Weight Loss: ಮಧುಮೇಹ, ಅತಿಯಾದ ಬೊಜ್ಜಿನಿಂದ ತೂಕ ಇಳಿಕೆ ಕಷ್ಟ ಆಗ್ತಾ ಇದ್ಯಾ; ಹಾಗಿದ್ರೆ ನಿಮಗಾಗಿ ಇಲ್ಲಿದೆ ಒಂದು ಗುಡ್‌ನ್ಯೂಸ್
ಟೈಪ್-1 ಡಯಾಬಿಟೀಸ್ ಹಾಗೂ ಬೊಜ್ಜಿನ ಕಾರಣದಿಂದ ತೂಕ ಇಳಿಕೆ ಕಷ್ಟ ಆಗ್ತಾ ಇದ್ಯಾ, ಹಾಗಿದ್ರೆ ನಿಮಗಾಗಿ ಇಲ್ಲಿದೆ ಒಂದು ಗುಡ್‌ನ್ಯೂಸ್. ಇದರ ನಿಯಂತ್ರಣಕ್ಕೆ ಸೇವಿಸುವ ಸೆಮಾಗ್ಲುಟೈಡ್ ದೇಹ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಇದರಿಂದ ಅಡ್ಡಪರಿಣಾಮಗಳು ಕಡಿಮೆ ಎಂಬ ಅಂಶವನ್ನು ಅಧ್ಯಯನವೊಂದು ಸಾಬೀತು ಮಾಡಿದೆ.
ಇತ್ತೀಚಿನ ದಿನಗಳಲ್ಲಿ ತೂಕ ಏರಿಕೆ ಎಂಬುದು ಸಾಂಕ್ರಾಮಿಕ ಕಾಯಿಲೆಯಂತಾಗಿದೆ. ಅನಾರೋಗ್ಯ, ಆಹಾರ, ಜಡಜೀವನ ಶೈಲಿ ಹೀಗೆ ಹಲವು ಕಾರಣಗಳಿಂದ ತೂಕ ಹೆಚ್ಚಳವಾಗುತ್ತಿದೆ. ತೂಕ ಇಳಿಕೆ ಮಾಡುವ ಸಲುವಾಗಿ ಹಲವರು ಹಲವು ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಕೆಲವರು ವರ್ಕೌಟ್ ಮಾಡಿದ್ರೆ ಇನ್ನೂ ಕೆಲವರು ಡಯೆಟ್ ಮಾಡ್ತಾರೆ, ಇನ್ನೂ ಅತಿ ತೂಕ ಹೊಂದಿದವರು ತೂಕ ಇಳಿಸುವ ಔಷಧಿ ಸೇವನೆಯತ್ತ ಮನ ಹೊರಳಿಸುತ್ತಾರೆ. ಆದರೆ ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಹೊಸ ಮಾಹಿತಿಯೊಂದು ಲಭ್ಯವಾಗಿದೆ. ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಒಬೆಸಿಯ ಹೊಸ ಅಧ್ಯಯನದ ಪ್ರಕಾರ ಮಧುಮೇಹ ಹಾಗೂ ಬೊಜ್ಜಿಗೆ ಸೇವಿಸುವ ಸೆಮಾಗ್ಲುಟೈಡ್ ಔಷಧಿಯು ಶೇ 80 ರಷ್ಟು ಮಂದಿಯಲ್ಲಿ ತೂಕ ನಷ್ಟಕ್ಕೆ ಕಾರಣವಾಗಿದೆ. ಅಂದರೆ ಅಧಿಕ ತೂಕ ಹೊಂದಿದ್ದು, ಈ ಔಷಧಿ ಸೇವನೆ ಮಾಡಿದವರಲ್ಲಿ ಗಮನಾರ್ಹವಾಗಿ ತೂಕ ಇಳಿಕೆಯಾಗಿದೆ.
ಸೆಮಾಗ್ಲುಟೈಡ್ ಸೇವನೆಯಿಂದ ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ರೋಗಿಗಳು ಚಯಾಪಚಯ ಆರೋಗ್ಯ, ಲಿಪಿಡ್ ಪ್ರೊಫೈಲ್‌ಗಳು, ರಕ್ತದೊತ್ತಡ, ಪಿತ್ತಜನಕಾಂಗದ ಕಾರ್ಯ ಮತ್ತು ಹೃದಯರಕ್ತನಾಳದ ಕಾಯಿಲೆಯ ಅಪಾಯವು ಕಡಿಮೆಯಾಗಿದೆ. ಅಲ್ಲದೇ ಈ ಸಮಸ್ಯೆ ಹೊಂದಿರುವವರು ಗಮನಾರ್ಹ ಸುಧಾರಣೆಗಳನ್ನು ಕಂಡಿದ್ದಾರೆ ಎಂಬುದು ಖುಷಿಯ ವಿಚಾರ.
ಪೋರ್ಟಿಸ್ ಆಸ್ಪತ್ರೆಯ ಇಂಟರ್‌ವೆಷನಲ್ ಕಾರ್ಡಿಯಾಲಜಿಯ ಸಲಹೆಗಾರ ಡಾ. ವಿವೇಕ್ ಮಹಾಜನ್ ಸೆಮಾಗ್ಲುಟೈಡ್- ಪ್ರೇರಿತ ತೂಕ ನಷ್ಟವು ಹೃದಯರಕ್ತನಾಳದ ಆರೋಗ್ಯವನ್ನು ಹೇಗೆ ಸುಧಾರಿಸುತ್ತದೆ ಎಂಬುದನ್ನು ವಿವರಿಸಿದ್ದಾರೆ.
ಸೆಮಾಗ್ಲುಟೈಡ್ ತೂಕ ಇಳಿಕೆಗೆ ಹೇಗೆ ಸಹಾಯ ಮಾಡುತ್ತೆ?
ನಮ್ಮ ದೇಹವು ಪೆಪ್ಟೈಡ್ ಅನ್ನು ಉತ್ಪಾದಿಸುತ್ತದೆ. ಇದು ಆಹಾರ ಸೇವನೆಗೆ ಪ್ರತಿಕ್ರಿಯೆಯಾಗಿ ಕರುಳಿನಿಂದ ಸ್ರವಿಸುತ್ತದೆ. ಇದು ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ ಬಿಡುಗಡೆಯನ್ನು ಉತ್ತೇಜಿಸುತ್ತದೆ. ಜೊತೆಗೆ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ. ಅಲ್ಲದೆ, ಅತಿಯಾದ ಆಹಾರ ಸೇವನೆಯ ಬಯಕೆಯನ್ನು ನಿಯಂತ್ರಿಸುತ್ತದೆ.
ಆಹಾರ ಸೇವನೆಯನ್ನು ಕಡಿಮೆ ಮಾಡುತ್ತದೆ ಮತ್ತು ತನ್ಮೂಲಕ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟದಲ್ಲಿ ಸಣ್ಣ ಕಡಿತವನ್ನು ಮಾಡುತ್ತದೆ. ಇದರ ಸೇವನೆಯಿಂದ ಎಂಡೋಥೀಲಿಯಂ ಗಂಥ್ರಿಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ, ಒಟ್ಟಾರೆ ಇದು ತೂಕ ಇಳಿಕೆ ಹಾಗೂ ಹೃದಯದ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಡಾ. ವಿವೇಕ್ ಮಹಾಜನ್.
ಹೃದಯರಕ್ತನಾಳದ ಚಿಕಿತ್ಸೆಗಳಿಗೆ ಸೆಮಾಗ್ಲುಟೈಡ್ ಹೇಗೆ ಪೂರಕವಾಗಿದೆ?
ಸೆಮಾಗ್ಲುಟೈಡ್ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುವ ಅತ್ಯಂತ ಪರಿಣಾಮಕಾರಿ ಔಷಧಿಗಳಲ್ಲಿ ಒಂದಾಗಿದೆ. ಇದು HbA1c (ಸರಾಸರಿ ರಕ್ತದಲ್ಲಿನ ಸಕ್ಕರೆ ಪ್ರಮಾಣ) ಮಟ್ಟವನ್ನು 1.5 ರಿಂದ 1.8ರಷ್ಟು ಕಡಿಮೆ ಮಾಡುತ್ತದೆ. ತೂಕ ನಷ್ಟದ ಪರಿಣಾಮಕಾರಿತ್ವದ ವಿಷಯದಲ್ಲಿ, ಸೆಮಾಗ್ಲುಟೈಡ್ SGLT2 ಪ್ರತಿರೋಧಕಗಳಂತಹ ಇತರ ತೂಕ ನಷ್ಟ ಔಷಧಗಳನ್ನು ಮೀರಿಸುತ್ತದೆ, ಇದು ನಿಮ್ಮ ಮೂತ್ರಪಿಂಡಗಳು ಸಕ್ಕರೆಯನ್ನು ಮರುಹೀರಿಕೊಳ್ಳುವುದನ್ನು ತಡೆಯುತ್ತದೆ.
ಸೆಮಾಗ್ಲುಟೈಡ್‌ನ ಚುಚ್ಚು ಮದ್ದಿನ ರೂಪವು ತೀವ್ರ ಸ್ವರೂಪದ ಮಧುಮೇಹ ಸಮಸ್ಯೆ ಇರುವವರಲ್ಲಿ ಹೃದಯರಕ್ತನಾಳದ ಸಮಸ್ಯೆಯ ಪರಿಣಾಮವನ್ನು ಕಡಿಮೆ ಮಾಡುತ್ತದೆ.
ಮಧುಮೇಹ ರೋಗಿಗಳಲ್ಲಿ ಹೃದಯರಕ್ತನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುವುದು ಸಹಜ. ಆದರೆ ಸೆಮಾಗ್ಲುಟೈಡ್ ಸೇವನೆಯಿಂದ ಇವರಿಗೆ ಸಾಕಷ್ಟು ಪ್ರಯೋಜನವಿದೆ. ಇತ್ತೀಚಿನ SELECT ಪ್ರಯೋಗವು ಚುಚ್ಚುಮದ್ದಿನ ಸೆಮಾಗ್ಲಟೈಡ್ ಮೊದಲೇ ಅಸ್ತಿತ್ವದಲ್ಲಿರುವ ಹೃದಯರಕ್ತನಾಳದ ಕಾಯಿಲೆಯಿಂದ ಮಧುಮೇಹವಲ್ಲದ ಬೊಜ್ಜು ರೋಗಿಗಳನ್ನು ರಕ್ಷಿಸುತ್ತದೆ. ಇವು ಮೂತ್ರಪಿಂಡದ ಸಮಸ್ಯೆ ಹೊಂದಿರುವವರಿಗೂ ಪ್ರಯೋಜನಕಾರಿ.
ಅಡ್ಡಪರಿಣಾಮಗಳು
ಸೆಮಾಗ್ಲುಟೈಡ್ ನಿರಂತರ ತೂಕ ನಷ್ಟವನ್ನು ಉಂಟು ಮಾಡುತ್ತದೆಯಾದರೂ ಈ ರೋಗಿಗಳು ಆರಂಭದಲ್ಲಿ ಹೊಟ್ಟೆಯುಬ್ಬರ, ಡಿಸ್ಪಿಪ್ಸಿಯಾ, ಜಠರದ ಉರಿಯೂತ, ಆಸಿಡಿಟಿ, ಮಲಬದ್ಧತೆ ಅಥವಾ ಅತಿಸಾರದಂತಹ ಸಮಸ್ಯೆಗಳನ್ನು ಎದುರಿಸಬಹುದು. ಆದರೆ ಇದರ ಸೇವನೆಯ 15 ರಿಂದ 20 ದಿನಗಳಲ್ಲಿ ಅಡ್ಡ ಪರಿಣಾಮಗಳು ಕಡಿಮೆಯಾಗುತ್ತವೆ.
(This copy first appeared in Hindustan Times Kannada website. To read more like this please logon to kannada.hindustantimes.com)