ಸಿಪ್ಪೆ ಸಹಿತ ತಿನ್ನಬೇಕಾದ 5 ಆರೋಗ್ಯಕರ ತರಕಾರಿಗಳಿವು; ಸಿಪ್ಪೆ ತಿಪ್ಪೆಗೆಸೆಯೋ ಮುನ್ನ ಒಮ್ಮೆ ಯೋಚಿಸಿ
ಕೆಲವು ತರಕಾರಿಗಳನ್ನು ಸಿಪ್ಪೆ ಸುಲಿದು ತಿಂದರೆ, ಇನ್ನೂ ಕೆಲವು ತರಕಾರಿಗಳನ್ನು ಸಿಪ್ಪೆ ಸಹಿತ ತಿನ್ನುತ್ತೇವೆ. ಆದರೆ, ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿರುವ, ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ 5 ತರಕಾರಿಗಳನ್ನು ಸಿಪ್ಪೆ ಸುಲಿಯದೆ ಹಾಗೆಯೇ ತಿನ್ನುವುದು ಆರೋಗ್ಯಕರ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ನಮ್ಮ ಆಹಾರದ ಭಾಗವಾಗಿರುವ ಅನೇಕ ರೀತಿಯ ತರಕಾರಿಗಳಿವೆ. ಅವು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ತರಕಾರಿ ನಮ್ಮ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿ. ಸಾಮಾನ್ಯವಾಗಿ, ನಾವು ಕೆಲವು ತರಕಾರಿಗಳನ್ನು ಸಿಪ್ಪೆ ಸಹಿತ ತಿನ್ನುವುದು ಉತ್ತಮ. ಆದರೆ, ಕೆಲವು ರೀತಿಯ ತರಕಾರಿಗಳನ್ನು ಸಿಪ್ಪೆ ಸುಲಿದು ತಿನ್ನಲಾಗುತ್ತದೆ. ಸಿಪ್ಪೆ ಸಹಿತ ತಿನ್ನುವುದು ಬಹಳ ಪ್ರಯೋಜನಕಾರಿ.
ತರಕಾರಿಗಳ ಸಿಪ್ಪೆಯಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಮೇಲ್ಭಾಗದಲ್ಲಿರುವ ಸಿಪ್ಪೆಯನ್ನು ತೆಗೆದುಹಾಕುವುದರಿಂದ ಬಹಳಷ್ಟು ಪೋಷಕಾಂಶಗಳು ನಾಶವಾಗುತ್ತವೆ. ಹೀಗಾಗಿ ಸಿಪ್ಪೆ ಸುಲಿಯದೆ ತಿನ್ನಬೇಕಾದ ಕೆಲವು ತರಕಾರಿಗಳಿವೆ. ಅವುಗಳನ್ನು ಸಿಪ್ಪೆ ಸಹಿತ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಅವು ಯಾವ್ಯಾವು ಇಲ್ಲಿ ತಿಳಿದುಕೊಳ್ಳಿ.
ಸಿಪ್ಪೆ ಸಹಿತ ತಿನ್ನಲೇಬೇಕಾದ ತರಕಾರಿಗಳು
ಆಲೂಗಡ್ಡೆ: ಆಲೂಗಡ್ಡೆಯನ್ನು ಚಪಾತಿ ಜತೆ ತಿನ್ನಲು ಹೆಚ್ಚಾಗಿ ಇದರ ಪಲ್ಯ ತಯಾರಿಸಲಾಗುತ್ತದೆ. ಬಹುತೇಕರು ಆಲೂಗಡ್ಡೆಯ ಸಿಪ್ಪೆ ಸುಲಿದು ಬೇಯಿಸುತ್ತಾರೆ. ಆಲೂಗಡ್ಡೆ ಸಿಪ್ಪೆಯು ಜೀವಸತ್ವಗಳು, ಫೈಬರ್, ಕಬ್ಬಿಣ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇವು ಕೆಂಪು ರಕ್ತ ಕಣಗಳ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಕೆಲಸ ಮಾಡುತ್ತದೆ. ಅಲ್ಲದೆ, ಆಲೂಗಡ್ಡೆ ಸಿಪ್ಪೆ ಅದರ ತಿರುಳಿಗಿಂತ ಹೆಚ್ಚಿನ ಪೊಟ್ಯಾಸಿಯಮ್ ಅನ್ನು ಹೊಂದಿರುತ್ತವೆ. ಇದು ಹೃದಯದ ಆರೋಗ್ಯವನ್ನು ಕಾಪಾಡುವಲ್ಲೂ ಪ್ರಯೋಜನಕಾರಿ.
ಹೀರೇಕಾಯಿ: ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹೀರೇಕಾಯಿಯನ್ನು ಸಹ ಕೆಲವರು ಸಿಪ್ಪೆ ತೆಗೆದು ಅಡುಗೆ ಮಾಡುತ್ತಾರೆ. ಹೀರೇಕಾಯಿ ಸಿಪ್ಪೆಯಲ್ಲಿ ಅನೇಕ ಪೋಷಕಾಂಶಗಳಿವೆ. ಇದು ಮಕ್ಕಳಿಗೆ ಇಷ್ಟವಾಗದಿರಬಹುದು, ಆದರೆ ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಈ ತರಕಾರಿಯನ್ನು ಯಾವಾಗಲೂ ಸಿಪ್ಪೆ ಸಹಿತ ಬೇಯಿಸಬೇಕು. ಇದರ ಸಿಪ್ಪೆಯು ಫೈಬರ್, ವಿಟಮಿನ್ ಸಿ, ಪೊಟ್ಯಾಸಿಯಮ್ ಮುಂತಾದ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಹೊಟ್ಟೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಕ್ಯಾರೆಟ್: ಮಕ್ಕಳು ತಿನ್ನಲು ಇಷ್ಟಪಡುವ ನೆಚ್ಚಿನ ಆಹಾರಗಳಲ್ಲಿ ಇದೂ ಒಂದು. ಕ್ಯಾರೆಟ್ ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಇದರಿಂದ ಪಲ್ಯ, ಸಾಂಬಾರ್, ಹಲ್ವಾ ಇತ್ಯಾದಿ ಭಕ್ಷ್ಯ ತಯಾರಿಸಲಾಗುತ್ತದೆ. ಆದರೆ, ಸಿಪ್ಪೆ ತೆಗೆದು ಇದನ್ನು ಉಪಯೋಗಿಸುವುದೇ ಹೆಚ್ಚು. ಸಿಪ್ಪೆಗಳನ್ನು ತೆಗೆಯುವುದರಿಂದ ಇದರಲ್ಲಿರುವ ಪೋಷಕಾಂಶಗಳು ನಾಶವಾಗುತ್ತದೆ. ಕ್ಯಾರೆಟ್ ಸಿಪ್ಪೆ ಉತ್ಕರ್ಷಣ ನಿರೋಧಕಗಳು, ಫೈಬರ್, ವಿಟಮಿನ್ ಸಿ, ಬಿ 3, ಫೈಟೊನ್ಯೂಟ್ರಿಯೆಂಟ್ಸ್ ಮುಂತಾದ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಹೀಗಾಗಿ ಸಿಪ್ಪೆ ತೆಗೆಯದೆ ತಿನ್ನುವುದು ಒಳ್ಳೆಯದು.
ಸೌತೆಕಾಯಿ: ಇದನ್ನು ಹಸಿಯಾಗಿ ತಿನ್ನುವುದು ಹೆಚ್ಚು. ಅದರಲ್ಲೂ ಮಾಂಸಾಹಾರ ಪ್ರಿಯರಿಗಂತೂ ಚಿಕನ್, ಮಟನ್ ಖಾದ್ಯ ತಿನ್ನುವಾಗ ಸೈಡ್ ಡಿಶ್ ಆಗಿ ಸೌತೆಕಾಯಿ ಬೇಕೆ ಬೇಕು. ಸೌತೆಕಾಯಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದರ ಸಿಪ್ಪೆ ಸುಲಿಯದೆ ತಿನ್ನುವುದು ಉತ್ತಮ. ಸೌತೆಕಾಯಿ ಸಿಪ್ಪೆಯು ಫೈಬರ್, ಜೀವಸತ್ವಗಳು ಮತ್ತು ಅನೇಕ ಖನಿಜಗಳನ್ನು ಹೊಂದಿರುತ್ತವೆ. ಇವು ದೇಹದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಕೂದಲು ಮತ್ತು ಉಗುರುಗಳಿಂದ ರಕ್ತ ಪರಿಚಲನೆಯನ್ನು ಕಾಪಾಡಿಕೊಳ್ಳಲು ಅವು ಸಹಾಯ ಮಾಡುತ್ತವೆ.
ಬದನೆಕಾಯಿ: ಇದರ ಪಲ್ಯವನ್ನು ಕೆಲವರು ಇಷ್ಟಪಟ್ಟರೆ, ಇನ್ನೂ ಕೆಲವರಿಗೆ ಇಷ್ಟವಾಗುವುದಿಲ್ಲ. ವಿಶೇಷವಾಗಿ ಮಕ್ಕಳಿಗಂತೂ ಬದನೆಕಾಯಿ ಪಲ್ಯ ಅಂದ್ರೆ ಇಷ್ಟವಾಗುವುದಿಲ್ಲ. ಇದನ್ನು ಸಿಪ್ಪೆ ಸುಲಿಯದೆ ಹಾಗೆಯೇ ಬೇಯಿಸಬೇಕು. ಬದನೆಕಾಯಿ ಸಿಪ್ಪೆಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಸಿಪ್ಪೆಯಲ್ಲಿರುವ ನಾರಿನಂಶ ಕರುಳನ್ನು ಆರೋಗ್ಯಕರವಾಗಿರಿಸುತ್ತದೆ. ಇದನ್ನು ತಿನ್ನುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಚರ್ಮವನ್ನು ಆರೋಗ್ಯಕರವಾಗಿಡುವಲ್ಲಿ ಬದನೆಕಾಯಿ ಸಿಪ್ಪೆ ಪ್ರಯೋಜನಕಾರಿ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)