ಎಷ್ಟೇ ದೇಹ ದಂಡಿಸಿದ್ರೂ ತೂಕ ಇಳಿತಾ ಇಲ್ಲ ಅನ್ಸಿದ್ರೆ, ಚೆನ್ನಾಗಿ ನಿದ್ದೆ ಮಾಡಿ; ನಿದ್ರೆ ತೂಕ ನಷ್ಟಕ್ಕೆ ಹೇಗೆ ಸಹಕಾರಿ ನೋಡಿ
ಅತಿಯಾದ ತೂಕದಿಂದ ಬೇಸರಗೊಂಡಿದ್ದೀರಾ? ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಮೊದಲು ಚೆನ್ನಾಗಿ ನಿದ್ದೆ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ನಿದ್ದೆ ಉತ್ತಮ ಆರೋಗ್ಯಕ್ಕಷ್ಟೇ ಅಲ್ಲ ತೂಕ ಇಳಿಕೆಗೂ ಅವಶ್ಯ. ನಿದ್ದೆ ಮಾಡೋದ್ರಿಂದ ತೂಕ ಹೇಗೆ ಕಡಿಮೆ ಆಗುತ್ತೆ ಅನ್ನೋ ಪ್ರಶ್ನೆ ನಿಮ್ಮನ್ನು ಕಾಡ್ತಾ ಇದ್ರೆ, ಅದಕ್ಕೆ ಇಲ್ಲಿದೆ ಉತ್ತರ
ದಿನೇ ದಿನೇ ದೇಹದ ತೂಕದಲ್ಲಿ ಏರಿಕೆಯಾಗುತ್ತಲೇ ಇದೆ. ಆಹಾರದಲ್ಲಿ ಕ್ರಮದಲ್ಲಿ ವ್ಯತ್ಯಾಸ ಮಾಡಿಕೊಂಡಿದ್ದಾಯ್ತು, ನಿಯಮಿತವಾಗಿ ವ್ಯಾಯಾಮದ ಮೊರೆಹೋಗಿದ್ದೂ ಆಯ್ತು. ಆದರೂ ತೂಕ ಏರಿಕೆಯಾಗುತ್ತಿದೆಯೇ ಹೊರತು, ಕಡಿಮೆಯಾಗುತ್ತಿಲ್ಲ ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ಚಿಂತೆ ಮರೆತು ಚೆನ್ನಾಗಿ ನಿದ್ರಿಸಿ ನೋಡಿ, ತೂಕ ಇಳಿಸಿಕೊಳ್ಳೋದಕ್ಕೆ ಇದಕ್ಕಿಂತ ಉತ್ತಮ ಆಯ್ಕೆ ಬೇರೊಂದು ಇರಲು ಸಾಧ್ಯವೇ ಇಲ್ಲ ಎನ್ನುತ್ತಾರೆ ತಜ್ಞರು.
ಹೌದು, ಚೆನ್ನಾಗಿ ನಿದ್ದೆ ಮಾಡುವುದರಿಂದ ತಿನ್ನುವುದರ ಮೇಲಿನ ಆಸಕ್ತಿ ಕಡಿಮೆಯಾಗುತ್ತದೆ. ಅದರ ಜೊತೆಗೆ ಸರಿಯಾಗಿ ನಿದ್ರಿಸುವುದರಿಂದ ದೇಹದಲ್ಲಿರುವ ಕ್ಯಾಲೊರಿ ಬಲು ಬೇಗನೆ ಕರಗುತ್ತದೆ. ಜೀರ್ಣಕ್ರಿಯೆಯನ್ನೂ ಸರಾಗವಾಗಿಸುತ್ತದೆ. ಇದರಿಂದಾಗಿ ದೇಹಕ್ಕೆ ಸೂಕ್ತ ವಿಶ್ರಾಂತಿಯನ್ನೂ ನೀಡುವ ಮೂಲಕ ಯಾವುದೇ ರೀತಿಯ ಕಸರತ್ತುಗಳು, ದೇಹ ದಂಡನೆಯನ್ನು ಮಾಡದೆಯೇ ತೂಕ ಇಳಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಹಾಗಾದರೆ ರಾತ್ರಿಯ ನಿದ್ರೆಯು ತೂಕವನ್ನು ಇಳಿಸಿಕೊಳ್ಳಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನೋಡೋಣ.
ತೂಕ ಇಳಿಸಿಕೊಳ್ಳಲು ರಾತ್ರಿಯ ನಿದ್ರೆ ಹೇಗೆ ಸಹಕಾರಿ?
ನಿದ್ರೆಯ ಕೊರತೆಯಿಂದ ತೂಕ ಏರಲಿದೆ: ಸಾಮಾನ್ಯವಾಗಿ ವ್ಯಕ್ತಿಗೆ ಕನಿಷ್ಠವೆಂದರೂ ಎಂಟು ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಬೇಕಾಗುತ್ತದೆ. ಆದರೆ ನಿದ್ರಾಹೀನತೆಯುಂಟಾದರೆ ದೇಹವು ದಣಿವು, ನಿಶ್ಯಕ್ತಿಯನ್ನು ಅನುಭವಿಸುವಂತಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಸಿಹಿ ಪದಾರ್ಥ ಮತ್ತು ಸಕ್ಕರೆಯ ಖಾದ್ಯಗಳನ್ನು ತಿನ್ನುವ ಬಯಕೆಯು ಹೆಚ್ಚುತ್ತದೆ. ಆದರೆ ಅಧಿಕ ಪ್ರಮಾಣದಲ್ಲಿ ಸಕ್ಕರೆಯ ಅಂಶ ಸೇವಿಸುವುದರಿಂದ ಹೆಚ್ಚು ಪ್ರಮಾಣದ ಕ್ಯಾಲೊರಿಗಳು ನಮ್ಮ ದೇಹವನ್ನು ಸೇರುತ್ತದೆ ಮತ್ತು ತೂಕ ಏರಿಕೆಗೆ ಕಾರಣವಾಗುತ್ತದೆ.
ಆಹಾರ ಪದ್ಧತಿಯನ್ನು ನಿಯಂತ್ರಿಸುತ್ತದೆ: ಚೆನ್ನಾಗಿ ನಿದ್ದೆ ಮಾಡಿದರೆ, ತೂಕ ಹೆಚ್ಚಾಗಲು ಕಾರಣವಾಗುವ ಕಾರ್ಬೋಹೈಡ್ರೇಟ್ ಅಂಶ ಹೆಚ್ಚಿರುವ ಆಹಾರವನ್ನು ಸೇವಿಸಬೇಕು ಎನ್ನುವ ಆಸೆ ಕಡಿಮೆಯಾಗುತ್ತದೆ. ಸರಿಯಾಗಿ ನಿದ್ರೆಯಾಗದಿದ್ದರೆ, ಸಲಾಡ್‌ಗಿಂತ ಬರ್ಗರ್ ಅನ್ನು ನೀವು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು. ಇದು ಹೆಚ್ಚುವರಿ ತೂಕಕ್ಕೆ ಕಾರಣವಾಗುತ್ತದೆ.
ಜೀರ್ಣಕ್ರಿಯೆ ವೇಗವಾಗಲಿದೆ: ಸರಿಯಾಗಿ ನಿದ್ರಿಸುವುದರಿಂದ ದೇಹದಲ್ಲಿರುವ ಹೆಚ್ಚುವರಿ ಕ್ಯಾಲೊರಿ ಬರ್ನ್ ಮಾಡಲು ಸಹಾಯ ಮಾಡುತ್ತದೆ. ನೀವು ಚೆನ್ನಾಗಿ ನಿದ್ದೆ ಮಾಡುವಾಗ, ಉಸಿರಾಟ ಮತ್ತು ರಕ್ತಪರಿಚಲನೆಯಂತಹ ಕಾರ್ಯಗಳಿಗಾಗಿ ನಿಮ್ಮ ದೇಹವು ಕ್ಯಾಲೊರಿಗಳನ್ನು ಉಪಯೋಗಿಸುವುದರಿಂದ ಬೇಗನೆ ಕ್ಯಾಲೊರಿ ಬರ್ನ್ ಆಗುತ್ತದೆ. ಅಲ್ಲದೆ ಜೀರ್ಣಕ್ರಿಯೆಯೂ ಸರಾಗವಾಗಲಿದೆ.
ಹಾರ್ಮೋನ್‌ಗಳನ್ನು ನಿಯಂತ್ರಣದಲ್ಲಿಡಲು ಸಹಕಾರಿ: ಉತ್ತಮ ನಿದ್ರೆಯು, ಒತ್ತಡಕ್ಕೆ ಒಳಗಾದಾಗ ಬಿಡುಗಡೆಯಾಗುವ ಕಾರ್ಟಿಸೋಲ್ ಎಂಬ ಹಾರ್ಮೋನ್ ಮಟ್ಟವನ್ನು ನಿಯಂತ್ರಿಸುತ್ತದೆ. ಆದರೆ ನಿದ್ರೆಯ ಕೊರತೆಯಿದ್ದರೆ, ನಿಮ್ಮ ಕಾರ್ಟಿಸೋಲ್ ಮಟ್ಟವು ಹೆಚ್ಚಾಗುತ್ತದೆ. ಇದರಿಂದಾಗಿ ಒತ್ತಡ ಮತ್ತು ತೂಕವೂ ಏರಿಕೆಯಾಗುತ್ತದೆ. ಸಮರ್ಪಕವಾಗಿ ನಿದ್ದೆ ಮಾಡುವ ಮೂಲಕ ಹಾರ್ಮೋನುಗಳನ್ನು ಸಮತೋಲನದಲ್ಲಿಡಿ.
ಒತ್ತಡವನ್ನು ಕಡಿಮೆ ಮಾಡುತ್ತದೆ: ಚೆನ್ನಾಗಿ ನಿದ್ದೆ ಮಾಡುವುದರಿಂದ ಮನಸ್ಸನ್ನು ಹಗುರವಾಗಿಸಿಕೊಳ್ಳಬಹುದು. ಯಾಕೆಂದರೆ ಉತ್ತಮ ನಿದ್ರೆಯು ಡೋಪಮೈನ್ ಮತ್ತು ಸಿರೊಟೋನಿನ್ ಮಟ್ಟವನ್ನು ಬಿಡುಗಡೆ ಮಾಡುತ್ತದೆ. ಈ ಹಾರ್ಮೋನುಗಳು ಮನಸ್ಸಿನ ಭಾವನೆಗಳ ಮೇಲೆ ಉತ್ತಮ ಪರಿಣಾಮವನ್ನು ಬೀರುವಂತಹವು. ಡೋಪಮೈನ್ ಮಟ್ಟವು ಸಹ ತೂಕ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತವೆ. ಡೋಪಮೈನ್ ಮಟ್ಟ ಸ್ಥಿರತೆಯಲ್ಲಿದ್ದರೆ ಉತ್ತಮ ಆಹಾರ ಅಂದರೆ ಆರೋಗ್ಯಕರ ಆಹಾರಗಳನಷ್ಟೇ ಸೇವನೆ ಮಾಡುತ್ತೇವೆ. ಇದರಿಂದ ತೂಕ ನಷ್ಟವು ಸುಲಭ ಸಾಧ್ಯವಾಗುತ್ತದೆ.
ಉತ್ತಮ ರೂಢಿಗೆ ಕಾರಣವಾಗುತ್ತದೆ: ನಿದ್ರೆ ಮಾಡುವುದಕ್ಕೆ ನಿಗದಿತ ಸಮಯವನ್ನು ರೂಢಿಸಿಕೊಂಡರೆ ಅದು ಒಟ್ಟಾರೆ ಆರೋಗ್ಯದಲ್ಲಿ ಧನಾತ್ಮಕ ವ್ಯತ್ಯಾಸಗಳಿಗೆ ಕಾರಣವಾಗುತ್ತದೆ. ಸರಿಯಾದ ದಿನಚರಿಯು ನಿಮಗೆ ಸತತವಾಗಿ ವ್ಯಾಯಾಮ ಮಾಡಲು, ಸಮತೋಲಿತ ಆಹಾರವನ್ನು ಸೇವಿಸಲು ಮತ್ತು ನಿಮ್ಮ ಅಪೇಕ್ಷಿತ ಫಿಟ್‌ನೆಸ್ ಗುರಿಗಳನ್ನು ತಲುಪಲು ಸಹಾಯ ಮಾಡುತ್ತದೆ.
ಸಾಕಷ್ಟು ನಿದ್ದೆ ಮಾಡುವುದೆಂದರೆ ನಿಮ್ಮ ದೇಹಕ್ಕೆ ಎಲ್ಲವನ್ನೂ ನಿಭಾಯಿಸಲು ಬೇಕಾದ ಸಂಪೂರ್ಣ ಶಕ್ತಿಯನ್ನು ನೀವೇ ನೀಡಿದಂತೆ. ಇದು ನಿಮಗೆ ಆರೋಗ್ಯಕರ ಆಹಾರ ಸೇವನೆಗೆ ಸಹಾಯ ಮಾಡುವುದರೊಂದಿಗೆ ನಿಮ್ಮನ್ನು ಸಕ್ರಿಯವಾಗಿರಲು ಹಾಗೂ ಒತ್ತಡವನ್ನು ಕಡಿಮೆ ಮಾಡುವಲ್ಲಿಯೂ ನೆರವಾಗುತ್ತದೆ. ಆದ್ದರಿಂದ ನಿದ್ರೆಯಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ. ಕನಿಷ್ಟವೆಂದರೂ ಪ್ರತಿ ರಾತ್ರಿ 7-8 ಗಂಟೆಗಳ ವಿಶ್ರಾಂತಿ ಪಡೆಯಲು ಪ್ರಯತ್ನಿಸಿ. ತೂಕ ನಷ್ಟದ ನಿಮ್ಮ ಪ್ರಯತ್ನದಲ್ಲಿ ನೀವೇ ರೂಢಿಸಿಕೊಂಡಿರುವ ನಿಮ್ಮ ಜೀವನಶೈಲಿ ಮಹತ್ವದ ಪಾತ್ರ ವಹಿಸುತ್ತವೆ.