ಒಂದೇ ರೂಪ 2 ಗುಣ; ಟೋಫು-ಪನೀರ್‌ಗೂ ಇರುವ ವ್ಯತ್ಯಾಸವೇನು? ಆರೋಗ್ಯಕ್ಕೆ ಯಾವುದು ಉತ್ತಮ ಆಯ್ಕೆ?
ಕೆಲವೊಂದು ಆಹಾರ ಪದಾರ್ಥಗಳು ನೋಡಲು ಒಂದೇ ರೀತಿ ಇರುತ್ತದೆ. ಆದರೆ ಇವುಗಳ ರುಚಿ, ಪೋಷಕ ಅಂಶಗಳು ಬೇರೆ ಬೇರೆಯಾಗಿರುತ್ತದೆ. ಅದೇ ರೀತಿ ಟೋಫು ಹಾಗೂ ಪನೀರ್ ನೋಡಲು ಒಂದೇ ರೀತಿ ಕಾಣುತ್ತದೆ. ಇದರ ನಡುವಿನ ವ್ಯತ್ಯಾಸವೇನು? ಎರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಮಾಹಿತಿ.
ಪನೀರ್ ಮಟರ್ ಮಸಾಲಾ, ಪಾಲಕ್ ಪನೀರ್, ಪನೀರ್ ಚಿಲ್ಲಿ, ಪನೀರ್ ಗೋಬಿ ಈ ಹೆಸರುಗಳನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತೇವೆ. ಇದರಲ್ಲಿ ನಾಲಿಗೆಗೆ ರುಚಿ ಕೊಡುವುದು ಮಾತ್ರವಲ್ಲದೆ ದೇಹಕ್ಕೆ ಬೇಕಾದ ಪ್ರೋಟೀನ್ ಅಂಶ ಕೂಡಾ ಇದೆ. ಅದೇ ಕಾರಣಕ್ಕೆ ಡಯಟ್ ಮಾಡುವವರು ತಮ್ಮ ಆಹಾರ ಕ್ರಮದಲ್ಲಿ ತಪ್ಪದೆ ಪನೀರ್ ಬಳಸುತ್ತಾರೆ.
ಟೋಫು-ಪನೀರ್ ಎರಡರ ಮೂಲ ಯಾವುದು?
ಆದರೆ ಪನೀರ್‌ನಷ್ಟೇ ಪೋಷಕಾಂಶ ಹೊಂದಿರುವ ಟೋಫು ಬಗ್ಗೆ ಹೆಚ್ಚಿನ ಜನಕ್ಕೆ ತಿಳಿದಿಲ್ಲ. ಟೋಫು ಹಾಗೂ ಪನೀರ್ ಎರಡರ ನಡುವಿನ ವ್ಯತ್ಯಾಸ ಕೂಡಾ ಗೊತ್ತಿಲ್ಲ. ಪನೀರ್ ಎಂದರೆ ಅದು ಭಾರತೀಯ ಹೆಸರು, ಟೋಫು ಎಂದರೆ ವಿದೇಶಿಯರು ಕರೆಯುವ ಹೆಸರು ಎಂದು ತಪ್ಪು ತಿಳಿದಿದ್ದಾರೆ. ಆದರೆ ಇದೆರಡೂ ಬೇರೆ ಬೇರೆ. ನೋಡಲು ಮಾತ್ರ ಒಂದೇ ರೀತಿ ಕಾಣುತ್ತವೆ. ರುಚಿ ಕೂಡಾ ವಿಭಿನ್ನವಾಗಿದೆ.
ಟೋಫು, ಸೋಯಾಬೀನ್ ಹಾಲಿನಿಂದ ತಯಾರಾದ ಆಹಾರ ಪದಾರ್ಥ. ಇದರಲ್ಲಿ ಹೆಚ್ಚು ಪ್ರೋಟೀನ್ ಅಂಶವಿದೆ. ಪನೀರ್ ಹಸು, ಎಮ್ಮೆ, ಮೇಕೆಯ ಹಾಲಿನಿಂದ ತಯಾರಿಸಲಾಗುವ ಆಹಾರ ಪದಾರ್ಥ. ಇದು ಕಾಟೇಜ್ ಚೀಸ್‌ನ್ನು ಹೋಲುತ್ತದೆ. ವಿನೆಗರ್, ಮೊಸರು ಅಥವಾ ಸಿಟ್ರಿಕ್ ಆಮ್ಲದಂತಹ ಆಮ್ಲೀಯ ಆಹಾರ ಪದಾರ್ಥವನ್ನು ಬಳಸಿಕೊಂಡು ಹಾಲನ್ನು ಮೊಸರು ಮಾಡುವ ಮೂಲಕ ತಯಾರಿಸಿದ ಪದಾರ್ಥ.
ಟೋಫು ಏಷ್ಯಾದ ಪ್ರಮುಖ ಆಹಾರ
ಟೋಫುವಿನ ಮೂಲ ಚೀನಾ. ಏಷ್ಯನ್ ಕುಸಿನ್‌ನಲ್ಲಿ ಟೋಫು ಪ್ರಮುಖ ಆಹಾರ ಪದಾರ್ಥವಾಗಿದೆ. ಪ್ರಪಂಚಾದ್ಯಂತ ಇದು ಸಸ್ಯಹಾರಿ ಆಹಾರ ಭಾಗವಾಗಿ ಹೆಸರಾಗಿದೆ. ಪನೀರ್ ಭಾರತದಲ್ಲಿ ಹುಟ್ಟಿಕೊಂಡಿತು. ಆದ್ದರಿಂದಲೇ ಇದನ್ನು ಇಂಡಿಯನ್ ಕಾಟೇಜ್ ಚೀಸ್ ಎಂದೂ ಕರೆಯುತ್ತಾರೆ.
ಟೋಫು, ಸೋಯಾ ಹಾಲಿನಿಂದ ತಯಾರಿಸಲಾಗುವ ಆಹಾರವಾಗಿದ್ದು ಸಸ್ಯ ಆಧಾರಿತ ಉತ್ಪನ್ನವಾಗಿದೆ, ಆದರೆ ಪನೀರನ್ನು ಪ್ರಾಣಿಗಳ ಹಾಲಿನಿಂದ ತಯಾರಿಸಲಾಗುತ್ತದೆ
ಪೌಷ್ಟಿಕಾಂಶದ ವಿಚಾರಕ್ಕೆ ಬರುವುದಾದರೆ ಟೋಫುವಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣದ ಅಂಶ ಹೇರಳವಾಗಿದೆ. 100 ಗ್ರಾಂ ಅಥವಾ 3.5 ಔನ್ಸ್ ಟೋಫು 144 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಪನೀರ್‌ನಲ್ಲಿ ಹೆಚ್ಚು ಕ್ಯಾಲೋರಿ, ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ ಮತ್ತು ಕೊಬ್ಬು ಇದೆ. 100 ಗ್ರಾಂ ಅಥವಾ 3.5 ಔನ್ಸ್ ಪನೀರ್ 321 ಕ್ಯಾಲೋರಿಗಳನ್ನು ಹೊಂದಿರುತ್ತದೆ.
ಟೋಫು ಅಥವಾ ಪನೀರ್- ಯಾವುದು ಉತ್ತಮ?
ಟೋಫು ಮತ್ತು ಪನೀರ್ ಎರಡೂ ಪ್ರೋಟೀನ್, ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶಗಳನ್ನು ಹೊಂದಿದೆ. ಆದರೆ ಇದರಲ್ಲಿ ಹೆಚ್ಚು ಕೊಬ್ಬಿನಾಂಶ ಇರುವುದರಿಂದ ಹೆಚ್ಚು ಸೇವಿಸದಿರುವುದು ಉತ್ತಮ. ಇದನ್ನು ಹೊರತುಪಡಿಸಿ ಎರಡೂ ಒಂದೇ ಪೋಷಕಾಂಶವನ್ನು ಹೊಂದಿರುವುದರಿಂದ ಯಾವುದು ಉತ್ತಮ ಎಂಬುದು ನಿಮ್ಮ ಆಯ್ಕೆಗೆ ಬಿಟ್ಟಿದ್ದು.
ಒಂದು ವೇಳೆ ನೀವು ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದರೆ, ಹೆಚ್ಚು ಪ್ರೋಟೀನ್ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಟೋಫುವನ್ನು ನಿಮ್ಮ ಡಯಟ್‌ನಲ್ಲಿ ಅಳವಡಿಸಿಕೊಳ್ಳಬಹುದು. ಅಥವಾ ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ನೀವು ಬಯಸಿದರೆ, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ಕಾರ್ಬೋಹೈಡ್ರೇಟ್‌ಗಳು ಮತ್ತು ಕ್ಯಾಲೊರಿಗಳನ್ನು ಒಳಗೊಂಡಿರುವ ಪನೀರ್ ಕೂಡಾ ಬಳಸಬಹುದು. ಆದರೆ ಮಿತವಾಗಿ ಬಳಸಿದರೆ ಉತ್ತಮ.