International Yoga Day: ಪ್ರತಿದಿನ ಪಶ್ಚಿಮೋತ್ತಾಸನ ಯೋಗ ಭಂಗಿ ಅಭ್ಯಾಸ ಮಾಡಿ, ಇದರಿಂದ ದೇಹಕ್ಕಾಗುವ ಅದ್ಭುತ ಪ್ರಯೋಜನ ತಿಳಿಯಿರಿ
ಯೋಗಾಸನದಲ್ಲಿ ಹಲವು ಭಂಗಿಗಳಿದ್ದು, ಎಲ್ಲಾ ಭಂಗಿಗಳು ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ. ಯೋಗಾಸನದಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಇಂದಿನ ಲೇಖನದಲ್ಲಿ ಪಶ್ಚಿಮೋತ್ತಾಸನ ಯೋಗ ಭಂಗಿ ಅಭ್ಯಾಸ ಮಾಡುವುದರಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ.

ಯೋಗ ಪದ್ಧತಿಯು ಸುಮಾರು 5000 ವರ್ಷಗಳ ಹಿಂದೆ ಭಾರತದಲ್ಲಿ ಹುಟ್ಟಿಕೊಂಡಿತು. ಸುಮಾರು 2000 ವರ್ಷಗಳಿಂದ ಯೋಗ ಪದ್ಧತಿಯನ್ನು ಅಭ್ಯಾಸ ಮಾಡಿಕೊಂಡು ಬರಲಾಗುತ್ತಿದೆ ಎಂದು ನಂಬಲಾಗಿದೆ. ಇದು ಹೆಚ್ಚು ತಾತ್ವಿಕ ಮತ್ತು ಆಧ್ಯಾತ್ಮಿಕ ಮಾರ್ಗ ಎಂದರೆ ತಪ್ಪಲ್ಲ. ನಮ್ಮ ನೆಲದಲ್ಲಿ ಹುಟ್ಟಿಕೊಂಡ ಈ ಪದ್ಧತಿಯನ್ನು ಇಂದು ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ಹಲವಾರು ಮಂದಿ ಅಭ್ಯಾಸ ಮಾಡುತ್ತಿದ್ದಾರೆ. ಇದಕ್ಕೆ ಹಾಲಿವುಡ್ ಸೆಲೆಬ್ರಿಟಿಗಳು ಕೂಡ ಹೊರತಾಗಿಲ್ಲ. ವಿಶ್ವಸಂಸ್ಥೆಯು ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಿದೆ. ಯೋಗದ ಮಹತ್ವ ಸಾರುವ ಉದ್ದೇಶದಿಂದ ಪ್ರತಿ ವರ್ಷ ವಿಶ್ವದಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ.
ಇತರ ವ್ಯಾಯಾಮಗಳಿಗಿಂತ ಯೋಗಾಸನವು ಬಹಳ ಪರಿಣಾಮಕಾರಿಯಾಗಿದೆ. ಯೋಗವು ದೇಹ ಮತ್ತು ಆತ್ಮವನ್ನು ಒಟ್ಟುಗೂಡಿಸುತ್ತದೆ. ಯೋಗಾಸನವನ್ನು ಮಾಡುವುದರಿಂದ ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯಕ್ಕೆ ಪ್ರಯೋಜನಗಳಿವೆ. ಯೋಗಾಸನದಲ್ಲಿ ಹಲವು ಭಂಗಿಗಳಿವೆ. ಪ್ರತಿಯೊಂದು ಭಂಗಿಯು ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ. ಈ ಯೋಗ ಭಂಗಿಗಳಲ್ಲಿ ಪಶ್ಚಿಮೋತ್ತಾಸನವೂ ಒಂದು.
ಪಶ್ಚಿಮೋತ್ತಾನಾಸನ ಎಂಬ ಪದವನ್ನು ಮೂಲತಃ ಸಂಸ್ಕೃತ ಭಾಷೆಯಿಂದ ಪಡೆಯಲಾಗಿದೆ. ಇಂಗ್ಲಿಷ್ ಭಾಷೆಯಲ್ಲಿ ಇದನ್ನು ಸೀಟೆಡ್ ಫಾರ್ವರ್ಡ್ ಬೆಂಡ್ ಪೋಸ್ ಎಂದು ಕರೆಯಲಾಗುತ್ತದೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ವಿವಿಧ ಅಸ್ವಸ್ಥತೆಗಳಿಂದ ಬಳಲುತ್ತಿರುವವರಿಗೆ ಈ ಆಸನ ಪರಿಣಾಮಕಾರಿಯಾಗಿದೆ. ಪಶ್ಚಿಮೋತ್ತಾನಾಸನದ ಪ್ರಯೋಜನಗಳನ್ನು ಪಡೆಯಲು, ಈ ಆಸನವನ್ನು ಮುಂಜಾನೆ ಅಭ್ಯಾಸ ಮಾಡಬೇಕು.
ಈ ಭಂಗಿಯನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ನಿಮ್ಮ ಬೆನ್ನು, ಕಾಲುಗಳು ಮತ್ತು ಬೆನ್ನುಮೂಳೆಯನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ. ನೀವು ಪ್ರಾರಂಭಿಕರಾಗಿದ್ದರೆ, ಈ ಭಂಗಿಯನ್ನು ಅಭ್ಯಾಸ ಮಾಡಲು ತುಸು ಕಷ್ಟವಾಗಬಹುದು. ಆದರೆ, ಪ್ರತಿದಿನ ಅಭ್ಯಾಸ ಮಾಡುವುದರಿಂದ ಬೆನ್ನಿಗೆ ಪ್ರಯೋಜನಕಾರಿಯಾಗಿದೆ.
ಪಶ್ಚಿಮೋತ್ತಾಸನ ಮಾಡುವ ವಿಧಾನ
- ಮೊದಲಿಗೆ ಯೋಗ ಚಾಪೆಯ ಮೇಲೆ ನೇರವಾಗಿ ಕುಳಿತುಕೊಂಡು ನಿಮ್ಮ ಕಾಲುಗಳನ್ನು ಮುಂದಕ್ಕೆ ಚಾಚಿ. ನಿಮ್ಮ ಕೈಗಳನ್ನು ತೊಡೆಯ ಮೇಲಿರಿಸಿ
- ನಂತರ ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಎರಡೂ ಕೈಗಳನ್ನು ನೇರವಾಗಿ ತಲೆಯ ಮೇಲಕ್ಕೆ ಎತ್ತಿ.
- ಉಸಿರನ್ನು ಹೊರ ಹಾಕುತ್ತಾ ನಿಧಾನವಾಗಿ ಮುಂದಕ್ಕೆ ಬಾಗಿ (ಮೊಣಕಾಲಿನ ಕಡೆಗೆ ಬಾಗಿ). ಕಾಲಿನ ಹೆಬ್ಬೆರಳನ್ನು ಕೈ ಬೆರಳುಗಳಿಂದ ಹಿಡಿದುಕೊಂಡು ಹಣೆಯನ್ನು ಮೊಣಕಾಲಿಗೆ ತಾಗಿಸಲು ಪ್ರಯತ್ನಿಸಿ. ಈ ವೇಳೆ ಮೊಣಕಾಲು ನೇರವಾಗಿರಬೇಕು ಎಂಬುದನ್ನು ಮರೆಯದಿರಿ.
- ಇದೇ ಸ್ಥಿತಿಯಲ್ಲಿ ನಾಲ್ಕೈದು ಬಾರಿ ಉಸಿರಾಡಿ, ನಂತರ ಉಸಿರನ್ನು ತೆಗೆದುಕೊಳ್ಳುತ್ತಾ, ನಿಧಾನವಾಗಿ ಮೇಲಕ್ಕೆ ಬನ್ನಿ.
- ನಂತರ ಉಸಿರನ್ನು ಹೊರಹಾಕುತ್ತಾ ನಿಧಾನವಾಗಿ ಕೈಗಳನ್ನು ಕೆಳಗೆ ಇಳಿಸಿ, ವಿಶ್ರಾಂತಿ ತೆಗೆದುಕೊಳ್ಳಿ.
ಪಶ್ಚಿಮೋತ್ತನಾಸನ ಭಂಗಿಯ ಪ್ರಯೋಜನಗಳು
- ತೀವ್ರ ರಕ್ತದೊತ್ತಡ
- ಬೊಜ್ಜು
- ಅಜೀರ್ಣ
- ಋತುಚಕ್ರದ ಸಮಸ್ಯೆಗಳು
- ಕಡಿಮೆ ತೂಕ
- ಸ್ನಾಯುಗಳ ಸಮಸ್ಯೆ
- ಖಿನ್ನತೆ
- ನಿದ್ರಾಹೀನತೆ
ಇತರ ಪ್ರಯೋಜನಗಳು
- ಈ ಆಸನವನ್ನು ಮಾಡುವುದರಿಂದ ನಿಮ್ಮ ಭುಜಗಳು ಹಾಗೂ ಬೆನ್ನಿನ ಸ್ನಾಯುಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ.
- ಇದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಉತ್ತಮ. ಮಾನಸಿಕ ಮತ್ತು ದೈಹಿಕ ಒತ್ತಡವನ್ನು ನಿವಾರಿಸುತ್ತದೆ. ನಿಮ್ಮ ಮನಸ್ಸು ಮತ್ತು ದೇಹವನ್ನು ವಿಶ್ರಾಂತಿ ಮಾಡಲು ಈ ಭಂಗಿ ಸಹಾಯ ಮಾಡುತ್ತದೆ.
- ನಕಾರಾತ್ಮಕ ಆಲೋಚನೆಗಳು ಮತ್ತು ಚಿಂತನೆಗಳನ್ನು ತೊಡೆದುಹಾಕುತ್ತದೆ. ಪಶ್ಚಿಮೋತ್ತಾನಾಸನದ ನಿಯಮಿತ ಅಭ್ಯಾಸವು ಇಡೀ ದೇಹಕ್ಕೆ ರಕ್ತದ ಸುಗಮ ಹರಿವನ್ನು ಉತ್ತೇಜಿಸುತ್ತದೆ.
- ನಿಮ್ಮ ಮೆದುಳು ಮತ್ತು ನರಮಂಡಲದ ಮೇಲೆ ಪರಿಣಾಮ ಬೀರುವುದರಿಂದ, ಇದು ನಿಮ್ಮ ನರಮಂಡಲವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ, ನಿಮ್ಮ ಕೇಂದ್ರ ನರಮಂಡಲವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
- ಮಹಿಳೆಯರು ಮುಟ್ಟಿನ ಸಂದರ್ಭದಲ್ಲಿ ಸೆಳೆತ, ನೋವಿನಿಂದ ಬಳಲುತ್ತಿದ್ದರೆ ಅಂಥವರು ಈ ಆಸನವನ್ನು ಅಭ್ಯಾಸ ಮಾಡಬಹುದು. ಮುಟ್ಟಿನ ಸಂದರ್ಭದಲ್ಲಿ ಉಂಟಾಗುವ ಹೊಟ್ಟೆ ನೋವು ಮುಂತಾದ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುವ ಬದಲು ಈ ಆಸನವನ್ನು ಅಭ್ಯಾಸ ಮಾಡಬಹುದು. ಪ್ರತಿದಿನ ಈ ಭಂಗಿಯನ್ನು ಅಭ್ಯಾಸ ಮಾಡುವುದರಿಂಜ ನೋವು ನಿವಾರಿಸಲು ಸಹಾಯ ಮಾಡುತ್ತದೆ.
- ಇದು ನಿಮ್ಮ ಹಸಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕೊಬ್ಬು ಹಾಗೂ ಕ್ಯಾಲೊರಿಗಳನ್ನು ಬರ್ನ್ ಮಾಡುವಲ್ಲಿ ಈ ಆಸನ ಪ್ರಯೋಜನಕಾರಿ. ತೂಕನಷ್ಟಕ್ಕೆ ಪ್ರಯತ್ನಿಸುತ್ತಿರುವವರು ಈ ಭಂಗಿಯನ್ನು ಅಭ್ಯಾಸ ಮಾಡಬಹುದು.
- ಬಂಜೆತನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಈ ಆಸನ ಪ್ರಯೋಜನಕಾರಿ. ಶ್ರೋಣಿಯ ಕುಹರಕ್ಕೆ ಹೆಚ್ಚಿದ ರಕ್ತದ ಹರಿವಿನಿಂದಾಗಿ ಇದು ಬಂಜೆತನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಈ ಯೋಗಾಸನವು ಅಂಡಾಶಯ, ಗರ್ಭಕೋಶ, ಮೂತ್ರಪಿಂಡಗಳು ಮತ್ತು ಯಕೃತ್ತಿಗೆ ಪ್ರಯೋಜನಕಾರಿಯಾಗಿದೆ.
- ನಿದ್ರಾಹೀನತೆಯಿಂದ ಬಳಲುತ್ತಿರುವವರು ಸಹ ಈ ಆಸನವನ್ನು ಅಭ್ಯಾಸ ಮಾಡಬಹುದು. ಪ್ರತಿದಿನ ಈ ಭಂಗಿಯನ್ನು ಮಾಡುವುದರಿಂದ ನಿದ್ದೆಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಶಾಂತಿಯುತ ನಿದ್ದೆಯನ್ನು ಪಡೆಯಲು ಸಹಾಯ ಮಾಡುತ್ತದೆ.
ಯಾವುದೇ ಯೋಗಾಸನವನ್ನು ಪ್ರಯತ್ನಿಸುವಾಗ ನೀವು ಪೂರ್ವಸಿದ್ಧತೆ ಮತ್ತು ಭಂಗಿಯ ವಿರೋಧಾಭಾಸವನ್ನು ತಿಳಿದಿರಬೇಕು. ಸೂಕ್ತ ಮಾರ್ಗದರ್ಶನದೊಂದಿಗೆ ಕಠಿಣ ಯೋಗಭಂಗಿಗಳನ್ನು ಅಭ್ಯಾಸ ಮಾಡುವುದು ಸೂಕ್ತ.
