Periods Problems: ಪೀರಿಯಡ್ಸ್‌ ತಡ ಆಗ್ತಿದೆ ಅನ್ನೋ ಚಿಂತೆನಾ, ಅವಧಿಗೆ ಸರಿಯಾಗಿ ಮುಟ್ಟಾಗಲು ಈ ಮನೆಮದ್ದುಗಳನ್ನೊಮ್ಮೆ ಟ್ರೈ ಮಾಡಿ-health news women health periods problems how to get periods faster try these home remedies for periods rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Periods Problems: ಪೀರಿಯಡ್ಸ್‌ ತಡ ಆಗ್ತಿದೆ ಅನ್ನೋ ಚಿಂತೆನಾ, ಅವಧಿಗೆ ಸರಿಯಾಗಿ ಮುಟ್ಟಾಗಲು ಈ ಮನೆಮದ್ದುಗಳನ್ನೊಮ್ಮೆ ಟ್ರೈ ಮಾಡಿ

Periods Problems: ಪೀರಿಯಡ್ಸ್‌ ತಡ ಆಗ್ತಿದೆ ಅನ್ನೋ ಚಿಂತೆನಾ, ಅವಧಿಗೆ ಸರಿಯಾಗಿ ಮುಟ್ಟಾಗಲು ಈ ಮನೆಮದ್ದುಗಳನ್ನೊಮ್ಮೆ ಟ್ರೈ ಮಾಡಿ

ಮುಟ್ಟು ತಡವಾಗಿ ಆಗುವುದು, ಸಮಯಕ್ಕೆ ಸರಿಯಾಗಿ ಆಗದೇ ಇರುವುದು ಈ ಎಲ್ಲಾ ಸಮಸ್ಯೆಗಳಿಗೆ ಕಾರಣಗಳು ಹಲವಾರು. ಆದರೆ ನಿಮಗೆ ಮುಟ್ಟು ಸರಿಯಾಗಿ ಆಗಬೇಕು ಅಂದ್ರೆ ನೀವು ಈ ಮನೆಮದ್ದುಗಳನ್ನು ಟ್ರೈ ಮಾಡಿ. ಇದ್ರಿಂದ ಮುಟ್ಟು ಬೇಗನೆ ಆಗುವುದರಲ್ಲೂ ಸಂಶಯವಿಲ್ಲ.

ಅವಧಿಗೆ ಸರಿಯಾಗಿ ಮುಟ್ಟಾಗಲು ಈ ಮನೆಮದ್ದುಗಳನ್ನೊಮ್ಮೆ ಟ್ರೈ ಮಾಡಿ
ಅವಧಿಗೆ ಸರಿಯಾಗಿ ಮುಟ್ಟಾಗಲು ಈ ಮನೆಮದ್ದುಗಳನ್ನೊಮ್ಮೆ ಟ್ರೈ ಮಾಡಿ

ʼನಂಗೆ ಸರಿಯಾಗಿ ಮುಟ್ಟಾಗೋದೇ ಇಲ್ಲ, ಪ್ರತಿ ತಿಂಗಳು ಒಂದೊಂದು ತಾರೀಕಿಗೆ ಆಗುತ್ತೆ, ಒಮ್ಮೊಮ್ಮೆ ತೀರಾ ತಡವಾಗಿ ಮುಟ್ಟಾಗುತ್ತೆ ಇದ್ರಿಂದ ತಲೆ ಕೆಟ್ಟು ಹೋಗುತ್ತೆʼ ಅಂತ ಹಲವರು ಗೋಳು ತೋಡಿಕೊಳ್ಳುವುದನ್ನು ನೀವು ಕೇಳಿರಬಹುದು. ಇತ್ತೀಚಿನ ದಿನಗಳಲ್ಲಿ ಹಲವು ಹೆಣ್ಣುಮಕ್ಕಳು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪೀರಿಯಡ್ಸ್‌ ಮಿಸ್‌ ಆಗುವುದಕ್ಕೆ ಕೇವಲ ಪ್ರೆಗ್ನೆನ್ಸಿ ಮಾತ್ರ ಕಾರಣವಲ್ಲ. ಅತಿಯಾದ ಒತ್ತಡ, ಹಾರ್ಮೋನ್‌ಗಳ ಅಸಮತೋಲನದಂತಹ ಅಂಶಗಳು ಋತುಚಕ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಿಮಗೆ ಬೇಗನೆ ಮುಟ್ಟಾಗುವುದು ಹಾಗೂ ಅವಧಿಗೆ ಸರಿಯಾಗಿ ಮುಟ್ಟಾಗಬೇಕು ಅಂತಿದ್ದರೆ ನೀವು ಈ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು.

ತಡವಾಗಿ ಮುಟ್ಟಾಗಲು ಕಾರಣಗಳು

ಒತ್ತಡ: ʼಅತಿಯಾದ ಒತ್ತಡದಿಂದ ದೇಹವು ಕಾರ್ಟಿಸೋಲ್‌ ಹಾರ್ಮೋನ್‌ ಬಿಡುಗಡೆಯಾಗಲು ಕಾರಣವಾಗುತ್ತದೆ. ಇದು ಋತುಚಕ್ರದ ಏರುಪೇರಿಗೆ ಕಾರಣವಾಗುತ್ತದೆ, ಜೊತೆಗೆ ಇದರಿಂದ ಹಾರ್ಮೋನ್‌ ಅಸಮತೋಲನವೂ ಉಂಟಾಗುತ್ತದೆ. ಇದರಿಂದ ಮುಟ್ಟಿನ ಅವಧಿಯಲ್ಲಿ ವ್ಯತ್ಯಾಸವಾಗುತ್ತದೆʼ ಎನ್ನುತ್ತಾರೆ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ. ಅರುಣಾ ಕಲ್ರಾ.

ಅತಿಯಾದ ವ್ಯಾಯಾಮ: ದೇಹ ಫಿಟ್‌ ಆಗಿರಬೇಕು ಎಂದುಕೊಂಡು ಅತಿಯಾಗಿ ವ್ಯಾಯಾಮ ಮಾಡುವುದು ಕೂಡ ಸಲ್ಲ. ಇದರಿಂದ ಕೂಡ ಮುಟ್ಟಿನ ಅವಧಿಯಲ್ಲಿ ಕೂಡ ಏರುಪೇರು ಉಂಟಾಗಬಹುದು. ಇದು ಮುಟ್ಟು ತಡವಾಗಿ ಆಗಲು ಪ್ರಮುಖ ಕಾರಣವಾಗಬಹುದು.

ಹಾರ್ಮೋನುಗಳ ಅಸಮತೋಲನ: ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನಗಳಲ್ಲಿ ಏರುಪೇರಾಗದ ಮುಟ್ಟಿನ ದಿನಗಳಲ್ಲಿ ವ್ಯತ್ಯಯ ಉಂಟಾಗುತ್ತದೆ. ಇದು ಮುಟ್ಟಿನ ಅವಧಿ, ಮುಟ್ಟಿನ ದಿನಗಳಲ್ಲಿ ನೋವು ಹಾಗೂ ಅಧಿಕ ರಕ್ತಸ್ರಾವಕ್ಕೂ ಕಾರಣವಾಗುತ್ತದೆ. ಕ್ಯುರಿಯಸ್‌ ಜರ್ನಲ್‌ನಲ್ಲಿ ಪ್ರಕಟವಾದ 2023ರ ಅಧ್ಯಯನದ ಪ್ರಕಾರ ಸೆಳೆತ, ಹೊಟ್ಟೆಯುಬ್ಬರ, ಹಾಗೂ ಮುಟ್ಟಿನ ದಿನಗಳಲ್ಲಿ ಉಂಟಾಗುವ ಮನಸ್ಥಿತಿಯ ಬದಲಾವಣೆಗಳಿಗೆ ಇವು ಕಾರಣವಾಗುತ್ತದೆ.

ತೂಕ: ಎಂಡೋಕ್ರೈನಾಲಜಿ ಮತ್ತು ಮೆಟಾಬಾಲಿಸಮ್ ಜರ್ನಲ್‌ನಲ್ಲಿ ಪ್ರಕಟವಾದ 2017 ರ ಅಧ್ಯಯನದ ಪ್ರಕಾರ, ದೀರ್ಘಕಾಲದ ತೂಕ ನಷ್ಟ ಅಥವಾ ಹೆಚ್ಚಳವು ಹಾರ್ಮೋನ್ ಸಂಶ್ಲೇಷಣೆಯ ಮೇಲೆ ಪರಿಣಾಮ ಬೀರಬಹುದು, ಇದು ಅನಿಯಮಿತ ಮುಟ್ಟಿನ ಅವಧಿಗೆ ಕಾರಣವಾಗಬಹುದು.

ಆರೋಗ್ಯ ಸಮಸ್ಯೆಗಳು: ಥೈರಾಯ್ಡ್‌ ಸಮಸ್ಯೆ, ಪಿಸಿಓಎಸ್‌ನಂತಹ ಸಮಸ್ಯೆಗಳು ಹಲವು ರೀತಿಯ ವೈದ್ಯಕೀಯ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಇವು ಕೂಡ ಮುಟ್ಟಿನ ದಿನಗಳು ವ್ಯತ್ಯಯ ಉಂಟಾಗಲು ಕಾರಣವಾಗಬಹುದು.

ಮುಟ್ಟು ಬೇಗ ಆಗಲು ಮನೆಮದ್ದುಗಳಿವು

ಕೆಲವು ಪರಿಣಾಮಕಾರಿ ಹಾಗೂ ಸುಲಭವಾದ ಮನೆಮದ್ದುಗಳಿಂದ ಬೇಗನ ಮುಟ್ಟಾಗಲು ಸಾಧ್ಯವಾಗುತ್ತದೆ. ಅಂತಹ ಕೆಲವು ಮನೆಮದ್ದುಗಳ ಪರಿಚಯ ಇಲ್ಲಿದೆ.

ಅಜ್ವಾನ: ಅಜ್ವಾನ ಹಾಗೂ ಬೆಲ್ಲವನ್ನು ಸೇರಿಸಿ ಸೇವಿಸುವುದರಿಂದ ಬೇಗನೆ ಮುಟ್ಟಾಗುತ್ತದೆ. ಇದು ಮುಟ್ಟಿನ ನೋವಿನ ನಿವಾರಣೆಗೂ ಸಹಕಾರಿ. ಒಂದು ಲೋಟ ನೀರಿನಲ್ಲಿ ಒಂದು ಚಮಚ ಅಜ್ವಾನ, ಒಂದು ಬೆಲ್ಲ ಬೆಲ್ಲದ ಪುಡಿಯನ್ನು ಸೇರಿಸಿ ಕುದಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಬೇಗನೆ ಮುಟ್ಟಾಗುತ್ತದೆ.

ದಾಳಿಂಬೆ: ದಾಳಿಂಬೆ ರಸವು ಅವಧಿಯ ಇಂಡಕ್ಷನ್‌ಗೆ ಮತ್ತೊಂದು ಉಪಯುಕ್ತ ಪಾನೀಯವಾಗಿದೆ. ನಿಮ್ಮ ಮುಟ್ಟಿನ ದಿನಗಳಿಗೂ ಕನಿಷ್ಠ 10 ರಿಂದ 15 ದಿನಗಳ ಮೊದಲು ಪ್ರತಿದಿನ ಮೂರು ಲೋಟ ಶುದ್ಧ ದಾಳಿಂಬೆ ರಸವನ್ನು ಸೇವಿಸಲು ಆರಂಭಿಸಿ. ಸಾಧ್ಯವಾದರೆ ಕಬ್ಬಿನರಸವನ್ನು ದಾಳಿಂಬೆ ರಸದೊಂದಿಗೆ ಸೇರಿಸಿ. ದಿನಕ್ಕೆ ನಾಲ್ಕು ಬಾರಿ ಕುಡಿಯುವುದರಿಂದ ಬೇಗನೆ ಮುಟ್ಟಾಗುತ್ತದೆ.

ಅರಿಸಿನದ ಚಹಾ: ಅರಿಸಿನವು ಉರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದು ಗರ್ಭಾಶಯಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಜೊತೆಗೆ ಗರ್ಭಾಶಯದ ಒಳಪದರವನ್ನು ಹೊರ ಹಾಕಲು ಕಾರಣವಾಗುತ್ತದೆ. ನಿಮಗೆ ಮುಟ್ಟು ತಡವಾಗುತ್ತಿದ್ದರೆ ಅರಿಸಿನ ಸೇವನೆ ಉತ್ತಮ. ಒಂದು ಸಣ್ಣ ಅರಿಸಿನದ ತುಂಡನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಇದನ್ನು ಬಿಸಿ ಇರುವಾಗಲೇ ಕುಡಿಯಿರಿ.

ಪಪ್ಪಾಯ: ಮುಟ್ಟು ತಡವಾಗಿ ಆಗುತ್ತಿದ್ದರೆ ಪಪ್ಪಾಯ ಸೇವನೆ ಆರಂಭಿಸಬೇಕು. ಹಸಿ ಪಪ್ಪಾಯವಿ ಗರ್ಭಾಶಯದ ಸಂಕೋಚನವನ್ನು ಉತ್ತೇಜಿಸುವ ಮೂಲಕ ಮುಟ್ಟಾಗಲು ಸಹಾಯ ಮಾಡುತ್ತದೆ. ಪಪ್ಪಾಯಿಯ ಕ್ಯಾರೋಟಿನ್ ಈಸ್ಟ್ರೊಜೆನ್ ಹಾರ್ಮೋನ್ ಅನ್ನು ಹೆಚ್ಚಿಸುತ್ತದೆ, ಇದು ಬೇಗನೆ ಮುಟ್ಟಾಗುವಂತೆ ಮಾಡುತ್ತದೆ. ಹಸಿ ಪಪ್ಪಾಯವನ್ನು ಅಥವಾ ಇದರ ರಸವನ್ನು ದಿನಕ್ಕೆ ಎರಡು ಬಾರಿ ಸೇವಿಸಬೇಕು. ಉತ್ತಮ ಫಲಿತಾಂಶಕ್ಕಾಗಿ ಒಂದು ಕಪ್ ಪಪ್ಪಾಯಿ ರಸ ಅಥವಾ ಒಂದು ಲೋಟ ತಾಜಾ ಮಾಗಿದ ಪಪ್ಪಾಯಿಯನ್ನು ಸೇವಿಸಬಹುದು. ಆದರೆ ನೀವು ಗರ್ಭಧರಿಸಿದ್ದೀರಿ ಎಂಬ ಅನುಮಾನವಿದ್ದರೆ ಖಂಡಿತ ವೈದ್ಯರ ಬಳಿ ಪರೀಕ್ಷೆ ಮಾಡಿಸಬೇಕು, ಇಲ್ಲದಿದ್ದರೆ ಇದು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

ಕೊತ್ತಂಬರಿ ಬೀಜ: ಕೊತ್ತಂಬರಿ ಬೀಜಗಳನ್ನು ಅವುಗಳ ಎಮ್ಮೆನಾಗೋಗ್ ಗುಣಲಕ್ಷಣಗಳಿಂದಾಗಿ ಮುಟ್ಟನ್ನು ಪ್ರಚೋದಿಸುವ ಅತ್ಯಂತ ಪರಿಣಾಮಕಾರಿ ನೈಸರ್ಗಿಕ ಪರಿಹಾರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. 2 ಕಪ್‌ ನೀರಿಗೆ 1 ಚಮಚ ಕೊತ್ತಂಬರಿ ಬೀಜ ಸೇರಿಸಿ ಆ ನೀರು 1 ಕಪ್‌ ಆಗುವವರೆಗೂ ಚೆನ್ನಾಗಿ ಕುದಿಸಿ. ನಿಮ್ಮ ಮುಟ್ಟಿನ ದಿನಗಳವರೆಗೆ ದಿನಕ್ಕೆ ಮೂರು ಬಾರಿ ಕುಡಿಯಿರಿ.

ಮುಟ್ಟು ಬೇಗನೇ ಆಗುವಂತೆ ಔಷಧಿ ತೆಗೆದುಕೊಳ್ಳುವುದು ಸುರಕ್ಷಿತವೇ?

ನೀವು ಮುಟ್ಟು ಬೇಗನೆ ಆಗಲಿ ಎಂದು ಯಾವುದೇ ರೀತಿಯ ಔಷಧಿಗಳನ್ನು ಸೇವಿಸುವ ಮುನ್ನ ತಜ್ಞ ವೈದ್ಯರೊಂದಿಗೆ ಮಾತನಾಡುವುದು ಬಹಳ ಮುಖ್ಯ. ಕೆಲವೊಮ್ಮೆ ನಮಗೆ ನಾವೇ ಔಷಧಿಗಳನ್ನು ತಯಾರಿಸಿ ತಿನ್ನುವುದು ದೇಹದ ಮೇಲೆ ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು. ಇದು ಅಪಾಯಕ್ಕೂ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು. ಈ ವಿಚಾರದಲ್ಲಿ ಸ್ತ್ರೀರೋಗ ತಜ್ಞರ ಅಭಿಪ್ರಾಯ ಪಡೆಯದೇ ಮುಂದೆ ಸಾಗುವುದು ಸರಿಯಲ್ಲ ಎಂದು ವೈದ್ಯರು ಹೇಳುತ್ತಾರೆ.