ಕನ್ನಡ ಸುದ್ದಿ  /  ಜೀವನಶೈಲಿ  /  ಹಸು, ಎಮ್ಮೆ ಹಾಲಿಗೆ ಪರ್ಯಾಯ ಡೈರಿ ಉತ್ಪನ್ನ ಮಾರುಕಟ್ಟೆಯಲ್ಲಿ ಲಭ್ಯ: ಸೂಕ್ತವಾದ ಹಾಲನ್ನು ಆರಿಸುವುದು ಹೇಗೆ?

ಹಸು, ಎಮ್ಮೆ ಹಾಲಿಗೆ ಪರ್ಯಾಯ ಡೈರಿ ಉತ್ಪನ್ನ ಮಾರುಕಟ್ಟೆಯಲ್ಲಿ ಲಭ್ಯ: ಸೂಕ್ತವಾದ ಹಾಲನ್ನು ಆರಿಸುವುದು ಹೇಗೆ?

ಬೆಳ್ಳಗಿರುವುದೆಲ್ಲಾ ಹಾಲಲ್ಲ ಅಂದ್ರು ನಮ್ಮ ಹಿರಿಯರು. ಭಾರತೀಯ ಮನೆಗಳಲ್ಲಿ ಹಸುವಿನ ಹಾಲಿಗೆ ಪೂಜ್ಯ ಸ್ಥಾನವಿದೆ. ತಲೆಮಾರುಗಳಿಂದ ಬಹುತೇಕ ಮನೆಗಳಲ್ಲಿ ಹಸುವಿನ ಹಾಲನ್ನು ಸೇವಿಸಿಕೊಂಡು ಬರಲಾಗುತ್ತಿದೆ. ಹಸುವಿನ ಹಾಲಿನ ದೊಡ್ಡ ಡೈರಿ ಮಾರುಕಟ್ಟೆಯೇ ನಮ್ಮಲ್ಲಿದೆ. ಆದರೂ, ಇತ್ತೀಚಿನ ವರ್ಷಗಳಲ್ಲಿ ಹಸು/ಎಮ್ಮೆ ಹಾಲಿಗೆ ಪರ್ಯಾಯವಾಗಿ ಬೇರೆ ಹಾಲಿನ ಉತ್ಪನ್ನ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಹೀಗಾಗಿ ಹಸುವಿನ ಹಾಲು ಸೂಕ್ತವೋ, ಪರ್ಯಾಯ ಉತ್ಪನ್ನ ಸೂಕ್ತವೋ ಎಂಬ ಚರ್ಚೆ ಶುರುವಾಗಿದೆ. ಇದರ ಬಗ್ಗೆ ಇಲ್ಲಿದೆ ಮಾಹಿತಿ..

ಹಸು, ಎಮ್ಮೆ ಹಾಲಿಗೆ ಪರ್ಯಾಯವಾಗಿ ಡೈರಿ ಉತ್ಪನ್ನ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಸೂಕ್ತವಾದ ಹಾಲನ್ನು ಆರಿಸುವುದು ಹೇಗೆ ಅನ್ನೋದನ್ನು ತಿಳಿಯಿರಿ.
ಹಸು, ಎಮ್ಮೆ ಹಾಲಿಗೆ ಪರ್ಯಾಯವಾಗಿ ಡೈರಿ ಉತ್ಪನ್ನ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಸೂಕ್ತವಾದ ಹಾಲನ್ನು ಆರಿಸುವುದು ಹೇಗೆ ಅನ್ನೋದನ್ನು ತಿಳಿಯಿರಿ.

ಪುಟ್ಟ ಮಕ್ಕಳು ತಾಯಿ ಎದೆಹಾಲು ಕುಡಿದರೆ, ಬೆಳೆಯುತ್ತಾ ಹಸುವಿನ ಹಾಲು ಕುಡಿಯುವುದು ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಕೆಲವರು ಎಮ್ಮೆಯ ಹಾಲನ್ನು ಸಹ ಸೇವಿಸುತ್ತಾರೆ. ಇನ್ನೂ ಕೆಲವರು ಮೇಕೆ ಹಾಲು ಕೂಡ ಸೇವಿಸುತ್ತಾರೆ. ರಾತ್ರಿ ಊಟವಾದ ಬಳಿಕ ಹಾಲು ಸೇವಿಸುವುದು ಅಥವಾ ಮಕ್ಕಳಿಗೆ ಬೆಳಗ್ಗೆ, ಸಂಜೆ ಹಸುವಿನ ಹಾಲು ಕುಡಿಯಲು ಕೊಡುತ್ತಾರೆ. ಹಾಲಿನಲ್ಲಿ ಕ್ಯಾಲ್ಸಿಯಂ, ಪ್ರೋಟಿನ್, ಜೀವಸತ್ವಗಳಿವೆ. ಹೀಗಾಗಿ ಮಕ್ಕಳಿಗೆ ಕುಡಿಯಲು ಹಾಲು ಕೊಡಲಾಗುತ್ತದೆ. ಅಂದಹಾಗೆ, ಸುಮಾರು 10 ವರ್ಷಗಳ ಹಿಂದೆ, ಮಾರುಕಟ್ಟೆಯಲ್ಲಿ ಎರಡು ರೀತಿಯ ಹಾಲು ಮಾತ್ರ ( ಹಸುವಿನ ಮತ್ತು ಎಮ್ಮೆಯ ಹಾಲು) ಅಸ್ತಿತ್ವದಲ್ಲಿದೆ ಎಂದು ಬಹುತೇಕರು ನಂಬಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಹಾಲಿನ ಹಲವಾರು ರೂಪಾಂತರಗಳು ಬಂದಿವೆ. ಅದಕ್ಕೆ ಹಿರಿಯರು ಹೇಳಿರೋದು ಬೆಳ್ಳಗಿರುವುದೆಲ್ಲಾ ಹಾಲಲ್ಲ ಅಂತ.

ಟ್ರೆಂಡಿಂಗ್​ ಸುದ್ದಿ

ಭಾರತದಲ್ಲಿ ಹಸುವಿನ ಹಾಲು ಪವಿತ್ರವಾಗಿದೆ. ನಾವು ಅದನ್ನು ಪಂಚಾಮೃತ ಮಾಡಲು ಮತ್ತು ಚಿಕ್ಕವಯಸ್ಸಿನಲ್ಲಿ ಮಕ್ಕಳಿಗೆ ಕುಡಿಯಲು ಕೊಡುತ್ತೇವೆ. ಆದರೆ, ಇತ್ತೀಚೆಗೆ ನಮ್ಮ ಆಹಾರದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಹೆಚ್ಚಾಗಿ ಸಂಸ್ಕರಿಸಿದ ಆಹಾರವನ್ನೇ ಸೇವಿಸುತ್ತಿದ್ದೇವೆ. ಹಾಲು ಹೆಚ್ಚು ಸೇವಿಸಿದರೆ ಕಫ ಆಗುತ್ತದೆ, ದಪ್ಪ ಆಗುತ್ತೇವೆ ಎಂದೆಲ್ಲಾ ಹೇಳಲಾಗುತ್ತದೆ. ಅಲ್ಲದೆ, ಜೀರ್ಣಕ್ರಿಯೆ ಸಮಸ್ಯೆ ಹೊಂದಿರುವವರು ಹಾಲು ಕುಡಿದರೆ ಸರಿಯಾಗಿ ಜೀರ್ಣವಾಗಲ್ಲ ಎಂದು ಹೇಳುತ್ತಾರೆ. ಮಾರುಕಟ್ಟೆಯಲ್ಲಿ ಹಸು ಅಥವಾ ಎಮ್ಮೆ ಹಾಲಿಗೆ ಪರ್ಯಾಯವಾಗಿ ಹಾಲಿನ ಉತ್ಪನ್ನಗಳು ಲಭ್ಯವಿದೆ.

ಹಾಲಿನ ಬದಲಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಡೈರಿ ಉತ್ಪನ್ನಗಳು

ಸೋಯಾ ಹಾಲು: ಸೋಯಾಬೀನ್‌ನಿಂದ ತಯಾರಿಸಲ್ಪಟ್ಟಿರುವ ಸೋಯಾ ಹಾಲು ಜನಪ್ರಿಯ ಡೈರಿ ಉತ್ಪನ್ನಕ್ಕೆ ಪರ್ಯಾಯವಾಗಿದೆ. ಹಸುವಿನ ಹಾಲಿನ ಪೌಷ್ಟಿಕಾಂಶದ ಅಂಶಕ್ಕೆ ಹೊಂದಿಕೆಯಾಗುವಂತೆ ಇದು ಸಾಮಾನ್ಯವಾಗಿ ವಿಟಮಿನ್‌ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ.

ತೆಂಗಿನ ಹಾಲು: ಇದನ್ನು ತೆಂಗಿನಕಾಯಿಯಿಂದ ತಯಾರಿಸಲಾಗುತ್ತದೆ. ಇದು ವಿಶಿಷ್ಟವಾದ ತೆಂಗಿನಕಾಯಿ ಪರಿಮಳವನ್ನು ಹೊಂದಿರುವ ಕೆನೆಯನ್ನು ಹೊಂದಿದೆ.

ಓಟ್ ಹಾಲು (ತೋಕೆ ಗೋಧಿ): ಇದನ್ನು ಸಂಪೂರ್ಣ ಓಟ್ಸ್ ಧಾನ್ಯಗಳು ಅಥವಾ ಓಟ್ಸ್ ಗೆ ನೀರು ಹಾಕಿ ಗ್ರೈನ್ ಮಾಡಲಾದ ಮಿಶ್ರಣದಿಂದ ಮಾಡಲಾಗುತ್ತದೆ. ಇದು ಸ್ವಲ್ಪ ಸಿಹಿ ರುಚಿ ಮತ್ತು ಕೆನೆ ವಿನ್ಯಾಸವನ್ನು ಹೊಂದಿರುತ್ತದೆ.

ಅಕ್ಕಿ ಹಾಲು: ಇದನ್ನು ಅಕ್ಕಿ ಮತ್ತು ನೀರಿನಿಂದ ತಯಾರಿಸಲಾಗುತ್ತದೆ. ಇದು ಹಸುವಿನ ಹಾಲಿಗಿಂತ ತೆಳ್ಳಗಿರುತ್ತದೆ ಮತ್ತು ಸಿಹಿ ರುಚಿಯನ್ನು ಹೊಂದಿರುತ್ತದೆ.

ಬಾದಾಮಿ (ಡ್ರೈ ಫ್ರೂಟ್ಸ್) ಹಾಲು: ಬಾದಾಮಿ, ಕಡಲೆಕಾಯಿ, ಹ್ಯಾಝೆಲ್ನಟ್ಸ್, ಗೋಡಂಬಿ ಮತ್ತು ಮಕಾಡಾಮಿಯಾ ಮುಂತಾದವುಗಳಿಂದ ಹಾಲನ್ನು ತಯಾರಿಸಬಹುದು. ಸೆಲೆಬ್ರಿಟಿಗಳು ಹೆಚ್ಚಾಗಿ ಬಾದಾಮಿ ಹಾಲನ್ನು ಸೇವಿಸುತ್ತಾರೆ. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ವಿಟಮಿನ್ ಬಿ 12 ನಂತಹ ಅಗತ್ಯ ಪೋಷಕಾಂಶಗಳು ಇದರಲ್ಲಿವೆ.

ನಿಮಗೆ ಸೂಕ್ತವಾದ ಹಾಲನ್ನು ಹೇಗೆ ಆರಿಸುವುದು?

ಪೌಷ್ಟಿಕಾಂಶ, ಆಹಾರದ ಆದ್ಯತೆ ಮತ್ತು ಯಾವುದೇ ಸಂಭಾವ್ಯ ಅಲರ್ಜಿಗಳು ಅಥವಾ ಸೂಕ್ಷ್ಮತೆಗಳಂತಹ ಅಂಶಗಳನ್ನು ಪರಿಗಣಿಸಿ ನಿಮ್ಮ ಅಗತ್ಯಗಳಿಗಾಗಿ ಸರಿಯಾದ ಹಾಲನ್ನು ಆಯ್ಕೆಮಾಡುವುದು ಸೂಕ್ತ. ನೀವು ತೂಕ ಇಳಿಸುವ ಪ್ರಯತ್ನದಲ್ಲಿದ್ದರೆ, ಬಾದಾಮಿ ಹಾಲು, ಸೋಯಾ ಹಾಲು ಮತ್ತು ಓಟ್ ಹಾಲು ಡೈರಿ ಹಾಲಿಗಿಂತ ಉತ್ತಮ ಆಯ್ಕೆಯಾಗಿದೆ. ಈ ಕಾರಣಕ್ಕಾಗಿ ಬಹುತೇಕ ಸೆಲೆಬ್ರಿಟಿಗಳು ಇದನ್ನೇ ಸೇವಿಸುತ್ತಾರೆ.

ಬಾದಾಮಿ ಹಾಲು ಕಡಿಮೆ ಕ್ಯಾಲೊರಿಗಳನ್ನು ಮತ್ತು ಹೆಚ್ಚಿನ ಪ್ರಮಾಣದ ಒಮೆಗಾ-3 ಕೊಬ್ಬಿನಾಮ್ಲ, ಮತ್ತು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಇದು ಹೆಚ್ಚಿನ ಪ್ರೊಟಿನ್ ಮತ್ತು ಕಡಿಮೆ ಕಾರ್ಬೋಹೈಡ್ರೇಟ್‌ಗಳನ್ನು ಸಹ ಹೊಂದಿದೆ. ಹೀಗಾಗಿ ತೂಕ ನಿರ್ವಹಣೆಗೆ ಈ ಹಾಲು ಸೇವಿಸಬಹುದು. ಆದರೆ, ಕ್ಯಾನ್ಸರ್, ಥೈರಾಯ್ಡ್ ಅಸ್ವಸ್ಥತೆ ಮುಂತಾದ ಅಸ್ವಸ್ಥತೆಗಳಿಂದ ಬಳಲುತ್ತಿರುವವರು ಹೆಚ್ಚಿನ ಈಸ್ಟ್ರೊಜೆನ್ ಅಂಶವನ್ನು ಹೊಂದಿರುವ ಆಹಾರವನ್ನು ನಿರ್ಬಂಧಿಸಬೇಕು. ಇಂಥವರು ಸೋಯಾ ಹಾಲನ್ನು ಸೇವಿಸಬಾರದು.

ಹೃದ್ರೋಗ ರೋಗಿಗಳು, ಸ್ಯಾಚುರೇಟೆಡ್ ಕೊಬ್ಬಿನ ಸೇವನೆಯನ್ನು ಕಡಿಮೆ ಮಾಡಲು ಕಡಿಮೆ-ಕೊಬ್ಬಿನ ಅಥವಾ ಕೆನೆರಹಿತ ಹಾಲನ್ನು ಆಯ್ಕೆ ಮಾಡಬಹುದು. ಮಧುಮೇಹಿಗಳು, ಕಡಿಮೆ ಕೊಬ್ಬಿನ ಅಥವಾ ಕೆನೆ ತೆಗೆದ ಹಾಲನ್ನು ಆರಿಸಿ. ಬಾದಾಮಿ ಅಥವಾ ಸೋಯಾ ಹಾಲು ಸಹ ಉತ್ತಮ ಆಯ್ಕೆಯಾಗಿದೆ.

ಹಸುವಿನ ಹಾಲು ಒಳ್ಳೆಯದಲ್ಲವೇ?

ಹಸುವಿನ ಹಾಲು ಪ್ರೊಟಿನ್, ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನ ಉತ್ತಮ ಸಮತೋಲನವನ್ನು ಹೊಂದಿದೆ. ಇದು ಕ್ಯಾಲ್ಸಿಯಂ, ರೈಬೋಫ್ಲಾವಿನ್, ವಿಟಮಿನ್ ಡಿ, ಅಯೋಡಿನ್, ಪೊಟ್ಯಾಸಿಯಮ್, ಸತು ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ. ಆದರೆ, ಒಂದು ನಿರ್ದಿಷ್ಟ ವಯಸ್ಸಿನ ನಂತರ, ಜನರು ಹಸುವಿನ ಹಾಲನ್ನು ತ್ಯಜಿಸಬೇಕು. ಏಕೆಂದರೆ ಸಂಶೋಧಕರು ಸೂಚಿಸಿದಂತೆ ಇದು ಜೀರ್ಣಿಸಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತದೆ. ಸ್ತನ, ಅಂಡಾಶಯ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನಂತಹ ರೋಗಗಳಿಂದ ಬಳಲುತ್ತಿರುವವರು ಹಾಲಿನ ಸೇವನೆಯನ್ನು ಮಿತಿಗೊಳಿಸಬೇಕು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಕಲಬೆರಕೆ ಇಲ್ಲದ ಹಸುವಿನ ಹಾಲು ಸೇವನೆ ಸೂಕ್ತ

ಆಹಾರ ತಜ್ಞರು, ಪೌಷ್ಟಿಕತಜ್ಞರು ಹೇಳುವ ಪ್ರಕಾರ, ಯಾವುದೇ ಕಲಬೆರಕೆಯಿಲ್ಲದ ಹಸುವಿನ ಹಾಲು ಸೇವಿಸಲು ಸೂಕ್ತವಾಗಿದೆ. ಇದರಿಂದ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೀಗ ಮಾರುಕಟ್ಟೆಯಲ್ಲಿ ಸಾವಯವ ಮತ್ತು ಕಲಬೆರಕೆ ರಹಿತ ಎ2 ಹಾಲಿನೊಂದಿಗೆ ಸಾಕಷ್ಟು ಬ್ರಾಂಡ್‌ಗಳು ಬಂದಿವೆ. ಇದರಿಂದ ಹಾಲಿನ ಗುಣಮಟ್ಟಕ್ಕೆ ಧಕ್ಕೆಯಾಗುವುದಿಲ್ಲ. ಹಸುವಿನ ಹಾಲು ಅಥವಾ ಎಮ್ಮೆ ಹಾಲು ಒಟ್ಟು ಹಾಲಿನ ಮಾರಾಟದ ಶೇ.98 ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ. ಅದರ ಆಕರ್ಷಣೆಯನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ ಎಂದೇ ಹೇಳಬಹುದು. ಒಟ್ಟಿನಲ್ಲಿ, ನಮ್ಮ ಹಿರಿಯರು ಹಾಲನ್ನು ಆನಂದಿಸಿದರು. ಅದನ್ನು ಚೆನ್ನಾಗಿ ಜೀರ್ಣಿಸಿಕೊಂಡರು. ಆದರೆ, ನಮ್ಮ ತಲೆಮಾರು ಮಾತ್ರ ಹಲವಾರು ತೊಂದರೆಗಳನ್ನು ಎದುರಿಸುತ್ತಿರುವುದು ಯಾಕೆ ಎಂಬುದು ಕೂಡ ಬಹುತೇಕರ ಪ್ರಶ್ನೆಯಾಗಿದೆ.