ಕಾಂಡೋಮ್‌ನಿಂದ ಲೈಂಗಿಕ ತೃಪ್ತಿ ಸಿಗೊಲ್ಲ, ಗರ್ಭ ನಿರೋಧಕ ಮಾತ್ರೆಯಿಂದ ಬಂಜೆತನ; ಜನನ ನಿಯಂತ್ರಣ ಔಷಧಗಳ ಸತ್ಯ–ಮಿಥ್ಯ ತಿಳಿದುಕೊಳ್ಳಿ
ಮಕ್ಕಳಾಗುವುದನ್ನು ತಡೆಯುವ ಗರ್ಭ ನಿರೋಧಕ ಔಷಧಿಗಳ ಬಳಕೆಯ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇದರೊಂದಿಗೆ ಗರ್ಭ ನಿರೋಧಕ ಮಾತ್ರೆಗಳ ಬಗ್ಗೆ ತಪ್ಪುಕಲ್ಪನೆಯೂ ಹುಟ್ಟಿಕೊಳ್ಳುತ್ತಿದೆ. ಈ ಜನನ ನಿಯಂತ್ರಣ ಔಷಧಿಗಳ ಬಗೆಗಿನ ಸತ್ಯ–ಮಿಥ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ.
ಸದ್ಯಕ್ಕೆ ಮಕ್ಕಳು ಬೇಡ ಎಂದು ನಿರ್ಧಾರ ಮಾಡುವ ದಂಪತಿಗಳು ಗರ್ಭ ನಿರೋಧಕ ಔಷಧಿಗಳನ್ನು ಸೇವಿಸುತ್ತಾರೆ. ಜನನ ನಿಯಂತ್ರಣಕ್ಕಾಗಿ ಕೆಲವರು ಮಾತ್ರೆ ಸೇವಿಸುತ್ತಾರೆ. ಆದರೆ ಗರ್ಭನಿರೋಧಕ ವಿಧಾನಗಳು, ವಿಶೇಷವಾಗಿ ಮಾತ್ರೆಗಳ ಬಗ್ಗೆ ಜನರಲ್ಲಿ ಹಲವು ಬಗೆಯ ತಪ್ಪು ಕಲ್ಪನೆಗಳಿವೆ. ಈ ಮಾತ್ರೆಗಳು ಸಾಮಾನ್ಯವಾಗಿ ಪ್ರೊಜೆಸ್ಟೆರಾನ್ ಮತ್ತು ಈಸ್ಟ್ರೊಜೆನ್ ಎಂಬ ಎರಡು ಹಾರ್ಮೋನುಗಳನ್ನು ಹೊಂದಿರುತ್ತವೆ. ಅಥವಾ ಕೇವಲ ಪ್ರೊಜೆಸ್ಟರಾನ್ ಅಂಶ ಈ ಮಾತ್ರೆಯಲ್ಲಿ ಇರುತ್ತದೆ.
ಆದರೆ ಈ ಮಾತ್ರೆಗಳಿಂದ ಭವಿಷ್ಯದ ಗರ್ಭಧಾರಣೆ, ಆರೋಗ್ಯ ಮತ್ತು ತೂಕದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದು ಹೇಳುವುದನ್ನು ನೀವೂ ಕೇಳಿಸಿಕೊಂಡಿರುತ್ತೀರಿ. ಇವೆಲ್ಲವೂ ಮಹಿಳೆಯರಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಹಾಗಾದರೆ ಗರ್ಭ ನಿರೋಧಕ ಮಾತ್ರೆಯ ಕುರಿತ ತಪ್ಪುಕಲ್ಪನೆಗಳೇನು ಎಂಬುದನ್ನು ನೋಡಿ.
ಮಿಥ್ಯ #1: ಜನನ ನಿಯಂತ್ರಣ ಮಾತ್ರೆಗಳು ತೂಕ ಹೆಚ್ಚಾಗಲು ಕಾರಣವಾಗುತ್ತವೆ
ಸತ್ಯ: ಇದನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ ಅಥವಾ ಈ ಬಗ್ಗೆ ಯಾವುದೇ ಸಂಶೋಧನೆ, ಅಧ್ಯಯನಗಳು ನಡೆದಿಲ್ಲ. ಹಾಗಾಗಿ ಅದನ್ನು ನಂಬಲು ಸಾಧ್ಯವಿಲ್ಲ. ಇದರಿಂದ ತೂಕ ಹೆಚ್ಚುತ್ತದೆ ಎಂದು ಭಯಪಡುವ ಅಗತ್ಯವಿಲ್ಲ. ಯಾವುದೇ ಭಯವಿಲ್ಲದೇ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಈ ಮಾತ್ರೆಗಳನ್ನು ತೆಗೆದುಕೊಳ್ಳಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.
ಮಿಥ್ಯ #2: ಫಲವಂತಿಕೆಗೆ ಹಾನಿ ಮಾಡುತ್ತದೆ
ಸತ್ಯ: ಜನನ ನಿಯಂತ್ರಣ ಮಾತ್ರೆಗಳನ್ನು ತೆಗೆದುಕೊಂಡರೆ ಭವಿಷ್ಯದಲ್ಲಿ ಗರ್ಭಿಣಿಯಾಗುವುದನ್ನು ಕಷ್ಟಕರವಾಗಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದು ನಿಜ ಎಂದು ಹೇಳುವ ಯಾವುದೇ ಸಂಶೋಧನೆ ಇಲ್ಲ. ಈ ಮಾತ್ರೆಗಳು ಮುಟ್ಟನ್ನು ಕ್ರಮಬದ್ಧವಾಗಿಸುತ್ತದೆ. ಈ ಮಾತ್ರೆಗಳು ಮನಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಸಹ ಕೆಲಸ ಮಾಡುತ್ತವೆ. ಇದರಿಂದ ಫಲವಂತಿಕೆಗೆ ಯಾವುದೇ ತೊಂದರೆ ಆಗುವುದಿಲ್ಲ.
ಮಿಥ್ಯ #3: ಗರ್ಭ ನಿರೋಧಕ ವಸ್ತುಗಳು ಲೈಂಗಿಕ ಸೋಂಕು ಹರಡುವುದನ್ನು ತಡೆಯುತ್ತವೆ.
ಸತ್ಯ: ಇದು ಖಂಡಿತ ನಿಜವಲ್ಲ. ಗರ್ಭನಿರೋಧಕ ಮಾತ್ರೆಗಳು, ಶಸ್ತ್ರಚಿಕಿತ್ಸೆಗಳು ಮತ್ತು ಗರ್ಭಾಶಯದ ಒಳಗಿನ ಸಾಧನಗಳು (IUDs) ಲೈಂಗಿಕವಾಗಿ ಹರಡುವ ಸೋಂಕುಗಳನ್ನು ತಡೆಗಟ್ಟುವಲ್ಲಿ ಯಾವುದೇ ಪಾತ್ರವನ್ನು ವಹಿಸುವುದಿಲ್ಲ. ಇದು ಕೂಡ ಸಂಪೂರ್ಣ ಸುಳ್ಳು. ಈ ಮಾತ್ರೆಗಳನ್ನು ಸೇವಿಸಿದ ನಂತರವೂ ಕಾಂಡೋಮ್ ಬಳಸುವುದನ್ನು ನಿಲ್ಲಿಸುವುದು ಒಳ್ಳೆಯದಲ್ಲ. ಆ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸಬೇಕು. ಗರ್ಭ ನಿರೋಧಕ ಸಾಧನ ಅಥವಾ ಮಾತ್ರೆಗಳಿಂದ ರೋಗ ಹರಡದಂತೆ ತಡೆಯುವುದು ಸಾಧ್ಯವಿಲ್ಲ.
ಮಿಥ್ಯ #4: ಗರ್ಭ ನಿರೋಧಕ ಮಾತ್ರೆಗಳ ಜತೆಗೆ ಆ್ಯಂಟಿಬಯೋಟಿಕ್ ತೆಗೆದುಕೊಳ್ಳುವುದರಿಂದ ಅದರ ಪರಿಣಾಮ ಕಡಿಮೆಯಾಗುತ್ತದೆ.
ಸತ್ಯ: ಇದು ಸುಳ್ಳು. ಆ್ಯಂಟಿಬಯೋಟಿಕ್‌ಗಳು ಜನನ ನಿಯಂತ್ರಣ ಮಾತ್ರೆಗಳ ಪರಿಣಾಮಕ್ಕೆ ಯಾವುದೇ ಅಡ್ಡಿಪಡಿಸುವುದಿಲ್ಲ. ನಿಮಗೆ ಯಾವುದಾದರೂ ಆರೋಗ್ಯ ಸಮಸ್ಯೆಗಳಿದ್ದು, ಅದಕ್ಕಾಗಿ ನೀವು ಆ್ಯಂಟಿಬಯೋಟಿಕ್ ಸೇವಿಸುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.
ಮಿಥ್ಯ #5: ಕಾಂಡೋಮ್‌ಗಳು ಲೈಂಗಿಕ ತೃಪ್ತಿಯನ್ನು ಕಡಿಮೆ ಮಾಡುತ್ತವೆ
ಸತ್ಯ: ಕಾಂಡೋಮ್‌ಗಳು ಜನನ ನಿಯಂತ್ರಣದ ಅಗ್ಗದ, ಎಲ್ಲರಿಗೂ ಬಳಸಲು ಸುಲಭವಾಗಿ ಸಿಗುವ ವಸ್ತುವಾಗಿದೆ. ಇವು ಲೈಂಗಿಕ ಸುಖದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆರಂಭದಲ್ಲಿ ಇದನ್ನು ಬಳಸಲು ಕಷ್ಟವಾಗಬಹುದು, ಆದರೆ ಲೈಂಗಿಕ ಸುಖಕ್ಕೆ ಅಡ್ಡಿ ಬರುತ್ತದೆ ಎನ್ನುವುದು ತಪ್ಪು ತಿಳುವಳಿಕೆ.
ಮಿಥ್ಯ #6: ಜನನ ನಿಯಂತ್ರಣ ಮಾತ್ರೆಗಳನ್ನು ದೀರ್ಘಕಾಲದವರೆಗೆ ಬಳಸಬಾರದು
ಸತ್ಯ: ನೀವು ಗರ್ಭಿಣಿಯಾದಾಗ ಮತ್ತು ಮಗುವನ್ನು ಹೊಂದಲು ಬಯಸಿದಾಗ ಈ ಮಾತ್ರೆಗಳನ್ನು ಬಳಸುವುದನ್ನು ನಿಲ್ಲಿಸಬಹುದು. ಮಾತ್ರೆಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಆದರೆ ಇದರಿಂದ ಹಾನಿಯಾಗುತ್ತದೆ ಎಂಬ ಕಾರಣಕ್ಕೆ ಮಧ್ಯದಲ್ಲಿ ನಿಲ್ಲಿಸಿದರೆ ಇದರಿಂದ ಗರ್ಭ ಧರಿಸುವ ಸಾಧ್ಯತೆ ಇದೆ. ಸರಿಯಾದ ಮಾತ್ರೆ ಆಯ್ಕೆ ಮಾಡಲು ವೈದ್ಯರನ್ನು ಸಂಪರ್ಕಿಸುವುದು ಕಡ್ಡಾಯವಾಗಿದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ನೀವು ತಜ್ಞರನ್ನು ಸಂಪರ್ಕಿಸುವುದು ಉತ್ತಮ)