ಕೇವಲ ಆರು ತಿಂಗಳಲ್ಲಿ 30 ಕೆ.ಜಿ ತೂಕ ಇಳಿಸಿಕೊಂಡ 21ರ ಯುವತಿ: ಈಕೆಯ ವೈಟ್ ಲಾಸ್ ಜರ್ನಿ ನಿಜಕ್ಕೂ ರೋಚಕ-health tips 21 year old woman who lost 30 kg in just six months heres her weight loss journey weight loss diet ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕೇವಲ ಆರು ತಿಂಗಳಲ್ಲಿ 30 ಕೆ.ಜಿ ತೂಕ ಇಳಿಸಿಕೊಂಡ 21ರ ಯುವತಿ: ಈಕೆಯ ವೈಟ್ ಲಾಸ್ ಜರ್ನಿ ನಿಜಕ್ಕೂ ರೋಚಕ

ಕೇವಲ ಆರು ತಿಂಗಳಲ್ಲಿ 30 ಕೆ.ಜಿ ತೂಕ ಇಳಿಸಿಕೊಂಡ 21ರ ಯುವತಿ: ಈಕೆಯ ವೈಟ್ ಲಾಸ್ ಜರ್ನಿ ನಿಜಕ್ಕೂ ರೋಚಕ

ಇಂದಿನ ಆಹಾರ ಪದ್ಧತಿ, ಜೀವನಶೈಲಿಯಿಂದ ಅನೇಕರು ಸ್ಥೂಲಕಾಯ ಅಥವಾ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಂತರ ತಾನು ಹೇಗೆ ತೂಕ ಇಳಿಸಬೇಕು ಎಂದು ಚಿಂತಿಸುತ್ತಾರೆ. ಇಲ್ಲೊಬ್ಬಳು ಯುವತಿ ಆರು ತಿಂಗಳ ಕಠಿಣ ಪ್ರಯತ್ನದ ಫಲವಾಗಿ 30 ಕೆ.ಜಿ ತೂಕ ಇಳಿಸಿದ್ದಾಳೆ. ಈಕೆಯ ಕಥೆ ಇಲ್ಲಿದೆ. (ಬರಹ:ಪ್ರಿಯಾಂಕ)

ಆರು ತಿಂಗಳ ಕಠಿಣ ಪ್ರಯತ್ನದ ಫಲವಾಗಿ 30 ಕೆ.ಜಿ ತೂಕ ಇಳಿಸಿಕೊಂಡಿರುವ ಯುವತಿಯ ಕಥೆ ಇಲ್ಲಿದೆ.
ಆರು ತಿಂಗಳ ಕಠಿಣ ಪ್ರಯತ್ನದ ಫಲವಾಗಿ 30 ಕೆ.ಜಿ ತೂಕ ಇಳಿಸಿಕೊಂಡಿರುವ ಯುವತಿಯ ಕಥೆ ಇಲ್ಲಿದೆ.

ಈ ಸಮಾಜ ಹೇಗೆ ಅಂದ್ರೆ, ನಾವು ಸಣ್ಣ ಇದ್ದರೆ ನೀವೆಷ್ಟು ಕಡ್ಡಿ ಇದ್ದೀರಿ ಅಂತಾ ಗೇಲಿ ಮಾಡುತ್ತಾರೆ. ದಪ್ಪ ಇದ್ದರೆ ಡುಮ್ಮಿ/ಡುಮ್ಮ ಅಂತೆಲ್ಲಾ ತಮಾಷೆ ಮಾಡುತ್ತಾರೆ. ಒಟ್ಟಿನಲ್ಲಿ ಗೇಲಿ ಮಾಡುವವರ ಬಾಯಿಗೆ ಬಡಪಾಯಿಗಳು ಆಹಾರವಾಗುತ್ತಾರೆ. ಇದರಿಂದ ಮಾನಸಿಕ ಹಿಂಸೆ ಅನುಭವಿಸಿದವರು, ಅನುಭವಿಸುತ್ತಿರುವವರು ಅದೆಷ್ಟೋ ಮಂದಿ ಇದ್ದಾರೆ. ಅದೇ ರೀತಿ ಇಲ್ಲೊಬ್ಬ 21 ವರ್ಷದ ಯುವತಿ ಕೂಡ ಇದೇ ರೀತಿ ಹಿಂಸೆ ಅನುಭವಿಸಿದ್ದಳು. ಆಕೆ ದಪ್ಪ ಎಂದು ಜನರು ಆಕೆಯನ್ನು ಹೀಗಳೆದಿದ್ದರು. ಇದರಿಂದ ಮಾನಸಿಕವಾಗಿ ಮಾತ್ರವಲ್ಲದೆ ದೈಹಿಕ ಹಿಂಸೆ ಕೂಡ ಅನುಭವಿಸಿದ್ದಳು. ತನ್ನ ದೇಹವನ್ನು ಫಿಟ್ ಆಗಿರಿಸಲು ಸಂಕಲ್ಪ ತೆಗೆದುಕೊಂಡ ಆಕೆ, ಬರೋಬ್ಬರಿ 30 ಕೆಜಿ ತೂಕ ಇಳಿಸಿಕೊಂಡು ಸ್ಲಿಮ್ ಆಗಿದ್ದಾಳೆ. ಈ ಯುವತಿಯ ತೂಕ ಇಳಿಕೆ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ..

21 ವರ್ಷದ ಯುವತಿ ದೀಕ್ಷಾ ದೀಪಕ್ ಎಂಬಾಕೆ ತನ್ನ ಅಧಿಕ ತೂಕದ ಕಾರಣಕ್ಕಾಗಿ ಹಲವು ಸಮಸ್ಯೆಗಳನ್ನು ಎದುರಿಸಿದ್ದಳು. ದಿನನಿತ್ಯ ಗೇಲಿ ಮಾಡುತ್ತಿದ್ದ ಜನರಿಂದ ಮಾನಸಿಕವಾಗಿ ನೊಂದು, ಬೆಂದು ಹೋಗಿದ್ದಳು. ಈ ನಡುವೆ 2021ರಲ್ಲಿ ಆಕೆಗೆ ಮಧುಮೇಹ ಇರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿರುವಂತಹ ಸಮಸ್ಯೆಗಳನ್ನು ಕೂಡ ಆಕೆ ಎದುರಿಸಿದ್ದಾಳೆ. ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿರ್ಧರಿಸಿದ ದೀಕ್ಷಾ, ತೂಕ ಇಳಿಕೆಯತ್ತ ಗಮನಹರಿಸಿದ್ದಾಳೆ.

ಸಮರ್ಪಣಾ ಮನೋಭಾವನೆ ಹಾಗೂ ಸಾಧಿಸುವ ಛಲ ಇದ್ದರೆ, ಎಂಥದ್ದನ್ನೂ ಕೂಡ ಮೆಟ್ಟಿ ನಿಲ್ಲಬಹುದು ಅನ್ನೋ ಮಾತನ್ನು ನಿಜವಾಗಿಸಿದ ದೀಕ್ಷಾ, ತನ್ನ 80 ಕೆಜಿ ಇದ್ದ ತೂಕವನ್ನು 50 ಕೆ.ಜಿಗೆ ಇಳಿಸಿಕೊಂಡಿದ್ದಾಳೆ. ಸರಿಯಾದ ಆಹಾರ ಮತ್ತು ವ್ಯಾಯಾಮದ ಮೂಲಕ ಬರೋಬ್ಬರಿ 30 ಕೆ.ಜಿಗಳಷ್ಟು ತೂಕವನ್ನು ಇಳಿಸಿಕೊಂಡಿದ್ದಾಳೆ.

ಇನ್ನು ತೂಕ ಇಳಿಕೆ ಪ್ರಯಾಣದ ವೇಳೆ ಯುವತಿ ದೀಕ್ಷಾಳ ಹಾದಿ ಹೂವಿನ ಹಾದಿಯಾಗಿರಲಿಲ್ಲ. ಕಠಿಣ ಸವಾಲುಗಳನ್ನು ಎದುರಿಸಿದ ಆಕೆ ತನ್ನ ಬಾಡಿ ಶೇಮಿಂಗ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ತೂಕ ಇಳಿಕೆ ವೇಳೆ ದೀಕ್ಷಾ ಪಟ್ಟ ಸವಾಲುಗಳು ಏನೇನು ಎಂಬುದು ಇಲ್ಲಿದೆ:

ಮೊದಲನೇ ದಿನ ಬಹಳ ಉತ್ಸುಕಳಾಗಿ ತೂಕ ಇಳಿಕೆಗೆ ಸಿದ್ಧಳಾದರೂ, ನಂತರ ಆಕೆಗೆ ದಿನನಿತ್ಯ ವ್ಯಾಯಾಮ ಮಾಡುವುದು ಹಾಗೂ ಆಹಾರ ಕ್ರಮವನ್ನು ಅನುಸರಿಸುವುದು ಕಷ್ಟಕರವಾಯಿತು. ಕೆಲವೊಂದು ಘಟನೆಗಳು, ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿಕೆ ಇತ್ಯಾದಿ ಸೇರಿದಂತೆ ಆಕೆಯನ್ನು ಆರೋಗ್ಯಕರ ಆಹಾರ ಸೇವಿಸುವ ಯೋಜನೆಯನ್ನು ಕಷ್ಟಕರವಾಗಿಸಿತು. ಜಂಕ್ ಫುಡ್ ಇತ್ಯಾದಿ ಆಹಾರಗಳನ್ನು ಸೇವಿಸಲು ಆಸೆಯಾಗುತ್ತಿತ್ತು. ತನ್ನ ಗುರಿಯನ್ನು ಸಾಧಿಸಬಹುದೇ ಅನ್ನೋ ಅನುಮಾನ ಮೂಡುತ್ತಿತ್ತು.

ತೂಕ ಇಳಿಸಿಕೊಳ್ಳುವ ಪ್ರಯಾಣದಲ್ಲಿ ಯುವತಿ ದೀಕ್ಷಾಗೆ ಆಸರೆಯಾಗಿದ್ದೇನು?

1) ತನ್ನ ಗುರಿಯನ್ನು ಸಾಧಿಸಲು ಪಣ ತೊಟ್ಟಿದ್ದು ಮತ್ತು ಅದನ್ನು ಸಾಧಿಸಲು ಏನೇ ಅಡ್ಡಿ ಬಂದರೂ ಹೋರಾಟ ಮಾಡುತ್ತೇನೆ ಎಂಬ ನಂಬಿಕೆ. ಹೀಗಾಗಿ ಆರೋಗ್ಯಕರ ತೂಕವನ್ನು ಸಾಧಿಸಲು ಸಾಧ್ಯವಾಯಿತು.

2) ತನ್ನ ತೂಕ ಇಳಿಕೆಯ ಪ್ರಗತಿಯನ್ನು ದಿನನಿತ್ಯ ಗಮನಿಸುತ್ತಿದ್ದಳು. ಇದು ಅವಳನ್ನು ಮತ್ತಷ್ಟು ಪ್ರೇರೇಪಿಸಲು ಸಾಧ್ಯವಾಯಿತು.

3) ತಾನು ಸೇವಿಸುವ ಆಹಾರ ಇದೇ ಇರಬೇಕು ಇದಕ್ಕಾಗಿ ತಾನು ಜಂಕ್ ಫುಡ್ ಮುಂತಾದ ಅನಾರೋಗ್ಯಕರ ಆಹಾರವನ್ನು ಸೇವಿಸಲೇಬಾರದು ಎಂದು ದೃಢ ನಿರ್ಧಾರ ಮಾಡಿದ್ದಳು. ಇದು ಆಕೆಯ ಯಶಸ್ಸಿನ ಮೇಲೆ ಪ್ರಭಾವ ಬೀರಿತು.

ತೂಕ ಇಳಿಕೆ ಪ್ರಯಾಣದಲ್ಲಿ ಆಹಾರ ಮತ್ತು ವ್ಯಾಯಾಮದ ನಿಯಮ ಹೀಗಿತ್ತು

ದೀಕ್ಷಾ ತನ್ನ ಆರೋಗ್ಯಕರ ತೂಕ ಇಳಿಕೆಯ ಪ್ರಯಾಣದಲ್ಲಿ ಸಮತೋಲಿತ ಊಟ, ಜಾಗರೂಕತೆಯಿಂದ ತಿನ್ನುವುದು, ಸಕ್ಕರೆ ಹಾಗೂ ಸಂಸ್ಕರಿಸಿದ ಆಹಾರಗಳನ್ನು ಸೀಮಿತಗೊಳಿಸಿದ್ದಳು.

ಸಮತೋಲಿತ ಆಹಾರ ಏನೇನು: ಪ್ರೊಟೀನ್‍ ಅಂಶವುಳ್ಳ ಆಹಾರಗಳ ಸೇವನೆ ಮಾಡುತ್ತಿದ್ದಳು. ಅಂದರೆ ಕೋಳಿ, ಮೀನು, ಬೀನ್ಸ್, ಕಾಳುಗಳು. ಧಾನ್ಯಗಳಲ್ಲಿ ಆಕೆ ಕಂದು ಅಕ್ಕಿ (Brown Rice), ಗೋಧಿ ಬ್ರೆಡ್ ಸೇವಿಸುತ್ತಿದ್ದಳು. ಆರೋಗ್ಯಕರ ಕೊಬ್ಬುಗಳನ್ನು ಪಡೆಯಲು ಒಣ ಹಣ್ಣುಗಳು, ಆಲಿವ್ ಎಣ್ಣೆ, ತುಪ್ಪ ಹಾಗೂ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುತ್ತಿದ್ದಳು.

ಹೈಡ್ರೀಕರಣಕ್ಕೆ ಗಮನ: ದೇಹವನ್ನು ಹೈಡ್ರೀಕರಿಸಿಕೊಳ್ಳುವುದರತ್ತ ಗಮನ ಕೊಡುತ್ತಿದ್ದಳು. ಇದಕ್ಕಾಗಿ ದಿನವಿಡೀ ಸಾಕಷ್ಟು ನೀರು ಕುಡಿಯುತ್ತಿದ್ದಳು. ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರಗಳನ್ನು ಸೀಮಿತಗೊಳಿಸಿದ್ದಳು. ಸಕ್ಕರೆ ಪಾನೀಯಗಳು, ತಿಂಡಿಗಳನ್ನು ನಿಯಂತ್ರಿಸಿಕೊಂಡಿದ್ದಳು.

ತೂಕ ಇಳಿಕೆಗೆ ವ್ಯಾಯಾಮ

ತೂಕ ಇಳಿಕೆಗೆ ಆಹಾರ ಕ್ರಮ ಮಾತ್ರವಲ್ಲ, ದೇಹವನ್ನೂ ದಂಡಿಸಬೇಕಾಗುತ್ತದೆ. ತನ್ನ ಯೋಗಕ್ಷೇಮಕ್ಕಾಗಿ ವರ್ಕೌಟ್‍ನ ಮೇಲೆ ಗಮನ ಕೇಂದ್ರೀಕರಿಸಿದಳು.

ಕಾರ್ಡಿಯೋ ವ್ಯಾಯಾಮ (Cardio exercise): ವಾರಕ್ಕೆ 3 ರಿಂದ 5 ಬಾರಿ ಮಾಡುತ್ತಿದ್ದಳು. ಉದಾಹರಣೆಗೆ: ಓಟ, ಸೈಕ್ಲಿಂಗ್, ಈಜುವುದು, ವೇಗದ ನಡಿಗೆ.

ಶಕ್ತಿ ತರಬೇತಿ: ಇದನ್ನು ವಾರಕ್ಕೆ 2 ರಿಂದ 3 ಬಾರಿ ಮಾಡುತ್ತಿದ್ದಳು. ಉದಾಹರಣೆಗೆ: ತೂಕ ಎತ್ತುವುದು, ಪುಷ್-ಅಪ್‍ ಇತ್ಯಾದಿ.

ಉತ್ತಮ ನಿದ್ದೆ: ದೇಹಕ್ಕೆ ಉತ್ತಮ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಈಕೆ ಪ್ರತಿನಿತ್ಯ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡುತ್ತಿದ್ದಳು.

ತೂಕ ಇಳಿಕೆ ನಂತರ ಬದಲಾಯಿತು ದೀಕ್ಷಾ ಜೀವನ

ದೀಕ್ಷಾ ತನ್ನ ತೂಕವನ್ನು ಇಳಿಸಿಕೊಂಡ ನಂತರ ಆಕೆಯಲ್ಲಿ ಧನಾತ್ಮಕ ಬದಲಾವಣೆಗಳಾಗಿವೆ. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬಂದಿದೆ. ಅಲ್ಲದೆ, ಕಡಿಮೆ ರಕ್ತದೊತ್ತಡ ಮತ್ತು ಇತರೆ ಆರೋಗ್ಯ ಸಮಸ್ಯೆಯೂ ಪರಿಹಾರಗೊಂಡಿದೆ. ಇದರಿಂದ ದೀಕ್ಷಾಳಲ್ಲಿ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ಹೆಚ್ಚಾಗಿದೆಯಂತೆ. ಒಟ್ಟಾರೆ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯ ಸುಧಾರಿಸಿದೆ ಎನ್ನುತ್ತಾಳೆ ದೀಕ್ಷಾ.

ತೂಕ ಇಳಿಕೆ ಪ್ರಯಾಣವು ಅಷ್ಟು ಸುಲಭವಲ್ಲ. ಹಾಗಂತ ಸಾಧಿಸುವ ಛಲವಿದ್ದರೆ ಇದು ಕಷ್ಟವೂ ಅಲ್ಲ. ಬದ್ಧತೆ, ಆತ್ಮವಿಶ್ವಾಸ ಇದ್ದರೆ ಖಂಡಿತಾ ದೀಕ್ಷಾಳಂತೆ ಆರೋಗ್ಯಕರ ತೂಕ ಇಳಿಕೆ ಮಾಡಬಹುದು. ಈ ಪ್ರಕ್ರಿಯೆ ತುಂಬಾ ನಿಧಾನವಾಗಿರುವುದರಿಂದ ತಾಳ್ಮೆ ಕೂಡ ಬಹಳ ಮುಖ್ಯವಾಗಿರುತ್ತದೆ.