Thyroid problem: ಮಹಿಳೆಯರಲ್ಲಿ ಗರ್ಭಧಾರಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸುತ್ತಿದೆ ಥೈರಾಯ್ಡ್; ಜೀವನಶೈಲಿಯ ಮೇಲಿರಲಿ ಗಮನ
ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಗರ್ಭಧಾರಣೆ ಹಾಗೂ ಫಲವಂತಿಕೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುತ್ತಿವೆ. ಇದಕ್ಕೆ ಥೈರಾಯ್ಡ್ ಪ್ರಮುಖ ಕಾರಣ. ಥೈರಾಯ್ಡ್ ಕಾರಣದಿಂದ ಹಲವು ಇನ್ನಿತರ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿದೆ. ಇದಕ್ಕಾಗಿ ಜೀವನಶೈಲಿ ಮೇಲೆ ಗಮನ ಹರಿಸುವುದು ಬಹಳ ಮುಖ್ಯವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ಹೆಚ್ಚು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಥೈರಾಯ್ಡ್ ಅಗ್ರಸ್ಥಾನದಲ್ಲಿದೆ. ಇದು ಜೀವನಶೈಲಿಗೆ ಸಂಬಂಧಿಸಿದ ತೊಂದರೆಯಾಗಿದ್ದು, ಇದರಿಂದ ಇನ್ನಿತರ ಸಮಸ್ಯೆಗಳು ಎದುರಾಗುತ್ತವೆ. ಇದರಲ್ಲಿ ಪ್ರಮುಖವಾದದ್ದು ಗರ್ಭಧಾರಣೆಯ ಸಮಸ್ಯೆ. ಹಾಗಾದರೆ ಥೈರಾಯ್ಡ್‌ನಿಂದ ಗರ್ಭಧಾರಣೆ ಸಮಸ್ಯೆ ಉಂಟಾಗಲು ಕಾರಣವೇನು, ಇದರಿಂದ ಇನ್ನು ಏನೆಲ್ಲಾ ಸಮಸ್ಯೆಗಳು ಉಂಟಾಗಬಹುದು ಎಂಬುದರ ಬಗ್ಗೆ ತಜ್ಞರ ವಿವರ ಇಲ್ಲಿದೆ.
ʼಥೈರಾಯ್ಡ್ ಹಾರ್ಮೋನ್ ಮಹಿಳೆಯರಲ್ಲಿ ಫಲವಂತಿಕೆಗೆ ಬಹಳ ಮುಖ್ಯ. ಇದರಲ್ಲಿ ವ್ಯತ್ಯಾಸವಾದರೆ ಫಲವತತ್ತೆಯ ಕೊರತೆ ಎದುರಾಗಬಹುದು. ದೇಹದಲ್ಲಿನ ಥೈರಾಯ್ಡ್ ಹಾರ್ಮೋನ್ ಮಟ್ಟದಲ್ಲಿನ ವ್ಯತ್ಯಾಸಗಳು ಅಂದರೆ ಹೈಪೋಥೈರಾಯ್ಡಿಸಮ್ - ದೇಹದಲ್ಲಿ ಕಡಿಮೆ ಮಟ್ಟದ ಥೈರಾಯ್ಡ್ ಹಾರ್ಮೋನ್ ಮತ್ತು ಹೈಪರ್ ಥೈರಾಯ್ಡಿಸಮ್ - ದೇಹದಲ್ಲಿ ಹೆಚ್ಚಿನ ಮಟ್ಟದ ಥೈರಾಯ್ಡ್ ಹಾರ್ಮೋನ್ ಗರ್ಭಧಾರಣೆಗೆ ತೊಂದರೆ ಉಂಟುಮಾಡಬಹುದು. ಅಲ್ಲದೆ, ಗರ್ಭಧಾರಣೆಯ ಸಂಭಾವನೆಯನ್ನು ಕಡಿಮೆ ಮಾಡಬಹುದು. ಈ ಸ್ಥಿತಿಯನ್ನು ಸಬ್-ಫರ್ಟಿಲಿಟಿ (Subfertility) ಎಂದು ಕರೆಯಲಾಗುತ್ತದೆ.
ಗರ್ಭ ಧರಿಸಿರುವ ಮಹಿಳೆಯರಲ್ಲಿಯೂ ಸಹ, ಥೈರಾಯ್ಡ್ ಹಾರ್ಮೋನ್‌ನಲ್ಲಿನ ವ್ಯತ್ಯಾಸವು ಮೊದಲ ತ್ರೈಮಾಸಿಕದಿಂದ ಮೂರನೇ ತ್ರೈಮಾಸಿಕದವರೆಗೂ ಹಲವು ರೀತಿಯ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರ ಪರಿಣಾಮವಾಗಿ ಹಠಾತ್ ಅಥವಾ ಸ್ವಾಭಾವಿಕ ಗರ್ಭಪಾತ, ಗರ್ಭಾಶಯದೊಳಗಿನ ಶಿಶು ಬೆಳವಣಿಗೆಯ ನಿರ್ಬಂಧ (IUGR), ಆಲಿಗೊಹೈಡ್ರಾಮ್ನಿಯೋಸ್ ಅಂದರೆ ಕಡಿಮೆ ಆಮ್ನಿಯೋಟಿಕ್ ದ್ರವ, ಅವಧಿಪೂರ್ವ ಹೆರಿಗೆ, ಗರ್ಭಾವಸ್ಥೆಯ ಮಧುಮೇಹ, ಜನನದ ಸಮಯದಲ್ಲಿ ಮಗು ಕಡಿಮೆ ತೂಕ ಹೊಂದಿರುವುದು ಅಥವಾ ಮಗುವಿನ ಅತಿಯಾದ ತೂಕ ಹಾಗೂ ಇನ್ನಿತರ ಪ್ರತಿಕೂಲ ಫಲಿತಾಂಶಗಳಿಗೆ ಕಾರಣವಾಗಬಹುದು.
ಇದನ್ನೂ ಓದಿ: ಥೈರಾಯಿಡ್ ಸಮಸ್ಯೆಯಿಂದ ಮಧುಮೇಹ ನಿಯಂತ್ರಣದವರೆಗೆ ಕೊತ್ತಂಬರಿ ಕಾಳಿನ 7 ಅದ್ಭುತ ಆರೋಗ್ಯ ಪ್ರಯೋಜನಗಳಿವು
ಮೇಲಾಗಿ ಪಿಟ್ಯುಟರಿಯಿಂದ ಬಿಡುಗಡೆಯಾಗುವ TSH ಹಾರ್ಮೋನ್ ಥೈರಾಯ್ಡ್ ಹಾರ್ಮೋನ್ ಅನ್ನು ಸ್ರವಿಸುವಂತೆ ಥೈರಾಯಿಡ್ ಗ್ರಂಥಿಯನ್ನು ಉತ್ತೇಜಿಸಿತ್ತದೆ. ಇದಲ್ಲದೆ TSH ಪ್ರೊಲ್ಯಾಕ್ಟಿನ್ ಹಾರ್ಮೋನ್ ಮೇಲೆಯೂ ಪರೋಕ್ಷ ನಿಯಂತ್ರಣವನ್ನು ಹೊಂದಿದೆ. ಪ್ರೊಲ್ಯಾಕ್ಟಿನ್ ಒಂದು ಪ್ರಮುಖ ಹಾರ್ಮೋನ್ ಆಗಿದ್ದು ಅದು ಗೊನಡೋಟ್ರೋಪಿನ್‌ಗಳು ಅಂದರೆ FSH ಮತ್ತು LH ಹಾರ್ಮೋನ್‌ಗಳ ನಿಯಂತ್ರಣದಲ್ಲಿ ಸಹಕಾರಿಯಾಗಿದೆ. ಋತುಚಕ್ರದ ಸುಗಮ ಮತ್ತು ನಿಯಮಿತ ಕಾರ್ಯನಿರ್ವಹಣೆ ಮತ್ತು ದೇಹದಲ್ಲಿನ ಹಾರ್ಮೋನ್ ಸಮತೋಲನವನ್ನು ನಿಯಂತ್ರಿಸಲು ಗೊನಡೋಟ್ರೋಪಿನ್‌ಗಳು ಅತ್ಯಗತ್ಯ. ಗೊನಡೋಟ್ರೋಪಿನ್‌ಗಳಲ್ಲಿ ಏರುಪೇರು ಕೆಲವು ಮಹಿಳೆಯರಲ್ಲಿ ಗರ್ಭಧಾರಣೆಯಲ್ಲಿ ತೊಂದರೆ ಉಂಟುಮಾಡಬಹುದು. ಇದರಿಂದ ಗರ್ಭ ಧರಿಸಲು ಸಾಧ್ಯವಾಗದೇ ಇರಬಹುದು.
ಇದನ್ನೂ ಓದಿ: World Thyroid Day 2023: ಹೆಚ್ಚುತ್ತಿರುವ ಥೈರಾಯಿಡ್ ಸಮಸ್ಯೆ; ರೋಗಲಕ್ಷಣಗಳು, ದಿನದ ಮಹತ್ವ, ಇತಿಹಾಸದ ಕುರಿತ ಮಾಹಿತಿ ಹೀಗಿದೆ
ಈ ಎಲ್ಲ ಮೇಲೆ ವಿವರಿಸಿದ ಕಾರಣಗಳಿಂದಾಗಿ ಮಹಿಳೆಯರಲ್ಲಿ ಥೈರಾಯಿಡ್ ಹಾರ್ಮೋನ್‌ನ ನಿಯಂತ್ರಣ ಅತ್ಯಾವಶ್ಯಕವಾಗಿದೆ. ಗರ್ಭಧಾರಣೆಯ ಅಪೇಕ್ಷೆ ಇರುವ ಮಹಿಳೆಯರಲ್ಲಿ 2.5mU/L ರಿಂದ 3.5mU/L ಪ್ರಮಾಣದಲ್ಲಿ TSH ನಿಯಂತಿಸುವುದು ಅನಿವಾರ್ಯವಾಗಿದೆ. ಇಂತಹ ಮಹಿಳೆಯರಲ್ಲಿ, ಕನಿಷ್ಠ ಪ್ರಮಾಣದಲ್ಲಿTSH ನಲ್ಲಿ ಸುಧಾರಣೆ ಹಾಗೂ ಥೈರಾಯಿಡ್ ಹಾರ್ಮೋನ್‌ನ ಹೆಚ್ಚಳವು, ಗರ್ಭಧಾರಣೆಯ ಸಂಭವ ಹಾಗೂ ಧನಾತ್ಮಕ ಗರ್ಭಧಾರಣೆಯ ಫಲಿತಾಂಶಗಳನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ.
ಲೇಖನ: ಡಾ ಸ್ನೇಹಾ ರಾಜೀವ್ , ಕನ್ಸಲ್ಟೆಂಟ್ - ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಮಣಿಪಾಲ ಆಸ್ಪತ್ರೆ ಯೆಶವಂತಪುರ
ವಿಭಾಗ