ಗರ್ಭಾವಸ್ಥೆಯಲ್ಲಿ ಕಾಣಿಸುವ ಥೈರಾಯ್ಡ್ ಸಮಸ್ಯೆಯನ್ನು ಕಡೆಗಣಿಸದಿರಿ; ಇದರ ನಿಯಂತ್ರಣ, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ
ಮಗುವಿನ ಆರೋಗ್ಯದ ಮೇಲೆ ತಾಯಿಯ ಥೈರಾಯ್ಡ್ ಅಂಶವು ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಥೈರಾಯ್ಡ್ ಸಮಸ್ಯೆಯನ್ನು ಕಡೆಗಣಿಸುವಂತಿಲ್ಲ. ಗರ್ಭಾವಸ್ಥೆಯಲ್ಲಿ ಕಾಣಿಸುವ ಥೈರಾಯ್ಡ್ ಸಮಸ್ಯೆಯಿಂದ ಪಾರಾಗುವುದು ಹೇಗೆ? ಈ ಕುರಿತು ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳೇನು? ಇಲ್ಲಿದೆ ಮಾಹಿತಿ.
ಥೈರಾಯ್ಡ್ ಎಂಬುದು ಚಿಟ್ಟೆ ಆಕಾರವನ್ನು ಹೊಂದಿರುವ ಒಂದು ಗ್ರಂಥಿಯಾಗಿದ್ದು ಥೈರಾಯ್ಡ್ ಹಾರ್ಮೋನ್‌ಗಳನ್ನು ಉತ್ಪಾದಿಸುವ ಜೊತೆಯಲ್ಲಿ ಹೃದಯದ ಬಡಿತ, ಚಯಾಪಚಯ ಮಟ್ಟ ಹಾಗೂ ದೇಹದ ಉಷ್ಣತೆಯನ್ನು ನಿಯಂತ್ರಿಸುವ ಸೇರಿದಂತೆ ಇನ್ನೂ ಅನೇಕ ಕೆಲಸಗಳನ್ನು ಮಾಡುತ್ತದೆ. ಆದರೆ ಥೈರಾಯ್ಡ್ ಗ್ರಂಥಿಗಳಲ್ಲಿ ಉಂಟಾಗುವ ಅಸ್ವಸ್ಥತೆಯಿಂದಾಗಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ನಿಮ್ಮ ದೇಹದ ಆರೋಗ್ಯಕರ ಕೋಶಗಳ ಮೇಲೆಯೇ ದಾಳಿ ನಡೆಸಲು ಆರಂಭಿಸುತ್ತದೆ. ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಥೈರಾಯ್ಡ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಾರೆ.
ದೇಹದಲ್ಲಿರುವ ಥೈರಾಯ್ಡ್ ಗ್ರಂಥಿಯು ಸರಿಯಾಗಿ ಕೆಲಸ ನಿರ್ವಹಿಸುತ್ತಿರುವಾಗ ಸಾಕಷ್ಟು ಸಂಖ್ಯೆಯಲ್ಲಿ ಹಾರ್ಮೋನ್‌ಗಳನ್ನು ಉತ್ಪಾದಿಸುತ್ತಿರುತ್ತದೆ. ಇದರಿಂದ ನಿಮ್ಮ ದೇಹದ ಎಲ್ಲಾ ಕಾರ್ಯಗಳು ಸಮತೋಲಿತವಾಗಿರುತ್ತದೆ. ದೇಹದಲ್ಲಿ ಥೈರಾಯ್ಡ್ ಹಾರ್ಮೋನ್‌ಗಳ ಉತ್ಪಾದನೆಯಲ್ಲಿ ಏರುಪೇರು ಉಂಟಾದಾಗ ಥೈರಾಯ್ಡ್ ಕಾಯಿಲೆ ಆರಂಭಗೊಳ್ಳುತ್ತದೆ. ಗರ್ಭಿಣಿಯರಲ್ಲಿ ಬಹುತೇಕರು ಥೈರಾಯ್ಡ್ ಕಾಯಿಲೆಯಿಂದ ಬಳಲುತ್ತಾರೆ. ಈ ಸಮಸ್ಯೆಯು ನಿಮ್ಮ ದೇಹದಲ್ಲಿ ಥೈರಾಯ್ಡ್ ಉತ್ಪಾದನೆಯನ್ನು ಅತೀ ಹೆಚ್ಚು ಮಾಡಬಹುದು ಅಥವಾ ನಿಷ್ಕ್ರಿಯಗೊಳಿಸಲೂಬಹುದು.
ಹೈಪರ್ಥೈರಾಯ್ಡಿಸಮ್
ಥೈರಾಯ್ಡ್ ಗ್ರಂಥಿಯು ಅಧಿಕ ಪ್ರಮಾಣದ ಹಾರ್ಮೋನ್ ಉತ್ಪಾದನೆ ಮಾಡುವುದನ್ನು ಹೈಪರ್ ಥೈರಾಯ್ಡಿಸಮ್ ಎಂದು ಕರೆಯಲಾಗುತ್ತದೆ. ಇದು ನಿಮ್ಮ ದೇಹದಲ್ಲಿ ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ. ಯಾವುದೇ ಕಾರಣವಿಲ್ಲದೇ ಅತಿಯಾಗಿ ತೂಕ ಕಳೆದುಕೊಳ್ಳುವುದು, ಅತೀ ಬೆವರುವುದು, ಹೃದಯ ಬಡಿತ ಹೆಚ್ಚಾಗುವುದು, ವಾಕರಿಕೆ, ದೇಹ ನಡುಗುವುದು ಈ ರೀತಿಯ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭಿಸುತ್ತದೆ.
ಹೈಪೋಥೈರಾಯ್ಡಿಸಮ್
ಥೈರಾಯ್ಡ್ ಗ್ರಂಥಿಯು ನಿಷ್ಕ್ರಿಯಗೊಳ್ಳುವ ಪ್ರಕ್ರಿಯೆಯನ್ನು ಹೈಪೋಥೈರಾಯ್ಡಿಸಮ್ ಎಂದು ಕರೆಯಬಹುದಾಗಿದೆ. ನಿಮ್ಮ ದೇಹದ ಅವಶ್ಯಕತೆಗಳಿಗೆ ಅನುಸಾರವಾಗಿ ದೇಹವು ಥೈರಾಯ್ಡ್ ಹಾರ್ಮೋನ್‌ಗಳನ್ನು ಉತ್ಪಾದಿಸುವಲ್ಲಿ ಯಶಸ್ವಿಯಾಗದೇ ಇದ್ದಾಗ ಈ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಯಿಂದಾಗಿ ನಿಮ್ಮ ಜೀರ್ಣಕ್ರಿಯೆಯು ನಿಧಾನಗೊಳ್ಳುತ್ತದೆ. ತೂಕ ಅಧಿಕಗೊಳ್ಳುತ್ತದೆ. ಕೂದಲು ತೆಳುವಾಗುತ್ತದೆ ಅಥವಾ ಕೂದಲು ಉದುರಲು ಆರಂಭಗೊಳ್ಳಬಹುದು. ಹೃದಯ ಬಡಿತ ನಿಧಾನಗೊಳ್ಳುತ್ತದೆ.
ಥೈರಾಯ್ಡ್ ಹಾಗೂ ಗರ್ಭಿಣಿ
ಆರೋಗ್ಯಕರ ಗರ್ಭಧಾರಣೆ ಸಾಧ್ಯವಾಗಬೇಕು ಎಂದರೆ ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಹಾರ್ಮೋನ್‌ಗಳು ಸಮನಾಗಿ ಕಾರ್ಯನಿರ್ವಹಿಸುವುದು ಅತ್ಯಂತ ಮುಖ್ಯವಾಗಿದೆ. ತಾಯಿಯ ಥೈರಾಯ್ಡ್ ಗ್ರಂಥಿಯಿಂದ ಉತ್ಪತ್ತಿಯಾಗುವ ಥೈರಾಯ್ಡ್ ಹಾರ್ಮೋನ್‌ಗಳು ಮಗುವಿನ ಮೆದುಳು ಹಾಗೂ ನರಮಂಡಲದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಗರ್ಭಿಣಿಯ ಹಾಗೂ ಆಕೆಯ ಮಗುವಿನ ಸಮಗ್ರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಗು ಸಂಪೂರ್ಣವಾಗಿ ತಾಯಿಯ ಥೈರಾಯ್ಡ್ ಹಾರ್ಮೋನ್‌ನ ಮೇಲೆ ಅವಲಂಬಿತವಾಗಿರುತ್ತದೆ. 10 ರಿಂದ 12 ವಾರಗಳ ಬಳಿಕ ತನ್ನದೇ ಆದ ಬೆಳವಣಿಗೆಯನ್ನು ಆರಂಭಿಸುತ್ತದೆ. ಇದು ಮೂರನೇ ತ್ರೈಮಾಸಿಕದಲ್ಲಿ ಸಂಪೂರ್ಣವಾಗಿ ಪ್ರಬುದ್ಧವಾಗುತ್ತದೆ.
ಗರ್ಭಾವಸ್ಥೆಯಲ್ಲಿ ಥೈರಾಯ್ಡ್‌ಗೆ ಸೂಕ್ತವಾದ ಚಿಕಿತ್ಸೆ ನೀಡದೇ ಹೋದರೆ ಮಗುವಿನ ಅಕಾಲಿಕ ಜನನ, ಕಡಿಮೆ ತೂಕದ ಮಗುವಿನ ಜನನದಂತಹ ತೊಡಕುಗಳನ್ನು ಎದುರಿಸಬೇಕಾಗಿ ಬರುತ್ತದೆ ಎಂದು ಪ್ರಸೂತಿ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಗರ್ಭಿಣಿಯರು ಹಾಗೂ ಮಗುವಿನ ಆರೋಗ್ಯದ ವಿಚಾರದಲ್ಲಿ ಥೈರಾಯ್ಡ್ ಪ್ರಮುಖ ಪಾತ್ರ ವಹಿಸುವುದರಿಂದ ಈ ಸಂದರ್ಭದಲ್ಲಿ ಥೈರಾಯ್ಡ್ ಗ್ರಂಥಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅನಿವಾರ್ಯವಾಗಿದೆ.
ಗರ್ಭಿಣಿಯರು ತಮ್ಮ ಥೈರಾಯ್ಡ್ ಹಾರ್ಮೋನ್‌ನ ಮಟ್ಟವನ್ನು ತಮ್ಮ ಗರ್ಭಾವಸ್ಥೆಯುದ್ದಕ್ಕೂ ನಿಯಮಿತವಾಗಿ ಪರೀಕ್ಷಿಸುತ್ತಲೇ ಇರಬೇಕು. ಅಲ್ಲದೇ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಬೇಕು. ಮೊಟ್ಟೆ, ಹಾಲು, ಮೊಸರು ಸೇರಿದಂತೆ ವಿವಿಧ ಆಯೋಡಿನ್ ಅಂಶ ಭರಿತವಾದ ಆಹಾರ ಸೇವನೆ ಮಾಡಬೇಕು. ಯೋಗ ಹಾಗೂ ಧ್ಯಾನಗಳನ್ನು ಮಾಡುವ ಮೂಲಕ ಒತ್ತಡದಿಂದ ಮುಕ್ತರಾಗಿರಬೇಕು. ಗರಿಷ್ಠ ತೂಕ ಕಾಪಾಡಿಕೊಳ್ಳಿ. ಹಾಗೂ ಥೈರಾಯ್ಡ್ ನಿಯಂತ್ರಣಕ್ಕೆ ವೈದ್ಯರು ಶಿಫಾರಸಲು ಮಾಡುವ ಔಷಧಿಗಳನ್ನು ತಪ್ಪದೇ ಸೇವಿಸಿ.