West Nile Fever: ಕೇರಳದಾದ್ಯಂತ ವೆಸ್ಟ್‌ ನೈಲ್‌ ಜ್ವರದ ಭೀತಿ; ಈ ಜ್ವರ ಹರಡುವ ಬಗೆ, ರೋಗಲಕ್ಷಣಗಳ ಬಗ್ಗೆ ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  West Nile Fever: ಕೇರಳದಾದ್ಯಂತ ವೆಸ್ಟ್‌ ನೈಲ್‌ ಜ್ವರದ ಭೀತಿ; ಈ ಜ್ವರ ಹರಡುವ ಬಗೆ, ರೋಗಲಕ್ಷಣಗಳ ಬಗ್ಗೆ ತಿಳಿಯಿರಿ

West Nile Fever: ಕೇರಳದಾದ್ಯಂತ ವೆಸ್ಟ್‌ ನೈಲ್‌ ಜ್ವರದ ಭೀತಿ; ಈ ಜ್ವರ ಹರಡುವ ಬಗೆ, ರೋಗಲಕ್ಷಣಗಳ ಬಗ್ಗೆ ತಿಳಿಯಿರಿ

ಜನರು ತಾಪಮಾನ ಏರಿಕೆ, ನಡು ನಡುವೆ ಮಳೆಯಿಂದ ಕಂಗಾಲಾಗಿದ್ದಾರೆ. ಈ ನಡುವೆ ನೆರೆಯ ಕೇರಳ ರಾಜ್ಯದ ಐವರಲ್ಲಿ ವೆಸ್ಟ್‌ ನೈಲ್‌ ಜ್ವರ ಪತ್ತೆಯಾಗಿದೆ. ಏನಿದು ವೆಸ್ಟ್‌ ನೈಲ್‌ ಜ್ವರ? ಇದರ ರೋಗಲಕ್ಷಣಗಳೇನು? ಈ ಕುರಿತ ವಿವರ ಇಲ್ಲಿದೆ.

 ಕೇರಳದಾದ್ಯಂತ ವೆಸ್ಟ್‌ ನೈಲ್‌ ಜ್ವರದ ಭೀತಿ
ಕೇರಳದಾದ್ಯಂತ ವೆಸ್ಟ್‌ ನೈಲ್‌ ಜ್ವರದ ಭೀತಿ

ಕಳೆದ ಒಂದಿಷ್ಟು ದಿನಗಳ ಹಿಂದೆ ಹಕ್ಕಿಜ್ವರದ ಭೀತಿ ನೆರೆಯ ಕೇರಳ ರಾಜ್ಯವನ್ನು ಆವರಿಸಿತ್ತು. ಅದು ಸದ್ದಡಗುವ ಮುನ್ನವೇ ಇದೀಗ ವೆಸ್ಟ್‌ ನೈಲ್‌ ಜ್ವರ ಎಂದು ಹೊಸ ಸಮಸ್ಯೆ ಕಾಣಿಸಿಕೊಂಡಿದೆ. ಕೇರಳದ ಐವರಲ್ಲಿ ವೆಸ್ಟ್‌ ನೈಲ್‌ ಜ್ವರ ಪತ್ತೆಯಾಗಿದ್ದು, ಕೇರಳ ರಾಜ್ಯ ಆರೋಗ್ಯ ಇಲಾಖೆ ಈ ಕುರಿತು ಸೂಚನೆ ನೀಡಿದ್ದು, ಕಟ್ಟುನಿಟ್ಟಿನ ಎಚ್ಚರ ವಹಿಸಿದೆ. ಕೇರಳದ ತ್ರಿಶೂರ್‌, ಮಲಪ್ಪುರಂ ಹಾಗೂ ಕೋಝಿಕ್ಕೋಡ್‌ನಲ್ಲಿ ವೆಸ್ಟ್‌ ನೈಲ್‌ ಜ್ವರ ಹರಡುತ್ತಿದೆ. ಇದು ಸೊಳ್ಳೆಯಿಂದ ಹರಡುವ ರೋಗವಾಗಿದ್ದು, ಸೊಳ್ಳೆಗಳ ನಿಯಂತ್ರಣಕ್ಕೆ ರಾಜ್ಯದಾದ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ವಹಿಸಲಾಗಿದೆ. ಮುಂಗಾರು ಪೂರ್ವ ಸಮಯದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗುವ ಕಾರಣ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ವೆಸ್ಟ್‌ ನೈಲ್‌ ಜ್ವರಕ್ಕೆ ಕಾರಣವೇನು?

ವೆಸ್ಟ್‌ ನೈಲ್‌ ಜ್ವರವು ಸೊಳ್ಳೆಯಿಂದ ಹರಡುವ ರೋಗವಾಗಿದೆ. ಇದು ವೆಸ್ಟ್‌ ನೈಲ್‌ ಎಂಬ ವೈರಸ್‌ನಿಂದ ಹರಡುತ್ತದೆ. ಪ್ರಾಥಮಿಕವಾಗಿ ಇದು ಸೊಳ್ಳೆ ಕಚ್ಚುವುದರಿಂದ ಹರಡುತ್ತದೆ. ಪಕ್ಷಿಗಳು ವೆಸ್ಟ್‌ ನೈಲ್‌ ವೈರಸ್‌ನ ಪ್ರಾಥಮಿಕ ವಾಹಕಗಳಾಗಿವೆ ಎಂದು ಇಂದ್ರಪ್ರಸ್ಧ ಅಪೋಲೋ ಆಸ್ಪತ್ರೆಯ ಆಂತರಿಕ ಔಷಧಿ ವಿಭಾಗದ ವೈದ್ಯರಾದ ಡಾ. ರಾಕೇಶ್‌ ಗುಪ್ತಾ ಹೇಳುತ್ತಾರೆ.

ಆರೋಗ್ಯ ಇಲಾಖೆಯ ಪ್ರಕಾರ ಶೇ 80 ರಷ್ಟು ಸೋಂಕಿತರಲ್ಲಿ ಯಾವುದೇ ರೋಗಲಕ್ಷಣಗಳು ಕಾಣಿಸುವುದಿಲ್ಲ. ಅಂಗಾಂಗ ಕಸಿ, ರಕ್ತ ವರ್ಗಾವಣೆ ಅಥವಾ ಗರ್ಭಾವಸ್ಥೆಯಲ್ಲಿ ಅಥವಾ ಹಾಲುಣಿಸುವ ಸಮಯದಲ್ಲಿ ತಾಯಿಯಿಂದ ಮಗುವಿಗೆ ಈ ವೈರಸ್‌ ಹರಡುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ವೆಸ್ಟ್‌ ನೈಲ್‌ ಜ್ವರದ ರೋಗಲಕ್ಷಣಗಳು

ವೆಸ್ಟ್ ನೈಲ್ ವೈರಸ್ ಸೋಂಕಿಗೆ ಒಳಗಾದ ಹೆಚ್ಚಿನ ಜನರಲ್ಲಿ ಯಾವುದೇ ರೋಗಲಕ್ಷಣಗಳನ್ನು ಕಾಣಿಸುವುದಿಲ್ಲ. ಆದಾಗ್ಯೂ, ಸುಮಾರು ಶೇ 20ರಷ್ಟು ಸೋಂಕಿತ ವ್ಯಕ್ತಿಗಳು ಜ್ವರ, ತಲೆನೋವು, ಮೈಕೈ ನೋವು, ವಾಕರಿಕೆ, ವಾಂತಿ ಮತ್ತು ಚರ್ಮದ ದದ್ದುಗಳನ್ನು ಇಂತಹ ಸಮಸ್ಯೆಗಳನ್ನು ಎದುರಿಸಬಹುದು ಎಂದು ಡಾ. ಗುಪ್ತಾ ವಿವರಿಸುತ್ತಾರೆ.

ʼಈ ಸೋಂಕು ತಗುಲಿದವರಲ್ಲಿ ಶೇ 1ಕ್ಕಿಂತ ಕಡಮೆ ಪ್ರಕರಣದಲ್ಲಿ ಗಂಭೀರತೆ ಗೋಚರವಾಗಬಹುದು. ಸೋಂಕು ತಲುಗಿ ಸಮಸ್ಯೆ ಗಂಭೀರವಾದರೆ ಮೆದುಳಿನಲ್ಲಿ ಉರಿಯೂತ ಅಥವಾ ಮೆನಿಂಜೈಟಿಸ್‌ನಂತಹ ನರವೈಜ್ಞಾನಿಕ ತೊಡಕುಗಳು ಉಂಟಾಗಬಹುದು. ಇದು ಮೆದುಳು ಮತ್ತು ಬೆನ್ನುಹುರಿಯ ಸುತ್ತಲಿನ ಪೊರೆಗಳ ಉರಿಯೂತಕ್ಕೆ ಕಾರಣವಾಗಬಹುದು ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಡಾ. ರಾಕೇಶ್‌ ಗುಪ್ತಾ.

ವೆಸ್ಟ್‌ ನೈಲ್‌ ಜ್ವರಕ್ಕೆ ಚಿಕಿತ್ಸೆ ಇದೆಯೇ?

ವೆಸ್ಟ್ ನೈಲ್ ಜ್ವರಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ ಎಂದು ಡಾ ಗುಪ್ತಾ ತಿಳಿಸಿದ್ದಾರೆ. ಸೌಮ್ಯವಾದ ಪ್ರಕರಣಗಳಲ್ಲಿ, ನೋವು ಮತ್ತು ಜ್ವರ ಪರಿಹಾರಕ್ಕಾಗಿ ಪ್ರತ್ಯಕ್ಷವಾದ ಔಷಧಿಗಳ ಮೂಲಕ ರೋಗಲಕ್ಷಣಗಳನ್ನು ನಿರ್ವಹಿಸಬಹುದು.

ತೀವ್ರತರವಾದ ಪ್ರಕರಣಗಳಿಗೆ ಆಸ್ಪತ್ರೆಗೆ ಸೇರಿಸುವುದು, ಅಭಿದಮನಿ ದ್ರವಗಳು, ಉಸಿರಾಟದ ಬೆಂಬಲ ಮತ್ತು ದ್ವಿತೀಯಕ ಸೋಂಕುಗಳ ತಡೆಗಟ್ಟುವಿಕೆ ಅಗತ್ಯವಾಗಬಹುದು ಎಂದು ಅವರು ಹೇಳುತ್ತಾರೆ.

ʼಅನಾರೋಗ್ಯದಿಂದ ಚೇತರಿಸಿಕೊಳ್ಳುವುದು ವ್ಯಕ್ತಿಯ ವಯಸ್ಸು ಮತ್ತು ಒಟ್ಟಾರೆ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ, ವಯಸ್ಸಾದ ವಯಸ್ಕರು ಮತ್ತು ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವವರು ತೀವ್ರ ತೊಡಕುಗಳಿಗೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆʼ ಎಂದು ಡಾ. ಗುಪ್ತಾ ಹೇಳಿದರು.

ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲದಿದ್ದರೂ, ರೋಗಲಕ್ಷಣಗಳನ್ನು ನಿರ್ವಹಿಸುವುದು ಮತ್ತು ಹೆಚ್ಚಿನ ತೊಡಕುಗಳನ್ನು ತಡೆಗಟ್ಟುವುದರ ಮೇಲೆ ಗಮನ ಹರಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ದುರ್ಬಲಗೊಂಡ ಪ್ರತಿರಕ್ಷಣಾ ವ್ಯವಸ್ಥೆಗಳು ಅಥವಾ ಆರೋಗ್ಯ ಸಮಸ್ಯೆ ಹೊಂದಿರುವ ವ್ಯಕ್ತಿಗಳು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಮತ್ತು ಹೆಚ್ಚು ಆಕ್ರಮಣಕಾರಿ ಚಿಕಿತ್ಸೆಯ ಅಗತ್ಯವಿರುತ್ತದೆ.

Whats_app_banner