ಬಾಯಿಯ ದುರ್ವಾಸನೆ, ಚರ್ಮದಲ್ಲಿ ಕಪ್ಪು ಕಲೆ ಕಾಣಿಸಿದರೆ ನಿರ್ಲಕ್ಷ್ಯ ಬೇಡ; ಯಕೃತ್ತು ಸಮಸ್ಯೆ ಇರಬಹುದು
ಕನ್ನಡ ಸುದ್ದಿ  /  ಜೀವನಶೈಲಿ  /  ಬಾಯಿಯ ದುರ್ವಾಸನೆ, ಚರ್ಮದಲ್ಲಿ ಕಪ್ಪು ಕಲೆ ಕಾಣಿಸಿದರೆ ನಿರ್ಲಕ್ಷ್ಯ ಬೇಡ; ಯಕೃತ್ತು ಸಮಸ್ಯೆ ಇರಬಹುದು

ಬಾಯಿಯ ದುರ್ವಾಸನೆ, ಚರ್ಮದಲ್ಲಿ ಕಪ್ಪು ಕಲೆ ಕಾಣಿಸಿದರೆ ನಿರ್ಲಕ್ಷ್ಯ ಬೇಡ; ಯಕೃತ್ತು ಸಮಸ್ಯೆ ಇರಬಹುದು

ಯಕೃತ್ತು ಅಥವಾಲಿವರ್ ಮನುಷ್ಯನ ದೇಹದಲ್ಲಿನ ಅತಿ ಪ್ರಮುಖ ಅಂಗಗಳಲ್ಲಿ ಒಂದು. ಲಿವರ್ ಕಾರ್ಯಾಚರಣೆಯಲ್ಲಿ ವ್ಯತ್ಯಾಸವಾದರೆ ಮತ್ತು ಸಮರ್ಪಕವಾಗಿ ಕೆಲಸ ಮಾಡದಿದ್ದರೆ, ಅದರಿಂದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅದರ ಕೆಲವೊಂದು ಲಕ್ಷಣಗಳನ್ನು ನಾವು ಸುಲಭದಲ್ಲಿ ಗುರುತಿಸಬಹುದು. ಇಲ್ಲಿದೆ ವಿವರ.

ಬಾಯಿಯ ದುರ್ವಾಸನೆ, ಚರ್ಮದಲ್ಲಿ ಕಪ್ಪು ಕಲೆ ಕಾಣಿಸಿದರೆ ನಿರ್ಲಕ್ಷ್ಯ ಬೇಡ, ಯಕೃತ್ತು ಸಮಸ್ಯೆ ಇರಬಹುದು
ಬಾಯಿಯ ದುರ್ವಾಸನೆ, ಚರ್ಮದಲ್ಲಿ ಕಪ್ಪು ಕಲೆ ಕಾಣಿಸಿದರೆ ನಿರ್ಲಕ್ಷ್ಯ ಬೇಡ, ಯಕೃತ್ತು ಸಮಸ್ಯೆ ಇರಬಹುದು (Canva)

ಯಕೃತ್ತು ಅಥವಾ ಲಿವರ್ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಲಿವರ್ ಆರೋಗ್ಯವಾಗಿದ್ದರೆ, ನಮ್ಮ ದೇಹ, ಆರೋಗ್ಯವೂ ಉತ್ತಮವಾಗಿರುತ್ತದೆ. ಯಕೃತ್ತು ಊದಿಕೊಳ್ಳುವುದು ಅಥವಾ ಅದರಲ್ಲಿ ಕೊಬ್ಬು ಶೇಖರಣೆಯಾಗುವುದು ಇತ್ತೀಚಿನ ದಿನಗಳಲ್ಲಿ ಕಂಡುಬರುವ ಒಂದು ಪ್ರಮುಖ ಸಮಸ್ಯೆಯಾಗಿದೆ. ಹಿಂದೆಲ್ಲಾ ಅತಿಯಾಗಿ ಮದ್ಯಪಾನ ಮಾಡುವವರಿಗೆ ಲಿವರ್ ಸಮಸ್ಯೆ ಬರುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಹಾಗಲ್ಲ, ಮದ್ಯ ಸೇವಿಸದೆ ಇರುವವರಿಗೂ ಯಕೃತ್ತು ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಯಕೃತ್ತು ಊದಿಕೊಳ್ಳುವುದು ಮತ್ತು ಅದರಿಂದ ದೇಹದ ಮೇಲಾಗುವ ಪರಿಣಾಮಗಳು, ಗಂಭೀರ ಆರೋಗ್ಯ ಸಮಸ್ಯೆಗಳ ಬಗ್ಗೆ ನಾವು ಗಮನ ಹರಿಸಬೇಕಿದೆ.

ಒಬ್ಬ ಆರೋಗ್ಯವಂತ ಮನುಷ್ಯನ ದೇಹದಲ್ಲಿ ಇರುವ ಲಿವರ್‌ನ ತೂಕದಲ್ಲಿ ಸುಮಾರು ಶೇ. 5ರಷ್ಟು ಹೆಚ್ಚಿನ ಕೊಬ್ಬು ಶೇಖರಣೆಯಾಗಿ, ಫ್ಯಾಟಿ ಲಿವರ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ಒಮ್ಮೆಲೆ ಕಾಣಿಸಿಕೊಳ್ಳುವುದಲ್ಲ. ಬದಲಿಗೆ, ಹಲವು ವರ್ಷಗಳಲ್ಲಿ ಲಿವರ್‌ಗೆ ಸಮಸ್ಯೆಯಾಗಿ, ಹಂತಹಂತವಾಗಿ ಕೊಬ್ಬು ಶೇಖರಣೆಯಾಗಿ, ಒಮ್ಮೆ ಹೆಚ್ಚಾಗಿ ಊದಿಕೊಂಡು ತೊಂದರೆ ಕಾಣಿಸಿಕೊಳ್ಳಬಹುದು. ಅದರಿಂದ ಮುಂದೆ ಲಿವರ್ ಸಂಬಂಧಿತ ಸಮಸ್ಯೆ ಮಾತ್ರವಲ್ಲದೆ, ಕ್ಯಾನ್ಸರ್‌ಗೂ ದಾರಿ ಮಾಡಿಕೊಡಬಹುದು. ಹೀಗಾಗಿ ಸೂಕ್ತ ಸಮಯದಲ್ಲಿ ಅದನ್ನು ಪತ್ತೆಹಚ್ಚಿದರೆ ಫ್ಯಾಟಿ ಲಿವರ್ ಸಮಸ್ಯೆಯಿಂದ ಪಾರಾಗಬಹುದು. ಮದ್ಯಪಾನಿಗಳಲ್ಲದವರಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ, ಅದರ ಕೆಲವೊಂದು ಲಕ್ಷಣಗಳನ್ನು ನಾವು ಸುಲಭದಲ್ಲಿ ಗುರುತಿಸಬಹುದು.

ಊದಿಕೊಂಡ ಯಕೃತ್ತಿನ ಲಕ್ಷಣಗಳು

ಯಕೃತ್ತು ಊದಿಕೊಂಡಿದ್ದರೆ, ಅದರ ಕಾರ್ಯದಲ್ಲಿ ಹಲವು ವ್ಯತ್ಯಾಸಗಳು ಉಂಟಾಗುತ್ತವೆ. ಯಕೃತ್ತಿನ ಮುಖ್ಯ ಕೆಲಸವೆಂದರೆ, ರಕ್ತದಲ್ಲಿನ ಬೇಡದ ಅಂಶಗಳನ್ನು ತೆಗೆದು ಹಾಕುವುದು. ಆದರೆ ಯಕೃತ್ತು ಊದಿಕೊಂಡಾಗ ಅದರ ಕೆಲಸದಲ್ಲಿ ವ್ಯತ್ಯಾಸವಾಗುವುದರಿಂದ, ಹೆಚ್ಚಿನ ಒತ್ತಡ ಲಿವರ್ ಮೇಲೆ ಬೀಳುತ್ತದೆ. ಆಗ ರಕ್ತ ಶುದ್ಧೀಕರಣದಲ್ಲಿ ಸಮಸ್ಯೆಯಾಗಬಹುದು, ದೇಹದಲ್ಲಿ ಹೆಚ್ಚಿನ ಪ್ರಮಾಣದ ಕೆಟ್ಟ ರಕ್ತ ಶೇಖರಣೆಯಾಗಿ, ಗಂಭೀರ ಸಮಸ್ಯೆ ಎದುರಾಗಬಹುದು.

ದೇಹದಿಂದ ಕೆಟ್ಟ ವಾಸನೆ ಬರಬಹುದು

ಲಿವರ್‌ನಲ್ಲಿ ಶೇಖರಣೆಗೊಂಡ ಕೊಬ್ಬಿನಿಂದಾಗಿ ಅದರ ಕೆಲಸದಲ್ಲಿ ವ್ಯತ್ಯಯವಾಗಬಹುದು. ಆಗ ಚರ್ಮದ ಮೂಲಕ ದೇಹದಲ್ಲಿನ ಕೆಟ್ಟ ಅಂಶಗಳನ್ನು ಹೊರಹಾಕುವ ಪ್ರಯತ್ನವನ್ನು ಲಿವರ್ ಮಾಡುವುದರಿಂದ, ದೇಹದಿಂದ ಕೆಟ್ಟ ವಾಸನೆ ಬರುವ ಸಾಧ್ಯತೆಯಿದೆ.

ಕೆಟ್ಟ ಉಸಿರು ಮತ್ತು ವಾಸನೆ

ಕೆಲವರು ಮಾತನಾಡುವಾಗ ಬಾಯಿಯಿಂದ ಕೆಟ್ಟ ವಾಸನೆ ಬರುತ್ತದೆ. ಅದಕ್ಕೆ ಕಾರಣ ನಮ್ಮ ಹೊಟ್ಟೆ. ಹೊಟ್ಟೆಯಲ್ಲಿರುವ ಆಹಾರ ಸೂಕ್ತ ರೀತಿಯಲ್ಲಿ ಜೀರ್ಣವಾಗದೇ ಇದ್ದಾಗ ಮತ್ತು ಯಕೃತ್ತು ಸರಿಯಾಗಿ ಕೆಲಸ ಮಾಡಲು ವಿಫಲವಾದಾಗ, ಕೆಟ್ಟ ವಾಸನೆ ಬರುತ್ತದೆ. ಹೀಗಾಗಿ ನಿಮ್ಮ ಉಸಿರು, ಮಾತನಾಡುವಾಗ ಕೆಟ್ಟ ವಾಸನೆ ಬರುತ್ತಿದೆ ಎಂದಾದರೆ, ವೈದ್ಯರ ಬಳಿ ಪರಿಶೀಲಿಸಿ, ಕಾರಣ ತಿಳಿದುಕೊಳ್ಳುವುದು ಒಳಿತು.

ಚರ್ಮದಲ್ಲಿ ಕಪ್ಪು ಕಲೆ

ಯಕೃತ್ತಿನಲ್ಲಿ ಅಧಿಕ ಪ್ರಮಾಣದ ಕೊಬ್ಬು ಶೇಖರಣೆಯಾದಾಗ, ಕಂಕುಳಿನಲ್ಲಿ ಮತ್ತು ಕುತ್ತಿಗೆಯ ಭಾಗದಲ್ಲಿ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಅಲ್ಲಿನ ಚರ್ಮ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಯಕೃತ್ತು, ರಕ್ತದಲ್ಲಿನ ಕೆಟ್ಟ ಅಂಶವನ್ನು ಸರಿಯಾಗಿ ವಿಲೇವಾರಿ ಮಾಡದಿದ್ದಾಗ, ಅದು ರಕ್ತದಲ್ಲಿ ಉಳಿದುಕೊಂಡು, ಚರ್ಮಕ್ಕೆ ವರ್ಗಾವಣೆಯಾಗುತ್ತದೆ. ಅದರಿಂದ ಚರ್ಮ ಕಪ್ಪಾಗುವುದು ಮತ್ತು ತುರಿಕೆ ಕೂಡ ಉಂಟಾಗಬಹುದು. ಫ್ಯಾಟಿ ಲಿವರ್ ಸಮಸ್ಯೆಯನ್ನು ಆರಂಭದಲ್ಲೇ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ವೈದ್ಯರು ಸೂಚಿಸುತ್ತಾರೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)

Whats_app_banner