ಕನ್ನಡ ಸುದ್ದಿ  /  ಜೀವನಶೈಲಿ  /  ವಿಶ್ವದ ಕ್ಯಾನ್ಸರ್‌ ರಾಜಧಾನಿಯಾಗಿದೆ ಭಾರತ, ದೇಶದಲ್ಲಿ ಕ್ಯಾನ್ಸರ್‌ ಪ್ರಮಾಣ ಹೆಚ್ಚಲು ಇವೇ ಪ್ರಮುಖ ಕಾರಣಗಳು

ವಿಶ್ವದ ಕ್ಯಾನ್ಸರ್‌ ರಾಜಧಾನಿಯಾಗಿದೆ ಭಾರತ, ದೇಶದಲ್ಲಿ ಕ್ಯಾನ್ಸರ್‌ ಪ್ರಮಾಣ ಹೆಚ್ಚಲು ಇವೇ ಪ್ರಮುಖ ಕಾರಣಗಳು

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಗಂಭೀರ ಹಾಗೂ ದೀರ್ಘಕಾಲದ ಕಾಯಿಲೆಗಳ ಪ್ರಮಾಣ ಹೆಚ್ಚುತ್ತಿದೆ. ಮಧುಮೇಹ, ಕ್ಯಾನ್ಸರ್‌, ಹೃದಯಾಘಾತ, ಪಾರ್ಶ್ವವಾಯು ಹಾಗೂ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿದೆ. ಅದರಲ್ಲೂ ಕ್ಯಾನ್ಸರ್‌ ಪ್ರಮಾಣ ಭಾರಿ ಏರಿಕೆಯಾಗಿದ್ದು, ಭಾರತವು ವಿಶ್ವದ ಕ್ಯಾನ್ಸರ್‌ ರಾಜಧಾನಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಇದಕ್ಕೆ ಕಾರಣವೇನು ನೋಡಿ.

ಭಾರತವನ್ನು ವಿಶ್ವದ ಕ್ಯಾನ್ಸರ್‌ ರಾಜಧಾನಿ ಎಂದು ಕರೆಯುವುದೇಕೆ
ಭಾರತವನ್ನು ವಿಶ್ವದ ಕ್ಯಾನ್ಸರ್‌ ರಾಜಧಾನಿ ಎಂದು ಕರೆಯುವುದೇಕೆ

ಕೊರೊನಾ ಎಂಬ ಮಹಾಮಾರಿ ಇಡೀ ವಿಶ್ವವನ್ನು ನಡುಗಿಸಿ ಮರೆಯಾಗಿದೆ. ಕೊರೊನಾ ಕಾಲಘಟ್ಟದ ನಂತರ ಭಾರತದ ಸೇರಿದಂತೆ ವಿಶ್ವದಾದ್ಯಂತ ಆರೋಗ್ಯ ಸಮಸ್ಯೆಗಳು ಹೆಚ್ಚಳವಾಗುತ್ತಿದೆ. ಆದರೆ ಇತ್ತೀಚಿನ ಅಧ್ಯಯನವೊಂದು ಭಾರತದ ಬಗೆಗಿನ ಆತಂಕಕಾರಿ ಮಾಹಿತಿಯೊಂದನ್ನು ಹೊರ ಹಾಕಿದೆ. ಭಾರತೀಯರ ಆರೋಗ್ಯದ ಕುರಿತಾದ ಹೊಸ ಅಧ್ಯಯನವು ಆತಂಕಕಾರಿ ಚಿತ್ರಣವನ್ನು ನೀಡುತ್ತದೆ. ದೇಶದಲ್ಲಿ ಈಗ ಸಾಂಕ್ರಾಮಿಕವಲ್ಲದ (ಎನ್‌ಸಿಡಿ: ನಾನ್‌ ಕಮ್ಯೂಕೇಬಲ್‌ ಡಿಸೀಸ್‌) ರೋಗಗಳು ಹೆಚ್ಚು ಹರಡುತ್ತಿದೆ. ಅದರಲ್ಲೂ ರಾಷ್ಟ್ರವ್ಯಾಪಿ ಕ್ಯಾನ್ಸರ್‌ ಪ್ರಕರಣಗಳು ಸ್ಫೋಟಗೊಳ್ಳುವಂತಿದೆ. 2024ರ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ವರದಿಯು ಭಾರತಕ್ಕೆ ʼವಿಶ್ವದ ಕ್ಯಾನ್ಸರ್‌ ರಾಜಧಾನಿʼ ಎಂಬ ಕುಖ್ಯಾತಿ ದೊರೆಯುವಂತೆ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಇತ್ತೀಚಿನ ವರದಿಗಳ ಪ್ರಕಾರ ದೇಶದಲ್ಲಿ ಮೂರನೇ ಒಂದು ಭಾಗದಷ್ಟು ಪ್ರಿ ಡಯಾಬಿಟಿಕ್‌, ಮೂರನೇ ಎರಡರಷ್ಟು ಪ್ರಿ ಹೈಪರ್‌ಟೆನ್ಸಿವ್‌, ಹತ್ತರಲ್ಲಿ ಒಬ್ಬರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್‌, ಮಧುಮೇಹ, ಹೃದ್ರೋಗ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಸೇರಿದಂತೆ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ನಿರ್ಣಾಯಕ ಮಟ್ಟವನ್ನು ತಲುಪುತ್ತಿವೆ, ಇವು ರಾಷ್ಟ್ರದ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ.

ಜಾಗತಿಕ ಸರಾಸರಿಯನ್ನೂ ಮೀರಿದ ಕ್ಯಾನ್ಸರ್‌ ಪ್ರಕರಣ ಸಂಖ್ಯೆಯು ಭಾರತದಲ್ಲಿ ಗಗನಕ್ಕೇರುತ್ತಿರುವುದು ಗಾಬರಿ ಮೂಡಿಸುವ ವಿಷಯವಾಗಿದೆ. ಅದರಲ್ಲೂ ಪ್ರಿ ಡಯಾಬಿಟಿಸ್‌, ಪ್ರಿ ಹೈಪರ್‌ಟೆನ್ಷನ್‌ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳು ಕಿರಿಯ ವಯಸ್ಸಿನವರಲ್ಲಿ ಹೆಚ್ಚು ಕಂಡು ಬರುತ್ತಿರುವುದು ಆತಂಕ ಸೃಷ್ಟಿಸಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮತ್ತು ನ್ಯಾಶನಲ್ ಸೆಂಟರ್ ಫಾರ್ ಡಿಸೀಸ್ ಇನ್ಫರ್ಮ್ಯಾಟಿಕ್ಸ್ ಅಂಡ್ ರಿಸರ್ಚ್ (NCDIR) ಪ್ರಕಾರ, ಭಾರತದಲ್ಲಿ ಕ್ಯಾನ್ಸರ್‌ ಪ್ರಮಾಣವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ.

ಹೈದರಾಬಾದ್‌ನ ಯಶೋದಾ ಆಸ್ಪತ್ರೆಯ ಮೆಡಿಕಲ್‌ ಅಂಕಾಲಜಿ ವಿಭಾಗದ ಹಿರಿಯ ಸಲಹೆಗಾರರಾದ ಡಾ. ನಿಖಿಲ್‌ ಎಸ್‌. ಘದ್ಯಾಲಪಾಟಿಲ್‌ ಅವರ ಪ್ರಕಾರ ಈ ವೈದ್ಯಕೀಯ ಸವಾಲುಗಳನ್ನು ಎದುರಿಸಲು ಸರ್ಕಾರಿ ಸಂಸ್ಥೆಗಳು, ಆರೋಗ್ಯ ಸೇವೆ ಒದಗಿಸುವವರು, ಸರ್ಕಾರೇತರ ಸಂಸ್ಥೆಗಳು, ಸೇರಿದಂತೆ ಎಲ್ಲರೂ ಇದರಲ್ಲಿ ಕೈ ಜೋಡಿಸಬೇಕು.

ಭಾರತದಲ್ಲಿ ಕ್ಯಾನ್ಸರ್‌ ಪ್ರಮಾಣ ಏರಿಕೆಯಾಗಲು ಪ್ರಮುಖ ಕಾರಣಗಳಿವು

ಭಾರತದಲ್ಲಿ ಕ್ಯಾನ್ಸರ್‌ನ ಪ್ರಮಾಣ ಹೆಚ್ಚಲು ಜೀವನಶೈಲಿ, ಪರಿಸರ ಹಾಗೂ ಸಾಮಾಜಿಕ ಆರ್ಥಿಕ ಸವಾಲು ಈ ಅಂಶಗಳು ಕಾರಣವಾಗಿದೆ. ಹೊಗೆ ಸಹಿತ ಹಾಗೂ ಹೊಗೆ ರಹಿತ ತಂಬಾಕಿನ ಉತ್ಪನ್ನಗಳ ಬಳಕೆಯು ಶ್ವಾಸಕೋಶ, ಬಾಯಿ ಮತ್ತು ಗಂಟಲು ಕ್ಯಾನ್ಸರ್‌ಗಳ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುತ್ತಿದೆ ಎಂದು ಯಶೋಧ ಆಸ್ಪತ್ರೆಯ ಸರ್ಜಿಕಲ್‌ ಅಂಕಾಲಜಿ ವಿಭಾಗದ ಡಾ. ಚಿನ್ನಬಾಬು ಸುಂಕವಳ್ಳಿ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಇದಲ್ಲದೇ ವಾಹನಗಳು ಹಾಗೂ ಕೈಗಾರಿಕೆಗಳಿಂದ ಉಂಟಾಗುವ ವಾಯುಮಾಲಿನ್ಯವು ಕೂಡ ಕ್ಯಾನ್ಸರ್‌ ಪ್ರಮಾಣ ಹೆಚ್ಚಲು ಕಾರಣವಾಗುತ್ತಿದೆ.

ಯಶೋದಾ ಆಸ್ಪತ್ರೆಯಲ್ಲಿ ರೋಬೊಟಿಕ್‌ ಸರ್ಜನ್‌ ಆಗಿರುವ ಡಾ. ಸಚಿನ್‌ ಮರ್ದಾ ಅವರು ಕ್ಯಾನ್ಸರ್‌ ಏರಿಕೆಯಾಗಲು ಅನಾರೋಗ್ಯಕರ ಆಹಾರ ಪದ್ಧತಿಯ ಪಾತ್ರವನ್ನು ಎತ್ತಿ ಹೇಳುತ್ತಾರೆ. ಸಂಸ್ಕೃರಿಸಿದ ಆಹಾರಗಳ ಪದಾರ್ಥಗಳ ಸೇವನೆ ಹೆಚ್ಚುವ ಜೊತೆಗೆ ದೈಹಿಕ ಚಟುವಟಿಕೆಯ ಕೊರತೆಯು ಸ್ಥೂಲಕಾಯಕ್ಕೆ ಕಾರಣವಾಗುತ್ತಿದೆ. ಇದು ಸ್ತನ, ಕೊಲೆರೆಕ್ಟಲ್‌, ಎಂಡೊಮೆಟ್ರಿಯಲ್‌ ಕ್ಯಾನ್ಸರ್‌ಗಳಿಗೆ ಸಂಬಂಧಿಸಿದೆ.

ಆರಂಭಿಕ ಪತ್ತೆಯ ಕೊರತೆ

ಭಾರತದ ಜನರಲ್ಲಿ ಕ್ಯಾನ್ಸರ್‌ ರೋಗಲಕ್ಷಣಗಳ ಸೀಮಿತ ಅರಿವು ಮತ್ತು ವ್ಯಾಪಕವಾದ ಸ್ಕ್ರೀನಿಂಗ್‌ ಕಾರ್ಯಕ್ರಮಗಳ ಕೊರತೆಯು ಆರಂಭಿಕ ಹಂತದಲ್ಲಿ ಕ್ಯಾನ್ಸರ್‌ ಪತ್ತೆ ಮಾಡುವುದಕ್ಕೆ ತಡೆಯಾಗುತ್ತಿದೆ. ಇದು ನಂತರದ ಹಂತಗಳಲ್ಲಿ ರೋಗ ನಿರ್ಣಯಕ್ಕೆ ಕಾರಣವಾಗುತ್ತಿದೆ. ಜೊತೆಗೆ ಯಶಸ್ವಿ ಚಿಕಿತ್ಸೆಯ ಸಾಧ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತಿದೆ.

ಸಾಮಾಜಿಕ ಆರ್ಥಿಕ ಅಸಮಾನತೆಗಳು

ಸಾಮಾಜಿಕ ಆರ್ಥಿಕ ಅಸಮಾನತೆಗಳು ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತವೆ. ಡಾ. ಘದ್ಯಾಲ್‌ಪಾಟೀಲ್‌ ಅವರು ಸೂಚಿಸಿದಂತೆ ಆರ್ಥಿಕ ಅಸಮಾನತೆಗಳು ಗುಣಮಟ್ಟದ ಆರೋಗ್ಯ ಸೇವೆಯನ್ನು ಪಡೆಯಲು ಬಡ ಹಾಗೂ ಮಧ್ಯಮ ವರ್ಗದವರು ಹಿಂದೇಟು ಹಾಕುವಂತೆ ಮಾಡುತ್ತಿದೆ. ಅದರಲ್ಲೂ ಬಡತನ ರೇಖೆಗಿಂತ ಕೆಳಗಿರುವವರು ಉತ್ತಮ ಗುಣಮಟ್ಟದ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಅಸಮರ್ಪಕ ಅರಿವು ಮತ್ತು ಕ್ಯಾನ್ಸರ್‌ ಸುತ್ತಲಿನ ಸಾಮಾಜಿಕ ಕಳಂಕವು ವಿಳಂಬವಾದ ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಬಹುಮುಖ ಕಾರ್ಯತಂತ್ರ

ಈ ಸಂಕೀರ್ಣ ಸಮಸ್ಯೆಯನ್ನು ಎದುರಿಸಲು ಬಹುಮುಖ ಕಾರ್ಯತಂತ್ರದ ಅಗತ್ಯವಿದೆ ಎನ್ನುತ್ತಾರೆ ತಜ್ಞರು. ಡಾ. ಸುಂಕವಳ್ಳಿಯವರ ಪ್ರಕಾರ ತಂಬಾಕಿನ ಅಪಾಯಗಳು ಹಾಗೂ ಆರೋಗ್ಯಕರ ಜೀವನಶೈಲಿಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನಗಳು ನಡೆಯಬೇಕು ಎಂದು ಅವರು ಪ್ರತಿಪಾದಿಸುತ್ತಾರೆ. ನಿಯಮಿತವಾದ ಸ್ಕ್ರೀನಿಂಗ್‌ಗಳನ್ನು ಉತ್ತೇಜಿಸುವುದು ಅದರಲ್ಲೂ ಗ್ರಾಮೀಣ ಪ್ರದೇಶದ ಜನರಿಗೆ ಸ್ಕ್ರೀನಿಂಗ್‌ಗೆ ಒಳಪಡುವಂತೆ ಮಾಡುವುದರಿಂದ ಆರಂಭಿಕ ಪತ್ತೆ ಸಕ್ರಿಯಗೊಳಿಸುತ್ತದೆ ಹಾಗೂ ಇದರಿಂದ ಚಿಕಿತ್ಸೆಯ ಫಲಿತಾಂಶವು ಸುಧಾರಿಸುತ್ತದೆ.

ತಜ್ಞರ ಪ್ರಕಾರ ಹೆಚ್ಚಿನ ತೆರಿಗೆ ವಿಧಿಸುವುದು ಹಾಗೂ ಸಾರ್ವಜನಿಕ ಧೂಮಪಾನದ ಮೇಲಿನ ನಿಷೇಧಗಳು ಸೇರಿದಂತೆ ಕಠಿಣ ತಂಬಾಕು ನಿಯಂತ್ರಣ ನೀತಿಗಳ ಅಗತ್ಯವನ್ನು ಸರ್ಕಾರ ಅರಿಯಬೇಕಿದೆ.

ಆರೋಗ್ಯ ಮೂಲ ಸೌಕರ್ಯ ಹಾಗೂ ಸಂಶೋಧನೆಯಲ್ಲಿ ಹೂಡಿಕೆ

ಹಿಂದುಳಿದ ಪ್ರದೇಶ ಸೇರಿದಂತೆ ರಾಷ್ಟ್ರದಲ್ಲಿ ಆರೋಗ್ಯ ಮೂಲ ಸೌಕರ್ಯಗಳನ್ನು ಹೆಚ್ಚಿಸಬೇಕು. ಕ್ಯಾನ್ಸರ್‌ ತಜ್ಞರ ಸಂಖ್ಯೆ ಹೆಚ್ಚಬೇಕು. ರೋಗನಿರ್ಣಯ ಸೌಲಭ್ಯಗಳು, ಚಿಕಿತ್ಸಾ ಕೇಂದ್ರಗಳು ಮತ್ತು ಕ್ಯಾನ್ಸರ್‌ ಔಷಧಿಗಳು ಜನರಿಗೆ ಕೈಗೆಟುಕುವಂತಾಗಬೇಕು. ಕ್ಯಾನ್ಸರ್‌ ತಡೆಗಟ್ಟುವಿಕೆ, ರೋಗನಿರ್ಣಯ ಹಾಗೂ ಚಿಕಿತ್ಸೆಯ ವಿಚಾರದಲ್ಲಿ ಇನ್ನಷ್ಟು ಸಂಶೋಧನೆಗಳು ಹಾಗೂ ನಾವಿನ್ಯತೆಯ ಅವಶ್ಯಕತೆ ಇದೆ ಎನ್ನುತ್ತಾರೆ ಡಾ. ಘದ್ಯಾಲಪಾಟೀಲ್‌.

ಭಾರತದಲ್ಲಿ ಕ್ಯಾನ್ಸರ್‌ ವಿರುದ್ಧದ ಹೋರಾಟವು ಸಂಕೀರ್ಣವಾಗಿದೆ. ಆದರೆ ಸರ್ಕಾರದ ಮಟ್ಟದಲ್ಲಿ ಕಾರ್ಯಕ್ರಮಗಳು ಜಾರಿಗೊಂಡರೆ ಭಾರತದಲ್ಲಿ ಕ್ಯಾನ್ಸರ್‌ ಪ್ರಮಾಣ ಕಡಿಮೆಯಾಗಿ, ಆರೋಗ್ಯಕರ ಜನಸಂಖ್ಯೆಯೊಂದಿಗೆ ಭವಿಷ್ಯದತ್ತ ಸಾಗಬಹುದು ಎಂಬುದು ತಜ್ಞರು ಅಭಿಮತ.