ಕನ್ನಡ ಸುದ್ದಿ  /  ಜೀವನಶೈಲಿ  /  ನಾರ್ಮಲ್‌ Vs ಸಿ-ಸೆಕ್ಷನ್‌ ಡೆಲಿವರಿ; ಪ್ರಸವಾನಂತರದ ಸ್ಥಿತಿ ಹೇಗಿರುತ್ತೆ, ಬಾಣಂತಿ ಆರೈಕೆ ಹೇಗಿರಬೇಕು; ಇಲ್ಲಿದೆ ತಜ್ಞರ ಸಲಹೆ

ನಾರ್ಮಲ್‌ vs ಸಿ-ಸೆಕ್ಷನ್‌ ಡೆಲಿವರಿ; ಪ್ರಸವಾನಂತರದ ಸ್ಥಿತಿ ಹೇಗಿರುತ್ತೆ, ಬಾಣಂತಿ ಆರೈಕೆ ಹೇಗಿರಬೇಕು; ಇಲ್ಲಿದೆ ತಜ್ಞರ ಸಲಹೆ

ಗರ್ಭಿಣಿ ಮಹಿಳೆಯರು ನಾರ್ಮಲ್‌ ಡೆಲಿವರಿ ಹಾಗೂ ಸಿಸೇರಿಯನ್‌ ಡೆಲಿವರಿಗೆ ಇರುವ ವ್ಯತ್ಯಾಸದ ಬಗ್ಗೆ ತಿಳಿದುಕೊಳ್ಳಲು ಬಯಸುವುದು ಸಹಜ. ನಾರ್ಮಲ್‌ ಹಾಗೂ ಸಿ-ಸೆಕ್ಷನ್‌ ಡೆಲಿವರಿ ನಡುವಿನ ವ್ಯತ್ಯಾಸವೇನು, ಈ ಎರಡೂ ವಿಧದ ಡೆಲಿವರಿ ಆದವರಿಗೆ ಪ್ರಸವಾನಂತರ ಆರೈಕೆ ಹೇಗಿರಬೇಕು ಎಂಬುದನ್ನು ವಿವರಿಸಿದ್ದಾರೆ ಡಾ. ಸಿರೀಷಾ ರೆಡ್ಡಿ.

ನಾರ್ಮಲ್‌ vs ಸಿ-ಸೆಕ್ಷನ್‌ ಡೆಲಿವರಿ; ಪ್ರಸವಾನಂತರದ ಸ್ಥಿತಿ ಹೇಗಿರುತ್ತೆ, ಬಾಣಂತಿ ಆರೈಕೆ ಹೇಗಿರಬೇಕು
ನಾರ್ಮಲ್‌ vs ಸಿ-ಸೆಕ್ಷನ್‌ ಡೆಲಿವರಿ; ಪ್ರಸವಾನಂತರದ ಸ್ಥಿತಿ ಹೇಗಿರುತ್ತೆ, ಬಾಣಂತಿ ಆರೈಕೆ ಹೇಗಿರಬೇಕು

ಒಂದು ಮಗುವಿಗೆ ಜನ್ಮ ನೀಡುವುದು ಎಂದರೆ ತಾಯಿಯಾದವಳಿಗೆ ಮರುಜನ್ಮ ಸಿಕ್ಕಂತೆ ಎಂದು ಹೇಳುತ್ತಾರೆ. ಆ ಕಾರಣಕ್ಕೆ ಬಾಣಂತಿಯರ ಆರೈಕೆಗೆ ಸಾಕಷ್ಟು ಒತ್ತು ನೀಡಲಾಗುತ್ತದೆ. ಅದರಲ್ಲೂ ಮೊದಲ ಬಾರಿ ತಾಯಿಯಾದವಳಿಗೆ ಪ್ರಸವ ನಂತರದ ಚೇತರಿಕೆಯು ಪ್ರಮುಖ ಹಂತವಾಗಿದೆ. ಈ ಹಂತದಲ್ಲಿ ಅವರು ದೈಹಿಕವಾಗಿ, ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಹಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

ಸಹಜ ಪ್ರಸವ ವಿಧಾನ (ನಾರ್ಮಲ್‌ ಡೆಲಿವರಿ) ಹಾಗೂ ಸಿಸೇರಿಯನ್ ಹೆರಿಗೆ (ಸಿ-ಸೆಕ್ಷನ್) ಎಂಬ ಈ ಎರಡು ಪ್ರಸವ ವಿಧಾನಗಳು ಚೇತರಿಕೆಯ ಪ್ರಕ್ರಿಯೆಯಲ್ಲಿ ವಿಭಿನ್ನ ಪ್ರಭಾವ ಬೀರುತ್ತವೆ. ತಾಯಿಯ ಚೇತರಿಸಿಕೊಳ್ಳುವ ಪ್ರಯಾಣ ಮತ್ತು ಗರ್ಭಾವಸ್ಥೆಗೂ ಮೊದಲು ಮಾಡುತ್ತಿದ್ದ ಕೆಲಸಗಳನ್ನು ಮಾಡುವ ಹಂತಕ್ಕೆ ಹಿಂತಿರುಗುವ ಪ್ರಕ್ರಿಯೆಯ ಮೇಲೆ ಈ ಎರಡೂ ವಿಧಾನಗಳು ವಿಭಿನ್ನ ಪರಿಣಾಮಗಳನ್ನು ಬೀರುತ್ತವೆ. ಮೊದಲ ಬಾರಿ ಮಗುವಿನ ತಾಯಿಯಾದವಳು, ಆಕೆಯ ಕುಟುಂಬ ಮತ್ತು ಆರೋಗ್ಯ ಸೇವಾಕರ್ತರು ಉತ್ತಮವಾದ ಆರೈಕೆ ಮತ್ತು ನೆರವಿಗಾಗಿ ಈ ಎಲ್ಲಾ ವ್ಯತ್ಯಾಸಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ.

ಸಹಜ ಪ್ರಸವ

1. ದೈಹಿಕ ಚೇತರಿಕೆ

 ಸಹಜ ಪ್ರಸವ ಅಥವಾ ಯೋನಿಯ ಮೂಲಕ ಆಗುವ ಪ್ರಸವಾನಂತರದ ಚೇತರಿಕೆಯು ಸಿ-ಸೆಕ್ಷನ್‌ಗೆ ಹೋಲಿಸಿದರೆ ಕಡಿಮೆ ತೀವ್ರತೆ ಮತ್ತು ಕಡಿಕೆ ಚೇತರಿಕೆ ಅವಧಿಯನ್ನು ಹೊಂದಿರುತ್ತದೆ. ಪ್ರಸವದ ಬಳಿಕ ತಾಯಂದಿರು ಈ ಕೆಳಗಿನ ಅನುಭವಗಳಿಗೆ ಪಾತ್ರರಾಗಬಹುದು:

ಟ್ರೆಂಡಿಂಗ್​ ಸುದ್ದಿ

ಪೆರಿನಿಯಲ್ ನೋವು: ಹೆರಿಗೆಯ ಸಮಯದಲ್ಲಿ ಹಿಗ್ಗುವ ಮತ್ತು ಹರಿದುಹೋಗುವ ಸಂಭವ ಇರುವುದರಿಂದ ಪೆರಿನಿಯಮ್ (ಯೋನಿ ಮತ್ತು ಗುದದ ನಡುವಿನ ಪ್ರದೇಶ) ನೋವು ಉಂಟಾಗಬಹುದು ಮತ್ತು ಅದು ಊದಿಕೊಳ್ಳುವ ಸಂಭವವೂ ಇದೆ. ಒಂದು ವೇಳೆ ಹರಿದು ಹೋಗಿದ್ದರೆ ಅದಕ್ಕೆ ಹೊಲಿಗೆಗಳನ್ನ ಹಾಕಬೇಕಾಗಬಹುದು.

ಲೋಚಿಯಾ: ಪ್ರಸವದ ಬಳಿಕ ಉಂಟಾಗುವ ರಕ್ತಸ್ರಾವಕ್ಕೆ ಲೋಚಿಯಾ ಎಂದು ಕರೆಯಲಾಗುತ್ತದೆ. ಈ ಲೋಚಿಯಾ ಪ್ರಕ್ರಿಯೆ ಅತ್ಯಂತ ಸಹಜವಾಗಿದೆ. ಎರಡೂ ರೀತಿಯ ಪ್ರಸವ ಸಂದರ್ಭಗಳಲ್ಲಿಯೂ ಹಲವಾರು ವಾರಗಳವರೆಗೆ ಲೋಚಿಯಾ ಇರುತ್ತದೆ.

ಗರ್ಭಾಶಯದ ಕುಗ್ಗುವಿಕೆ: ಪ್ರಸವದ ಬಳಿಕ ಗರ್ಭಧಾರಣೆಯ ಮೊದಲಿನ ಸ್ಥಿತಿಗೆ ಹೋಗಲು ಗರ್ಭಾಶಯವು ಸಂಕುಚಿತಗೊಳ್ಳುತ್ತದೆ. ಆ ವೇಳೆಯಲ್ಲಿ ಮುಟ್ಟಿನ ಸಂದರ್ಭದಲ್ಲಿ ಉಂಟಾದಂತೆಯೇ ಸೆಳೆತ ಉಂಟಾಗಬಹುದು.

ನಡೆದಾಡುವಿಕೆ: ಸಹಜ ಪ್ರಸವ ವಿಧಾನದಲ್ಲಿ ಹೆರಿಗೆ ಆಗಿರುವ ಮಹಿಳೆಯರು ಸಾಮಾನ್ಯವಾಗಿ ಸ್ವಲ್ಪ ಬೇಗನೇ ನಡೆದಾಡಲು ಆರಂಭಿಸುತ್ತಾರೆ. ಅವರು ಪ್ರಸವದ ಬಳಿಕ ಕೆಲವೇ ಗಂಟೆಗಳ ಒಳಗೆಯೇ ಹಾಸಿಗೆಯಿಂದ ಎದ್ದು ಅತ್ತಿತ್ತ ಓಡಾಡಲು ಆರಂಭಿಸಬಹುದು. ಅದರಿಂದ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ತಪ್ಪಿಸಬಹುದಾಗಿದೆ ಮತ್ತು ಬಹಳ ವೇಗವಾಗಿ ಚೇತರಿಸಿಕೊಳ್ಳಬಹುದಾಗಿದೆ.

2. ಆಸ್ಪತ್ರೆ ವಾಸ

ಸಹಜ ಪ್ರಸವ ಆಗಿದ್ದರೆ ಆಸ್ಪತ್ರೆ ವಾಸ ಬಹಳ ಕಡಿಮೆ ಇರುತ್ತದೆ. ಯಾವುದೇ ತೊಂದರೆಗಳು ಇಲ್ಲದಿದ್ದರೆ ಸಾಮಾನ್ಯವಾಗಿ 24ರಿಂದ 48 ಗಂಟೆವರೆಗೆ ಆಸ್ಪತ್ರೆಯಲ್ಲಿ ಇರಬೇಕಾಗಬಹುದು. ಇದರಿಂದ ತಾಯಂದಿರು ತಮ್ಮ ಮನೆಯ ಆರಾಮದಾಯಕ ವ್ಯವಸ್ಥೆಗೆ ಬೇಗನೇ ಮರಳಬಹುದು.

3. ನೋವು ನಿರ್ವಹಣೆ

ನೋವು ನಿವಾರಣೆಯ ಅವಶ್ಯಕತೆ ಇರುತ್ತದೆ. ಆದರೆ ಸಿ- ಸೆಕ್ಷನ್ ಹೆರಿಗೆಯ ನೋವಿಗೆ ಹೋಲಿಸಿದರೆ ಈ ನೋವಿನ ತೀವ್ರತೆ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆಯೇ ದೊರಕುವ ನೋವು ನಿವಾರಕಗಳು, ಸಿಟ್ಝ್ ಬಾತ್ ಎಂದು ಕರೆಯಲ್ಪಡುವ ಪೆರಿನಿಯಮ್‌ಗೆ ಹಿತ ಕೊಡುವ ಬಿಸಿನೀರ ಸ್ನಾನ ಮತ್ತು ಐಸ್ ಪ್ಯಾಕ್‌ಗಳು ಈ ನೋವು ನಿರ್ವಹಣೆ ಮಾಡಬಲ್ಲವು.

4. ಭಾವನಾತ್ಮಕ ಚೇತರಿಕೆ

ಸಹಜ ಪ್ರಸವ ವಿಧಾನವು ತಾಯಂದಿರಲ್ಲಿ ದೊಡ್ಡ ಸಾರ್ಥಕ ಭಾವನೆ ಮೂಡಿಸುತ್ತದೆ ಮತ್ತು ಮಗುವಿನ ಜೊತೆಗೆ ತಕ್ಷಣವೇ ಬಂಧ ಏರ್ಪಡುತ್ತದೆ. ಎಲ್ಲಾ ಸಂದರ್ಭಗಳಲ್ಲೂ ಹೀಗೇ ಆಗುತ್ತದೆ ಅಂತಲ್ಲ. ಆಯಾಯ ವ್ಯಕ್ತಿಗಳಿಗೆ ತಕ್ಕಂತೆ ಅನುಭವಗಳು ಬದಲಾಗಬಹುದು. ಅದೇನೇ ಇದ್ದರೂ ವಿಧಾನ ಯಾವುದೇ ಇದ್ದರೂ ಈ ಸಂದರ್ಭದಲ್ಲಿ ಭಾವನಾತ್ಮಕ ಬೆಂಬಲ ಒದಗಿಸುವುದು ಬಹಳ ಮುಖ್ಯ.

ಸಿಸೇರಿಯನ್ ಸೆಕ್ಷನ್ ಹೆರಿಗೆ

1. ದೈಹಿಕ ಚೇತರಿಕೆ:

ಹೊಟ್ಟೆಯ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಸಿ-ಸೆಕ್ಷನ್ ನಡಸಲಾಗುತ್ತದೆ. ಅದರಿಂದ ದೀರ್ಘಕಾಲದ ಮತ್ತು ತೀವ್ರವಾದ ಚೇತರಿಕೆಯ ಅವಧಿ ಇರುತ್ತದೆ. ಈ ಸಂದರ್ಭದಲ್ಲಿ ಎದುರಾಗಬಹುದಾದ ಅನುಭವಗಳು ಹೀಗಿರುತ್ತವೆ:

ಶಸ್ತ್ರಚಿಕಿತ್ಸೆಯ ಗಾಯದ ಆರೈಕೆ: ಶಸ್ತ್ರಚಿಕಿತ್ಸೆಯ ಮಾಡಿದ ಜಾಗಗಳಲ್ಲಿ ಸೋಂಕು ಉಂಟಾಗುವ ಸಾಧ್ಯತೆ ಇರುವುದರಿಂದ ಅತ್ತ ನಿಗಾ ವಹಿಸಬೇಕು. ಈ ಹಂತವು ತುಂಬಾ ನೋವಿನ ಹಂತವಾಗಿದ್ದು, ಹಲವು ದಿನಗಳವರೆಗೆ ದೈಹಿಕ ಚಟುವಟಿಕೆಗಳನ್ನು ಬಹಳ ಮಿತಿಯಲ್ಲಿ ಮಾಡಬೇಕು.

ನೋವು ನಿರ್ವಹಣೆ: ಜಾಸ್ತಿ ಶಕ್ತಿ ಇರುವ ನೋವು ನಿವಾರಕ ಔಷಧಿಗಳ ಅವಶ್ಯಕತೆ ಬೀಳಬಹುದು. ಶಸ್ತ್ರಚಿಕಿತ್ಸೆಯ ಗಾಯದ ನೋವು ಮಾಯಲು ಮತ್ತು ಆಂತರಿಕವಾಗಿ ಚೇತರಿಸಿಕೊಳ್ಳಲು ಹಲವು ವಾರಗಳೇ ಬೇಕಾಗಬಹುದು.

ಲೋಚಿಯಾ: ಈ ಹಂತವು ಸಹಜ ಪ್ರಸವದಂತೆಯೇ ಇರುತ್ತದೆ. ಪ್ರಸವಾ ನಂತರ ರಕ್ತಸ್ರಾವ ಸಂಭವಿಸುತ್ತದೆ. ಆದರೆ ಆರಂಭಿಕ ಹಂತದಲ್ಲಿ ಅದರ ತೀವ್ರತೆ ಕಡಿಮೆ ಇರುತ್ತದೆ.

ನಡೆದಾಡುವಿಕೆ: ಆರಂಭಿಕ ಹಂತದಲ್ಲಿ ನಡೆದಾಡುವಂತೆಯೇ ಇರುವುದಿಲ್ಲ. ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯ ನಂತರದ 12 ರಿಂದ 24 ಗಂಟೆಗಳ ಒಳಗಿನ ಸಮಯದಲ್ಲಿ ತಾಯಂದಿರು ಹಾಸಿಗೆಯಿಂದ ಎದ್ದೇಳಲು ಮತ್ತು ನಡೆಯಲು ಸಹಾಯ ಪಡೆಯಬೇಕಾಗುತ್ತದೆ. ಪ್ರಾರಂಭದಲ್ಲಿ ಎದೆ ಹಾಲು ಕುಡಿಸುವ ಪೊಸಿಷನ್‌ಗಳು ಮತ್ತಿತರ ಕ್ರಿಯೆಗಳನ್ನು ಮಾಡುವುದು ಕಷ್ಟವಾಗಬಹುದು. ಭಾರ ಎತ್ತುವುದು, ಡ್ರೈವಿಂಗ್ ಮಾಡುವುದು ಮುಂತಾದ ಚಟುವಟಿಕೆಗಳನ್ನು ಹಲವಾರು ವಾರಗಳ ಕಾಲ ಮಾಡಬಾರದು.

2. ಆಸ್ಪತ್ರೆ ವಾಸ

ಸಿ-ಸೆಕ್ಷನ್ ಹೆರಿಗೆ ಸಂದರ್ಭದಲ್ಲಿ ಸಾಮಾನ್ಯವಾಗಿ ಆಸ್ಪತ್ರೆ ವಾಸವು ಜಾಸ್ತಿಯೇ ಇರುತ್ತದೆ. ಸೋಂಕು, ರಕ್ತ ಹೆಪ್ಪುಗಟ್ಟುವಿಕೆಯಂತಹ ಸಮಸ್ಯೆಗಳು ಉಂಟಾಗುತ್ತದೆಯೇ ಎಂದು ನಿಗಾ ವಹಿಸುವುದಕ್ಕೆ ಮತ್ತು ಶಸ್ತ್ರಚಿಕಿತ್ಸೆಯಿಂದ ತಾಯಿಯು ಚೇತರಿಸಿಕೊಂಡಿದ್ದಾಳೆ ಎಂದು ಖಚಿತಪಡಿಸಿಕೊಳ್ಳಲು ಸುಮಾರು 3-4 ದಿನಗಳು ಬೇಕಾಗಬಹುದು.

3. ಭವಿಷ್ಯದ ಗರ್ಭಧಾರಣೆಯ ಮೇಲೆ ಉಂಟಾಗಬಹುದಾದ ಪರಿಣಾಮಗಳು

ಸಿ- ಸೆಕ್ಷನ್ ಹೆರಿಗೆಯಿಂದ ಚೇತರಿಸಿಕೊಳ್ಳುವಿಕೆಯು ಭವಿಷ್ಯದ ಗರ್ಭಧಾರಣೆ ಮತ್ತು ಹೆರಿಗೆಗಳ ಮೇಲೆ ಪ್ರಭಾವ ಬೀರಬಹುದು. ಸಿಸೇರಿಯನ್ (ವಿಬಿಎಸಿ) ಬಳಿಕವೂ ಯೋನಿ ಪ್ರಸವ ಸಾಧ್ಯವಿರುತ್ತದೆ. ಆದರೆ ಅಪಾಯದ ಸಾಧ್ಯತೆ ಮತ್ತು ಪರಿಗಣನೆಗೆ ತೆಗೆದುಕೊಳ್ಳಬೇಕಾದ ಹಲವಾರು ವಿಚಾರಗಳ ಕುರಿತು ಆರೋಗ್ಯ ಸೇವಾ ಪೂರೈಕೆದಾರರಲ್ಲಿ ಚರ್ಚೆ ಮಾಡುವುದು ಅವಶ್ಯ.

4. ಭಾವನಾತ್ಮಕ ಚೇತರಿಕೆ

ಸಿ- ಸೆಕ್ಷನ್ ಹೆರಿಗೆಯ ಭಾವನಾತ್ಮಕ ಪರಿಣಾಮ ಒಬ್ಬರಿಂದ ಮತ್ತೊಬ್ಬರಿಗೆ ಭಿನ್ನವಾಗಿರಬಹುದು. ಸಹಜ ಪ್ರಸವದ ಯೋಜನೆ ಹಾಕಿಕೊಂಡಿದ್ದ ಕೆಲವು ತಾಯಂದಿರು ನಿರಾಶೆಗೆ ಒಳಗಾಗಬಹುದು. ಇನ್ನು ಕೆಲವರು ಸುರಕ್ಷಿತ ಹೆರಿಗೆಗಾಗಿ ನೆಮ್ಮದಿ ಅಥವಾ ಸಾರ್ಥಕ ಭಾವ ಅನುಭವಿಸಬಹುದು. ಈ ಹಂತದಲ್ಲಿ ಕೌನ್ಸಿಲಿಂಗ್ ಮತ್ತು ಭಾವನಾತ್ಮಕ ಬೆಂಬಲ ಬಹಳ ಪ್ರಯೋಜನಕಾರಿ ಆಗಿದೆ. ಗರ್ಭಾವಸ್ಥೆಯ ಪ್ರಾರಂಭದಿಂದಲೇ ಸಹಜ ಪ್ರಸವಕ್ಕೆ ಸಿದ್ಧರಾಗುವ ತಾಯಂದಿರು ಬಹುತೇಕ ಸಂದರ್ಭಗಳಲ್ಲಿ ಸಿ- ಸೆಕ್ಷನ್ ಅನ್ನು ತಪ್ಪಿಸಿಕೊಳ್ಳಬಹುದಾಗಿದೆ.

ಅಂತಿಮ ಮಾತು

ಸಹಜ ಪ್ರಸವ ಮತ್ತು ಸಿ- ಸೆಕ್ಷನ್ ಹೆರಿಗೆ ಈ ಎರಡೂ ವಿಧಾನಗಳು ವಿಭಿನ್ನವಾದ ಚೇತರಿಕಾ ಕ್ರಮಗಳನ್ನು ಹೊಂದಿವೆ ಮತ್ತು ಎರಡೂ ಸಂದರ್ಭಗಳಲ್ಲಿಯೂ ಕಾಳಜಿ ಮತ್ತು ಗಮನ ವಹಿಸುವುದು ಬಹಳ ಮುಖ್ಯವಾಗಿದೆ. ಸಹಜ ಪ್ರಸವದ ಸಂದರ್ಭದಲ್ಲಿ ವೇಗವಾಗಿ ಚೇತರಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ದೈಹಿಕ ಸಮಸ್ಯೆಗಳ ತೀವ್ರತೆ ಕಡಿಮೆ ಇರುತ್ತದೆ. ಹಾಗಾಗಿ ತಾಯಂದಿರು ಬಹು ಬೇಗ ಓಡಾಡಿಕೊಂಡಿರಬಹುದಾಗಿದೆ. ಆದರೆ ಸಿ- ಸೆಕ್ಷನ್ ಹೆರಿಗೆ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ನಡೆಯುವುದರಿಂದ ಚೇತರಿಸಿಕೊಳ್ಳಲು ದೀರ್ಘ ಸಮಯ ಬೇಕಾಗುತ್ತದೆ. ಹೆರಿಗೆ ವಿಧಾನಗಳ ಹೊರತಾಗಿ ತಾಯಂದಿರು ಪ್ರಸವ ನಂತರ ಆರೋಗ್ಯಕರ ಮತ್ತು ಧನಾತ್ಮಕ ಅನುಭವಗಳನ್ನು ಹೊಂದಲು ಸೂಕ್ತವಾದ ವಿಶ್ರಾಂತಿ, ನೆರವು, ವೈದ್ಯಕೀಯ ಆರೈಕೆ ಬಹುಮುಖ್ಯವಾಗಿದೆ. ಈ ವ್ಯತ್ಯಾಸಗಳನ್ನು ಅರ್ಥ ಮಾಡಿಕೊಳ್ಳುವುದರಿಂದ ಪ್ರಸವ ನಂತರದ ಆರೈಕೆಯನ್ನು ಸೂಕ್ತವಾಗಿ ಯೋಜಿಸಬಹುದಾಗಿದೆ ಮತ್ತು ತಾಯಂದಿರ ಚೇತರಿಸುವಿಕೆಯ ಪ್ರಯಾಣವನ್ನು ತುಸು ಸುಲಭ ಮತ್ತು ಆರಾಮಗೊಳಿಸಬಹುದಾಗಿದೆ.

(ಲೇಖನ: ಡಾ. ಸಿರೀಷಾ ರೆಡ್ಡಿ, ಸೀನಿಯರ್ ಕನ್ಸಲ್ಟೆಂಟ್ - ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ, ಮದರ್ ಹುಡ್ ಹಾಸ್ಪಿಟಲ್ಸ್, ಹೆಬ್ಬಾಳ, ಬೆಂಗಳೂರು)