Viral Fever: ಕರ್ನಾಟಕದಲ್ಲಿ ವೈರಲ್ ಫಿವರ್‌ ಹಾವಳಿ; ರೋಗಲಕ್ಷಣಗಳು, ಜ್ವರ ಬಂದಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಯಿರಿ-health news viral fever cases increasing in karnataka symptoms causes diagnosis treatment and prevention must in know rs ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Viral Fever: ಕರ್ನಾಟಕದಲ್ಲಿ ವೈರಲ್ ಫಿವರ್‌ ಹಾವಳಿ; ರೋಗಲಕ್ಷಣಗಳು, ಜ್ವರ ಬಂದಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಯಿರಿ

Viral Fever: ಕರ್ನಾಟಕದಲ್ಲಿ ವೈರಲ್ ಫಿವರ್‌ ಹಾವಳಿ; ರೋಗಲಕ್ಷಣಗಳು, ಜ್ವರ ಬಂದಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಯಿರಿ

Viral Fever: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವೈರಲ್ ಜ್ವರದ ಹಾವಳಿ ಶುರುವಾಗಿದೆ. ಇದ್ದಕ್ಕಿದ್ದಂತೆ ಜ್ವರದ ಪ್ರಕರಣಗಳು ಏರಿಕೆಯಾಗಿದ್ದು, ವೈರಲ್‌ ಫಿವರ್‌ನ ರೋಗಲಕ್ಷಣಗಳು, ಜ್ವರ ಬರಲು ಕಾರಣ, ನಿಯಂತ್ರಣ ಕ್ರಮ ಹಾಗೂ ತಡೆಗಟ್ಟುವ ಮಾರ್ಗದ ಬಗ್ಗೆ ಇಲ್ಲಿದೆ ಮಾಹಿತಿ.

ವೈರಲ್ ಜ್ವರದ ರೋಗಲಕ್ಷಣಗಳು, ಜ್ವರ ಬಂದಾಗ ಪಾಲಿಸಬೇಕಾದ ಕ್ರಮ ತಿಳಿಯಿರಿ
ವೈರಲ್ ಜ್ವರದ ರೋಗಲಕ್ಷಣಗಳು, ಜ್ವರ ಬಂದಾಗ ಪಾಲಿಸಬೇಕಾದ ಕ್ರಮ ತಿಳಿಯಿರಿ (PC: Canva)

ಕಳೆದೊಂದಿದಷ್ಟು ದಿನಗಳಿಂದ ಯಾರ ಬಾಯಲ್ಲಿ ಕೇಳಿದರೂ ಜ್ವರ, ಮೈಕೈನೋವು, ತಲೆನೋವು ಎನ್ನುವ ಮಾತುಗಳೇ ಕೇಳಿ ಬರುತ್ತಿವೆ. ವಿಪರೀತ ಸುಸ್ತು ಕೂಡ ಜನರನ್ನು ಕಾಡುತ್ತಿದೆ. ಮೂಳೆಗಳ ಸೆಳೆತವೂ ಇರುವುದರಿಂದ ಹಲವರು ಡೆಂಗ್ಯೂ ಎಂದು ಭಾವಿಸುತ್ತಿದ್ದಾರೆ, ಆದರೆ ಇದಕ್ಕೆಲ್ಲಾ ಕಾರಣ ವೈರಲ್ ಫಿವರ್‌. ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ವೈರಲ್ ಫೀವರ್ ಹಾವಳಿ ಜೋರಾಗಿದೆ. ಇದ್ದಕ್ಕಿದ್ದಂತೆ ತಲೆನೋವು, ಮೈಕೈನೋವು, ಜ್ವರ ಕಾಣಿಸಿಕೊಳ್ಳುತ್ತಿದೆ.

ವೈರಲ್ ಜ್ವರ (Viral Fever) ವನ್ನು ಸಾಮಾನ್ಯ ವೈರಲ್ ಕಾಯಿಲೆ ಎಂದು ಕರೆಯಲಾಗುತ್ತದೆ. ಇದು ಎಲ್ಲಾ ವಯಸ್ಸಿನವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಈ ವೈರಲ್ ಜ್ವರದಲ್ಲಿ ಕೆಲವೊಮ್ಮೆ ಜ್ವರದ ಪ್ರಮಾಣ ಹೆಚ್ಚಿರುತ್ತದೆ, ಆದರೆ ಕೆಲವೊಮ್ಮೆ ಜ್ವರದ ಪ್ರಮಾಣ ಕಡಿಮೆ ಇದ್ದು ಇತರ ರೋಗಲಕ್ಷಣಗಳು ಹೆಚ್ಚು ಕಾಣಿಸಬಹುದು. ಹಾಗಾದರೆ ವೈರಲ್ ಜ್ವರ ರೋಗಲಕ್ಷಣಗಳು, ಜ್ವರ ಬಂದಾಗ ಪಾಲಿಸಬೇಕಾದ ಕ್ರಮಗಳು, ಜ್ವರ ಬಾರದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ.

ವೈರಲ್ ಜ್ವರದ ರೋಗಲಕ್ಷಣಗಳು

ವೈರಲ್ ಜ್ವರದ ಪ್ರಮುಖ ರೋಗಲಕ್ಷಣ ಎಂದರೆ ದೇಹ ಉಷ್ಣಾಂಶದಲ್ಲಿ ಏರಿಕೆಯಾಗುವುದು. ಇದು ಮಧ್ಯಮ ಪ್ರಮಾಣದಿಂದ ತೀವ್ರವಾಗಿರಬಹುದು. ಸಾಮಾನ್ಯ ಶೀತ ಹಾಗೂ ವೈ ಬೆವರುವುದು ಕೂಡ ವೈರಲ್ ಜ್ವರದ ಲಕ್ಷಣವಾಗಿದೆ.

ದೌರ್ಬಲ್ಯ ಮತ್ತು ಆಯಾಸ: ವೈರಲ್ ಜ್ವರದಿಂದ ಬಳಲುತ್ತಿರುವವರು ಅತಿಯಾದ ಆಯಾಸ, ಸುಸ್ತನ್ನು ಅನುಭವಿಸುತ್ತಾರೆ. ವಿಪರೀತ ಸುಸ್ತು ಇರುವ ಕಾರಣ ದೈನಂದಿನ ಕೆಲಸಗಳನ್ನು ಮಾಡಿಕೊಳ್ಳುವುದು ಕಷ್ಟವಾಗಬಹುದು.

ಮೈಕೈನೋವು: ವೈರಲ್ ಜ್ವರ ಕಾಣಿಸಿಕೊಂಡರೆ ವಿಪರೀತ ಮೈಕೈನೋವು ಹಾಗೂ ಸಂಪೂರ್ಣ ದೇಹದಲ್ಲಿ ನೋವಿನ ಅನುಭವವಾಗುತ್ತದೆ. ಸ್ನಾಯುಗಳು ಹಾಗೂ ಕೀಲುಗಳಲ್ಲಿ ವಿಪರೀತ ನೋವು ಕಾಣಿಸುತ್ತದೆ. ಕೀಲು ನೋವಿನ ಪ್ರಮಾಣ ಹೆಚ್ಚಿದ್ದು ಕೆಲವು ನಿರ್ದಿಷ್ಟ ಭಾಗಗಳಲ್ಲಿ ನೋವಿನ ಪ್ರಮಾಣ ಹೆಚ್ಚಿರುತ್ತದೆ.

ತಲೆನೋವು: ವೈರಲ್ ಜ್ವರ ಬಂದಾಗ ತಲೆನೋವು ಕೂಡ ಸಾಮಾನ್ಯವಾಗಿದೆ. ತಲೆನೋವು ಮಧ್ಯಮದಿಂದ ತೀವ್ರವಾಗಿದ್ದು, ಇದು ಒಟ್ಟಾರೆ ನಮ್ಮ ದಿನಚರಿಯ ಮೇಲೆ ಪ್ರಭಾವ ಬೀರುತ್ತದೆ.

ಗಂಟಲು ನೋವು: ಕೆಲವರಿಗೆ ವೈರಲ್ ಜ್ವರದ ಕಾರಣದಿಂದ ಗಂಟಲು ಹಾಗೂ ಕೆಮ್ಮು ಕೂಡ ಕಾಣಿಸಬಹುದು.

ಮೂಗು ಸೋರುವುದು, ಕಟ್ಟಿಕೊಳ್ಳುವುದು: ಮೂಗು ಕಟ್ಟಿಕೊಳ್ಳುವುದು, ಮೂಗು ಸೋರುವುದು ಹಾಗೂ ಸೀನುವುದು ಕೂಡ ವೈರಲ್ ಜ್ವರದ ಲಕ್ಷಣವಾಗಿದೆ.

ಜಠರಗರುಳಿನ ಸೋಂಕು: ವೈರಲ್ ಜ್ವರವು ವಾಂತಿ, ವಾಕರಿಕೆ, ಅತಿಸಾರದಂತಹ ಜಠರಗರುಳಿನ ಸಮಸ್ಯೆಗಳನ್ನೂ ಉಂಟು ಮಾಡಬಹುದು.

ವೈರಲ್ ಜ್ವರ ಹರಡಲು ಕಾರಣ

ವೈರಲ್ ಫಿವರ್ ಹರಡಲು ವೈರಾಣುಗಳೇ ಕಾರಣ. ವೈರಾಣುಗಳ ಬಹುಸಂಖ್ಯೆಯು ವೈರಲ್ ಜ್ವರವನ್ನು ಉಂಟುಮಾಡುತ್ತದೆ, ಪ್ರತಿಯೊಂದೂ ತನ್ನದೇ ಆದ ಪ್ರಸರಣ ಮಾರ್ಗವನ್ನು ಹೊಂದಿದೆ. ವೈರಲ್ ಜ್ವರವನ್ನು ಉಂಟುಮಾಡುವ ಕೆಲವು ಸಾಮಾನ್ಯ ವೈರಸ್‌ಗಳಿವು. ಇನ್ಫ್ಲುಯೆನ್ಸ ವೈರಸ್, ರೈನೋವೈರಸ್, ಡೆಂಗ್ಯೂ ವೈರಸ್, ಚಿಕೂನ್‌ಗುನ್ಯಾ ವೈರಸ್, ಎಬೋಲಾ ವೈರಸ್, ಝಿಕಾ ವೈರಸ್, ವೆಸ್ಟ್ ನೈಲ್ ವೈರಸ್ ಹೀಗೆ ಹಲವು ವೈರಾಣುಗಳಿಂದ ವೈರಲ್ ಫಿವರ್ ಹರಡುತ್ತದೆ.

ವೈರಲ್ ಜ್ವರಕ್ಕೆ ಚಿಕಿತ್ಸೆ

ಹೆಚ್ಚಿನ ವೈರಲ್ ಕಾಯಿಲೆಗಳು ಬ್ಯಾಕ್ಟೀರಿಯಾದ ವಿರುದ್ಧ ಪರಿಣಾಮಕಾರಿಯಾದ ಪ್ರತಿಜೀವಕ (ಆಂಟಿಬಯೋಟಿಕ್ಸ್‌) ಗಳಿಗೆ ಪ್ರತಿಕ್ರಿಯಿಸುವುದಿಲ್ಲ, ಆ ಕಾರಣಕ್ಕೆ ವೈರಲ್ ಜ್ವರಕ್ಕೆ ಪ್ರಾಥಮಿಕ ಚಿಕಿತ್ಸೆ ಎಂದರೆ ಸರಿಯಾದ ಆರೈಕೆ ಹಾಗೂ ವಿಶ್ರಾಂತಿ. ರೋಗಲಕ್ಷಣಗಳನ್ನು ನಿವಾರಿಸುವುದು ಮತ್ತು ಚೇತರಿಕೆಗೆ ಉತ್ತೇಜನ ನೀಡುವುದು ಚಿಕಿತ್ಸೆಯ ಗುರಿಯಾಗಿದೆ. ಹಾಗಾದರೆ ವೈರಲ್ ಜ್ವರ ಬಂದಾಗ ಏನು ಮಾಡಬೇಕು ನೋಡಿ.

ವಿಶ್ರಾಂತಿ: ಸೋಂಕಿನ ವಿರುದ್ಧ ಹೋರಾಡಲು ಮತ್ತು ಚೈತನ್ಯವನ್ನು ಪುನರ್ನಿರ್ಮಿಸಲು ದೇಹಕ್ಕೆ ಸಾಕಷ್ಟು ವಿಶ್ರಾಂತಿ ಅತ್ಯಗತ್ಯ.

ಹೈಡ್ರೇಷನ್‌: ವೈರಲ್ ಜ್ವರ ಬಂದರೆ ಸಾಕಷ್ಟು ನೀರು ಕುಡಿಯುವುದು ಬಹಳ ಮುಖ್ಯವಾಗುತ್ತದೆ. ಬಿಸಿ ಬಿಸಿ ನೀರು ಕುಡಿಯುವ ಅಭ್ಯಾಸ ಮಾಡಿ. ಯಾವುದೇ ಕಾರಣಕ್ಕೂ ದೇಹದಲ್ಲಿ ನೀರಿನಾಂಶ ಕೊರತೆ ಬಾರದಂತೆ ನೋಡಿಕೊಳ್ಳಿ.

ಜ್ವರ ನಿಯಂತ್ರಣಕ್ಕೆ: ಅಸೆಟಾಮಿನೋಫೆನ್ ಅಥವಾ ಐಬುಪ್ರೊಫೇನ್‌ನಂತಹ ಪ್ರತ್ಯಕ್ಷವಾದ ಔಷಧಿಗಳು ಕಡಿಮೆ ತಾಪಮಾನ ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಆದರೆ ಇದನ್ನು ವೈದ್ಯರ ಸಲಹೆ ಪಡೆಯದೇ ತೆಗೆದುಕೊಳ್ಳಬೇಡಿ.

ಆಹಾರ ಹೀಗಿರಲಿ: ಸಮತೋಲಿತ, ಪೌಷ್ಟಿಕಾಂಶ-ದಟ್ಟವಾದ ಆಹಾರವು ಸೋಂಕಿನ ವಿರುದ್ಧ ಪ್ರತಿರಕ್ಷಣಾ ವ್ಯವಸ್ಥೆಯ ಹೋರಾಟಕ್ಕೆ ಸಹಾಯ ಮಾಡುತ್ತದೆ. ಫ್ರಿಜ್‌ನಲ್ಲಿಟ್ಟ ಆಹಾರ ಬಿಸಿ ಮಾಡಿ ತಿನ್ನುವುದಕ್ಕಿಂತ ತಾಜಾ ಆಹಾರಗಳ ಸೇವನೆಗೆ ಒತ್ತು ನೀಡಿ. ಇದರೊಂದಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಶುಂಠಿ–ಅರಿಸಿನ–ಕಾಳುಮೆಣಸು–ಈರುಳ್ಳಿಯಿಂದ ತಯಾರಿಸಿದ ಕಷಾಯ ಕುಡಿಯಲು ಒತ್ತು ನೀಡಿ.

ಕೆಲವೊಮ್ಮೆ ಜ್ವರ ತೀವ್ರವಾದರೆ ಪ್ರಾಥಮಿಕ ಚಿಕಿತ್ಸೆಯು ಫಲ ಕೊಡುವುದಿಲ್ಲ. ಹಾಗಾಗಿ ವೈದ್ಯರ ಬಳಿಗೆ ತೋರಿಸಲೇಬೇಕಾಗುತ್ತದೆ.

ವೈರಲ್ ಜ್ವರ ಬಾರದಂತೆ ತಡೆಗಟ್ಟುವುದು

ವೈರಲ್ ಜ್ವರವನ್ನು ತಡೆಗಟ್ಟಲು ವೈಯಕ್ತಿಕ ನೈರ್ಮಲ್ಯ ಅಭ್ಯಾಸಗಳು ಮತ್ತು ರೋಗನಿರೋಧಕ ಕ್ರಮಗಳ ಸಂಯೋಜನೆಯನ್ನು ಅಳವಡಿಸಿಕೊಳ್ಳುವುದು ಅವಶ್ಯಕ.

ನೈರ್ಮಲ್ಯ: ನಿಯಮಿತವಾಗಿ ಸೋಪ್ ಮತ್ತು ನೀರಿನಿಂದ ಕೈ ತೊಳೆಯುವುದು, ಅನಾರೋಗ್ಯದ ಜನರೊಂದಿಗೆ ನೇರ ಸಂಪರ್ಕವನ್ನು ತಪ್ಪಿಸುವುದು ಮತ್ತು ಸೀನುವಾಗ ಅಥವಾ ಕೆಮ್ಮುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದು ಇವೆಲ್ಲವೂ ವೈರಸ್ ಹರಡುವ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ವ್ಯಾಕ್ಸಿನೇಷನ್: ಇನ್ಫ್ಲುಯೆನ್ಸ, ದಡಾರ ಮತ್ತು ಮಂಪ್ಸ್ ಸೇರಿದಂತೆ ವಿವಿಧ ವೈರಸ್‌ಗಳಿಗೆ ಲಸಿಕೆಗಳು ಲಭ್ಯವಿದೆ. ನಿಗದಿತ ಲಸಿಕೆಗಳನ್ನು ಸಮಯಕ್ಕೆ ಪಡೆಯುವುದು ಕೆಲವು ವೈರಲ್ ಕಾಯಿಲೆಗಳ ವಿರುದ್ಧ ರಕ್ಷಣೆ ನೀಡುತ್ತದೆ.

ಸೊಳ್ಳೆ ನಿಯಂತ್ರಣ: ಸೊಳ್ಳೆ ನಿವಾರಕಗಳನ್ನು ಬಳಸಿ, ಸೊಳ್ಳೆ ಕಚ್ಚದಂತೆ ತಡೆಯಲು ಕೈಕಾಲುಗಳು ಮುಚ್ಚುವಂತೆ ಸಂಪೂರ್ಣ ದೇಹ ಕವರ್ ಆಗುವ ಬಟ್ಟೆಗಳನ್ನು ಧರಿಸಿ ಮತ್ತು ಸೊಳ್ಳೆಯಿಂದ ಹರಡುವ ವೈರಲ್ ರೋಗಗಳಾದ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾವನ್ನು ತಡೆಗಟ್ಟಲು ನಿಂತ ನೀರಿನ ಮೂಲಗಳನ್ನು ನಿವಾರಿಸಿ. ಮನೆ ಸುತ್ತಮುತ್ತ ಸ್ವಚ್ಛವಾಗಿ ಇರಿಸಿಕೊಳ್ಳುವುದು ಮುಖ್ಯವಾಗುತ್ತದೆ.

ವೈರಲ್ ಜ್ವರಕ್ಕೆ ವಿಶ್ರಾಂತಿ ಹಾಗೂ ಸರಿಯಾದ ಕ್ರಮದಲ್ಲಿ ಆಹಾರ ಸೇವಿಸುವುದು ಬಹಳ ಮುಖ್ಯ. ಯಾವುದೇ ಕಾರಣಕ್ಕೂ ನೀರು ಕುಡಿಯುವುದನ್ನು ತಪ್ಪಿಸಬೇಡಿ. ಆದರ ಜ್ವರ ತೀವ್ರವಾದರೆ ಖಂಡಿತ ಹಾಗೆ ಇರಬೇಡಿ, ತಕ್ಷಣಕ್ಕೆ ವೈದ್ಯರಿಗೆ ತೋರಿಸಿ.

mysore-dasara_Entry_Point