ಶಿವಮೊಗ್ಗದಲ್ಲಿ ಝೀಕಾಗೆ 74 ವರ್ಷದ ವ್ಯಕ್ತಿ ಬಲಿ; ವಯಸ್ಸಾದವರಿಗೆ ಈ ವೈರಸ್ ಅಪಾಯವೇ, ಸೋಂಕಿನಿಂದ ರಕ್ಷಿಸಿಕೊಳ್ಳುವುದು ಹೇಗೆ? ಮಾಹಿತಿ
ಡೆಂಗ್ಯೂ ಪ್ರಕರಣಗಳು ಕೊಂಚ ತಗ್ಗಿದ ಬೆನ್ನಲ್ಲೇ ರಾಜ್ಯದಲ್ಲಿ ಝೀಕಾ ವೈರಸ್ ಹಾವಳಿ ಶುರುವಾಗಿದೆ. ಈಗಾಗಲೇ 9ಕ್ಕೂ ಹೆಚ್ಚು ಝೀಕಾ ಪ್ರಕರಣಗಳು ಪತ್ತೆಯಾಗಿದ್ದು, ಶಿವಮೊಗ್ಗದಲ್ಲಿ 74 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಹಾಗಾದರೆ ಝೀಕಾ ವೈರಸ್ ವಯಸ್ಸಾದವರಿಗೆ ಅಪಾಯವೇ, ಸೋಂಕು ತಗುಲದಂತೆ ಹಿರಿಯರನ್ನು ರಕ್ಷಿಸಿಕೊಳ್ಳುವುದು ಹೇಗೆ ನೋಡಿ.
ಕಳೆದ ಕೆಲವು ವರ್ಷಗಳಿಂದ ಝೀಕಾ ವೈರಸ್ ಸದ್ದು ಜೋರಾಗಿದೆ. ಕಳೆದ ವರ್ಷ ಕೂಡ ಭಾರತದಲ್ಲಿ ಕಾಣಿಸಿದ್ದ ಝೀಕಾ ವೈರಸ್ ಹಾವಳಿ ಈ ವರ್ಷ ಕರ್ನಾಟಕದಲ್ಲೂ ಜೋರಾಗಿದೆ. ಝೀಕಾ ವೈರಸ್ ಹರಡುವ ಭೀತಿಯ ನಡುವೆ ಶಿವಮೊಗ್ಗದಲ್ಲಿ 74 ವರ್ಷದ ವ್ಯಕ್ತಿಯೊಬ್ಬರು ಝೀಕಾ ಸೋಂಕಿಗೆ ಬಲಿಯಾಗಿದ್ದಾರೆ. ಹಾಗಾದರೆ ವಯಸ್ಸಾದವರಿಗೆ ಝೀಕಾ ಅಪಾಯವೇ, ಹಿರಿಯರಿಗೆ ಸೋಂಕಿನ ಅಪಾಯ ತಾಕದಂತೆ ರಕ್ಷಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಝೀಕಾ ವೈರಸ್ ಎನ್ನುವುದು ಸೊಳ್ಳೆಯಿಂದ ಹರಡುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಝೀಕಾ ವೈರಸ್ ಪ್ರಾಥಮಿಕವಾಗಿ ಈಡಿಸ್ ಸೊಳ್ಳೆಗಳಿಂದ ಹರಡುತ್ತದೆ. ಈ ಸೊಳ್ಳೆ ಹಗಲಿನಲ್ಲಿ ವೇಳೆ ಹೆಚ್ಚು ಕಚ್ಚುತ್ತದೆ. ಇದರ ರೋಗಲಕ್ಷಣಗಳು ಸೌಮ್ಯವಾಗಿರುತ್ತದೆ. ಈ ರೋಗವು ಗರ್ಭಿಣಿಯರು, ಮಕ್ಕಳು ಹಾಗೂ ವಯಸ್ಸಾದವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಝೀಕಾದಿಂದ ವಯಸ್ಸಾದವರನ್ನು ರಕ್ಷಿಸಿಕೊಳ್ಳಲು ಏನೆಲ್ಲಾ ಮಾಡಬಹುದು ಎಂಬುದನ್ನು ನೋಡಿ.
ಝೀಕಾ ಸೋಂಕಿನ ಅಪಾಯದ ಅಂಶಗಳು
ಝೀಕಾ ವೈರಸ್ ಹರಡಲು ಸೊಳ್ಳೆಗಳು ಕಾರಣವಾಗಿರುವುದರಿಂದ ಸೋಂಕಿತ ಪ್ರದೇಶಗಳಿಗೆ ವಯಸ್ಸಾದವರು ಹೋಗದೇ ಇರುವುದು ಉತ್ತಮ. ಸಾಮಾನ್ಯವಾಗಿ ಝೀಕಾ ಸೋಂಕು ಆರಂಭದಲ್ಲಿ ಯಾವುದೇ ರೋಗಲಕ್ಷಣಗಳನ್ನು ತೋರ್ಪಡಿಸುವುದಿಲ್ಲ. ಆದರೆ ವಯಸ್ಸಾದವರಲ್ಲಿ ಜ್ವರ, ಮೈಕೈ ನೋವು, ದದ್ದು, ಕಣ್ಣುಗಳು ಕೆಂಪಾಗುವುದು ಇಂತಹ ಸಮಸ್ಯೆಗಳು ಕಾಣಿಸಬಹುದು.
ವಯಸ್ಸಾದ ರೋಗಿಗಳ ಮೇಲೆ ವೈರಸ್ ಹೇಗೆ ಪರಿಣಾಮ ಬೀರುತ್ತದೆ?
ಎಲ್ಲಾ ಆರೋಗ್ಯ ಸಮಸ್ಯೆಗಳಂತೆ ಝೀಕಾ ವೈರಸ್ ಕೂಡ ವಯಸ್ಸಾದವರಿಗೆ ತುಂಬಾ ಅಪಾಯಕಾರಿ. ಯಾಕೆಂದರೆ ವಯಸ್ಸಾದವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಇದರಿಂದ ಸೋಂಕಿನ ವಿರುದ್ಧ ಹೋರಾಡಲು ಕಷ್ಟವಾಗುತ್ತದೆ.
ವಯಸ್ಸಾದವರು ಸಾಮಾನ್ಯವಾಗಿ ಅನೇಕ ಸೋಂಕುಗಳಿಗೆ ಹೆಚ್ಚು ಒಳಗಾಗುತ್ತಾರೆ. ಅಲ್ಲದೇ ತೀವ್ರವಾದ ರೋಗಲಕ್ಷಣಗಳನ್ನು ಅನುಭವಿಸುವ ಸಾಧ್ಯತೆಯಿದೆ. ಆದಾಗ್ಯೂ, ಝೀಕಾ ಪ್ರಕರಣದಲ್ಲಿ ವಯಸ್ಸಾದವರು ಸಾವಿಗೀಡಾಗಿರುವ ಪ್ರಮಾಣ ಕಡಿಮೆ ಅಂತಲೇ ಹೇಳಬಹುದು. ಆದರೆ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಸೋಂಕಿಗೆ ಒಳಗಾದಾಗ ಇದರ ಪರಿಣಾಮ ವ್ಯತಿರಿಕ್ತವಾಗಬಹುದು ಎಂದು ಹೇಳಲಾಗುತ್ತಿದೆ.
ತಡೆಗಟ್ಟುವ ವಿಧಾನ ಮತ್ತು ಚಿಕಿತ್ಸೆ
ʼಝೀಕಾ ವೈರಸ್‌ಗೆ ಯಾವುದೇ ನಿರ್ಣಾಯಕ ಚಿಕಿತ್ಸೆ ಇಲ್ಲದಿದ್ದರೂ ಸಹ, ಝೀಕಾ ವೈರಸ್ ಲಕ್ಷಣಗಳು ಕಾಣಿಸಿಕೊಂಡ ಹಿರಿಯರು ತಕ್ಷಣಕ್ಕೆ ವೈದ್ಯರ ಬಳಿ ಪರೀಕ್ಷೆ ಮಾಡಿಸಬೇಕು. ಇದರಿಂದ ರೋಗ ಹರಡುವಿಕೆ ಪ್ರಮಾಣವನ್ನು ಕಡಿಮೆ ಮಾಡುವ ಜೊತೆಗೆ ಸಾವಿನ ಸಾಧ್ಯತೆಯನ್ನ ತಳ್ಳಿ ಹಾಕಬಹುದು.
ಝೀಕಾ ವೈರಸ್‌ಗಾಗಿ ಈವರೆಗೆ ಯಾವುದೇ ಲಸಿಕ ಅಥವಾ ಇತರ ಔಷಧಿಗಳನ್ನು ಕಂಡು ಹಿಡಿಯದೇ ಇರುವ ಕಾರಣ ಇದನ್ನು ತಡೆಗಟ್ಟುವ ಮಾರ್ಗಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳುವುದು ಬಹಳ ಮುಖ್ಯ.
ವಯಸ್ಸಾದವರು ಝೀಕಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಅನುಸರಿಸಬೇಕಾದ ಕ್ರಮಗಳು:
* ಸೊಳ್ಳೆ ನಿವಾರಕಗಳನ್ನು ಬಳಸುವುದು, ಮನೆಯ ಸುತ್ತಮುತ್ತ ಸೊಳ್ಳೆಗಳು ಬಾರದಂತೆ ಸುತ್ತಲಿನ ಪ್ರದೇಶಗಳನ್ನು ಸ್ವಚ್ಛ ಮಾಡುವುದು.
* ಯಾವಾಗಲೂ ತುಂಬು ತೋಳಿನ ಶರ್ಟ್ ಹಾಗೂ ಪ್ಯಾಂಟ್ ಧರಿಸುವುದು.
* ಯಾವಾಗಲೂ ಕಿಟಿಕಿ ಬಾಗಿಲುಗಳನ್ನು ಮುಚ್ಚಿಡಿ. ಹಿರಿಯರು ಇರುವ ಕೊಠಡಿಯನ್ನು ಆಗಾಗ ಸ್ವಚ್ಛ ಮಾಡುತ್ತಿರಿ. ಸೊಳ್ಳೆ ಪರದೆ ಬಳಸುವುದು ಉತ್ತಮ.
* ಮನೆಯ ಸುತ್ತಲೂ ನೀರು ನಿಲ್ಲುವುದನ್ನು ತಪ್ಪಿಸಿ, ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗುವ ಪ್ರಮಾಣ ಏರಿಕೆಯಾಗುತ್ತದೆ.
* ಲೈಂಗಿಕ ಸಂಪರ್ಕದ ಮೂಲಕ ಝೀಕಾ ಹರಡುವ ಸಾಧ್ಯತೆ ಇದೆ. ಹಾಗಾಗಿ ವೈರಸ್ ಸೋಂಕಿಗೆ ಒಳಗಾದ ಪುರುಷರು ಕಾಂಡೋಮ್ ಬಳಕೆಸುವುದರಿಂದ ಝೀಕಾ ಹರಡುವುದನ್ನು ತಪ್ಪಿಸಬಹುದು.
ವಯಸ್ಸಾದವರಲ್ಲಿ ಝೀಕಾದ ಯಾವುದೇ ಒಂದು ರೋಗಲಕ್ಷಣ ಕಾಣಿಸಿದರೂ ತಕ್ಷಣವೇ ವೈದ್ಯರ ಸಲಹೆ ಪಡೆದು, ಚಿಕಿತ್ಸೆ ನೀಡಲು ಗಮನ ಕೊಡಿ.
ವಿಭಾಗ