Turmeric Benifits: ಆಯುರ್ವೇದದ ಪ್ರಕಾರ ಅರಿಸಿನದ ಈ 10 ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ, ಆರೋಗ್ಯಕ್ಕೆ ಅರಿಸಿನ ಚಿನ್ನದ ಗಣಿ
Turmeric Benifits: ಅರಿಸಿನಕ್ಕೆ ಔಷಧೀಯ ಗುಣಗಳು ಇರುವುದರಿಂದ ಆಯುರ್ವೇದದಲ್ಲಿ ಇದಕ್ಕೆ ಪ್ರಮುಖ ಸ್ಥಾನವಿದೆ. ಪ್ರತಿನಿತ್ಯ ನಾವು ಅರಿಸಿನ ಬಳಸುವ ಮೂಲಕ ಯಾವೆಲ್ಲ ಪ್ರಯೋಜನ ಪಡೆಯಬಹುದು ಎಂಬ ವಿವರ ಇಲ್ಲಿದೆ.
ಭಾರತೀಯರ ಅಡುಗೆಮನೆಯಲ್ಲಿ ಅರಿಸಿನ ಅಗತ್ಯ ಸಾಂಬಾರ ಪದಾರ್ಥ. ಆಯುರ್ವೇದದಲ್ಲಿ ಅರಿಸಿನಕ್ಕೆ ಎಲ್ಲಿಲ್ಲದ ಮಹತ್ವವಿದೆ. ಹಲವು ಔಷಧೀಯ ಗುಣಗಳನ್ನು ಹೊಂದಿರುವ ಅರಿಸಿನವು ಹಲವು ರೋಗರುಜಿನಗಳಿಗೆ ರಾಮಬಾಣ. ಪ್ರತಿನಿತ್ಯ ನಮ್ಮ ಆರೋಗ್ಯಭಾಗ್ಯಕ್ಕೆ ಅರಿಸಿನದ ಕೊಡುಗೆ ಅಪಾರ. ಅರಿಸಿನದ ಪ್ರಮುಖ ಹತ್ತು ಪ್ರಯೋಜನಗಳ ವಿವರವನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಓದುಗರಿಗಾಗಿ ಇಲ್ಲಿ ನೀಡಲಾಗಿದೆ.
ಅರಿಸಿನದ 10 ಪ್ರಯೋಜನಗಳು
1. ಜೀರ್ಣಕ್ರಿಯೆ ಉತ್ತಮಪಡಿಸುತ್ತದೆ
ಅರಿಶಿನವು ಜೀರ್ಣಕ್ರಿಯೆಯನ್ನು ಉತ್ತೇಜಿಸುವ ಸಾಮರ್ಥ್ಯಕ್ಕೆ ಹೆಸರುವಾಸಿ. ಪ್ರತಿನಿತ್ಯ ಅರಿಸಿನ ಬಳಕೆಯ ಅಡುಗೆಯಿಂದ ಕರುಳಿನ ಆರೋಗ್ಯ ಉತ್ತಮಪಡಿಸಬಹುದು. ಊಟಕ್ಕೆ ಮೊದಲು ಬೆಚ್ಚಗಿನ ನೀರು ಅಥವಾ ಹರ್ಬಲ್ ಚಹಾಗಳಲ್ಲಿ ಒಂದು ಚಿಟಿಕೆ ಅರಿಶಿನ ಹಾಕಿ ಕುಡಿದದರೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರಿಂದ ಹೊಟ್ಟೆಯ ಉಬ್ಬರವೂ ಕಡಿಮೆಯಾಗುತ್ತದೆ.
2. ಉರಿಯೂತ ನಿವಾರಕ
ಅರಿಶಿನದಲ್ಲಿನ ಸಕ್ರಿಯ ಸಂಯುಕ್ತವಾದ ಕರ್ಕ್ಯುಮಿನ್ ಪ್ರಬಲವಾದ ನೈಸರ್ಗಿಕ ಉರಿಯೂತ ಕಡಿಮೆ ಮಾಡುವ ಅಂಶವಾಗಿದೆ. ಸಾಮಾನ್ಯವಾಗಿ ಕೀಲು ನೋವು, ಸಂಧಿವಾತ ಮತ್ತು ಸ್ನಾಯು ನೋವನ್ನು ನಿವಾರಿಸಲು ಅರಿಶಿನವನ್ನು ಆಯುರ್ವೇದ ವೈದ್ಯರು ಶಿಫಾರಸು ಮಾಡುತ್ತಾರೆ.
3. ರೋಗ ನಿರೋಧಕ ವ್ಯವಸ್ಥೆಗೆ ಬೆಂಬಲ
ಅರಿಶಿನದಲ್ಲಿ ಉತ್ಕರ್ಷಣ ನಿರೋಧಕ ಅಂಶಗಳು ಸಮೃದ್ಧವಾಗಿದೆ. ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಅರಿಶಿನ ಹಾಕಿ ಒಂದು ಲೋಟ ಬೆಚ್ಚಗಿನ ಹಾಲು ಕುಡಿಯುವುದು ಶೀತ ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಸಾಂಪ್ರದಾಯಿಕ ಕ್ರಮವಾಗಿದೆ.
4. ಚರ್ಮ ಮತ್ತು ಕೂದಲಿನ ಕಾಂತಿಗಾಗಿ
ಕಾಂತಿಯುತ ಚರ್ಮಕ ಹೊಂದಲು ಬಯಸುವವರು ಅರಿಶಿನದ ಫೇಶಿಯಲ್‌ಮ ಆಡಬಹುದು. ಅರಿಶಿನವನ್ನು ಮೊಸರು ಅಥವಾ ಜೇನುತುಪ್ಪದೊಂದಿಗೆ ಬೆರೆಸುವ ಮೂಲಕ ಮೊಡವೆಗಳ ವಿರುದ್ಧ ಹೋರಾಡಬಹುದು. ಇದು ಮೈಬಣ್ಣವನ್ನು ಹೊಳಪು ಮಾಡುತ್ತದದೆ. ಚರ್ಮವನ್ನು ಕಾಂತಿಯುಕ್ತವಾಗಿಸುತ್ತದೆ. ತಲೆಕೂದಲಿನ ಬೆಳವಣಿಗೆಗೂ ಸಹಕಾರಿ. ತಲೆಹೊಟ್ಟು ಹೋಗಲಾಡಿಸುತ್ತದೆ.
5. ದೇಹವನ್ನು ಶುದ್ಧ ಮಾಡುತ್ತದೆ
ಆಯುರ್ವೇದದಲ್ಲಿ ದೇಹದ ಕಲ್ಮಷಗಳು, ವಿಷಕಾರಿ ಅಂಶಗಳನ್ನು ತೆಗೆದುಹಾಕಲು ಅರಸಿನ ಬಳಸಲಾಗುತ್ತದೆ. ಅರಿಶಿನ, ನಿಂಬೆರಸ ಮತ್ತು ಬೆಚ್ಚಗಿನ ನೀರಿನಿಂದ ಮಾಡಿದ ಡಿಟಾಕ್ಸ್ ಪಾನೀಯವನ್ನು ಕುಡಿಯಬಹುದು.
6. ಒತ್ತಡ ಕಡಿಮೆ ಮಾಡಲು ಸಹಕಾರಿ
ಮನಸಿನ ಒತ್ತಡ ಕಡಿಮೆ ಮಾಡುವ ಗುಣವನ್ನು ಅರಿಸಿನ ಹೊಂದಿದೆ. ನಿದ್ದೆ ಮಾಡುವ ಮೊದಲು ಅರಿಸಿನ ಹಾಕಿದ ಹಾಲು ಕುಡಿಯಬಹುದು. ಇದು ನಿದ್ದೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಒತ್ತಡ ಮತ್ತು ಆತಂಕ ಕಡಿಮೆ ಮಾಡುವ ಗುಣವನ್ನು ಅರಿಸಿನ ಹೊಂದಿದೆ.
7. ಬಾಯಿಯ ಆರೋಗ್ಯ
ಅರಿಶಿನದ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಬಾಯಿಯ ನೈರ್ಮಲ್ಯಕ್ಕೆ ಪ್ರಯೋಜನಕಾರಿಯಾಗಿದೆ. ಅರಿಶಿನದ ಮೌತ್‌ವಾಶ್‌ನಿಂದ ಬಾಯಿ ಮುಕ್ಕಳಿಸುವುದರಿಂದ ವಸಡು ಸಮಸ್ಯೆಗಳು, ಬಾಯಿ ದುರ್ವಾಸನೆ ಮತ್ತು ಕ್ಯಾಂಕರ್ ಹುಣ್ಣುಗಳು ನಿವಾರಣೆಯಾಗುತ್ತವೆ.
8. ಮಹಿಳೆಯರ ಆರೋಗ್ಯಕ್ಕೆ ನೆರವು
ಆಯುರ್ವೇದದಲ್ಲಿ ಅರಿಶಿನವನ್ನು ಮಹಿಳೆಯರ ಆರೋಗ್ಯಕ್ಕೆ ಶಿಫಾರಸು ಮಾಡಲಾಗಿದೆ. ಇದು ಮುಟ್ಟಿನ ಅಸ್ವಸ್ಥತೆ ಕಡಿಮೆ ಮಾಡುತ್ತದೆ. ಅರಿಶಿನವನ್ನು ನಿಯಮಿತವಾಗಿ ಸೇವಿಸುವುದರಿಂದ ಮಹಿಳೆಯರ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ.
9. ವಾತ ಪಿತ್ತ ಕಫ ಶಮನ
ಆಯುರ್ವೇದವು ವಾತ, ಪಿತ್ತ ಮತ್ತು ಕಫ ಎಂಬ ಮೂರು ದೋಷಗಳನ್ನು ಸಮತೋಲನಗೊಳಿಸಲು ಆದ್ಯತೆ ನೀಡುತ್ತದೆ. ವಾತ ಪಿತ್ತ ಕಫ ಸಮತೋಲನಕ್ಕೆ ಅರಿಸಿನ ಬಳಸಲಾಗುತ್ತದೆ.
10. ಅಡುಗೆಮನೆಯ ಅವಶ್ಯಕತೆ
ಭಾರತದಲ್ಲಿ ಅಡುಗೆಮನೆಯಲ್ಲಿ ಅರಿಸಿನಕ್ಕೆ ಪ್ರಾಮುಖ್ಯತೆ ಇದೆ. ಅಡುಗೆಯ ರುಚಿ ಹೆಚ್ಚಿಸುವುದರಿಂದ ನಮ್ಮ ಆರೋಗ್ಯ ಸುಧಾರಿಸಲು ನೆರವು ನೀಡುತ್ತದೆ. ಕರಿಮೆಣಸಿನ ಜತೆಗೆ ಅರಿಸಿನ ಸೇರಿಸಿ ಸೂಪ್ ಇತ್ಯಾದಿಗಳಿಗೆ ಹಾಕಿ ಸೇವಿಸಬಹುದು.