ಕನ್ನಡ ಸುದ್ದಿ  /  ಜೀವನಶೈಲಿ  /  Period Bloating: ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆಯುಬ್ಬರಕ್ಕೆ ಕಾರಣಗಳಿವು, ಇದರಿಂದ ಪಾರಾಗಲು ಇಲ್ಲಿದೆ 5 ಸರಳ ಪರಿಹಾರ

Period Bloating: ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆಯುಬ್ಬರಕ್ಕೆ ಕಾರಣಗಳಿವು, ಇದರಿಂದ ಪಾರಾಗಲು ಇಲ್ಲಿದೆ 5 ಸರಳ ಪರಿಹಾರ

ಋತುಚಕ್ರದ ಸಮಯದಲ್ಲಿ ಬಹುತೇಕ ಮಹಿಳೆಯರು ಹೊಟ್ಟೆನೋವಿನ ಜೊತೆಗೆ ಹೊಟ್ಟೆಯುಬ್ಬರದ ಸಮಸ್ಯೆಯನ್ನೂ ಅನುಭವಿಸುತ್ತಾರೆ. ಇದಕ್ಕೆ ಕಾರಣವೇನು, ಇದರಿಂದ ಪಾರಾಗಲು ಇರುವ ಮಾರ್ಗಗಳೇನು ಎಂಬಿತ್ಯಾದಿ ವಿವರ ಇಲ್ಲಿದೆ.

ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆಯುಬ್ಬರಕ್ಕೆ ಕಾರಣಗಳು, ಪರಿಹಾರ ಮಾರ್ಗ ಇಲ್ಲಿದೆ
ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆಯುಬ್ಬರಕ್ಕೆ ಕಾರಣಗಳು, ಪರಿಹಾರ ಮಾರ್ಗ ಇಲ್ಲಿದೆ

ಮುಟ್ಟಿನ ಸಂದರ್ಭದಲ್ಲಿ ಹೊಟ್ಟೆ ಉಬ್ಬರ ಬರುವುದು ಸರ್ವೇ ಸಾಮಾನ್ಯ. ಮುಟ್ಟಿನ ಸಮಯದಲ್ಲಿ ರಕ್ತಸ್ರಾವದ ಜೊತೆ ಮಲಬದ್ಧತೆ, ಅತಿಸಾರ ಹಾಗೂ ಕಿಬ್ಬೊಟ್ಟೆ ಸೆಳೆತ ಕೂಡ ಉಂಟಾಗುತ್ತದೆ. ಹಾರ್ಮೋನ್‌ಗಳ ವೈಪರೀತ್ಯದಿಂದಾಗಿ ಕಿಬ್ಬೊಟ್ಟೆಯಲ್ಲಿ ಊತ ಹಾಗೂ ಅಸ್ವಸ್ಥತೆ ಉಂಟಾಗುತ್ತದೆ. ಹೀಗಾಗಿ ಈ ಸಂದರ್ಭ ನಾವು ಸೇವಿಸುವ ಆಹಾರವು ನಿಮ್ಮ ಹೊಟ್ಟೆಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮುಟ್ಟಿನ ಅವಧಿಯಲ್ಲಿ ನೀವು ಅನಿಯಮಿತ ಆಹಾರವನ್ನು ಸೇವಿಸಿದರೆ ನಿಮಗೆ ಹೊಟ್ಟೆ ಭಾಗದಲ್ಲಿ ವಿಪರೀತ ಸೆಳೆತ, ಹೊಟ್ಟೆಯುರಿ, ಆಯಾಸ ಹಾಗೂ ಮೂಡ್ ಸ್ವಿಂಗ್‌ಳಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಸಮತೋಲಿತ ಆಹಾರವು ಜೀರ್ಣಕ್ರಿಯೆ ಸಮಸ್ಯೆ ಸೇರಿದಂತೆ ಇತರೆ ಸಮಸ್ಯೆಗಳು ಉಂಟಾಗದಂತೆ ನಿಮ್ಮನ್ನು ಕಾಪಾಡುತ್ತದೆ.

ಟ್ರೆಂಡಿಂಗ್​ ಸುದ್ದಿ

ಮುಟ್ಟಿನ ಅವಧಿಯಲ್ಲಿ ಹೊಟ್ಟೆಯುಬ್ಬರ ಏಕೆ ಸಂಭವಿಸುತ್ತದೆ..?

ಪ್ರೊಜೆಸ್ಟರಾನ್ ಹಾಗೂ ಈಸ್ಟ್ರೋಜೆನ್ ಮಟ್ಟದಲ್ಲಿನ ಏರಿಳಿತದ ಪರಿಣಾಮವಾಗಿ ನಿಮಗೆ ಈ ಅವಧಿಯಲ್ಲಿ ಹೊಟ್ಟೆ ಉಬ್ಬರ ಉಂಟಾಗುವಂತಹ ಸಾಧ್ಯತೆಗಳು ಜಾಸ್ತಿ ಇರುತ್ತದೆ. ದೇಹದ ಜೀವಕೋಶಗಳು ನೀರಿನಿಂದ ಉಬ್ಬಿಕೊಳ್ಳುವುದರಿಂದ ನಿಮಗೆ ಈ ಅನುಭವ ಉಂಟಾಗುತ್ತಿರುತ್ತದೆ. 2020ರಲ್ಲಿ ಮೆಡ್ಲೈನ್ ಪ್ಲಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಮಲಬದ್ಧತೆ, ಗ್ಯಾಸ್ಟ್ರಿಕ್ ಸಮಸ್ಯೆ ಹಾಗೂ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಇವೆಲ್ಲವೂ ಹೊಟ್ಟೆ ಉಬ್ಬರಕ್ಕೆ ಸಂಬಂಧಿಸಿದೆ.

ಮಹಿಳೆಯು ಋತುಚಕ್ರದ ಸಂದರ್ಭದಲ್ಲಿ ಹೊಟ್ಟೆಯುಬ್ಬರದ ಸಮಸ್ಯೆಯನ್ನು ಅನುಭವಿಸುತ್ತಾರೆ. ಕೆಲವರಿಗೆ ಋತುಚಕ್ರ ಆರಂಭವಾಗಿ ಒಂದರಿಂದ ಎರಡು ದಿನಗಳ ಮೊದಲು ಕಾಣಿಸಿಕೊಂಡರೆ ಇನ್ನೂ ಕೆಲವರಿಗೆ ಐದು ದಿನಗಳ ಮುಂಚಿತವಾಗಿಯೇ ಈ ಲಕ್ಷಣ ಕಾಣಿಸಿಕೊಳ್ಳುತ್ತದೆ. ಋತುಚಕ್ರ ಮುಗಿದ ಕೆಲವು ದಿನಗಳ ಬಳಿಕ ಈ ಉಬ್ಬರ ತನ್ನಿಂದ ತಾನಾಗಿಯೇ ಕಡಿಮೆಯಾಗುತ್ತದೆ.

ಮುಟ್ಟಿನ ಸಂದರ್ಭ ಹೊಟ್ಟೆಯುಬ್ಬರ ಉಂಟಾಗಲು ಕಾರಣಗಳೇನು?

ಋತುಚಕ್ರ ತಿಂಗಳಿಗೊಮ್ಮೆ ಸಂಭವಿಸುತ್ತದೆ. ಗರ್ಭಾಶಯವು ಮುಟ್ಟಿಗೂ ಕೆಲ ವಾರಗಳ ಮುಂಚೆ ಒಂದು ರೀತಿಯ ಲೋಳೆಯ ಪೊರೆಯನ್ನು ಅಭಿವೃದ್ಧಿಪಡಿಸುತ್ತದೆ. ಈ ಅವಧಿಯಲ್ಲಿ ಸಂಭಾವ್ಯ ಗರ್ಭಧಾರಣೆ ಉಂಟಾಗುತ್ತದೆ. ಮುಟ್ಟು ಪ್ರಾರಂಭಗೊಳ್ಳುವ ವಾರದ ಮುಂಚೆ ಹಾರ್ಮೋನ್‌ಗಳಲ್ಲಿ ಉಂಟಾಗುವ ಏರಿಳಿತದಿಂದಾಗಿ ಕೆಲವು ಮಹಿಳೆಯರಿಗೆ ಹೊಟ್ಟೆಯ ಉಬ್ಬರ ಕಂಡುಬರುತ್ತದೆ ಎಂದು ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟೊಲಜಿ ಜರ್ನಲ್‌ನಲ್ಲಿ 2011ರಲ್ಲಿ ಪ್ರಕಟವಾದ ಅಧ್ಯಯನ ತಿಳಿಸಿದೆ.

ಈ ಹೊಟ್ಟೆ ಉಬ್ಬರದ ಸಂಭಾವ್ಯತೆಯನ್ನು ಹೆಚ್ಚಿಸಲು ಕಾರಣವಾಗುವ ಆಹಾರಗಳೇನು..?

1. ಉಪ್ಪಿನಂಶ ಹೆಚ್ಚಿರುವ ಆಹಾರ: ಈ ಅವಧಿಯಲ್ಲಿ ನೀವು ಅತಿಯಾಗಿ ಉಪ್ಪಿನಾಂಶ ಇರುವ ಆಹಾರವನ್ನು ಸೇವಿಸುವುದರಿಂದ ಉಬ್ಬರ ಉಂಟಾಗುತ್ತದೆ. ಇದು ಹೊಟ್ಟೆಯುಬ್ಬರದ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಸೋಡಿಯಂ ಅಂಶ ಅತಿಯಾಗಿರುವ ಸಂಸ್ಕರಿದ ಆಹಾರಗಳು, ಮಾರುಕಟ್ಟೆಗಳಲ್ಲಿ ಲಭ್ಯವಿರುವ ರೆಡಿಮೇಡ್ ಸೂಪ್‌ಗಳು ಇವೆಲ್ಲವೂ ಋತುಚಕ್ರದ ಸಮಯದಲ್ಲಿ ಹೊಟ್ಟೆಯುಬ್ಬರವನ್ನು ಇನ್ನಷ್ಟು ಜಾಸ್ತಿ ಮಾಡುತ್ತವೆ ಎನ್ನಲಾಗಿದೆ.

2. ಕಾರ್ಬೋನೇಟೆಡ್ ಪಾನೀಯಗಳು: ಋತುಚಕ್ರದ ಅವಧಿಯಲ್ಲಿ ನೀವು ಹೆಚ್ಚಾಗಿ ಕಾರ್ಬೋನೇಟೆಡ್ ಪಾನೀಯಗಳನ್ನು ಸೇವಿಸುತ್ತಿದ್ದೀರಾ, ಹಾಗಿದ್ದರೆ ತಕ್ಷಣ ನಿಲ್ಲಿಸಿ. ಕಾರ್ಬೊನೇಟೆಡ್ ತಂಪು ಪಾನೀಯಗಳು, ಹೊಳೆಯುವ ನೀರು ಮತ್ತು ಸೋಡಾ ಗ್ಯಾಸ್ ಉತ್ಪಾದನೆಗೆ ಕಾರಣವಾಗಬಹುದು ಮತ್ತು ಹೊಟ್ಟೆಯ ಅಸ್ವಸ್ಥತೆಗೆ ಕಾರಣವಾಗಬಹುದು. ಇದು ಅನಿರೀಕ್ಷಿತ ಉಬ್ಬುವಿಕೆಗೆ ಕಾರಣವಾಗಬಹುದು.

3. ಸಕ್ಕರೆಯಂಶ ಹೆಚ್ಚಿರುವ ಆಹಾರಗಳು: ಋತುಚಕ್ರದ ಸಮಯದಲ್ಲಿ ಸಕ್ಕರೆಯಂಶ ಹೆಚ್ಚಿರುವ ಆಹಾರ ಸೇವಿಸುವುದರಿಂದಲೂ ಹೊಟ್ಟೆಯುಬ್ಬರದ ಸಮಸ್ಯೆಗಳು ಉಂಟಾಗುತ್ತದೆ. ಸಕ್ಕರೆಯಂಶ ಹೆಚ್ಚಿರುವ ಪಾನೀಯಗಳು, ಸಿಹಿ ತಿಂಡಿಗಳು ಇವುಗಳೆಲ್ಲವೂ ಕರುಳಿನಲ್ಲಿ ಬ್ಯಾಕ್ಟೀರಿಯಾದ ಸಮತೋಲನಕ್ಕೆ ಅಡ್ಡಿಯುಂಟು ಮಾಡುತ್ತದೆ. ಹೀಗಾಗಿ ಋತುಚಕ್ರದ ಸಮಯದಲ್ಲಿ ಸಕ್ಕರೆಯಂಶ ಕಡಿಮೆ ಇರುವ ಆಹಾರವನ್ನೇ ಸೇವಿಸುವುದು ಒಳ್ಳೆಯದು.

4.ಮಸಾಲೆಯಂಶ ಹೆಚ್ಚಿರುವ ಆಹಾರಗಳು: ಮಸಾಲೆಯಂಶ ಹೆಚ್ಚಿರುವ ಆಹಾರಗಳು ಸಾಮಾನ್ಯವಾಗಿ ಬಹುತೇಕರಿಗೆ ಹೊಟ್ಟೆಯಲ್ಲಿ ಅಸ್ವಸ್ಥತೆ ಉಂಟಾಗಲು ಕಾರಣವಾಗುತ್ತದೆ. ಇದರಿಂದ ಹೊಟ್ಟೆಯುಬ್ಬರ, ಮಲಬದ್ಧತೆ, ಹೊಟ್ಟೆ ನೋವು ಹಾಗೂ ಇನ್ನೂ ಅನೇಕ ಸಮಸ್ಯೆಗಳು ಕಾಣಿಸುತ್ತದೆ. ಹೀಗಾಗಿ ಋತುಚಕ್ರದ ಸಂದರ್ಭದಲ್ಲಿ ಅತಿಯಾಗಿ ಮಸಾಲೆಯಂಶವನ್ನು ಹೊಂದಿರುವ ಆಹಾರಗಳನ್ನು ಸೇವಿಸದೇ ಇರುವುದೇ ಒಳ್ಳೆಯದು.

5.ಸಂಸ್ಕರಿಸಿದ ಆಹಾರಗಳು: ಮಾರುಕಟ್ಟೆಯಲ್ಲಿ ಸಿಗುವ ಪ್ಯಾಕ್ ಆಗಿರುವ ಚಿಪ್ಸ್‌ಗಳು, ಬೇಕ್ ಮಾಡಿರುವ ವಿವಿಧ ತಿಂಡಿಗಳು, ರೆಡಿಮೇಡ್ ಆಹಾರಗಳು ಇವೆಲ್ಲವೂ ನಿಮಗೆ ಹೊಟ್ಟೆಯುಬ್ಬರದ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹೀಗಾಗಿ ಋತುಚಕ್ರದ ಸಮಯದಲ್ಲಿ ಸಂಸ್ಕರಿಸಿದ ಆಹಾರಗಳನ್ನು ಸೇವಿಸದೇ ಇರುವುದೇ ಒಳ್ಳೆಯದು.

ಮುಟ್ಟಿನ ಸಮಯದಲ್ಲಿ ಹೊಟ್ಟೆಯುಬ್ಬರ ಕಡಿಮೆ ಮಾಡಲು ಮನೆ ಮದ್ದು

1. ಪೊಟ್ಯಾಷಿಯಂ ಅಂಶ ಹೆಚ್ಚಿರುವ ಆಹಾರಗಳ ಸೇವನೆ : ಪೊಟ್ಯಾಷಿಯಂ ಅಂಶ ಹೆಚ್ಚಿರುವ ಆಹಾರಗಳನ್ನು ಋತುಚಕ್ರದ ಸಮಯದಲ್ಲಿ ಸೇವಿಸುವುದರಿಂದ ಹೊಟ್ಟೆಯುಬ್ಬರ ಸಮಸ್ಯೆ ಕಡಿಮೆಯಾಗುತ್ತದೆ. ಬಸಳೆ, ಸಿಹಿ ಗೆಣಸು, ಬಾಳೆಹಣ್ಣುಗಳನ್ನು ನೀವು ಮುಟ್ಟಿನ ಸಂದರ್ಭದಲ್ಲಿ ಸೇವನೆ ಮಾಡಬಹುದಾಗಿದೆ.

2. ಮೂತ್ರದ ಉತ್ಪಾದನೆ ಹೆಚ್ಚಿಸುವಂತಹ ಆಹಾರಗಳ ಸೇವನೆ: ಮೂತ್ರದ ಉತ್ಪಾದನೆಯನ್ನು ಹೆಚ್ಚಿಸುವ ಆಹಾರಗಳನ್ನು ಈ ಸಮಯದಲ್ಲಿ ಹೆಚ್ಚಾಗಿ ಸೇವಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಮೂತ್ರ ವಿಸರ್ಜನೆಯಿಂದ ದೇಹದಲ್ಲಿನ ಹೆಚ್ಚುವರಿ ನೀರನ್ನು ಹೊರ ಹಾಕಲು ಸಾಧ್ಯವಾಗುತ್ತದೆ. ಇದರಿಂದ ಹೊಟ್ಟೆಯ ಉಬ್ಬುವಿಕೆ ಕಡಿಮೆಯಾಗುತ್ತದೆ. ಪೀಚ್, ಸೌತೆಕಾಯಿ, ಅನಾನಸ್, ಕಲ್ಲಂಗಡಿ, ಬೆಳ್ಳುಳ್ಳಿ ಹಾಗೂ ಶುಂಠಿಯನ್ನು ನೀವು ಹೆಚ್ಚೆಚ್ಚು ಸೇವಿಸುವುದು ಒಳ್ಳೆಯದು.

3. ನಿಯಮಿತ ವ್ಯಾಯಾಮ: ಇರಾನ್ನ ಜರ್ನಲ್ ಆಫ್ ನರ್ಸಿಂಗ್‌ನಲ್ಲಿ ಪ್ರಕಟವಾದ 2013ರ ಅಧ್ಯಯನದ ಪ್ರಕಾರ ನಿಯಮಿತ ವ್ಯಾಯಾಮ ಮಾಡುವ ಮೂಲಕ ಮುಟ್ಟಿನ ಅಡ್ಡ ಪರಿಣಾಮಗಳಿಂದ ಪಾರಾಗಬಹುದು ಎಂದು ತಿಳಿಸಲಾಗಿದೆ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಮುಟ್ಟಿನ ಉಬ್ಬರವನ್ನು ತಡೆಯಬಹುದಾಗಿದೆ.

4. ನೀರು ಕುಡಿಯಿರಿ: ಋತುಚಕ್ರದ ಸಮಯದಲ್ಲಿ ನೀರು ಕುಡಿಯುವುದನ್ನು ಹೆಚ್ಚಿಸಬೇಕು. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದರೂ ಋತುಚಕ್ರದ ಸಮಯದಲ್ಲಿ ಹೆಚ್ಚು ನೀರು ಕುಡಿಯುವುದು ನಿಮಗೆ ಆರಾಮದ ಭಾವನೆ ನೀಡುತ್ತದೆ.

ಈ ಮೇಲೆ ತಿಳಿಸಿರುವ ಅಂಶಗಳನ್ನು ಪಾಲಿಸುವುದರಿಂದ ಮುಟ್ಟಿನ ಸಮಯದಲ್ಲಿ ಉಂಟಾಗುವ ಹೊಟ್ಟೆನೋವು ಹಾಗೂ ಹೊಟ್ಟೆಯುಬ್ಬರದಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಪಾಲಿಸಿ, ಆರಾಮಾಗಿರಿ.