Raw Onion Benefits: ತೂಕ ಇಳಿಕೆಯಿಂದ ಚರ್ಮದ ಆರೋಗ್ಯ ಸುಧಾರಣೆವರೆಗೆ ಹಸಿ ಈರುಳ್ಳಿ ಸೇವನೆಯ 10 ಪ್ರಯೋಜನಗಳಿವು
ಕ್ಯಾನ್ಸರ್ ನಿಯಂತ್ರಣ, ಜೀರ್ಣಕ್ರಿಯೆ ಸುಧಾರಣೆ, ತ್ವಚೆಯ ಅಂದ ಹೆಚ್ಚುವುದು, ತೂಕ ಇಳಿಕೆ ಸೇರಿದಂತೆ ಹಸಿ ಈರುಳ್ಳಿ ತಿನ್ನುವುದರಿಂದ ಆರೋಗ್ಯಕ್ಕೆ ಒಂದಲ್ಲ, ಎರಡಲ್ಲೂ ನೂರಾರು ಪ್ರಯೋಜನಗಳಿವೆ. ಹಸಿ ಈರುಳ್ಳಿ ತಿನ್ನುವುದರಿಂದಾಗುವ 10 ಪ್ರಯೋಜನಗಳನ್ನು ಇಂದಿನ ಲೇಖನದಲ್ಲಿ ತಿಳಿಯೋಣ
ಭಾರತೀಯರು ತಾವು ತಯಾರಿಸುವ ಬಹುತೇಕ ಅಡುಗೆಗಳಿಗೆ ಈರುಳ್ಳಿ ಬಳಸುವುದು ಸಹಜ. ಇನ್ನೂ ಕೆಲವು ಕಡೆ ಊಟದ ಜೊತೆ ಈರುಳ್ಳಿ ತಿನ್ನುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಹಸಿ ಈರುಳ್ಳಿ ತಿನ್ನುವುದರಿಂದ ಜೀರ್ಣಕ್ರಿಯೆ ಹೆಚ್ಚಾಗಿ ಆಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈ ಈರುಳ್ಳಿಯಲ್ಲಿ ಹಲವು ವಿಧದ ಪೋಷಕಾಂಶಗಳಿರುತ್ತವೆ.
ಕೆಲವರಿಗೆ ಈರುಳ್ಳಿಯ ವಾಸನೆ ಹಾಗೂ ಘಾಟು ಸಹ್ಯವಾಗುವುದಿಲ್ಲ. ಆ ಕಾರಣಕ್ಕಾಗಿ ಈರುಳ್ಳಿಯನ್ನು ಇಷ್ಟಪಡವರೂ ಇದ್ದಾರೆ. ಕೆಲವು ಸಂಪ್ರದಾಯದಲ್ಲಿ ಅಡುಗೆಗೆ ಬೆಳ್ಳುಳ್ಳಿ, ಈರುಳ್ಳಿ ಬಳಸದೇ ಇರುವವರೂ ಇದ್ದಾರೆ. ಅದೇನೆ ಇದ್ದರೂ ಹಸಿ ಈರುಳ್ಳಿಯಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ನಮ್ಮ ಡಯೆಟ್‌ಕ್ರಮದಲ್ಲಿ ಹಸಿ ಈರುಳ್ಳಿ ಸೇರಿಸುವುದರಿಂದ ಒಟ್ಟಾರೆ ಆರೋಗ್ಯಕ್ಕೆ ಉತ್ತಮ. ಹಾಗಾದರೆ ಹಸಿ ಈರುಳ್ಳಿ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ.
ಹಸಿ ಈರುಳ್ಳಿ ಸೇವನೆಯ 10 ಪ್ರಯೋಜನಗಳಿವು
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ
ಹಸಿ ಈರುಳ್ಳಿಯಲ್ಲಿ ವಿಟಮಿನ್ ಸಿ ಅಂಶ ಸಮೃದ್ಧವಾಗಿರುತ್ತದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಬಿಳಿ ರಕ್ತ ಕಣವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಇದು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ವಿರುದ್ಧ ದೇಹವನ್ನು ರಕ್ಷಿಸುತ್ತದೆ. ಶೀತ ಮತ್ತು ಜ್ವರದಂತಹ ಸಾಮಾನ್ಯ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಹಸಿ ಈರುಳ್ಳಿ ಪಾತ್ರ ಮಹತ್ವದ್ದು.
ಹೃದಯರಕ್ತನಾಳದ ಆರೋಗ್ಯವನ್ನು ಉತ್ತೇಜಿಸುತ್ತದೆ
ಈರುಳ್ಳಿಯಲ್ಲಿ ಕ್ವೆರ್ಸೆಟಿನ್‌ನಂತಹ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯರಕ್ತನಾಳದ ಆರೋಗ್ಯ ಸುಧಾರಣೆಗೂ ಸಹಕಾರಿ. ಹಸಿ ಈರುಳ್ಳಿ ಸೇವನೆಯು ರಕ್ತ ಪರಿಚಲನೆಯನ್ನು ಹೆಚ್ಚಿಸಲು, ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಹೃದ್ರೋಗದ ಅಪಾಯವನ್ನು ತಡೆಯಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ
ಹಸಿ ಈರುಳ್ಳಿಯಲ್ಲಿ ಆಹಾರದ ನಾರಿನಾಂಶ ಅಧಿಕವಾಗಿರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದು ಮಾತ್ರವಲ್ಲ, ದೇಹದಿಂದ ತ್ಯಾಜ್ಯವನ್ನು ಹೊರಹಾಕಲು ನಿರ್ಣಾಯಕವಾಗಿದೆ. ಫೈಬರ್ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮಲಬದ್ಧತೆ, ಕರುಳು ಕೆರಳುವುದು, ಮೂಲವ್ಯಾಧಿಯಂತಹ ವಿವಿಧ ಕಾಯಿಲೆಗಳ ನಿವಾರಣೆಗೂ ಸಹಕಾರಿ.
ಉರಿಯೂತವನ್ನು ಕಡಿಮೆ ಮಾಡುತ್ತದೆ
ಕ್ವೆರ್ಸೆಟಿನ್ ಸಮೃದ್ಧ ಹಸಿ ಈರುಳ್ಳಿಯು ಊರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಇದು ದೇಹದಲ್ಲಿ ಉರಿಯೂತದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಂಧಿವಾತ, ಅಸ್ತಮಾ, ಬ್ರಾಂಕೈಟಿಸ್‌ನಂತಹ ಸಮಸ್ಯೆಗಳ ನಿರ್ವಹಣೆಗೂ ಇದು ಸಹಾಯಕ.
ಮೂಳೆಯ ಆರೋಗ್ಯ ವೃದ್ಧಿ
ಈರುಳ್ಳಿಯು ಸಲ್ಫರ್ ಸಮೃದ್ಧ ಸಂಯುಕ್ತಗಳ ಅತ್ಯುತ್ತಮ ಮೂಲವಾಗಿದ್ದು, ಅದು ಮೂಳೆಯ ಆರೋಗ್ಯ ವೃದ್ಧಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಸಂಯುಕ್ತಗಳು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಉತ್ತೇಜಿಸುವ ಜೊತೆಗೆ ಆಸ್ಟಿಯೊಪೊರೋಸಿಸ್ ಅಪಾಯವನ್ನು ತಡೆಯಲು ಸಹಾಯ ಮಾಡುತ್ತದೆ.
ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ
ಹಸಿ ಈರುಳ್ಳಿಯು ಸಲ್ಫರ್ ಸಂಯುಕ್ತಗಳನ್ನು ಹೊಂದಿರುತ್ತದೆ, ಇದು ಮೆದುಳಿನಲ್ಲಿ ನರಪ್ರೇಕ್ಷಕಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದರಿಂದ ನೆನಪಿನ ಶಕ್ತಿ ಹೆಚ್ಚುವುದು, ಗಮನ ಶಕ್ತಿ ಹೆಚ್ಚುವುದು, ಏಕಾಗ್ರತೆಯ ಮಟ್ಟ ಸುಧಾರಿಸುವುದು ಇಂತಹ ಮೆದುಳಿನ ಕಾರ್ಯ ಸುಧಾರಣೆಗೆ ನೆರವಾಗುತ್ತದೆ.
ಕ್ಯಾನ್ಸರ್ ತಡೆಯುತ್ತದೆ
ಹಸಿ ಈರುಳ್ಳಿಯಲ್ಲಿ ಸಲ್ಫರ್ ಭರಿತ ಸಂಯುಕ್ತಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಇವು ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತವೆ. ಕ್ವೆರ್ಸೆಟಿನ್, ಫ್ಲೇವನಾಯ್ಡ್‌ಗಳು ಮತ್ತು ಆಲಿಸಿನ್‌ನಂತಹ ಸಲ್ಫರ್ ಸಂಯುಕ್ತಗಳು ದೇಹದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುವ ಕಾರ್ಸಿನೋಜೆನಿಕ್ ಗುಣಲಕ್ಷಣಗಳನ್ನು ಹೊಂದಿವೆ.
ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ
ಹಸಿ ಈರುಳ್ಳಿಯಲ್ಲಿ ಉನ್ನತ ಮಟ್ಟದ ಆಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಇದ್ದು, ಇದು ಚರ್ಮದ ಆರೋಗ್ಯವನ್ನು ಸುಧಾರಿಸಲು ಕೊಡುಗೆ ನೀಡುತ್ತದೆ. ಹಸಿ ಈರುಳ್ಳಿಯನ್ನು ಸೇವಿಸುವುದರಿಂದ ಸುಕ್ಕುಗಳು, ವಯಸ್ಸಿನ ಕಲೆಗಳು ಮತ್ತು ಪಿಗ್ಮೆಂಟೇಶನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಆರೋಗ್ಯಕರ ಮತ್ತು ಹೊಳೆಯುವ ಚರ್ಮಕ್ಕೆ ಕಾರಣವಾಗುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ
ಹಸಿ ಈರುಳ್ಳಿ ಕ್ರೋಮಿಯಂ ಅನ್ನು ಹೊಂದಿರುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕ್ರೋಮಿಯಂ ಇನ್ಸುಲಿನ್ ದಕ್ಷತೆಯನ್ನು ಸುಧಾರಿಸುತ್ತದೆ. ಆ ಮೂಲಕ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಕಾರಣವಾಗುತ್ತದೆ, ಇದರಿಂದಾಗಿ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
ತೂಕ ಇಳಿಕೆಗೆ ಸಹಕಾರಿ
ಹಸಿ ಈರುಳ್ಳಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ನಾರಿನಾಂಶವನ್ನು ಹೊಂದಿದ್ದು ಅದು ತೂಕ ನಷ್ಟಕ್ಕೆ ಕೊಡುಗೆ ನೀಡುತ್ತದೆ. ನಾರಿನಂಶವು ಹಸಿವು ಕಡಿಮೆಯಾಗಲು ಸಹಾಯ ಮಾಡುತ್ತದೆ. ಅತಿಯಾಗಿ ತಿನ್ನುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ, ಕ್ಯಾಲೋರಿ ಕೊರತೆ ಮತ್ತು ಅಂತಿಮವಾಗಿ ತೂಕ ನಷ್ಟಕ್ಕೆ ಕಾರಣವಾಗುತ್ತದೆ.
ಹಸಿ ಈರುಳ್ಳಿ ಸೇವಿಸುವುದರಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿವೆ ನಿಜ. ಆದರೆ ಇದನ್ನು ಅತಿಯಾಗಿ ಸೇವಿಸುವುದು ಒಳಿತಲ್ಲ. ಹಸಿ ಈರುಳ್ಳಿಯನ್ನು ಅತಿಯಾಗಿ ಸೇವಿಸುವುದರಿಂದ ಜೀರ್ಣಕ್ರಿಯೆಯ ತೊಂದರೆ ಹಾಗೂ ಉಸಿರಿನ ದುರ್ನಾತಕ್ಕೆ ಎದುರಾಗಬಹುದು.
ವಿಭಾಗ