ಬಾದಾಮಿ vs ವಾಲ್‌ನಟ್: ನಿಮ್ಮ ಬುದ್ಧಿ ಚುರುಕುಗೊಳಿಸಲು ಇದೇ ಬೆಸ್ಟ್, ಈ ಒಣ ಬೀಜದಲ್ಲಿದೆ ಅಗಾಧ ಶಕ್ತಿ
ಬಾದಾಮಿ ಮತ್ತು ವಾಲ್‌ನಟ್ ಇವೆರಡೂ ಪೌಷ್ಟಿಕಾಂಶಗಳ ಕಣಜ. ಮಿದುಳಿನ ಆರೋಗ್ಯ ವೃದ್ಧಿಸುವಲ್ಲಿ ಹೆಚ್ಚು ಸಹಾಯ ಮಾಡುವುದು ಯಾವುದು? ಈ ಪ್ರಶ್ನೆಗೆ ಸರಿಯಾದ ಉತ್ತರ ಕಂಡುಕೊಳ್ಳುವ ಮೊದಲು ಆ ಎರಡು ಒಣ ಬೀಜಗಳಲ್ಲಿರುವ ಪೌಷ್ಟಿಕಾಂಶ ಮತ್ತು ಪ್ರಯೋಜನಗಳ ಬಗ್ಗೆ ತಿಳಿಯುವುದು ಅಗತ್ಯವಾಗಿದೆ.
ಒಣ ಹಣ್ಣು ಮತ್ತು ಬೀಜಗಳು ಪೌಷ್ಟಿಕಾಂಶಗಳ ಆಗರವಾಗಿದೆ. ಅವು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತವೆ. ಕೆಲವು ಒಣ ಹಣ್ಣುಗಳು ದೇಹದ ನಿರ್ದಿಷ್ಟ ಭಾಗಗಳ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ. ಮಿದುಳಿನ ಆರೋಗ್ಯಕ್ಕೆ ಸಹಾಯ ಮಾಡುವ ಒಣ ಬೀಜಗಳನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳುವುದು ಹೆಚ್ಚಿನ ಪರಿಣಾಮ ನೀಡುತ್ತವೆ. ಮಿದುಳಿನ ಆರೋಗ್ಯಕ್ಕೆ ಬಾದಾಮಿ ಮತ್ತು ವಾಲ್‌ನಟ್‌ಗಳು ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದು ಹೇಳಲಾಗುತ್ತದೆ. ವಿಶಿಷ್ಟ ಸಿಹಿ ಮತ್ತು ಪರಿಮಳದಿಂದ ಕೂಡಿರುವ ಬಾದಾಮಿಯಲ್ಲಿ ವಿಟಮಿನ್ ಇ ಹೇರಳವಾಗಿದೆ. ಇದು ಉತ್ಕರ್ಷಣ ನಿರೋಧಕವಾಗಿದ್ದು, ವಯಸ್ಸಾಗುವಿಕೆಯನ್ನು ತಡೆಯುತ್ತದೆ ಮತ್ತು ಮರೆಗುಳಿತನವನ್ನು ದೂರಮಾಡುತ್ತದೆ. ಮತ್ತೊಂದೆಡೆ ವಾಲ್‌ನಟ್ ಮಿದುಳಿನ ಆರೋಗ್ಯಕ್ಕೆ ಸೂಪರ್‌ಫುಡ್ ಎಂದು ಹೇಳಲಾಗುತ್ತದೆ. ಏಕೆಂದರೆ ಇದರಲ್ಲಿ ಸಾಕಷ್ಟು ಒಮೆಗಾ–3 ಕೊಬ್ಬಿನಾಮ್ಲಗಳಿವೆ. ಇದರಲ್ಲಿರುವ ಅಲ್ಫಾ ಲಿನೋಲೆನಿಕ್ ಆಮ್ಲ ಮಿದುಳಿನ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ವಾಲ್‌ನಟ್‌ನಲ್ಲಿರುವ ಲಿಪಿಡ್‌ಗಳು ಮಿದುಳಿನ ಜೀವಕೋಶ ಪೊರೆಗಳ ದುರಸ್ತಿ, ಉರಿಯೂತ ಶಮನ ಮಾಡುತ್ತದೆ. ಬಾದಾಮಿ ಮತ್ತು ವಾಲ್‌ನಟ್ ಇವೆರಡೂ ಮಿದುಳಿನ ಆರೋಗ್ಯಕ್ಕೆ ಪ್ರಯೋಜನಗಳನ್ನು ನೀಡುತ್ತವೆ. ಆದರೆ ಯಾವುದು ಹೆಚ್ಚು ಪ್ರಯೋಜನಕಾರಿ ಎಂದು ತಿಳಿಯೋಣ.
ಬಾದಾಮಿಯಲ್ಲಿರುವ ಪೌಷ್ಟಿಕಾಂಶಗಳು
ಬಾದಾಮಿಯು ಅಗತ್ಯ ಪೋಷಕಾಂಶಗಳ ಮೂಲವಾಗಿದೆ. ಇದರಲ್ಲಿ ವಿಟಮಿನ್ ಇ, ಬಿ2, ಮ್ಯಾಗ್ನೇಸಿಯಂ, ಪಾಸ್ಪರಸ್, ಪೊಟ್ಯಾಸಿಯಂ ಮುಂತಾದ ಪೋಷಕಾಂಶಗಳಿವೆ. ವೆಬ್‌ಎಮ್‌ಡಿಯ ಪ್ರಕಾರ ಬಾದಾಮಿಯನ್ನು ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ (ಲೋ ಡೆನ್ಸಿಟಿ ಲಿಪೋಪ್ರೋಟೀನ್) ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಹೈ ಡೆನ್ಸಿಟಿ ಲಿಪೋಪ್ರೋಟೀನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಉರಿಯೂತ ಶಮನ ಗುಣಲಕ್ಷಣವು ಹೃದಯದ ಕಾಯಿಲೆಗಳಿಂದ ರಕ್ಷಿಸುತ್ತದೆ.
ವಾಲ್‌ನಟ್‌ನಲ್ಲಿರುವ ಪೌಷ್ಟಿಕಾಂಶಗಳು
ಎಲ್ಲಾ ಒಣ ಬೀಜಗಳಲ್ಲಿ ವಾಲ್‌ನಟ್ ಅತಿ ಹೆಚ್ಚು ಒಮೆಗಾ 3 ಕೊಬ್ಬಿನಾಮ್ಲಗಳನ್ನು ಹೊಂದಿದೆ. ಇದು ಉತ್ತಮ ಆರೋಗ್ಯಕ್ಕೆ ಅಗತ್ಯವಿರುವ ಕೊಬ್ಬಾಗಿದೆ. ವಾಲ್‌ನಟ್‌ನಲ್ಲಿ ಅಡಗಿರುವ ಪಾಲಿಫಿನೊಲಿಕ್ ರಾಸಾಯನಿಕವು ಆಂಟಿಆಕ್ಸಿಡೆಂಟ್ ಗುಣಲಕ್ಷಣವನ್ನು ಹೊಂದಿದೆ. ಇದು ಉರಿಯೂತ ಮತ್ತು ಆಕ್ಸಿಡೆಟೀವ್ ಒತ್ತಡದಿಂದ ಮಿದುಳಿಗೆ ರಕ್ಷಾಕವಚವನ್ನು ಒದಗಿಸುತ್ತದೆ. ವಾಲ್‌ನಟ್ ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳಿಂದ ದೂರವಿರಿಸುತ್ತದೆ.
ಬಾದಾಮಿಯ ಪ್ರಯೋಜನಗಳು
ಬಾದಾಮಿಯಲ್ಲಿರುವ ವಿಟಮಿನ್ ಇ ಮಿದುಳನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಬಾದಾಮಿಯನ್ನು ತಿನ್ನುವುದರಿಂದ ನೆನಪಿನ ಶಕ್ತಿ ಸುಧಾರಿಸುತ್ತದೆ. ವಯಸ್ಸಾದ ವ್ಯಕ್ತಿಗಳಲ್ಲಿ ಕಂಡುಬರುವ ಮರೆವಿನ ಕಾಯಿಲೆಯನ್ನು ದೂರ ಮಾಡುತ್ತದೆ. ಇದರಲ್ಲಿರುವ ನಾರಿನಾಂಶವು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಮಿದುಳು ಮತ್ತು ಕರುಳಿನ ಆರೋಗ್ಯವು ಒಂದಕ್ಕೊಂದು ಸಂಬಂಧಿಸಿದೆ. ಬಾದಾಮಿಯು ಇವೆರಡರ ಆರೋಗ್ಯವನ್ನು ಯಶಸ್ವಿಯಾಗಿ ಕಾಪಾಡಬಲ್ಲದು.
ವಾಲ್‌ನಟ್‌ನ ಪ್ರಯೋಜನಗಳು
ಹಲವು ಸಂಶೋಧನೆಗಳಿಂದ ತಿಳಿದುಬಂದ ವಿಷಯವೇನೆಂದರೆ ವಾಲ್‌ನಟ್‌ನಲ್ಲಿ ಒಮೆಗಾ–3 ಕೊಬ್ಬಿನ ಆಮ್ಲಗಳು ಯಥೇಚ್ಛವಾಗಿವೆ. ಅವು ನ್ಯೂರೋಪ್ರೊಟೆಕ್ಟಿವ್ ಗುಣಲಕ್ಷಣಗಳನ್ನು ಹೊಂದಿವೆ. ಒಮೆಗಾ 3 ಹೊಂದಿರುವ ಆಹಾರಗಳು ಮನಸ್ಥಿತಿಯನ್ನು ಸುಧಾರಿಸುತ್ತವೆ. ನೆನಪಿನ ಶಕ್ತಿ ಹೆಚ್ಚಿಸುವುದರ ಜೊತೆಗೆ ಮರೆವಿನ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತವೆ. ಉರಿಯೂತವು ಮಿದುಳಿನ ಕಾರ್ಯದ ಮೇಲೆ ಪರಿಣಾಮ ಬೀರುತ್ತದೆ. ವಾಲ್‌ನಟ್‌ನಲ್ಲಿರುವ ಉರಿಯೂತ ನಿವಾರಿಸುವ ಗುಣವು ಆಕ್ಸಿಡೇಟಿವ್ ಒತ್ತಡ ಮತ್ತು ದೀರ್ಘಕಾಲದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.