Saree Cancer: ಸೀರೆ ಉಟ್ರೆ ಕ್ಯಾನ್ಸರ್ ಬರುತ್ತಾ? ಸೀರೆ ಕ್ಯಾನ್ಸರ್ ಹರಡಲು ಕಾರಣ, ಇದರ ಲಕ್ಷಣಗಳು, ತಡೆಗಟ್ಟುವ ಮಾರ್ಗದ ವಿವರ ಇಲ್ಲಿದೆ
ಕಳೆದೆರಡು ದಿನಗಳಿಂದ ದೇಶದಾದ್ಯಂತ ಸೀರೆ ಕ್ಯಾನ್ಸರ್ ಸದ್ದು ಮಾಡುತ್ತಿದೆ. ಏನಿದು ಸೀರೆ ಕ್ಯಾನ್ಸರ್, ಈ ಕ್ಯಾನ್ಸರ್ ಹರಡಲು ಕಾರಣವೇನು ಎಂದು ಜನರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಹಾಗಾದ್ರೆ ಈ ಕ್ಯಾನ್ಸರ್ ಉಂಟಾಗಲು ಕಾರಣವೇನು, ಇದನ್ನು ತಡೆಗಟ್ಟುವ ಮಾರ್ಗ ಯಾವುದು, ಇದರ ಲಕ್ಷಣಗಳೇನು? ಎಂಬಿತ್ಯಾದಿ ವಿವರ ಇಲ್ಲಿದೆ.
ಸೀರೆ ಭಾರತೀಯ ಮಹಿಳೆಯರ ಸಂಕೇತ. ವಿಶ್ವದಾದ್ಯಂತ ತನ್ನದೇ ಛಾಪು ಮೂಡಿಸಿರುವ ಸೀರೆಯ ಅಂದಕ್ಕೆ ಮಾರು ಹೋಗದವರಿಲ್ಲ. ಆರು ಗಜ, ಒಂಬತ್ತು ಮೊಳದ ಸೀರೆಯುಟ್ಟ ಹೆಣ್ಣಿನ ಅಂದಕ್ಕೆ ಸರಿಸಾಟಿಯಿಲ್ಲ ಎಂಬ ಮಾತಿದೆ. ಹೆಣ್ಣಿಗೆ ಸೀರೆ ಯಾಕೆ ಅಂದ ಅಂತೆಲ್ಲಾ ಸೀರೆಗೂ ನೀರೆಗೂ ಇರುವ ಸಂಬಂಧವನ್ನು ಸಿನಿಮಾ ಹಾಡುಗಳಲ್ಲೂ ಕೂಡ ವರ್ಣಿಸಲಾಗಿದೆ. ಹೀಗೆ ಸೀರೆಗೂ ಹೆಣ್ಣಿಗೂ ಅವಿನಾಭಾವ ಸಂಬಂಧ ಇರುವುದಂತೂ ನಿಜ. ಆದರೆ ಇದೀಗ ಸೀರೆ ಕ್ಯಾನ್ಸರ್ ದೇಶದಾದ್ಯಂತ ಸದ್ದು ಮಾಡುತ್ತಿದೆ. ಹಿಂದೊಮ್ಮೆ ಸದ್ದು ಮಾಡಿ ತಣ್ಣಗಾಗಿದ್ದ ಸೀರೆ ಕ್ಯಾನ್ಸರ್ ಮತ್ತೆ ಮುನ್ನೆಲೆಗೆ ಬಂದಿದೆ.
ಆದ್ರೆ ಒಂದು ವಿಚಾರ ನೆನಪಿರಲಿ ಸೀರೆ ಉಟ್ರೆ ಮಾತ್ರವಲ್ಲ, ಇತರ ಉಡುಪುಗಳನ್ನು ಸರಿಯಾದ ಕ್ರಮದಲ್ಲಿ ಧರಿಸಿಲ್ಲ ಅಂದ್ರೆ ಕ್ಯಾನ್ಸರ್ ಬರೋದು ಪಕ್ಕಾ ಎನ್ನುತ್ತಾರೆ ತಜ್ಞರು. ಸೀರೆ ಕ್ಯಾನ್ಸರ್ ಎನ್ನುವುದು ಭಾರತದಲ್ಲೇ ಹೆಚ್ಚು ಕಾಣಿಸುತ್ತಿದೆ, ಯಾಕೆಂದರೆ ಭಾರತದಲ್ಲೇ ಅತಿ ಹೆಚ್ಚು ಜನರು ಸೀರೆ ಉಡುವವರಿರುವುದು.
ಭಾರತದ ಬಹುತೇಕ ರಾಜ್ಯಗಳಲ್ಲಿ ಮಹಿಳೆಯರು ಪ್ರತಿದಿನ ಸೀರೆ ಉಡುತ್ತಾರೆ. ಸೀರೆ ಉಡುವಾಗ ಜೊತೆಗೆ ಕಾಟನ್ ಲಂಗ ಧರಿಸುತ್ತಾರೆ. ಇದರೊಂದಿಗೆ ಲಂಗಕ್ಕೆ ಕಾಟನ್ ದಾರ ಕೂಡ ಇರುತ್ತದೆ. ಇದನ್ನು ಸೊಂಟದ ಸುತ್ತಲೂ ಸುತ್ತಿಕೊಂಡು ಅದರ ಮೇಲೆ ಸೀರೆ ಉಡಲಾಗುತ್ತದೆ. ಆದರೆ ಇದು ಅಪಾಯಕ್ಕೆ ಕಾರಣವಾಗುತ್ತದೆ.
ದೆಹಲಿಯ ಪಿಎಸ್‌ಆರ್‌ಐ ಆಸ್ಪತ್ರೆಯ ಕ್ಯಾನ್ಸರ್ ವಿಭಾಗದ ವೈದ್ಯರಾದ ಡಾ. ವಿವೇಕ್ ಗುಪ್ತಾ ಅವರ ಪ್ರಕಾರ ಒಬ್ಬ ಮಹಿಳೆ ಬಹಳ ಸಮಯದವರೆಗೆ ಒಂದೇ ಬಟ್ಟೆ ಧರಿಸಿದ್ದರೆ, ಅಂದರೆ ಬಿಗಿಯಾಗಿ ಲಂಗವನ್ನು ಧರಿಸಿರುವಂತಹ ಕಡೆ ತುರಿಕೆ ಆರಂಭವಾಗುತ್ತದೆ. ಅಲ್ಲಿ ಚರ್ಮದ ಸಿಪ್ಪೆ ಏಳಲು ಆರಂಭವಾಗಿ, ಚರ್ಮ ಕಪ್ಪಾಗುತ್ತದೆ. ಇದು ಪುನರಾವರ್ತಿತವಾದರೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂದು ಎಂದು ಡಿಎನ್‌ಎಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ಏನಿದು ಸೀರೆ ಕ್ಯಾನ್ಸರ್
ಸೀರೆ ಕ್ಯಾನ್ಸರ್ ಎಂಬುದು ಬಹಳ ಅಪರೂಪದ ಚರ್ಮದ ಕ್ಯಾನ್ಸರ್ ಆಗಿದ್ದು, ಸೀರೆ ಧರಿಸುವ ಮಹಿಳೆಯರಲ್ಲಿ ಸೊಂಟದ ರೇಖೆಯ ಉದ್ದಕ್ಕೂ ಸಂಭವಿಸುತ್ತದೆ, ನೈರ್ಮಲ್ಯದ ಕಾರಣದಿಂದಲೇ ಉಂಟಾಗುವ ಈ ಕ್ಯಾನ್ಸರ್ ದೀರ್ಘಕಾಲ ಚರ್ಮದ ಉರಿಯೂತವನ್ನೂ ಒಳಗೊಂಡಿರುತ್ತದೆ.
ಸೀರೆ ಕ್ಯಾನ್ಸರ್‌ಗೆ ಕಾರಣ
ಸೀರೆ ಕ್ಯಾನ್ಸರ್‌ಗೆ ನಾವು ತೊಡುವ ಬಟ್ಟೆಗಿಂತ ನಮ್ಮ ಸ್ವಚ್ಛತೆಯೇ ಪ್ರಮುಖ ಕಾರಣ. ಅತಿಯಾದ ಬಿಸಿಲು ಹಾಗೂ ಆರ್ದ್ರತೆ ಇರುವ ಪ್ರದೇಶದಲ್ಲಿ ಈ ಸೀರೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಬಿಹಾರ ಹಾಗೂ ಜಾರ್ಖಂಡ್‌ನಂತಹ ರಾಜ್ಯಗಳಲ್ಲಿ ಸೀರೆ ಕ್ಯಾನ್ಸರ್ ಪ್ರಕರಣಗಳು ಈಗಲೂ ವರದಿಯಾಗುತ್ತಿವೆ. ಭಾರತದ ಮಹಿಳೆಯರಲ್ಲಿ ಸೀರೆ ಕ್ಯಾನ್ಸರ್ ಪ್ರಮಾಣ ಶೇ 1 ರಷ್ಟಿದೆ. ವೈದ್ಯಕೀಯ ಭಾಷೆಯಲ್ಲಿ, ಇದನ್ನು ಸ್ಕ್ವಾಮಸ್ ಸೆಲ್ ಕಾರ್ಸಿನೋಮ (SCC) ಎಂದು ಕರೆಯಲಾಗುತ್ತದೆ.
ಮುಂಬೈನ ಆರ್‌ಎನ್ ಕೂಪರ್ ಆಸ್ಪತ್ರೆಯಲ್ಲಿ ಈ ಸೀರೆ ಕ್ಯಾನ್ಸರ್‌ನ ಬಗ್ಗೆ ಸಂಶೋಧನೆಗಳು ನಡೆದಿವೆ. ಧೋತಿಯನ್ನು ಕೂಡ ಈ ಸಂಶೋಧನೆಯಲ್ಲಿ ಸೇರಿಸಿಕೊಳ್ಳಲಾಗಿದೆ. 68 ವರ್ಷ ಮಹಿಳೆಯರೊಬ್ಬರಲ್ಲಿ ಈ ಕ್ಯಾನ್ಸರ್ ಪತ್ತೆಯಾಗಿತ್ತು. ಬಾಂಬೆ ಆಸ್ಪತ್ರೆಯ ವೈದ್ಯರು ಈ ಕ್ಯಾನ್ಸರ್‌ಗೆ ಸೀರೆ ಕ್ಯಾನ್ಸರ್ ಎಂದು ಹೆಸರು ನೀಡಿದ್ದಾರೆ. ಸೀರೆ ಕ್ಯಾನ್ಸರ್ ಕಾಣಿಸಿದ್ದ ಮಹಿಳೆಯು ಸುಮಾರು 14 ವರ್ಷಗಳಿಂದ ಸೀರೆ ಧರಿಸುತ್ತಿದ್ದರು. ಅವರ ಸೊಂಟದ ಭಾಗದಲ್ಲಿ ಚರ್ಮದ ಗೆಡ್ಡೆ ರೂಪದಲ್ಲಿ ಕ್ಯಾನ್ಸರ್ ಕಾಣಿಸಿತ್ತು.
ಸೀರೆ ಕ್ಯಾನ್ಸರ್‌ನ ಲಕ್ಷಣಗಳು
ಸೀರೆ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳೆಂದರೆ ಸೊಂಟದ ಸುತ್ತಲೂ ತುರಿಕೆ ಮತ್ತು ಬಣ್ಣದ ಬದಲಾಗುವುದರೊಂದಿಗೆ ನಿರಂತರ ಕಿರಿಕಿರಿ ಇರುತ್ತದೆ. ಹಲವು ವರ್ಷಗಳ ಕಾಲ ಇದು ಹೀಗೆ ಇರಬಹುದು. ಈ ಸಮಸ್ಯೆ ಕಾಣಿಸಿದ ವ್ಯಕ್ತಿಯ ಸೊಂಟದ ಬಳಿ ವಾಸಿಯಾಗದ ಗಾಯಗಳು ಆಗಬಹುದು. ಹೈಪರ್- ಅಥವಾ ಹೈಪೋಪಿಗ್ಮೆಂಟೆಡ್ ಪ್ಯಾಚ್ ಉಂಟಾಗಬಹುದು. ಆ ಗಾಯದಿಂದ ಕೆಟ್ಟ ವಾಸನೆ ಬರಬಹುದು. ಹೀಗೆ ಇದು ಕ್ಯಾನ್ಸರ್ ರೂಪ ತಾಳುತ್ತದೆ.
ಸೀರೆ ಕ್ಯಾನ್ಸರ್ ಇತಿಹಾಸ
1945ರಲ್ಲಿ ವೈದ್ಯರಾದ ಖಾನೋಲ್ಕರ್ ಮತ್ತು ಸೂರ್ಯಾಬಾಯಿ ಅವರು ಹೈಪೋಪಿಗ್ಮೆಂಟೆಡ್ ಮತ್ತು ದಪ್ಪನೆಯ ಗುರುತಗಳುಳ್ಳ ಹೊಸ ರೀತಿಯ ಚರ್ಮದ ಕ್ಯಾನ್ಸರ್ ಅನ್ನು ಪತ್ತೆ ಮಾಡುತ್ತಾರೆ. ಅದು ಮಾರಣಾಂತಿಕ ಎಂಬುದನ್ನು ಗುರುತಿಸುವ ಅವರು ಅದಕ್ಕೆ ಧೋತಿ ಕ್ಯಾನ್ಸರ್ ಎಂದು ಹೆಸರು ನೀಡುತ್ತಾರೆ. "ಸಾರಿ ಕ್ಯಾನ್ಸರ್" ಎಂಬ ಪದವನ್ನು ಬಾಂಬೆ ಹಾಸ್ಪಿಟಲ್ ಜರ್ನಲ್‌ನಲ್ಲಿ ಭಾರತದ ಬಾಂಬೆ ಆಸ್ಪತ್ರೆಯ ಡಾ. ಎ. ಎಸ್. ಪಾಟೀಲ್ ನೇತೃತ್ವದ ವೈದ್ಯರ ಗುಂಪಿನಿಂದ ಮೊದಲು ಬಳಸಲಾಯಿತು.ಈ ರೀತಿಯ ಕ್ಯಾನ್ಸರ್ ಮಾರ್ಜೋಲಿನ್ ಹುಣ್ಣಿಗೆ ಸಂಬಂಧಿಸಿದೆ, ಇದು ದೀರ್ಘಕಾಲದ ಗಾಯ ನಂತರ ಮಾರಣಾಂತಿಕ ಕ್ಯಾನ್ಸರ್ ಆಗಿ ಬದಲಾಗಬಹುದು.
ಕಾಂಗ್ರಿ ಕ್ಯಾನ್ಸರ್ ಎಂದರೇನು?
ಸೀರೆ ಕ್ಯಾನ್ಸರ್‌ನಂತೆಯೇ ಇರುವ ಇನ್ನೊಂದು ಕ್ಯಾನ್ಸರ್ ಕಾಂಗ್ರಿ ಕ್ಯಾನ್ಸರ್. ಇದು ಕಾಶ್ಮೀರದಲ್ಲಿ ಹೆಚ್ಚು ಕಂಡುಬರುತ್ತದೆ. ಇದು ಕೂಡ ಸೀರೆ ಕ್ಯಾನ್ಸರ್‌ನಂತೆ ಒಂದು ರೀತಿಯ ಚರ್ಮದ ಕ್ಯಾನ್ಸರ್ ಆಗಿದೆ. ಇದು ಕಾಶ್ಮೀರದಲ್ಲಿ ಮಾತ್ರ ವರದಿಯಾಗಿದೆ. ಅತಿಯಾದ ಚಳಿ ಇರುವ ಸಮಯದಲ್ಲಿ ಕಾಶ್ಮೀರದ ಜನರು ಬಟ್ಟೆಯೊಳಗೆ ಅಗ್ಗಸ್ಟಿಕೆ ರೀತಿಯ ಮಡಿಕೆಗಳನ್ನು ಇರಿಸಿ, ಅದರ ಮೇಲೆ ಕುಳಿತು ದೇಹ ಬೆಚ್ಚಗೆ ಮಾಡಿಕೊಳ್ಳುತ್ತಾರೆ. ಆದರೆ ಹೊಟ್ಟೆ ಹಾಗೂ ತೊಡೆಯ ಭಾಗಕ್ಕೆ ನಿರಂತರ ಶಾಖ ತಾಗುವ ಕಾರಣದಿಂದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ.
ಇದರಂತೆಯೇ ಬಿಗಿಯಾಗಿ ಜೀನ್ಸ್ ಧರಿಸುವವರಲ್ಲೂ ಕ್ಯಾನ್ಸರ್ ಕಾಣಿಸಬಹುದು ಎಂದು ಹೇಳಲಾಗುತ್ತದೆ. ಬಹಳ ಬಿಗಿಯಾದ, ದೇಹಕ್ಕೆ ಅಂಟಿದಂತಿರುವ ಬಟ್ಟೆಯನ್ನು ಬಹಳ ಹೊತ್ತು ಧರಿಸಿದಾಗ ದೇಹಕ್ಕೆ ಹಾನಿಯಾಗುತ್ತದೆ. ಆ ಪ್ರದೇಶಕ್ಕೆ ಆಮ್ಲಜನಕ ಹರಿವಿಗೆ ತೊಂದರೆಯಾಗುತ್ತದೆ. ಸಂಶೋಧನೆಯ ಪ್ರಕಾರ, ಜೀನ್ಸ್ ಪುರುಷರಲ್ಲಿ ಹೊಟ್ಟೆಯ ಕೆಳಭಾಗದಲ್ಲಿ ತಾಪಮಾನವನ್ನು ಹೆಚ್ಚಿಸುತ್ತದೆ, ಇದು ವೀರ್ಯದ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ವೃಷಣ ಕ್ಯಾನ್ಸರ್ (ಅಂಡಾಶಯದ ಕ್ಯಾನ್ಸರ್) ಗೆ ಕಾರಣವಾಗಬಹುದು. ಆದರೆ ಈ ಬಗ್ಗೆ ಈಗಲೂ ಸಂಶೋಧನೆಗಳು ನಡೆಯುತ್ತಿದ್ದು, ನಿಖರವಾದ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.
ಸೀರೆ, ಬಟ್ಟೆಗಳಿಂದ ಕ್ಯಾನ್ಸರ್ ಹರಡಲು ಮುಖ್ಯ ಕಾರಣ ಬಿಗಿಯಾಗಿ ಧರಿಸುವುದು. ಬಿಗಿಯಾದ ಬಟ್ಟೆಗಳು ದೇಹದಲ್ಲಿ ಕ್ಯಾನ್ಸರ್‌ಗೆ ಕಾರಣವಾಗಬಹುದು. ಮಹಿಳೆಯರು ಬ್ರಾ ಮತ್ತು ಒಳಉಡುಪುಗಳ ಬಗ್ಗೆ ಗಮನ ನೀಡಬೇಕು. ಅತಿಯಾಗಿ ಬಿಗಿದಂತಿರುವ ಒಳಉಡುಪುಗಳನ್ನು ಧರಿಸುವುದು ಅಪಾಯ. ಫ್ಯಾಷನ್ ಹೆಸರಿನಲ್ಲಿ ಆರೋಗ್ಯ ನಿರ್ಲಕ್ಷ್ಯ ಮಾಡುವುದು ಒಳಿತಲ್ಲ. ಜಿಮ್‌ನಲ್ಲಿ ಧರಿಸುವ ಬಿಗಿಯಾದ ಬಟ್ಟೆಗಳ ಕೂಡ ತೊಂದರೆ ಉಂಟು ಮಾಡಬಹುದು. ಆದರೆ ಅವುಗಳನ್ನ ಸೀಮಿತ ಸಮಯದವರೆಗೆ ಧರಿಸಿ ನಿರಂತರ ಸ್ವಚ್ಛತೆ ಕಾಪಾಡಿಕೊಳ್ಳುವುದರಿಂದ ಇಂತಹ ಸಮಸ್ಯೆಗಳಿಂದ ದೂರ ಇರಬಹುದು.