ಆರೋಗ್ಯದ ದೃಷ್ಟಿಯಿಂದ ಯಾವ ಸಿಹಿ ಬೆಸ್ಟ್‌? ಬೆಲ್ಲ ಮತ್ತು ಸಕ್ಕರೆ ನಡುವಿನ ಗೊಂದಲಕ್ಕೆ ಇಲ್ಲಿದೆ ಪರಿಹಾರ
ಕನ್ನಡ ಸುದ್ದಿ  /  ಜೀವನಶೈಲಿ  /  ಆರೋಗ್ಯದ ದೃಷ್ಟಿಯಿಂದ ಯಾವ ಸಿಹಿ ಬೆಸ್ಟ್‌? ಬೆಲ್ಲ ಮತ್ತು ಸಕ್ಕರೆ ನಡುವಿನ ಗೊಂದಲಕ್ಕೆ ಇಲ್ಲಿದೆ ಪರಿಹಾರ

ಆರೋಗ್ಯದ ದೃಷ್ಟಿಯಿಂದ ಯಾವ ಸಿಹಿ ಬೆಸ್ಟ್‌? ಬೆಲ್ಲ ಮತ್ತು ಸಕ್ಕರೆ ನಡುವಿನ ಗೊಂದಲಕ್ಕೆ ಇಲ್ಲಿದೆ ಪರಿಹಾರ

Jaggery Vs Sugar: ಸಾಮಾನ್ಯವಾಗಿ ಸಿಹಿ ಪದಾರ್ಥಗಳೆಂದರೆ ಎಲ್ಲರಿಗೂ ಪ್ರೀತಿ. ಆದರೆ ಅವುಗಳಿಂದ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಸಾಮಾನ್ಯವಾಗಿ ನಾವು ಪ್ರತಿನಿತ್ಯ ಬೆಲ್ಲ ಅಥವಾ ಸಕ್ಕರೆ ಸೇವಿಸುತ್ತೇವೆ. ಆರೋಗ್ಯದ ದೃಷ್ಟಿಯಿಂದ ಬೆಲ್ಲ ಅಥವಾ ಸಕ್ಕರೆ ಆಯ್ದುಕೊಳ್ಳುವ ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳಿ.

ಆರೋಗ್ಯದ ದೃಷ್ಟಿಯಿಂದ ಯಾವ ಸಿಹಿ ಬೆಸ್ಟ್‌? ಬೆಲ್ಲ ಮತ್ತು ಸಕ್ಕರೆ ನಡುವಿನ ಗೊಂದಲಕ್ಕೆ ಇಲ್ಲಿದೆ ಪರಿಹಾರ
ಆರೋಗ್ಯದ ದೃಷ್ಟಿಯಿಂದ ಯಾವ ಸಿಹಿ ಬೆಸ್ಟ್‌? ಬೆಲ್ಲ ಮತ್ತು ಸಕ್ಕರೆ ನಡುವಿನ ಗೊಂದಲಕ್ಕೆ ಇಲ್ಲಿದೆ ಪರಿಹಾರ (PC: Freepik)

ಇತ್ತೀಚೆಗೆ ಎಲ್ಲರೂ ಆರೋಗ್ಯದ ಬಗ್ಗೆ ಹೆಚ್ಚು ‌ಕಾಳಜಿವಹಿಸುತ್ತಿದ್ದಾರೆ. ಬೆಳಗ್ಗಿನ ಟೀ, ಕಾಫಿಯಿಂದ ಹಿಡಿದು ರಾತ್ರಿಯ ಊಟದವರೆಗೆ ಯಾವ ಆಹಾರ ಸೇವಿಸುವುದು ಬೆಸ್ಟ್‌ ಎಂದು ಚರ್ಚಿಸುವುದನ್ನು ನಾವು ಕಾಣಬಹುದಾಗಿದೆ. ಅದರಲ್ಲೂ ಸಕ್ಕರೆ, ಬೆಲ್ಲದಂತಹ ಸಿಹಿ ಪದಾರ್ಥಗಳ ವಿಚಾರದಲ್ಲಂತೂ ತುಸು ಹೆಚ್ಚೇ ಕಾಳಜಿವಹಿಸುತ್ತಿದ್ದಾರೆ. ಏಕೆಂದರೆ ಸಿಹಿ ಪದಾರ್ಥಗಳಿಂದ ಗಂಭೀರ ಸಮಸ್ಯೆಗಳು ಎದುರಾಗುವ ಸಂಭವ ಹೆಚ್ಚು ಎಂಬುದನ್ನು ಮನಗೊಂಡಿದ್ದಾರೆ. ಬೆಲ್ಲ ಮತ್ತು ಸಕ್ಕರೆ ಇವೆರಡಲ್ಲಿ ಯಾವುದು ಬೆಸ್ಟ್‌? ಈ ಪ್ರಶ್ನೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ಸಾಮಾನ್ಯವಾಗಿ ಬೆಲ್ಲ ಮತ್ತು ಸಕ್ಕರೆ ಇವೆರಡನ್ನು ಕಬ್ಬಿನ ರಸದಿಂದಲೇ ತಯಾರಿಸಲಾಗುತ್ತದೆ. ಆದರೆ ಸಕ್ಕರೆ ದೇಹಕ್ಕೆ ಹಾನಿಯನ್ನುಂಟು ಮಾಡುತ್ತದೆ ಎಂದು ಹೇಳಲಾಗುತ್ತದೆ. ಅದು ಹೇಗೆ? ಆರೋಗ್ಯದ ದೃಷ್ಟಿಯಿಂದ ಸಕ್ಕರೆಗಿಂತ ಬೆಲ್ಲ ಹೇಗೆ ಪ್ರಯೋಜನಕಾರಿಯಾಗಿದೆ ಇಲ್ಲಿದೆ ಓದಿ.

ಆರೋಗ್ಯದ ದೃಷ್ಟಿಯಿಂದ ಬೆಲ್ಲ ಅಥವಾ ಸಕ್ಕರೆ ಯಾವುದು ಬೆಸ್ಟ್‌?

ಪೋಷಕಾಂಶಗಳು: ಬೆಲ್ಲದಲ್ಲಿ 2 ರೀತಿಯಿದೆ. ಕಬ್ಬಿನ ರಸದಿಂದ ತೆಗೆಯುವ ಬೆಲ್ಲ ಮತ್ತು ತಾಳೆಯ ರಸದಿಂದ ತೆಗೆಯುವ ಬೆಲ್ಲ. ಬೆಲ್ಲದಲ್ಲಿ ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ನಂತಹ ಪ್ರಮುಖ ಪೋಷಕಾಂಶಗಳು ಹಾಗೆಯೇ ಉಳಿದಿರುತ್ತವೆ. ಈ ಖನಿಜಗಳು ರಕ್ತ ತಯಾರಿಸಲು, ಮೂಳೆಗಳ ಆರೋಗ್ಯ ಮತ್ತು ಸ್ನಾಯುವಿನ ಕಾರ್ಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತವೆ. ಆದರೆ, ಸಕ್ಕರೆಯನ್ನು ತಯಾರಿಸುವಾಗ ಭಾರಿ ಸಂಸ್ಕರಣೆಗೆ ಒಳಪಡಿಸಲಾಗುತ್ತದೆ. ಆಗ ಅದರಲ್ಲಿರುವ ಎಲ್ಲಾ ಪೋಷಕಾಂಶಗಳನ್ನು ತೆಗೆದುಹಾಕಲಾಗುತ್ತದೆ.

ಕಡಿಮೆ ಗ್ಲೈಸಮಿಕ್‌ ಸೂಚ್ಯಂಕ: ಬೆಲ್ಲವು ಸಕ್ಕರೆಗಿಂತ ಕಡಿಮೆ ಗ್ಲೈಸಮಿಕ್‌ ಸೂಚ್ಯಂಕವನ್ನು ಹೊಂದಿದೆ. ಹಾಗಾಗಿ ಅದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಧಾನವಾಗಿ ಏರಿಕೆಯಾಗುವಂತೆ ಮಾಡುತ್ತದೆ. ಮಧುಮೇಹ ಮತ್ತು ಗ್ಲೂಕೋಸ್‌ ಮಟ್ಟವನ್ನು ನಿಯಂತ್ರಿಸಲು ಬಯಸುವವರಿಗೆ ಬೆಲ್ಲವು ಉತ್ತಮವಾಗಿದೆ. ಆದರೆ ಸಕ್ಕರೆ ಮತ್ತು ಬೆಲ್ಲ ಇವೆರಡನ್ನೂ ಮಿತವಾಗಿ ಸೇವಿಸುವುದು ಅಗತ್ಯವಾಗಿದೆ.

ಲಿವರ್‌ ಅನ್ನು ಸ್ವಚ್ಛಗೊಳಿಸುತ್ತದೆ: ಬೆಲ್ಲದಲ್ಲಿ ಲಿವರ್‌ ಅನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸುವ ಸಾಮರ್ಥ್ಯವಿದೆ ಎಂದು ತಿಳಿಯಲಾಗಿದೆ. ಇದು ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಬೆಲ್ಲದಲ್ಲಿರುವ ಆಂಟಿಆಕ್ಸಿಡೆಂಟ್‌ ಲಿವರ್‌ನ ಕಾರ್ಯವನ್ನು ಹೆಚ್ಚಿಸುತ್ತದೆ ಮತ್ತು ಡಿಟಾಕ್ಸ್‌ಗೊಳಿಸುತ್ತದೆ. ಸಕ್ಕರೆಯು ಲಿವರ್‌ನಲ್ಲಿ ವಿಷಕಾರಿ ಅಂಶಗಳನ್ನು ಹೆಚ್ಚಿಸುತ್ತದೆ. ಇದರಿಂದ ಆರೋಗ್ಯದ ಸಮಸ್ಯೆಗಳು ಎದುರಾಗುತ್ತವೆ.

ಜೀರ್ಣಕ್ರಿಯೆ ಸುಧಾರಿಸುತ್ತದೆ: ಭಾರತದ ಕೆಲವು ಪ್ರದೇಶಗಳಲ್ಲಿ ಊಟದ ನಂತರ ಬೆಲ್ಲ ತಿನ್ನುವುದನ್ನು ಕಾಣಬಹುದು. ಏಕೆಂದರೆ ಬೆಲ್ಲವು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ. ಅದು ಕರುಳಿನ ಚಲನೆಗೆ ಸಹಕಾರಿಯಾಗಿದೆ. ಅಜೀರ್ಣ ಮತ್ತು ಎದೆಯುಬ್ಬರವನ್ನು ತಡೆಯಲು ಸಹಾಯ ಮಾಡುತ್ತದೆ. ಬೆಲ್ಲವು ಗ್ಯಾಸ್ಟ್ರಿಕ್‌ ಜ್ಯೂಸ್‌ ಸ್ರವಿಸುವಿಕೆಯನ್ನು ಹೆಚ್ಚಿಸುವ ಮೂಲಕ ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆದರೆ, ಸಾಮಾನ್ಯವಾಗಿ ಸಕ್ಕರೆ ಜೀರ್ಣಕ್ರಿಯೆಗೆ ಅಡ್ಡಿಪಡಿಸುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಬೆಲ್ಲವು ಝಿಂಕ್‌, ಸೆಲೆನಿಯಂ ಮತ್ತು ಆಂಟಿಆಕ್ಸಿಡೆಂಟ್‌ ಅನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಆಕ್ಸಿಡೇಟಿವ್‌ ಒತ್ತಡವನ್ನುಂಟು ಮಾಡುವ ಫ್ರೀ ರ್‍ಯಾಡಿಕಲ್‌ಗಳನ್ನು ಹೋಗಲಾಡಿಸುತ್ತದೆ. ಈ ಅದ್ಭುತ ಗುಣಗಳು ಸಾಮಾನ್ಯ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಸಕ್ಕರೆಯು ದೇಹದಲ್ಲಿ ಉರಿಯೂತವನ್ನುಂಟು ಮಾಡುತ್ತದೆ. ಈ ಮೂಲಕ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ.

ಮಲಬದ್ಧತೆ: ಬೆಲ್ಲದಲ್ಲಿರುವ ನೈಸರ್ಗಿಕ ವಿರೇಚಕ ಗುಣಲಕ್ಷಣಗಳು ಕರುಳಿನ ಕಾರ್ಯವನ್ನು ಉತ್ತೇಜಿಸುತ್ತದೆ. ಇದರಿಂದ ನಿಯಮಿತವಾಗಿ ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ಇದು ನಾರಿನಂಶದಂತೆ ತಾಜ್ಯವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಿಂದ ಮಲಬದ್ಧತೆ ತಡೆಯುತ್ತದೆ. ಸಕ್ಕರೆಯಲ್ಲಿ ನಾರಿನಾಂಶ ಕಂಡುಬರುವುದಿಲ್ಲ. ಹಾಗಾಗಿ ಅತಿಯಾಗಿ ಸಕ್ಕರೆ ತಿಂದರೆ ಅದು ಜೀರ್ಣಕಾರಿ ಸಮಸ್ಯೆಗೆಳಿಗೆ ಕಾರಣವಾಗಬಹುದು.

ಸಂಸ್ಕರಣೆ: ಬೆಲ್ಲವನ್ನು ಕಡಿಮೆ ಪ್ರಮಾಣದಲ್ಲಿ ಸಂಸ್ಕರಿಸಲಾಗುತ್ತದೆ. ಅದರಲ್ಲಿ ರಾಸಾಯನಿಕಗಳು ಅಥವಾ ಸಂರಕ್ಷಕಗಳು ಅಷ್ಟಾಗಿ ಕಂಡುಬರುವುದಿಲ್ಲ. ಬೆಲ್ಲದಲ್ಲಿ ನೈಸರ್ಗಿಕ ಪರಿಮಳ ಮತ್ತು ಪೌಷ್ಟಿಕಾಂಶಗಳಿರುತ್ತವೆ. ಕಬ್ಬು ಮತ್ತು ತಾಳೆಯ ರಸವನ್ನು ಕುದಿಸಿ ಬೆಲ್ಲ ತಯಾರಿಸಲಾಗುತ್ತದೆ. ಆದರೆ ಸಕ್ಕರೆಯನ್ನು ಸಂಸ್ಕರಿಸುವಾಗ ಬ್ಲೀಚಿಂಗ್‌ನಂತಹ ರಾಸಾಯನಿಕಗಳನ್ನು ಹಾಯಿಸಲಾಗುತ್ತದೆ. ಇದರಿಂದ ಪೋಷಕಾಂಶಗಳ ನಷ್ಟ ಉಂಟಾಗುತ್ತದೆ. ಪ್ರಮುಖವಾಗಿ ಸಕ್ಕರೆಯ ಸಂಸ್ಕರಣದಲ್ಲಿ ಸಲ್ಫರ್‌ ಡೈಒಕ್ಸೈಡ್‌ನಂತಹ ಹಾನಿಕಾರಕ ಪದಾರ್ಥಗಳನ್ನು ಬಳಸಲಾಗುತ್ತದೆ.

Whats_app_banner