Tattoo: ಟ್ಯಾಟೂ ಹಾಕಿಸಿಕೊಳ್ಳುವ ಧಾವಂತದಲ್ಲಿದ್ದೀರಾ: ಅಪಾಯದ ಬಗ್ಗೆ ಇರಲಿ ಎಚ್ಚರ, ಕಡೆಗಣಿಸದಿರಿ ಆರೋಗ್ಯ-health tattoo design and its dangerous reaction tattoo and skin allergy why tattoo is dangerous rsa ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Tattoo: ಟ್ಯಾಟೂ ಹಾಕಿಸಿಕೊಳ್ಳುವ ಧಾವಂತದಲ್ಲಿದ್ದೀರಾ: ಅಪಾಯದ ಬಗ್ಗೆ ಇರಲಿ ಎಚ್ಚರ, ಕಡೆಗಣಿಸದಿರಿ ಆರೋಗ್ಯ

Tattoo: ಟ್ಯಾಟೂ ಹಾಕಿಸಿಕೊಳ್ಳುವ ಧಾವಂತದಲ್ಲಿದ್ದೀರಾ: ಅಪಾಯದ ಬಗ್ಗೆ ಇರಲಿ ಎಚ್ಚರ, ಕಡೆಗಣಿಸದಿರಿ ಆರೋಗ್ಯ

ಟ್ಯಾಟೂ ಯುವ ಜನತೆಯನ್ನು ಆಕರ್ಷಿಸುತ್ತಿರುವ ವಿಷಯಗಳ ಪೈಕಿ ಒಂದಾಗಿದೆ. ಫ್ಯಾಶನ್‍ಗೆ ಮಹತ್ವ ನೀಡಿ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ನಿಮ್ಮ ಆರೋಗ್ಯವನ್ನು ಕಡೆಗಣಿಸುವ ಅಪಾಯಕ್ಕೆ ಮುಂದಾಗಬೇಡಿ. ಟ್ಯಾಟೂ ಹಾಕಿಸಿಕೊಳ್ಳುವುದರಿಂದ ಆಗುವ ಅಪಾಯಗಳೇನು?ಟ್ಯಾಟೂ ಹಾಕಿಸುವಾಗ ಯಾವೆಲ್ಲ ವಿಚಾರಗಳ ಬಗ್ಗೆ ಗಮನ ನೀಡಬೇಕು?ಇಲ್ಲಿದೆ ಸಮಗ್ರ ಮಾಹಿತಿ.

ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ನಿಮ್ಮ ಆರೋಗ್ಯವನ್ನು ಕಡೆಗಣಿಸುವ ಅಪಾಯಕ್ಕೆ ಮುಂದಾಗಬೇಡಿ.
ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ನಿಮ್ಮ ಆರೋಗ್ಯವನ್ನು ಕಡೆಗಣಿಸುವ ಅಪಾಯಕ್ಕೆ ಮುಂದಾಗಬೇಡಿ.

ಹಿಂದೆಲ್ಲ ಹಚ್ಚೆ ಹಾಕಿಸಿಕೊಳ್ಳುತ್ತಿದ್ದರು. ಕಾಲ ಕಳೆದಂತೆ ಆಧುನಿಕತೆಯ ಸ್ಪರ್ಶ ಪಡೆದು ಇದೇ ಹಚ್ಚೆ ಟ್ಯಾಟೂ ಆಗಿ ಬದಲಾಯಿತು. ಈಗಿನ ಯುವ ಜನತೆಯನ್ನು ಹೆಚ್ಚಾಗಿ ಆಕರ್ಷಿಸುತ್ತಿರುವ ಕ್ರೇಜ್‍ಗಳ ಪೈಕಿ ಈ ಟ್ಯಾಟೂ ಕೂಡ ಒಂದು. ತಮಗೆ ಇಷ್ಟವಿರುವ ವಿಷಯಗಳು, ವಸ್ತುಗಳು, ಮನುಷ್ಯರ ಹೆಸರು ಅಥವಾ ತಮ್ಮದೇ ಹೆಸರು ಹೀಗೆ ನಾನಾ ರೀತಿಯ ಟ್ಯಾಟೋಗಳು ಈಗಿನ ಯುವ ಜನತೆಯ ಮೈಯಲ್ಲಿ ಕಾಣಬಹುದಾಗಿದೆ. ಈ ಟ್ಯಾಟೂ ಎನ್ನುವ ಕ್ರೇಜ್ ಕೇವಲ ಸಂತೋಷವನ್ನು ಪಡಲು ಮಾತ್ರವಲ್ಲದೇ ನಮ್ಮ ಆರೋಗ್ಯದೊಂದಿಗೂ ಸಂಪರ್ಕ ಹೊಂದಿರುತ್ತದೆ. ಹೀಗಾಗಿ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ನೀವು ಕೆಲವೊಂದು ವಿಚಾರಗಳ ಬಗ್ಗೆ ತಿಳಿಯಲೇಬೇಕು.

ಹೌದು, ನೀವು ಟ್ಯಾಟೂ ಹಾಕಿಸುವ ಮುನ್ನ ನೀವು ಆಯ್ಕೆ ಮಾಡಿಕೊಂಡಿರುವ ಟ್ಯಾಟೂ ಹಾಕಿಸಿಕೊಳ್ಳುವ ವಿಧಾನ ಆರೋಗ್ಯಕರ ಹಾಗೂ ಸೂಕ್ತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ನೀವು ಇದರಿಂದ ನಿಮ್ಮ ಆರೋಗ್ಯದ ಮೇಲೆ ಉಂಟಾಗಬಲ್ಲ ಋಣಾತ್ಮಕ ಪರಿಣಾಮಗಳು ಹಾಗೂ ಮಿಕ್ಕೆಲ್ಲ ರೀತಿಯ ಅಪಾಯಗಳ ಬಗ್ಗೆ ತಿಳಿದುಕೊಂಡಿರಬೇಕು. ಇಲ್ಲಿ ನೀವು ಹಣ ಉಳಿಸುವ ಪ್ರಯತ್ನಕ್ಕಿಂತ ನೈರ್ಮಲ್ಯಕ್ಕೆ ಹೆಚ್ಚು ಒತ್ತನ್ನು ನೀಡಿ ಗುಣಮಟ್ಟದ ಟ್ಯಾಟೂ ಡಿಸೈನ್‍ಗಳನ್ನು ಮಾಡುವ ಹೆಸರಾಂತ ಟ್ಯಾಟೂ ಕಲಾವಿದರು ಹಾಗೂ ಸ್ಟುಡಿಯೋಗಳನ್ನು ಹುಡುಕುವುದು ಹೆಚ್ಚು ಸೂಕ್ತ.
ನಿಮ್ಮ ದೇಹದ ಮೇಲೆ ನೀವಾಗಿಯೇ ಇಷ್ಟಪಟ್ಟು ಮಾಡಿಸಿಕೊಳ್ಳುವ ಕಲೆಯನ್ನು ನೀವು ಸುರಕ್ಷಿತ ವಿಧಾನದ ಮೂಲಕವೇ ಮಾಡಿಸಿಕೊಳ್ಳಬೇಕು. ಹೀಗಾಗಿ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ನೀವು ತಿಳಿದುಕೊಳ್ಳಬೇಕಾದ ಸಂಭವನೀಯ ಅಪಾಯಗಳ ಬಗ್ಗೆ ಸಮಗ್ರ ಮಾಹಿತಿ ಇಲ್ಲಿದೆ:

ಟ್ಯಾಟೂ ಅಲರ್ಜಿ: ಟ್ಯಾಟೂ ಹಾಕಿಸಿಕೊಳ್ಳುವುದು ಎಂದರೆ ನಿಮ್ಮ ಚರ್ಮದ ಆಳಕ್ಕೆ ಶಾಹಿಯನ್ನು ಹಾಕಿಸುವುದು. ಕೆಲವರ ಚರ್ಮಕ್ಕೆ ಈ ಶಾಹಿಗಳು ಒಗ್ಗಿಕೊಳ್ಳುವುದಿಲ್ಲ. ತುರಿಕೆ, ದದ್ದುಗಳಂತಹ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹೀಗಾಗಿ ಚರ್ಮದ ಅಲರ್ಜಿ ಹೊಂದಿರುವವರು ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಸರಿಯಾಗಿ ಯೋಚಿಸುವುದು ಒಳಿತು.

ಚರ್ಮದ ಸೋಂಕುಗಳು: ಟ್ಯಾಟೂ ಎಂದರೆ ನಿಮ್ಮ ಚರ್ಮದಲ್ಲಿ ರಂಧ್ರಕೊರೆದು ಮಾಡುವಂತಹ ಒಂದು ಕಲೆಯಾಗಿದೆ. ಈ ಪ್ರಕ್ರಿಯೆಯನ್ನು ನಡೆಸುವ ಸಂದರ್ಭದಲ್ಲಿ ಟ್ಯಾಟೂ ಕಲಾವಿದರು ಸೂಕ್ತವಾದ ನೈರ್ಮಲ್ಯ ವಿಧಾನವನ್ನು ಬಳಸದೇ ಹೋದರೆ ನಿಮ್ಮ ಚರ್ಮ ಸೋಂಕಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ ಹಾಗೂ ಸ್ಟ್ಯಾಫಿಲೋಕೊಕಸ್ ಔರೆಸ್‌ನಂತಹ ಮಾರಣಾಂತಿಕ ಸೋಂಕುಗಳು ನಿಮ್ಮನ್ನು ಬಾಧಿಸಬಹುದು. ಎಷ್ಟೋ ಜನರು ಟ್ಯಾಟೂ ಹುಚ್ಚಿಗೆ ಬಿದ್ದು ಕ್ಷಯದಂತಹ ಕಾಯಿಲೆಗಳಿಗೆ ಒಳಗಾದ ಉದಾಹರಣೆಯೂ ಇದೆ.

ಚರ್ಮದಲ್ಲಿ ಗಡ್ಡೆಗಳು ಉಂಟಾಗುವ ಸಾಧ್ಯತೆ: ನೀವು ಹಚ್ಚೆ ಹಾಕಿಸಿಕೊಳ್ಳುವ ಭಾಗವು ಚರ್ಮದ ಆಳದಲ್ಲಿ ಇರುವುದರಿಂದ ನೀವು ನೈರ್ಮಲ್ಯಕ್ಕೆ ಬಹಳ ಆದ್ಯತೆ ನೀಡಬೇಕು. ಬೇರೆಯವರಿಗೆ ಬಳಸಿದ ಸೂಜಿಗಳನ್ನೇ ನಿಮಗೆ ಬಳಸಿದರೆ ಚರ್ಮದಲ್ಲಿ ಮಾರಣಾಂತಿಕ ಗಡ್ಡೆಗಳು ಉಂಟಾಗಬಹುದು. ಅಥವಾ ಆ ವ್ಯಕ್ತಿಯು ಕಾಯಿಲೆ ಪೀಡಿತನಾಗಿದ್ದರೆ ಆ ಕಾಯಿಲೆಯು ನಿಮ್ಮನ್ನೂ ಬಾಧಿಸಬಹುದು. ಹೀಗಾಗಿ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಅನೇಕರನ್ನು ಸಂಪರ್ಕಿಸಿ ನುರಿತ ಹಾಗೂ ನೈರ್ಮಲ್ಯಕ್ಕೆ ಮೊದಲ ಆದ್ಯತೆ ನೀಡುವ ಸ್ಟುಡಿಯೋ ನಿಮ್ಮ ಆಯ್ಕೆಯಾಗಿರಬೇಕು. ಟ್ಯಾಟೂ ಎಂಬ ಹುಚ್ಚಿಗೆ ಬಿದ್ದು ಭವಿಷ್ಯದಲ್ಲಿ ಪಶ್ಚಾತಾಪಕ್ಕೆ ಒಳಗಾಗುವ ಪರಿಸ್ಥಿತಿ ನಿಮ್ಮದಾಗಬಾರದು.

ಕೇವಲ ಇದು ಮಾತ್ರವಲ್ಲ, ಹಚ್ಚೆ ಹಾಕಿಸಿಕೊಳ್ಳುವ ಮುನ್ನ ಹಾಗೂ ಹಚ್ಚೆ ಹಾಕಿಸಿಕೊಂಡ ಕೆಲವು ದಿನಗಳ ಮಟ್ಟಿಗಾದರೂ ಮದ್ಯಪಾನ ಹಾಗೂ ಡ್ರಗ್‍ನಂತಹ ದುಶ್ಚಟಗಳಿಂದ ದೂರ ಇರುವುದು ಉತ್ತಮ. ಕಡಿಮೆ ಹಣದಲ್ಲಿ ಟ್ಯಾಟೂ ಡಿಸೈನ್ ಆಗುತ್ತದೆ ಎಂದು ಎಷ್ಟೋ ಜನರು ರಸ್ತೆ ಬದಿಗಳಲೆಲ್ಲ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಬೀದಿ ಬದಿ ವ್ಯಾಪಾರಿಗಳ ಏಳಿಗೆ ಬಯಸುವುದು ಒಳ್ಳೆಯದೆ. ಆದರೆ, ನಿಮ್ಮ ಆರೋಗ್ಯವನ್ನು ಪಣಕ್ಕಿಟ್ಟು ಅವರ ಉದ್ಧಾರ ಮಾಡುವ ಅನಿವಾರ್ಯತೆಯೂ ಇರುವುದಿಲ್ಲ ಎಂಬುದು ಮೊದಲು ನಿಮ್ಮ ಗಮನದಲ್ಲಿ ಇರಲಿ. ಹೀಗಾಗಿ ಸೂಕ್ತವಾಗಿ ಯೋಚನೆ ಮಾಡಿ, ನಿಮಗೆ ಟ್ಯಾಟೂ ನಿಜವಾಗಿಯೂ ಅವಶ್ಯಕತೆ ಇದೆಯೇ ಎಂಬುದನ್ನು ಪರಾಮರ್ಶಿಸಿ ನಿರ್ಧಾರ ತೆಗೆದುಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ.