Zika Virus: ಗರ್ಭಿಣಿಯರ ಮೇಲೆ ಗಂಭೀರ ಪರಿಣಾಮ ಬೀರಬಹುದು ಝೀಕಾ, ಮುನ್ನೆಚ್ಚರಿಕೆ ಮರೆತರೆ ಮಗುವಿಗೆ ಅಪಾಯ ನೆನಪಿರಲಿ
ಕರ್ನಾಟಕದಲ್ಲಿ ಈಗ ಝೀಕಾ ವೈರಸ್‌ನದ್ದೇ ಸದ್ದು. ಶಿವಮೊಗ್ಗದಲ್ಲಿ 74 ವರ್ಷದ ವ್ಯಕ್ತಿ ಝೀಕಾಗೆ ಬಲಿಯಾಗಿದ್ದಾರೆ. ಈ ನಡುವೆ ಗರ್ಭಿಣಿಯರಿಗೆ ಝೀಕಾ ಅಪಾಯ ಎಂಬ ಮಾತು ಕೇಳಿ ಬರುತ್ತಿದೆ. ಹಾಗಾದರೆ ಈ ವೈರಸ್ ಗರ್ಭಿಣಿಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಾ, ಇದರಿಂದ ಮಗುವಿಗೆ ಏನೆಲ್ಲಾ ಸಮಸ್ಯೆ ಆಗುತ್ತೆ ಎಂಬಿತ್ಯಾದಿ ವಿವರ ಇಲ್ಲಿದೆ.
ಇತ್ತೀಚಿನ ವರ್ಷಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಪ್ರಮಾಣ ಹೆಚ್ಚುತ್ತಿದೆ. ಕೊರೊನಾ ಸದ್ದು ತಣ್ಣದಾಗ ಬೆನ್ನಲ್ಲೇ ಇದೀಗ ಝೀಕಾ, ಮಂಕಿಫಾಕ್ಸ್‌ನಂತಹ ಸಾಂಕ್ರಾಮಿಕ ಸೋಂಕು ಹರಡುವ ಭೀತಿ ಹೆಚ್ಚಾಗಿದೆ. ಕರ್ನಾಟಕದಲ್ಲಿ ಝೀಕಾ ಸೋಂಕಿನ ಪ್ರಕರಣದಲ್ಲಿ ಏರಿಕೆಯಾಗುತ್ತಿದ್ದು, ಈ ವೈರಸ್‌ನಿಂದಾಗಿ 74 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ನಡುವೆ ಗರ್ಭಿಣಿಯರ ಮೇಲೆ ಝೀಕಾ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಗರ್ಭಿಣಿಯರಿಗೆ ಝೀಕಾ ಅಪಾಯವೇ, ಇದರಿಂದ ಹೊಟ್ಟೆಯಲ್ಲಿರುವ ಮಗುವಿಗೂ ತೊಂದರೆಯಾಗುವುದೇ, ಗರ್ಭಿಣಿಯರು ಹೇಗೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು ಎಂಬ ವಿವರ ಇಲ್ಲಿದೆ.
ಗರ್ಭಿಣಿಯರ ಮೇಲೆ ಝೀಕಾ ಪರಿಣಾಮ
ಝೀಕಾ ವೈರಸ್ ಗರ್ಭಾವಸ್ಥೆಯಲ್ಲಿ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಝೀಕಾ ವೈರಸ್ ಸೋಂಕಿಗೆ ಒಳಗಾದ ಗರ್ಭಿಣಿಯರ ಮೂಲಕ ಅದು ಹೊಟ್ಟೆಯಲ್ಲಿರುವ ಮಗುವಿಗೂ ರವಾನೆಯಾಗಬಹುದು. ಗರ್ಭಾವಸ್ಥೆಯಲ್ಲಿ ಝೀಕಾ ಸೋಂಕು ತಗುಲಿದರೆ ಮೈಕ್ರೊಸೆಫಾಲಿ ಎಂಬ ಜನ್ಮದೋಷ ಮತ್ತು ಇತರ ಮೆದುಳಿನ ಸಮಸ್ಯೆಗಳು ಉಂಟಾಗಬಹುದು. ಇದರಿಂದ ಆ ಮಗುವಿನಲ್ಲಿ ಇತರ ಗಂಭೀರ ಸಮಸ್ಯೆಗಳಿಗೂ ಕಾರಣವಾಗಬಹುದು.
ಝೀಕಾ ಹರಡುವ ಬಗೆ
ಝೀಕಾ ವೈರಸ್ ಸಾಮಾನ್ಯವಾಗಿ ಸೊಳ್ಳೆಯಿಂದ ಹರಡುತ್ತದೆ. ಸೋಂಕಿತ ವ್ಯಕ್ತಿಗೆ ಕಚ್ಚಿದ ಸೊಳ್ಳೆಯು ಬೇರೆಯವರಿಗೆ ಕಚ್ಚುವುದರಿಂದ ಸೋಂಕು ಹರಡುತ್ತದೆ. ಇದರೊಂದಿಗೆ ಗರ್ಭಾವಸ್ಥೆ ಹಾಗೂ ಹೆರಿಗೆಯ ಸಮಯದಲ್ಲಿ ತಾಯಿಯಿಂದ ಮಗುವಿಗೆ ಹರಡುವ ಸಾಧ್ಯತೆ ಹೆಚ್ಚು. ಸೋಂಕಿತ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕ ನಡೆಸುವುದರಿಂದ ಕೂಡ ಝೀಕಾ ಸೋಂಕು ಹರಡುತ್ತದೆ. ವೀರ್ಯ ಸೇರಿದಂತೆ ಸೋಂಕಿತ ರಕ್ತ ಮತ್ತು ದೇಹದ ಅಂಗಾಂಶಗಳ ಮೂಲಕವೂ ಝೀಕಾ ಸೋಂಕು ಇತರರಿಗೆ ತಗುಲಬಹುದು. ಝೀಕಾ ಸೋಂಕು ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆಗಿಂತ ಮದ್ದಿಲ್ಲ. ಯಾಕೆಂದರೆ ಈ ವೈರಸ್‌ಗೆ ಇಲ್ಲಿ ತನಕ ಯಾವುದೇ ಲಸಿಕೆಯನ್ನು ಕಂಡುಹಿಡಿದಿಲ್ಲ.
ಗರ್ಭಾವಸ್ಥೆಯಲ್ಲಿ ಹೊಟ್ಟೆಯಲ್ಲಿರುವ ಮಗುವಿನ ಮೇಲೆ ವೈರಸ್‌ನ ಪರಿಣಾಮ
ಗರ್ಭಾವಸ್ಥೆಯಲ್ಲಿ ಝೀಕಾ ಸೋಂಕು ತಗುಲಿದರೆ ಮೈಕ್ರೊಸೆಫಾಲಿ ಮತ್ತು ಇತರ ತೀವ್ರವಾದ ಮೆದುಳಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಮೈಕ್ರೊಸೆಫಾಲಿ ಎಂದರೆ ಒಂದೇ ಲಿಂಗ ಮತ್ತು ವಯಸ್ಸಿನ ಶಿಶುಗಳಿಗೆ ಹೋಲಿಸಿದರೆ ಮಗುವಿನ ತಲೆಯು ನಿರೀಕ್ಷೆಗಿಂತ ಚಿಕ್ಕದಾಗಿರುತ್ತದೆ. ಮೈಕ್ರೊಸೆಫಾಲಿ ಹೊಂದಿರುವ ಶಿಶುಗಳು ಸಾಮಾನ್ಯವಾಗಿ ಸಣ್ಣ ಮಿದುಳುಗಳನ್ನು ಹೊಂದಿದ್ದು, ಅದು ಸರಿಯಾಗಿ ಬೆಳವಣಿಗೆಯಾಗುವುದಿಲ್ಲ. ಹಾಗಂತ ತಾಯಿಗೆ ಝೀಕಾ ಸೋಂಕು ತಗುಲಿರುವ ಪ್ರತಿ ಮಗುವೂ ಮೈಕ್ರೊಸೆಫಾಲಿಯೊಂದಿಗೆ ಜನಿಸುವುದಿಲ್ಲ. ಈ ಬಗ್ಗೆ ಈಗಷ್ಟೇ ಹೆಚ್ಚಿನ ಅಧ್ಯಯನಗಳು ನಡೆಯುತ್ತಿವೆ.
ಗರ್ಭಾವಸ್ಥೆಯಲ್ಲಿ ಝೀಕಾ ತಗಲುವುದರಿಂದ ಉಂಟಾಗುವ ಇತರ ಸಮಸ್ಯೆಗಳು:
* ಗರ್ಭಾಶಯದಲ್ಲಿ ಮಗುವಿನ ಬೆಳವಣಿಗೆಯ ತೊಂದರೆಗಳು
* ಗರ್ಭಪಾತ ಉಂಟಾಗುವ ಸಾಧ್ಯತೆಯೂ ಇದೆ.
* ಗರ್ಭಾವಸ್ಥೆಯ ನಂತರದ 20 ವಾರಗಳಲ್ಲಿ ಝೀಕಾದಿಂದ ಹೊಟ್ಟೆಯಲ್ಲಿರುವ ಮಗು ಮರಣ ಹೊಂದುವ ಸಾಧ್ಯತೆಯೂ ಇದೆ.
ನಿಮ್ಮ ಮಗು ಜನ್ಮಜಾತ ಝಿಕಾ ಸಿಂಡ್ರೋಮ್‌ನೊಂದಿಗೆ ಜನಿಸಿದರೆ, ಅಂತಹ ಮಗುವಿಗೆ ವಿಶೇಷ ಕಾಳಜಿ ಹಾಗೂ ಪರೀಕ್ಷೆಗಳನ್ನು ಮಾಡಿಸಬೇಕಾಗಬಹುದು.
ಗರ್ಭಿಣಿಯರೆಲ್ಲರೂ ಝೀಕಾ ಪರೀಕ್ಷೆಗೆ ಒಳಗಾಗಬೇಕೇ?
ಎಲ್ಲಾ ಗರ್ಭಿಣಿ ಮಹಿಳೆಯರಿಗೆ ಝಿಕಾ ಪರೀಕ್ಷೆಯನ್ನು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ವ್ಯಾಖ್ಯಾನದ ಕೇಂದ್ರ (ಸಿಡಿಸಿ) ಶಿಫಾರಸು ಮಾಡುವುದಿಲ್ಲ. ನೀವು ಗರ್ಭಿಣಿಯಾಗಿದ್ದರೆ, ಗರ್ಭಾವಸ್ಥೆಯ ಮೊದಲು ಅಥವಾ ಸಮಯದಲ್ಲಿ ಝೀಕಾ ಸೋಂಕು ತಲುಗಿದ್ದರೆ ನೀವು ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರು ನಿಮ್ಮ ರಕ್ತ ಹಾಗೂ ಮೂತ್ರ ಪರೀಕ್ಷೆ ನಡೆಸಬಹುದು. ನೀವು ಝೀಕಾ ಹೊಂದಿದ್ದರೆ, ಮೈಕ್ರೊಸೆಫಾಲಿ ಅಥವಾ ಇತರ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ನಿಮ್ಮ ಮಗುವನ್ನು ಪರೀಕ್ಷಿಸಲು ನೀವು ಗರ್ಭಾವಸ್ಥೆಯ ಉದ್ದಕ್ಕೂ ಒಂದಕ್ಕಿಂತ ಹೆಚ್ಚು ಅಲ್ಟ್ರಾಸೌಂಡ್ ಅನ್ನು ಪಡೆಯಬಹುದು. ಅಲ್ಟ್ರಾಸೌಂಡ್ ಎನ್ನುವುದು ಪ್ರಸವಪೂರ್ವ ಪರೀಕ್ಷೆಯಾಗಿದ್ದು ಅದು ಧ್ವನಿ ತರಂಗಗಳು ಮತ್ತು ಗರ್ಭಾಶಯದೊಳಗೆ ನಿಮ್ಮ ಮಗುವಿನ ಚಿತ್ರವನ್ನು ತೋರಿಸಲು ಕಂಪ್ಯೂಟರ್ ಪರದೆಯನ್ನು ಬಳಸುತ್ತದೆ. ಗರ್ಭಾಶಯದಲ್ಲಿ ನಿಮ್ಮ ಮಗುವನ್ನು ಸುತ್ತುವರೆದಿರುವ ಆಮ್ನಿಯೋಟಿಕ್ ದ್ರವದಲ್ಲಿ ಝೀಕಾ ವೈರಸ್ ಅನ್ನು ಪರೀಕ್ಷಿಸಲು ನೀವು ಆಮ್ನಿಯೊಸೆಂಟೆಸಿಸ್ (ಆಮ್ನಿಯೊ ಎಂದೂ ಕರೆಯುತ್ತಾರೆ) ಎಂಬ ಪ್ರಸವಪೂರ್ವ ಪರೀಕ್ಷೆಯನ್ನು ಸಹ ಪಡೆಯಬಹುದು ಎಂದು ಸಿಡಿಸಿ (ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆಂಷನ್ ಡಿಫಿನೇಷನ್ ವ್ಯಾಖ್ಯಾನಿಸುತ್ತದೆ.
ಝೀಕಾ ವೈರಸ್ ಸೋಂಕು ತಡೆಗಟ್ಟುವ ಮಾರ್ಗಗಳು
ಝೀಕಾ ವೈರಸ್ ಬಗ್ಗೆ ಗಾಬರಿಯಾಗುವ ಅಗತ್ಯವಿಲ್ಲ, ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಮೂಲಕ ಸೋಂಕು ಹರಡುವುದನ್ನ ತಡೆಯಬಹುದು. ಈ ಮೇಲಿನ ರೋಗ ಲಕ್ಷಣಗಳು ಕಾಣಿಸಿದ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ತಡ ಮಾಡಿದರೆ ತೊಂದರೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ಸೋಂಕು ಕಾಣಿಸಿದರೆ ಯಾವುದೇ ಸ್ವಯಂ ಚಿಕಿತ್ಸೆ ಮಾಡದೇ ವೈದ್ಯರ ಬಳಿ ತೋರಿಸುವುದು ಉತ್ತಮ.
ಮಾಡಬೇಕಾದ ಹಾಗೂ ಮಾಡಬಾರದ ವಿಚಾರಗಳು
ವೈರಸ್ ಸೋಂಕಿಗೆ ಒಳಗಾದ ಜನರು ಮನೆಯೊಳಗೆ ಇರಬೇಕು, ಸಾಧ್ಯವಾದಷ್ಟು ವಿಶ್ರಾಂತಿ ಮತ್ತು ಸಾಕಷ್ಟು ದ್ರವಾಹಾರ ಸೇವಿಸಬೇಕು. ಗರ್ಭಿಣಿಯರು ವಿಶೇಷವಾಗಿ ಸೋಂಕಿತ ಪ್ರದೇಶಗಳಿಗೆ ಪ್ರಯಾಣಿಸುವುದನ್ನು ತಪ್ಪಿಸಬೇಕು.
ಸೊಳ್ಳೆಯಿಂದ ಕಚ್ಚುವ ಅಪಾಯವನ್ನು ಕಡಿಮೆ ಮಾಡುವುದು ಝೀಕಾ ವೈರಸ್‌ನಿಂದ ಸೋಂಕನ್ನು ತಡೆಗಟ್ಟುವ ಏಕೈಕ ಮಾರ್ಗವಾಗಿದೆ. ಸೊಳ್ಳೆಯು ಮುಖ್ಯವಾಗಿ ಹಗಲಿನ ವೇಳೆಯಲ್ಲಿ ಕಚ್ಚುವುದರಿಂದ, ಯಾವಾಗಲೂ ನಿಮ್ಮ ಮನೆ ಹಾಗೂ ಸುತ್ತಲಿನ ವಾತಾವರಣ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಿ. ಸೊಳ್ಳೆಗಳು ಸಂತಾನೋತ್ಪತ್ತಿ ನಡೆಸದಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ.
ಇನ್ನಿತರ ಮುನ್ನೆಚ್ಚರಿಕಾ ಕ್ರಮಗಳು ಹೀಗಿವೆ:
ಸೊಳ್ಳೆ ಕಚ್ಚುವುದನ್ನು ತಡೆಯಲು ಮನೆಯಿಂದ ಹೊರಗಡೆ ಹೋಗುವಾಗ ಹಾಗೂ ಹೊರಗಡೆ ಆಟವಾಡಲು ಹೋಗುವ ಮಕ್ಕಳಿಗೆ ಕೈಕಾಲು ಸೇರಿ ಸಂಪೂರ್ಣ ದೇಹ ಮುಚ್ಚುವಂತೆ ಬಟ್ಟೆ ತೊಡಿಸಿ.
* ಸೊಳ್ಳೆಗಳು ಹೆಚ್ಚಾಗಿರುವ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳಿ
* ಸೊಳ್ಳೆ/ಕೀಟ ನಿವಾರಕಗಳನ್ನು ಬಳಸಿ
* ಕುದಿಸಿದ ಅಥವಾ ಫಿಲ್ಟರ್ ಮಾಡಿದ ನೀರನ್ನು ಮಾತ್ರ ಕುಡಿಯಿರಿ
* ಮನೆಯಲ್ಲಿ ತಯಾರಿಸಿದ ತಾಜಾ ಆಹಾರವನ್ನು ಸೇವಿಸಿ ಮತ್ತು ಹೊರಗಿನ ಆಹಾರವನ್ನು ತಪ್ಪಿಸಿ
* ಜ್ವರಕ್ಕೆ ಚಿಕಿತ್ಸೆ ನೀಡಲು ಆಸ್ಪಿರಿನ್ ಬಳಸುವುದನ್ನು ತಪ್ಪಿಸಿ ಮತ್ತು ರೋಗಲಕ್ಷಣಗಳು 2 ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ ವೈದ್ಯಕೀಯ ತಜ್ಞರನ್ನು ಸಂಪರ್ಕಿಸಿ
* ಮನೆ ಹಾಗೂ ಒಳಾಂಗಣ ಪರಿಸರದಲ್ಲಿ ಉತ್ತಮವಾಗಿ ಗಾಳಿಯಾಡುವುದು ಮುಖ್ಯವಾಗುತ್ತದೆ. ಅದನ್ನೂ ಪರಿಗಣಿಸಿ.
* ನಿಮ್ಮ ಕೈಯಿಂದ ಮೂಗು ಮತ್ತು ಬಾಯಿಯನ್ನು ಸ್ಪರ್ಶಿಸುವುದನ್ನು ತಪ್ಪಿಸಿ. ಅದರಲ್ಲೂ ವಿಶೇಷವಾಗಿ ಹೊರಗಿನಿಂದ ಬಂದ ನಂತರ ಮೂಗು, ಬಾಯಿ ಮುಟ್ಟದಿರಿ
* ಯಾವಾಗಲೂ ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳಿ ಮತ್ತು ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯುತ್ತಿರಿ.
* ಜನಸಂದಣಿ ಇರುವ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ ವಿಶೇಷವಾಗಿ ನೀವು ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದರೆ ಅದು ವೈರಲ್ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.