ಒಂದು ತಿಂಗಳ ಕಾಲ ಹಾಲು ಕುಡಿಯದೇ ಇದ್ರೆ ಏನಾಗುತ್ತೆ; ಇದಕ್ಕೆ ತಜ್ಞರು ಏನಂತಾರೆ ನೋಡಿ
Give Up Milk For A Month: ಹಾಲು ನಮ್ಮ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಆದರೆ ಕೆಲವರು ಹಾಲು ಹಾಗೂ ಹಾಲಿನ ಉತ್ಪನ್ನಗಳ ಸೇವನೆಗೆ ಹಿಂದೇಟು ಹಾಕುತ್ತಾರೆ. ಆದರೆ ಇದು ಸರಿಯಲ್ಲ. ಒಂದು ತಿಂಗಳು ಹಾಲು ಕುಡಿಯದೇ ಇದ್ರೆ ಏನಾಗುತ್ತೆ ಎನ್ನುವುದಕ್ಕೆ ತಜ್ಞರು ಉತ್ತರಿಸಿದ್ದು ಹೀಗೆ.
ದೇಹಕ್ಕೆ ಪೋಷಕಾಂಶ ಒದಗಿಸಬೇಕು ಎಂಬ ಉದ್ದೇಶದಿಂದ ನಾವು ಪ್ರತಿನಿತ್ಯ ಹಾಲು ಕುಡಿಯುತ್ತೇವೆ. ನಮ್ಮ ಆಹಾರ ಪದ್ಧತಿಯಲ್ಲಿ ಹಾಲಿಗೆ ಮಹತ್ವದ ಸ್ಥಾನವಿದೆ. ಹಲವು ಬಗೆಯ ಹಾಲಿನ ಉತ್ಪನ್ನಗಳನ್ನು ದೈನಂದಿನ ಆಹಾರದೊಂದಿಗೆ ಸೇರಿಸುತ್ತೇವೆ. ಮೊಸರು, ಮಜ್ಜಿಗೆ, ಯೋಗರ್ಟ್ ಹೀಗೆ ಹಲವು ಬಗೆಯ ಹಾಲಿನ ಉತ್ಪನ್ನಗಳನ್ನು ಪ್ರತಿನಿತ್ಯ ಬಳಸುತ್ತೇವೆ. ಹಾಲು ಆರೋಗ್ಯಕ್ಕೆ ಉತ್ತಮ ಎನ್ನುವುದು ನಿಜ, ಆದರೆ ಹಾಲು ಸೇವನೆಯ ವಿಷಯದಲ್ಲೂ ಎಚ್ಚರಿಕೆ ವಹಿಸಬೇಕು. ಅತಿಯಾದ ಹಾಲಿನ ಸೇವನೆಯು ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು ಎನ್ನುತ್ತಾರೆ ತಜ್ಞರು.
ಹಾಗಾದರೆ ಹಾಲು ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕೇ? ಒಂದು ತಿಂಗಳ ಕಾಲ ಹಾಲು ಕುಡಿಯುವುದನ್ನು ನಿಲ್ಲಿಸಿದರೆ ದೇಹಕ್ಕೆ ಏನಾಗಬಹುದು? ಈ ಬಗ್ಗೆ ತಜ್ಞರ ಉತ್ತರ ಇಲ್ಲಿದೆ.
ಉದಯಪುರದ ಪಾರಸ್ ಹೆಲ್ತ್‌ನ ಆಂತರಿಕ ಔಷಧಿ ವಿಭಾಗದ ವೈದ್ಯ ಡಾ. ಸಂದೀಪ್ ಭಟ್ನಾಗರ್ ಅವರ ಪ್ರಕಾರ ಒಂದು ತಿಂಗಳ ಕಾಲ ನಾವು ನಾವು ಕುಡಿಯುವುದನ್ನು ನಿಲ್ಲಿಸಿದರೆ ದೇಹದಲ್ಲಿ ಬದಲಾವಣೆ ಉಂಟಾಗುವುದನ್ನು ಗಮನಿಸಬಹುದು. ʼಕೆಲವರು ಲ್ಯಾಕ್ಟೋಸ್ ಅಸಹಿಷ್ಣತೆ ಹೊಂದಿರುತ್ತಾರೆ. ಅಂತಹವರು ಹಾಲು ಕುಡಿಯುವುದನ್ನು ನಿಲ್ಲಿಸಿದಾಗ ಹೊಟ್ಟೆಯುಬ್ಬರ ಕಡಿಮೆಯಾಗುವುದು ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ನಿಯಂತ್ರಣಕ್ಕೆ ಬರುವುದನ್ನು ಗಮನಿಸಬಹುದು. ಹಾಲು ಕುಡಿಯುವುದನ್ನು ನಿಲ್ಲಿಸಿದಾಗ ಕ್ಯಾಲ್ಸಿಯಂ ಸೇವನೆಯಲ್ಲಿ ವ್ಯತ್ಯಯ ಉಂಟಾಗಿ ಮೂಳೆಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಕೆಲವರಿಗೆ ಹಾಲು ಹಾಗೂ ಹಾಲಿನ ಉತ್ಪನ್ನಗಳ ಸೇವನೆಯಿಂದ ಚರ್ಮದ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಅಂತಹವರಲ್ಲಿ ಹಾಲು ಕುಡಿಯುವುದನ್ನು ನಿಲ್ಲಿಸಿದಾಗ ಚರ್ಮದ ಆರೋಗ್ಯ ಸ್ಥಿತಿ ಸುಧಾರಿಸುವ ಸಾಧ್ಯತೆ ಇರುತ್ತದೆ. ಹಾಲು ಪ್ರೊಟೀನ್ ಹಾಗೂ ವಿಟಮಿನ್‌ಗಳ ಮೂಲವಾಗಿರುವುದರಿಂದ ಪೋಷಕಾಂಶಗಳ ಹೊಂದಾಣಿಕೆಗೆ ಪೂರಕ ಆಹಾರ ಸೇವನೆಯತ್ತ ಗಮನ ನೀಡಬೇಕು. ʼಆದರೆ ಹಾಲು ಕುಡಿಯುವನ್ನು ನಿಲ್ಲಿಸಿದಾಗ ಒಬ್ಬೊಬ್ಬರ ದೇಹಸ್ಥಿತಿಯಲ್ಲಿ ಒಂದೊಂದು ರೀತಿ ಬದಲಾವಣೆ ಉಂಟಾಗುತ್ತದೆ. ಆದರೆ ಹಾಲು ಕುಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮʼ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಡಾ. ಸಂದೀಪ್ ತಿಳಿಸುತ್ತಾರೆ.
ಈ ವಿಷಯದ ಬಗ್ಗೆ ಮಾತನಾಡುವ ಪೌಷ್ಟಿಕತಜ್ಞ ನೂಪುರ್ ಪಾಟೀಲ್, ʼನಾವು ನಿಯಮಿತವಾಗಿ ಹಾಲು ಸೇವಿಸುತ್ತಿದ್ದರೆ ಕ್ಯಾಲ್ಸಿಯಂ, ವಿಟಮಿನ್ ಡಿ ಪೂರೈಕೆ ಸರಿಯಾಗಿ ಆಗುತ್ತದೆ. ಇದಕ್ಕಾಗಿ ನಾವು ಪೂರಕ ಆಹಾರಗಳನ್ನು ಸೇವಿಸಬೇಕು ಎಂದಿರುವುದಿಲ್ಲ. ಏಕೆಂದರೆ ಈ ಪೋಷಕಾಂಶಗಳು ಹಾಲಿನಲ್ಲಿ ಇರುತ್ತದೆ. ಹಲ್ಲು ಹಾಗೂ ಮೂಳೆಗಳು ಸದೃಢವಾಗಲು ಕ್ಯಾಲ್ಸಿಯಂ ಹೊಂದುವುದು ಅವಶ್ಯವಾಗಿದೆ. ವಿಟಮಿನ್ ಡಿ ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಒಂದು ತಿಂಗಳ ಕಾಲ ಸಂಪೂರ್ಣವಾಗಿ ಹಾಲು ಕುಡಿಯುವುದನ್ನು ನಿಲ್ಲಿಸುವುದು ಸರಿಯೇ? ಎಂಬ ಪ್ರಶ್ನೆಗೆ ತಜ್ಞರು ಉತ್ತರಿಸುವುದು ಹೀಗೆ. ತಿಂಗಳ ಕಾಲ ಹಾಲು ಸೇವಿಸುವುದನ್ನು ಸಂಪೂರ್ಣವಾಗಿ ತ್ಯಜಿಸಬೇಕೋ ಬೇಡವೋ ಎಂಬುದು ವ್ಯಕ್ತಿಯ ಆರೋಗ್ಯ ಅಗತ್ಯಗಳು, ಡಯೆಟ್ ಪಾಲನೆ ಹಾಗೂ ವ್ಯಕ್ತಿಯನ್ನು ಬಾಧಿಸುತ್ತಿರುವ ಆರೋಗ್ಯ ಸಮಸ್ಯೆಯ ಮೇಲೆ ಅವಲಂಬಿತವಾಗಿದೆ ಎನ್ನುತ್ತಾರೆ ತಜ್ಞರು.
ʼನಿಮಗೆ ಲ್ಯಾಕ್ಟೋಸ್ ಅಲರ್ಜಿ ಇದ್ದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳಿಂದ ದೂರವಿರಲು ನೀವು ಹಾಲು ಕುಡಿಯುವುದನ್ನು ನಿಲ್ಲಿಸುವುದು ಉತ್ತಮ. ಪಾರಿಸರಿಕ ಹಾಗೂ ಆರೋಗ್ಯದ ಕಾರಣಗಳಿಂದ ಡೇರಿ ಉತ್ಪನ್ನ ಮುಕ್ತ ಆಹಾರಗಳನ್ನು ಸೇವಿಸಲು ಬಯಸಿದರೆ ಪರ್ಯಾಯ ಆಹಾರಗಳನ್ನು ಸೇವಿಸುವುದು ಉತ್ತಮ. ಹಾಲು ಪ್ರೊಟೀನ್ ಹಾಗೂ ಕ್ಯಾಲ್ಸಿಯಂ ಮೂಲವಾಗಿದ್ದು, ಅದರ ಬದಲು ಈ ಅಂಶಗಳನ್ನು ದೇಹಕ್ಕೆ ಪೂರೈಸುವ ಪೂರಕ ಆಹಾರಗಳನ್ನು ಸೇವಿಸುವುದು ಉತ್ತಮ. ಆದರೆ ಪ್ರಮುಖ ಆಹಾರಗಳ ಬದಲಾವಣೆಗೂ ಮುನ್ನ ಆಹಾರ ತಜ್ಞರನ್ನು ಅಥವಾ ಪೌಷ್ಟಿಕ ತಜ್ಞರನ್ನು ಭೇಟಿ ಮಾಡುವುದು ಉತ್ತಮ ಎಂದು ಡಾ. ಭಟ್ನಾಗರ್ ಹೇಳುತ್ತಾರೆ.
ಹಾಗಾದರೆ ನೀವು ಹಾಲಿನ ಸೇವನೆಯ ಅಥವಾ ಡೇರಿ ಉತ್ಪನ್ನಗಳ ಸೇವನೆಯನ್ನು ನಿಲ್ಲಿಸಿದರೆ ಅದಕ್ಕೆ ಪರ್ಯಾಯವಾಗಿ ಏನನ್ನು ಸೇವಿಸಬಹುದು? ಈ ಪ್ರಶ್ನೆಗೆ ಪಾಟೀಲ್ ನೀಡಿದ ಸಲಹೆಗಳು ಹೀಗಿವೆ.
ಸಸ್ಯಜನ್ಯ ಹಾಲು: ಹಸುವಿನ ಹಾಲಿನ ಬದಲಿಗೆ ಸಸ್ಯಜನ್ಯ ವಸ್ತುಗಳ ಹಾಲನ್ನು ಸೇವಿಸಬಹುದು. ಬಾದಾಮಿ ಹಾಲು, ಸೋಯಾ ಹಾಲು, ಓಟ್ ಮಿಲ್ಕ್, ತೆಂಗಿನಹಾಲು ಅಥವಾ ಅಕ್ಕಿಯ ಹಾಲು ಸೇವಿಸಬಹುದು. ಇವುಗಳಲ್ಲಿ ಪ್ರೊಟೀನ್, ಮಿನರಲ್ಸ್, ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ ಅಂಶಗಳಿರುತ್ತವೆ.
ಹಸಿರು ಸೊಪ್ಪು: ಹಾಲಿನ ಬದಲು ಕ್ಯಾಲ್ಸಿಯಂ ವಿಟಮಿನ್‌ಗಾಗಿ ಪಾಲಕ್, ಬ್ರೊಕೋಲಿಯಂತಹ ಕ್ಯಾಲ್ಸಿಯಂ ಸಮೃದ್ಧ ಸೊಪ್ಪು ತರಕಾರಿಯನ್ನು ಸೇವಿಸಬಹುದು.
ಒಣಹಣ್ಣುಗಳು ಹಾಗೂ ಬೀಜಗಳು: ಬಾದಾಮಿ, ಚಿಯಾಬೀಜ, ಎಳ್ಳು ಮುಂತಾದ ಒಣಹಣ್ಣು ಹಾಗೂ ಬೀಜಗಳಲ್ಲಿ ಕ್ಯಾಲ್ಸಿಯಂ ಅಂಶ ಸಮೃದ್ಧವಾಗಿರುತ್ತದೆ.
ಮೀನು: ಸಾಲ್ಮನ್ ಮತ್ತು ಬೂತಾಯಿಯಂತಹ ಒಮೆಗಾ-3 ಕೊಬ್ಬಿನಾಮ್ಲ ಅಧಿಕವಾಗಿರುವ ಮೀನುಗಳ ಸೇವನೆ ಅವಶ್ಯ. ಇದು ದೇಹಕ್ಕೆ ವಿಟಮಿನ್ ಡಿ ಒದಗಿಸಲು ಸಹಾಯ ಮಾಡುತ್ತದೆ.