ಥೈರಾಯಿಡ್ ಬಂದಿದೆ ಅಂತ ಟೆನ್‌ಷನ್ ಆಗ್ಬೇಡಿ, ನಿಯಂತ್ರಣಕ್ಕೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು, ಟ್ರೈ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಥೈರಾಯಿಡ್ ಬಂದಿದೆ ಅಂತ ಟೆನ್‌ಷನ್ ಆಗ್ಬೇಡಿ, ನಿಯಂತ್ರಣಕ್ಕೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು, ಟ್ರೈ ಮಾಡಿ

ಥೈರಾಯಿಡ್ ಬಂದಿದೆ ಅಂತ ಟೆನ್‌ಷನ್ ಆಗ್ಬೇಡಿ, ನಿಯಂತ್ರಣಕ್ಕೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು, ಟ್ರೈ ಮಾಡಿ

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೆಣ್ಣುಮಕ್ಕಳು ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಥೈರಾಯಿಡ್‌ ಕಾರಣದಿಂದ ಹಾರ್ಮೋನ್‌ ಸಮಸ್ಯೆಗಳಾಗುತ್ತಿದ್ದು ಇದನ್ನು ನಿಯಂತ್ರಿಸಲು ಆಹಾರ ಹಾಗೂ ಜೀವನಶೈಲಿಯ ಮೇಲೆ ಸಾಕಷ್ಟು ಗಮನ ಹರಿಸಬೇಕು. ಥೈರಾಯಿಡ್‌ ನಿಯಂತ್ರಣಕ್ಕೆ ಕೆಲವೊಂದು ಮನೆಮದ್ದು ಕೂಡ ಇದೆ. ಅಂತಹ ಪ್ರಮುಖ ಮನೆಮದ್ದುಗಳ ಪಟ್ಟಿ ಇಲ್ಲಿದೆ ನೋಡಿ.

ಥೈರಾಯಿಡ್ ಸಮಸ್ಯೆ
ಥೈರಾಯಿಡ್ ಸಮಸ್ಯೆ (PC: Canva)

ಥೈರಾಯಿಡ್ ಎನ್ನುವುದು ಮನುಷ್ಯ ದೇಹದಲ್ಲಿನ ಒಂದು ಪ್ರಮುಖ ಗ್ರಂಥಿಯಾಗಿದೆ. ಇದು ಥೈರಾಯಿಡ್ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಈ ಹಾರ್ಮೋನು ದೇಹದ ಪ್ರತಿಯೊಂದು ಕೋಶ, ಅಂಗಗಳ ಕಾರ್ಯಚಟುವಟಿಕೆಯ ಮೇಲೆ ಪ್ರಭಾವ ಬೀರುತ್ತದೆ. ಇದು ಚಯಾಪಚಯ, ಶಕ್ತಿ ಉತ್ಪಾದನೆ ಮತ್ತು ಮನಸ್ಥಿತಿಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ವೇಳೆ ಥೈರಾಯಿಡ್ ಗ್ರಂಥಿಯ ಹೆಚ್ಚು ಹಾರ್ಮೋನ್ ಉತ್ಪತ್ತಿ ಮಾಡಿದರೆ ಅಥವಾ ಹಾರ್ಮೋನ್ ಉತ್ಪತ್ತಿಯನ್ನು ಕಡಿಮೆ ಮಾಡಿದರೆ ಥೈರಾಯಿಡ್ ಸಮಸ್ಯೆ ಕಾಣಿಸುತ್ತದೆ. ಹೆಚ್ಚು ಹಾರ್ಮೋನ್ ಉತ್ಪತ್ತಿಯಾಗುವುದನ್ನು ಹೈಪರ್ ಥೈರಾಯಿಡ್‌ಸಂ ಎಂದು ಕಡಿಮೆ ಹಾರ್ಮೋನ್ ಉತ್ಪತ್ತಿಯಾಗುವುದನ್ನು ಹೈಪೋಥೈರಾಯಿಡ್ ಎಂದೂ ಕರೆಯಲಾಗುತ್ತದೆ. ಥೈರಾಯಿಡ್ ಸಮಸ್ಯೆಯನ್ನು ನಿಯಂತ್ರಿಸಲು ಅಥವಾ ಕಡಿಮೆ ಮಾಡಲು ಕೆಲವೊಂದು ಮನೆಮದ್ದುಗಳು ಸಹಾಯ ಮಾಡುತ್ತವೆ. ಅಂತಹ ಮನೆಮದ್ದುಗಳು ಯಾವುದು ನೋಡಿ.

ಥೈರಾಯಿಡ್ ನಿಯಂತ್ರಿಸುವ ಮನೆಮದ್ದುಗಳಿವು 

ಕೊತ್ತಂಬರಿ ನೀರು: ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಕೊತ್ತಂಬರಿ ನೀರು ಕುಡಿಯಬೇಕು. ಪ್ರತಿದಿನ ತಪ್ಪದೇ ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ನೀರು ಕುಡಿಯುವುದರಿಂದ ಕೆಲವೇ ದಿನಗಳಲ್ಲಿ ಥೈರಾಯಿಡ್ ನಿಯಂತ್ರಣಕ್ಕೆ ಬರುತ್ತದೆ.

ಅಶ್ವಗಂಧ: ಆಯುರ್ವೇದ ಗಿಡಮೂಲಿಕೆಯಾದ ಅಶ್ವಗಂಧವು ಥೈರಾಯಿಡ್‌ಗೆ ಉತ್ತಮ ಮನೆಮದ್ದು. ಅಶ್ವಗಂಧದ ಬೇರು ಅಥವಾ ಪುಡಿಯನ್ನು ನೀರಿನಲ್ಲಿ ಕುದಿಸಿ ತಯಾರಿಸಿದ ಕಷಾಯವನ್ನು ಕುಡಿಯುವುದರಿಂದ ಥೈರಾಯಿಡ್ ಗ್ರಂಥಿಯು ಸರಿಯಾಗಿ ಕೆಲಸ ಮಾಡುತ್ತದೆ.

ಚಿಯಾ, ಅಗಸೆ ಬೀಜ: ಒಮೆಗಾ–3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿರುವ ಚಿಯಾ ಬೀಜ, ಅಗಸೆ ಬೀಜ ಹಾಗೂ ಸೆಣಬಿನ ಬೀಜಗಳಲ್ಲಿ ಸೆಲೇನಿಯಂ ಅಂಶ ಕೂಡ ಸಮೃದ್ಧವಾಗಿದೆ. ಇದು ಥೈರಾಯಿಡ್ ಆರೋಗ್ಯಕ್ಕೆ ಬಹಳ ಅವಶ್ಯವಾಗಿದೆ. ಈ ಬೀಜಗಳನ್ನು ಸೇವಿಸುವುದರಿಂದ ಥೈರಾಯ್ಡ್ ಹಾರ್ಮೋನುಗಳನ್ನು ನಿಯಂತ್ರಿಸಲು ಮತ್ತು ಒಟ್ಟಾರೆ ಆರೋಗ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.

ಒಣಹಣ್ಣು: ಬಾದಾಮಿ, ವಾಲ್‌ನಟ್‌ನಂತಹ ಒಣಹಣ್ಣುಗಳಲ್ಲಿ ಸೆಲೇನಿಯಂ, ಝಿಂಕ್‌, ಆರೋಗ್ಯಕರ ಕೊಬ್ಬಿನಾಂಶಗಳಿದ್ದು ಇದು ಥೈರಾಯಿಡ್ ಹಾರ್ಮೋನ್ ಉತ್ಪಾದನೆ ಹಾಗೂ ಚಯಾಪಚಯವನ್ನು ವೃದ್ಧಿಸತ್ತದೆ.

ಕೋಲ್ಡ್ ಪ್ರೆಸ್ಡ್ ಆಯಿಲ್‌: ತೆಂಗಿನೆಣ್ಣೆ, ಅಗಸೆಬೀಜದ ಎಣ್ಣೆಯಂತಹ ಕೋಲ್ಡ್ ಪ್ರೆಸ್ಡ್ ಎಣ್ಣೆಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸುವುದರಿಂದ ಆಹಾರದಲ್ಲಿನ ಪೋಷಕಾಂಶ ಪ್ರಮಾಣ ವೃದ್ಧಿಯಾಗುತ್ತದೆ. ಈ ತೈಲಗಳು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಅವುಗಳ ಆರೋಗ್ಯಕರ ಕೊಬ್ಬಿನ ಅಂಶದಿಂದಾಗಿ ಥೈರಾಯ್ಡ್ ಕಾರ್ಯವನ್ನು ಬೆಂಬಲಿಸುತ್ತದೆ.

ಅಯೋಡಿನ್ ಸಮೃದ್ಧ ಆಹಾರಗಳು: ಅಯೋಡಿನ್ ಅತ್ಯಗತ್ಯ ಪೋಷಕಾಂಶವಾಗಿದ್ದು ಥೈರಾಯ್ಡ್ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಸ್ಯಾಹಾರಿ ಅಥವಾ ಸಾವಯವ ಆಹಾರವನ್ನು ಕಾಪಾಡಿಕೊಳ್ಳಲು ಬಯಸುವವರಿಗೆ, ಅಯೋಡಿಕರಿಸಿದ ಉಪ್ಪು ಮತ್ತು ಡೈರಿ ಉತ್ಪನ್ನಗಳಾದ ಮೊಸರು ಮತ್ತು ಹಾಲಿನಂತಹ ಮೂಲಗಳು ಅಯೋಡಿನ್‌ನ ಅತ್ಯುತ್ತಮ ಮೂಲಗಳಾಗಿವೆ. ಆದಾಗ್ಯೂ, ಅಯೋಡಿನ್ ಅನ್ನು ಮಿತವಾಗಿ ಸೇವಿಸುವುದು ಬಹಳ ಮುಖ್ಯ, ವಿಶೇಷವಾಗಿ ನೀವು ಆಟೊಇಮ್ಯುನ್ಯು ಥೈರಾಯಿಡ್ ಪರಿಸ್ಥತಿ ಹೊಂದಿದ್ದರೆ ಅವು ಆಯೋಡಿನ್ ಅತಿಯಾಗಿ ಸೇವಿಸುವುದು ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಹುದು.

ಉರಿಯೂತದ ಆಹಾರಗಳು: ಉರಿಯೂತವು ಥೈರಾಯ್ಡ್ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು. ಅರಿಶಿನ, ಸೊಪ್ಪು ತರಕಾರಿಗಳು ಮತ್ತು ಹಣ್ಣುಗಳಂತಹ ಉರಿಯೂತದ ಆಹಾರಗಳನ್ನು ಸೇರಿಸುವುದರಿಂದ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಆರೋಗ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.

ನಿಯಮಿತ ವ್ಯಾಯಾಮ: ನಿಯಮಿತವಾದ ದೈಹಿಕ ಚಟುವಟಿಕೆಯು ಶಕ್ತಿಯ ಮಟ್ಟಗಳು, ಚಯಾಪಚಯ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದು ಥೈರಾಯ್ಡ್ ಪರಿಸ್ಥಿತಿಗಳಿರುವವರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

ಸಮರ್ಪಕ ನಿದ್ದೆ: ಥೈರಾಯಿಡ್ ಸಮಸ್ಯೆ ಇರುವವರಿಗೆ ನಿದ್ದೆ ಬಹಳ ಉತ್ತಮ ಮನೆಮದ್ದು ಎನ್ನಬಹುದು. ಥೈರಾಯ್ಡ್ ಆರೋಗ್ಯಕ್ಕೆ ಸಾಕಷ್ಟು ನಿದ್ದೆ ಮಾಡುವುದು ಬಹಳ ಮುಖ್ಯ. ನಿದ್ರೆಯ ಕೊರತೆಯು ಥೈರಾಯ್ಡ್ ಹಾರ್ಮೋನುಗಳು ಸೇರಿದಂತೆ ಹಾರ್ಮೋನ್ ಮಟ್ಟವನ್ನು ಅಡ್ಡಿಪಡಿಸುತ್ತದೆ. ನಿಮ್ಮ ದೇಹದ ಸ್ವಾಭಾವಿಕ ಚಿಕಿತ್ಸೆ ಪ್ರಕ್ರಿಯೆಗಳನ್ನು ಬೆಂಬಲಿಸಲು ಪ್ರತಿ ರಾತ್ರಿ 7ರಿಂದ 9 ಗಂಟೆಗಳ ಗುಣಮಟ್ಟದ ನಿದ್ರೆಯ ಗುರಿಯನ್ನು ಹೊಂದಿರಿ.

ಈ ಮೇಲಿನ ಮನೆಮದ್ದುಗಳು ಹಾಗೂ ಮನೆಯಲ್ಲೇ ಅನುಸರಿಸಬಹುದು ಕ್ರಮಗಳನ್ನು ಪಾಲಿಸುವ ಮೂಲಕ ಥೈರಾಯಿಡ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ನೀವು ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿದ್ದರೆ ಒತ್ತಡ ನಿರ್ವಹಣೆ ಮಾಡುವುದು ಕೂಡ ಬಹಳ ಮುಖ್ಯವಾಗುತ್ತದೆ.

(ಗಮನಿಸಿ: ಈ ಲೇಖನವು ಸಾಮಾನ್ಯಜ್ಞಾನವನ್ನು ಆಧರಿಸಿದ್ದು. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

Whats_app_banner