Health Tips: ನಿಮ್ಮ ಜೀವನಶೈಲಿಯಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ; ಬಂಜೆತನ ಹತ್ತಿರಕ್ಕೂ ಸುಳಿಯದು
Women Health: ಜೀವನಶೈಲಿ ಬದಲಾದಂತೆಲ್ಲ ಮಹಿಳೆಯರಲ್ಲಿ ಬಂಜೆತನದ ಪ್ರಕರಣಗಳು ಸಹ ಹೆಚ್ಚಾಗಿ ಗೋಚರಿಸುತ್ತಿವೆ. ಇದಕ್ಕೆ ನಿಮ್ಮ ತಪ್ಪಾದ ಜೀವನಶೈಲಿ ಹಾಗೂ ಆಹಾರ ಪದ್ಧತಿಯೇ ಮುಖ್ಯ ಕಾರಣವಾಗಿದೆ. ನಿಮ್ಮ ದಿನನಿತ್ಯದ ಜೀವನದಲ್ಲಿ ಈ ಬದಲಾವಣೆಗಳನ್ನು ಮಾಡಿಕೊಂಡಲ್ಲಿ ಬಂಜೆತನದ ಅಪಾಯದಿಂದ ಪಾರಾಗಬಹುದಾಗಿದೆ.
ಒಂದು ಜೀವಕ್ಕೆ ಜನ್ಮ ನೀಡುವುದು ಪ್ರಕೃತಿಯ ಒಂದು ಸೋಜಿಗವೇ ಸರಿ. ಬಹುತೇಕ ಮಹಿಳೆಯರು ತಮ್ಮ ಜೀವನದಲ್ಲಿಯೂ ಇಂತಹದ್ದೊಂದು ಅದ್ಭುತ ಕ್ಷಣ ಬರಲಿ ಅಂತಾ ಕಾಯುತ್ತಾರೆ. ಆದರೆ ಕೆಲವು ಮಹಿಳೆಯರು ಬಂಜೆತನದ ಸಮಸ್ಯೆಯಿಂದಾಗಿ ತಾಯ್ತನದ ಭಾಗ್ಯವನ್ನು ಅನುಭವಿಸಲು ಆಗುವುದಿಲ್ಲ. ಆದರೆ ತಜ್ಞರು ಬಂಜೆತನದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದು ನಮ್ಮ ಜೀವನಶೈಲಿ ಹಾಗೂ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಲ್ಲಿ ಬಂಜೆತನದ ಅಪಾಯದಿಂದ ಪಾರಾಗಬಹುದು ಎಂದು ಹೇಳುತ್ತಾರೆ.
ಆಹಾರವೇ ನಮ್ಮ ಔಷಧಿಯಾಗಿರಬೇಕು, ಔಷಧವೇ ನಿಮ್ಮ ಆಹಾರವಾಗಲಿ ಎಂಬ ಮಾತೊಂದಿದೆ. ಯಾವ ದಂಪತಿ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಯೋಚಿಸುತ್ತಾರೋ ಅವರು ಈ ಮಾತಿನ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ದಂಪತಿಯಲ್ಲಿ ಫಲವತ್ತತೆ ಚೆನ್ನಾಗಿ ಇರಬೇಕು ಎಂದರೆ ನೀವು ಸೇವಿಸುವ ಆಹಾರ ಕೂಡ ಪೌಷ್ಠಿಕ ಅಂಶಗಳಿಂದ ಕೂಡಿರಬೇಕು. ಆರೋಗ್ಯಕರ ಗರ್ಭಧಾರಣೆಗೆ ಪುರುಷ ಹಾಗೂ ಸ್ತ್ರೀಯ ಆರೋಗ್ಯ ತುಂಬಾನೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಹೀಗಾಗಿ ಪೌಷ್ಠಿಕಾಂಶಯುಕ್ತ ಆಹಾರವು ಮಹಿಳೆಯರಲ್ಲಿ ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಪೌಷ್ಠಿಕಾಂಶಯುಕ್ತ ಆಹಾರಗಳು ಹಾಗೂ ಗರ್ಭಧಾರಣೆ ಸಂಬಂಧಿ ಕೆಲವು ಅಂಶಗಳ ಬಗ್ಗೆ ಗಮನ ಹರಿಸೋಣ
1. ಕಡಿಮೆ ತೂಕ
ಕಡಿಮೆ ತೂಕ ಹೊಂದಿರುವ ಮಹಿಳೆಯಲ್ಲಿ ಅಂಡಾಣು ಉತ್ಪಾದನೆ ಸಂಪೂರ್ಣವಾಗಿ ನಿಂತು ಹೋಗಬಹುದು. ಅಥವಾ ಅವರು ಅನಿಯಮಿತ ಋತುಚಕ್ರವನ್ನು ಹೊಂದಿರಬಹುದು. ಇದು ಗರ್ಭಧಾರಣೆ ಮೇಲೆ ನೇರ ಪರಿಣಾಮ ಬೀರುತ್ತದೆ .
2. ಸ್ಥೂಲಕಾಯತೆ
ಸ್ಥೂಲಕಾಯ ಸಮಸ್ಯೆ ಹೊಂದಿರುವ ಪುರುಷ ಹಾಗೂ ಮಹಿಳೆಯರಲ್ಲಿ ಸಂತಾನೋತ್ಪತ್ತಿ ಪ್ರಮಾಣ ಕಡಿಮೆ ಇರುತ್ತದೆ. ಮಹಿಳೆಯರಲ್ಲಿ ಅನಿಯಮಿತ ಋತುಚಕ್ರ ಸಮಸ್ಯೆ ಇರುತ್ತದೆ ಇದು ಮುಂದಿನ ದಿನಗಳಲ್ಲಿ ಪಿಸಿಓಎಸ್ ಸಮಸ್ಯೆಗೆ ಕಾರಣವಾಗಬಹುದು. ಪುರುಷರಲ್ಲಿ ಸ್ಥೂಲಕಾಯತೆ ಇದ್ದರೆ ವೀರ್ಯದ ಗುಣಮಟ್ಟ ಕಳಪೆಯಾಗುವ ಸಾಧ್ಯತೆ ಇರುತ್ತದೆ.
3. ಆಹಾರ ಕ್ರಮ
ಗರ್ಭಧಾರಣೆಯ ಸಂದರ್ಭದಲ್ಲಿ ಭ್ರೂಣದ ನರಗಳ ಬೆಳವಣಿಗಾಗಿ ಪೋಲೇಟ್ನ ಅವಶ್ಯಕತೆ ಸಾಕಷ್ಟಿರುತ್ತದೆ. ಹೀಗಾಗಿ ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವ ಮಹಿಳೆಯರು ಗರ್ಭದಾರಣೆಯ ಮೊದಲು ಹಾಗೂ ಗರ್ಭದಾರಣೆಯ ಆರಂಭಿಕ ದಿನಗಳಲ್ಲಿ ಪೋಲಿಕ್ ಆಮ್ಲವನ್ನು ಹೆಚ್ಚಾಗಿ ಹೊಂದಿರುವ ಆಹಾರವನ್ನೇ ಸೇವಿಸಬೇಕು.
4. ಕಬ್ಬಿಣಾಂಶ
ಕಬ್ಬಿಣಾಂಶ ಕೊರತೆ ಇರುವ ಮಹಿಳೆಯರಲ್ಲಿ ಕೂಡ ಅಂಡಾಣು ಉತ್ಪಾದನೆ ಕೊರತೆ ಉಂಟಾಗಬಹುದು. ಇದು ಪುರುಷರಿಗೂ ಅನ್ವಯವಾಗುತ್ತದೆ. ಹೀಗಾಗಿ ಪುರುಷ ಹಾಗೂ ಮಹಿಳೆಯಿಬ್ಬರೂ ಕಬ್ಬಿಣಾಂಶ ಹೆಚ್ಚಿರುವ ಆಹಾರಗಳನ್ನೇ ಸೇವನೆ ಮಾಡಬೇಕು.
5. ಒಮೇಗಾ 3 ಕೊಬ್ಬಿನಾಮ್ಲಗಳು
ಮಗುವಿನ ಮೆದುಳು ಹಾಗೂ ಕಣ್ಣುಗಳ ಬೆಳವಣಿಗೆಯ ಮೇಲೆ ಒಮೆಗಾ 3 ಕೊಬ್ಬಿನಾಮ್ಲಗಳು ನೇರ ಪರಿಣಾಮ ಬೀರುತ್ತವೆ. ಅಲ್ಲದೇ ಒಮೇಗಾ 3 ಪುರುಷ ಹಾಗೂ ಮಹಿಳೆಯ ಸಂತಾನೋತ್ಪತ್ತಿಯ ಮೇಲೂ ನೇರ ಪರಿಣಾಮ ಬೀರುತ್ತದೆ.
ಉತ್ತಮ ಆಹಾರ ಅಭ್ಯಾಸವು ನಿಮ್ಮ ದೇಹದಲ್ಲಿ ಆರೋಗ್ಯಕರ ಅಂಡಾಣುಗಳನ್ನು ಉತ್ಪಾದನೆ ಮಾಡುತ್ತದೆ ಎಂದು ಸ್ತ್ರೀರೋಗ ತಜ್ಞೆ ಡಾ. ಶೋಭಾ ಗುಪ್ತಾ ಹೇಳಿದ್ದಾರೆ. ಹೆಣ್ಣಿನಲ್ಲಿ ಗರ್ಭಾವಸ್ಥೆ ಅಗಬೇಕು ಎಂದರೆ ಪೌಷ್ಠಿಕಾಂಶ ಪ್ರಮುಖ ಪಾತ್ರ ವಹಿಸುತ್ತದೆ. ಪುರುಷರು ಹಾಗೂ ಮಹಿಳೆಯರಲ್ಲಿ ಸಂತಾನೋತ್ಪತ್ತಿ ಶಕ್ತಿ ಹೆಚ್ಚಬೇಕು ಎಂದರೆ ವಿಭಿನ್ನ ಪೋಷಕಾಂಶಗಳ ಅಗತ್ಯ ಇರುತ್ತದೆ. ಆದರೆ ಕಬ್ಬಿಣಾಂಶ, ಆರೋಗ್ಯಕರ ಕೊಬ್ಬಿನಂಶ ಇರುವ ಆಹಾರಗಳು, ಮೀನು, ಹಸಿರು ತರಕಾರಿಗಳು ಇವುಗಳು ಇಬ್ಬರಿಗೂ ಸಾಮಾನ್ಯವಾಗಿ ಬೇಕಾದ ಪೌಷ್ಠಿಕಾಂಶವಾಗಿದೆ. ಇವುಗಳು ಅಂಡಾಣು ಉತ್ಪಾದನೆ ಹಾಗೂ ವೀರ್ಯ ಉತ್ಪಾದನೆಗೆ ಹೆಚ್ಚು ಸಹಕಾರಿಯಾಗಿದೆ.
ಮದ್ಯಪಾನ , ಧೂಮಪಾನ ಹಾಗೂ ಅತಿಯಾದ ಕೆಫಿನ್ ಅಂಶಯುಕ್ತ ಆಹಾರದ ಸೇವನೆಯು ಗರ್ಭಾವಸ್ಥೆಯ ಮೇಲೆ ತೀವ್ರ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಇದು ಗರ್ಭಪಾತದ ಅಪಾಯವನ್ನೂ ಹೆಚ್ಚಿಸಬಹುದು. ಅತಿಯಾದ ಮದ್ಯಪಾನವು ಸಂತಾನೋತ್ಪತ್ತಿಗೆ ತೀವ್ರ ಮಾರಕವಾಗಿದೆ. ಸಂಸ್ಕರಿಸಿದ ಆಹಾರಗಳು ದೇಹದಲ್ಲಿ ಸಕ್ಕರೆ ಅಂಶವನ್ನು ತಲೆಕೆಳಗು ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಇನ್ಸುಲಿನ್ ಉತ್ಪಾದನೆಯಲ್ಲಿ ಉಂಟಾಗುವ ಏರಿಳಿತಗಳು ಮಹಿಳೆಯರಲ್ಲಿ ಅಂಡೋತ್ಪತ್ತಿಯಲ್ಲಿ ವ್ಯತ್ಯಾಸ ಉಂಟು ಮಾಡುತ್ತವೆ.