವುದು: ನಿಮ್ಮ ಮನೆಯ ಹಿರಿಯರಲ್ಲಿ ದೇಹ ಬಿಸಿಯಾಗುವುದು ಅಥವಾ ತಾಪಮಾನ ಏರಿಕೆಯಾದಾಗ ದೀರ್ಘಾವಧಿಯ ನಂತರ ವಾಕರಿಕೆ, ತಲೆತಿರುಗುವುದು, ಚರ್ಮ ಮೇಲೆ ಗುಳ್ಳೆಯಾಗುವುದು ಅಂತಹ ಲಕ್ಷಣಗಳು ಕಾಣಿಸಬಹುದು.

ಹೀಟ್‌ಸ್ಟ್ರೋಕ್‌: ದೇಹದ ಉಷ್ಣತೆಯು 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದಾಗ ಸಂಭವಿಸುತ್ತದೆ. ಇದು ಕೂಡ ಜೀವಕ್ಕೆ ಮಾರಕವಾಗಬಹುದು.

ಚರ್ಮದ ಕ್ಯಾನ್ಸರ್‌: ಯುವಿ ಕಿರಣಗಳು ಚರ್ಮದ ಕೋಶಗಳಿಗೆ ಹಾನಿಗೊಳಿಸಿದಾಗ ಚರ್ಮದ ಕ್ಯಾನ್ಸರ್‌ ಸಂಭವಿಸುತ್ತದೆ. ವಯಸ್ಸಾದವರಲ್ಲಿ ಚರ್ಮ ಸೂಕ್ಷ್ಮವಾಗಿರುವ ಕಾರಣ ಅತಿಯಾಗಿ ಸೂರ್ಯನ ಬೆಳಕಿಗೆ ಒಗ್ಗಿಕೊಳ್ಳುವುದರಿಂದ ಚರ್ಮದ ಕ್ಯಾನ್ಸರ್‌ ಕಾಣಿಸಬಹುದು.

* ಅತಿಯಾದ ಶಾಖದಿಂದ ಕೆಲವೊಮ್ಮೆ ಸಾವು ಕೂಡ ಸಂಭವಿಸಬಹುದು. ಹೀಗಾಗಿ ಹೀಟ್‌ವೇವ್‌ನಿಂದಾಗುವ ಅಪಾಯಕಾರಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.

ಬಿಸಿಗಾಳಿ, ಅತಿ ಬಿಸಿಲಿನಿಂದ ಹಿರಿಜೀವಗಳ ಆರೈಕೆಗೆ ಈ ಕ್ರಮ ಪಾಲಿಸಿ

ನಿರ್ಜಲೀಕರಣ ತಪ್ಪಿಸಲು ಸಾಕಷ್ಟು ನೀರು ಕುಡಿಯಿರಿ

ನಿರ್ಜಲೀಕರಣ ತಪ್ಪಿಸಲು ಸಾಕಷ್ಟು ನೀರು ಕುಡಿಯುವುದು ಅವಶ್ಯ. ಇದರೊಂದಿಗೆ ಸೌತೆಕಾಯಿ, ಕಲ್ಲಂಗಡಿ ಮತ್ತು ಟೊಮೆಟೊಗಳಂತಹ ನೀರಿನಾಂಶ ಹೆಚ್ಚಿರುವ ಹಣ್ಣು ತರಕಾರಿಗಳನ್ನು ಹೆಚ್ಚೆಚ್ಚು ಸೇವಿಸಬೇಕು. ವಯಸ್ಸಾದವರು ತಾವಾಗಿಯೇ ಹೊರ ಹೋಗುವುದಿರಲಿ ಬೇರೆಯವರ ಜೊತೆ ಹೋಗುವುದಿರಲಿ ಹೊರಗಡೆ ಹೋಗುವಾಗ ನೀರಿನ ಬಾಟಲಿಯನ್ನು ಜೊತೆ ತೆಗೆದುಕೊಂಡು ಹೋಗುವುದನ್ನು ಮರೆಯಬಾರದು.

* ಚಹಾ, ಕಾಫಿಯಂತಹ ಕೇಫಿನ್‌ ಅಂಶ ಇರುವ ಪಾನೀಯಗಳಿಂದ ದೂರವಿರುವುದು ಉತ್ತಮ.

ಬಿರು ಬಿಸಿಲಿನಲ್ಲಿ ಹೊರಗಡೆ ಹೋಗದಂತೆ ನೋಡಿಕೊಳ್ಳುವುದು 

ಬೆಳ್ಳಿಗ್ಗೆ 11ರ ನಂತರ ಸಂಜೆ 3 ಗಂಟೆಯ ಒಳಗಿನ ಬಿಸಿಲಿನಲ್ಲಿ ತಪ್ಪಿಯೂ ಹೊರಗಡೆ ಹೋಗಬೇಡಿ. ಉಳಿದ ಸಮಯದಲ್ಲಿ ಹೊರಗಡೆ ಹೋದಾಗ ಸಾಧ್ಯವಾದಷ್ಟು ನೆರಳಿನಲ್ಲಿರಿ. ಹಿರಿಜೀವಗಳನ್ನು ತಪ್ಪಿಯೂ ಕಾರಿನಲ್ಲಿ ಕೂರಿಸಿ ಹೋಗಬೇಡಿ.

ಸಡಿಲವಾದ ಬಟ್ಟೆ ಧರಿಸುವುದು

ವಯಸ್ಸಾದವರಿಗೆ ಬೇಸಿಗೆಯಲ್ಲಿ ಸಡಿಲವಾದ ಹತ್ತಿ ಬಟ್ಟೆ ಹಾಕಿಸಿ. ಅವರಿಗೆ ಆಗಾಗ ತಣ್ಣೀರಿನ ಬಟ್ಟೆಯಿಂದ ಮೈ ಒರೆಸಿ. ಮೈಗಂಟಿದಂತಿರುವ ಬಟ್ಟೆಗಳನ್ನು ತಪ್ಪಿಯೂ ಹಾಕಿಸಬೇಡಿ.

ಹೊರಗಡೆ ಕರೆದುಕೊಂಡು ಹೋದಾಗ ತಲೆಗೆ ಟೋಪಿ ಹಾಕಿಸಲಿ ಮರೆಯಬೇಡಿ.

ತಣ್ಣೀರು ಸ್ನಾನ ಮಾಡಿಸುವುದು 

ಹಿರಿಯರಿಗೆ ತಣ್ಣೀರು ಸ್ನಾನ ಮಾಡುವುದರಿಂದ ಜ್ವರ, ನೆಗಡಿ ಬರಬಹುದು ನಿಜ. ಆದರೆ ಬೇಸಿಗೆಯಲ್ಲಿ ಬಿರಿ ನೀರಿನ ಸ್ನಾನವೂ ಒಳ್ಳೆಯದಲ್ಲ. ಅದಕ್ಕಾಗಿ ಉಗುರು ಬೆಚ್ಚಗಿನ ನೀರು ನೀಡಿ.

ಸನ್‌ಸ್ಕ್ರೀನ್‌ ಲೋಷನ್‌ ಹಚ್ಚುವುದು 

ಸನ್‌ಸ್ಕ್ರೀನ್‌ ಲೋಷನ್‌ ಎಂದರೆ ಕೇವಲ ಚರ್ಮವನ್ನು ಬಿಳಿಯಾಗಿಸುವುದು ಎಂದರ್ಥವಲ್ಲ. ಸನ್‌ಸ್ಕ್ರೀನ್‌ ಲೋಷನ್‌ ಬಳಕೆಯು ಚರ್ಮವನ್ನು ಹಲವು ಅಪಾಯಗಳಿಂದ ರಕ್ಷಿಸುತ್ತದೆ. ಹಿರಿಯರಲ್ಲಿ ಸೂರ್ಯನ ಯುವಿ ಕಿರಣಗಳ ಅಪಾಯವನ್ನು ತಪ್ಪಿಸಲು ತಪ್ಪದೇ ಸನ್‌ಸ್ಕ್ರೀನ್‌ ಲೋಷನ್‌ ಬಳಸಿ. ಎಸ್‌ಪಿಎಫ್‌ ಅಂಶ ಇರುವ ಸನ್‌ಸ್ಕ್ರೀನ್‌ ಅನ್ನು ಅವರ ಚರ್ಮಕ್ಕೆ ಹಚ್ಚಿ.

ಮನೆಯನ್ನು ತಂಪಾಗಿರಿಸಿಕೊಳ್ಳುವುದು 

ನಿಮ್ಮ ಮನೆಯಲ್ಲಿ ಹಿರಿಜೀವಗಳಿದ್ದರೆ ಮನೆಯೊಳಗಿನ ವಾತಾವರಣವನ್ನು ಸಾಕಷ್ಟು ತಂಪಾಗಿಸಿರಿಸಿಕೊಳ್ಳಿ. ಬಿಸಿಲುಗಾಲದಲ್ಲಿ ಮನೆಯ ಕಿಟಿಕಿಗಳನ್ನು ತೆಗೆದಿಡಿ. ಗಾಳಿ ಚೆನ್ನಾಗಿ ಮನೆಯೊಳಗೆ ಬರುವಂತೆ ನೋಡಿಕೊಳ್ಳಿ. ಸಂಜೆ ಹೊತ್ತಿಗೆ ತಾಜಾ ಗಾಳಿ ಸಿಗುವಂತೆ ಮಾಡಿ.

ಬೇಸಿಗೆಯಲ್ಲಿ ನಿಮ್ಮ ಮನೆಯ ಹಿರಿಯರು ಮಾತ್ರವಲ್ಲ, ನಿಮ್ಮ ಸುತ್ತಮುತ್ತಲಿನ ಹಿರಿಯರನ್ನು ಗಮನಿಸಿ. ಅವರ ಆರೋಗ್ಯ ಪರಿಸ್ಥಿತಿಯನ್ನೂ ಅವಲೋಕಿಸಿ. ಹವಾಮಾನ ವೈಪರೀತ್ಯದಿಂದ ಗಂಭೀರ ಸಮಸ್ಯೆಗಳು ಕಾಣಿಸಿದರೆ ತಕ್ಷಣಕ್ಕೆ ತಜ್ಞರಿಗೆ ತೋರಿಸಿ.