ಖಾಲಿ ಹೊಟ್ಟೆಯಲ್ಲಿ ಮೊಳಕೆ ಕಾಳು ತಿನ್ನುವ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ: ಆರೋಗ್ಯದ ಮೇಲೆ ಬೀರಬಹುದು ಅಡ್ಡಪರಿಣಾಮ
ಮೊಳಕೆ ಭರಿಸಿದ ಕಾಳುಗಳನ್ನು ಬೆಳಗ್ಗೆ ತಿನ್ನುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳು ದೊರೆಯುತ್ತವೆ ಮತ್ತು ಆರೋಗ್ಯಕ್ಕೂ ಒಳ್ಳೆಯದು. ಆದರೆ,ಅದನ್ನು ಸೇವಿಸುವಾಗ ಸೂಕ್ತ ಎಚ್ಚರಿಕೆ ವಹಿಸದಿದ್ದರೆ ಸಮಸ್ಯೆಯಾಗಬಹುದು. ಮೊಳಕೆ ಕಾಳು ಸೇವಿಸುವಾಗ ಕೆಲವೊಂದು ಅಂಶಗಳನ್ನು ಗಮನಿಸಲೇಬೇಕು.
ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುವವರು, ಜಿಮ್ ಹೋಗುವವರು ಮತ್ತು ದೇಹದ ತೂಕ ಇಳಿಸಬೇಕೆಂದು ಪಣ ತೊಟ್ಟಿರುವವರು ಎಲ್ಲರೂ ಇಷ್ಟಪಟ್ಟು ಮೊಳಕೆ ಭರಿಸಿದ ಕಾಳುಗಳನ್ನು ತಿನ್ನುತ್ತಾರೆ. ಆದರೆ ಮೊಳಕೆ ಕಾಳು ಸೇವಿಸುವಾಗ ಕೆಲವೊಂದು ಅಂಶಗಳನ್ನು ಗಮನಿಸಲೇಬೇಕು. ಇಲ್ಲವಾದರೆ, ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರಬಹುದು.
ಮೊಳಕೆಕಾಳುಗಳಲ್ಲಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಇರುತ್ತವೆ. ವಿಟಮಿನ್, ಖನಿಜದ ಅಂಶಗಳು, ಆರೋಗ್ಯಕ್ಕೆ ಪೂರಕ ಅಂಶಗಳು ಹೇರಳವಾಗಿ ದೊರೆಯುತ್ತವೆ. ಆದರೆ ಅವುಗಳನ್ನು ಶೇಖರಿಸುವುದು, ತೊಳೆದು ಕ್ಲೀನ್ ಮಾಡುವಾಗ, ಮರುದಿನ ಸೇವಿಸುವಾಗ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಆರೋಗ್ಯಕ್ಕೆಂದು ಸೇವಿಸುವ ಮೊಳಕೆ ಕಾಳುಗಳೇ ನಮಗೆ ಸಮಸ್ಯೆಯಾಗಬಹುದು.
ಮೊಳಕೆ ಭರಿಸಿದ ಕಾಳುಗಳನ್ನು ಸೇವಿಸುವ ಮೊದಲು ಈ ಎಚ್ಚರಿಕೆ ಪಾಲಿಸಿ
ಪಾತ್ರೆ ಶುದ್ಧವಾಗಿರಲಿ: ಸ್ವಚ್ಛ ಪಾತ್ರೆಗಳಲ್ಲಿ ಮೊಳಕೆ ಭರಿಸಿದ ಕಾಳುಗಳನ್ನು ಶೇಖರಿಸಿ, ಸೇವಿಸಿ. ಸ್ಟೀಲ್, ಗಾಜಿನ ಪಾತ್ರೆಯಾದರೆ ಉತ್ತಮ, ಸಾಧ್ಯವಾದಷ್ಟು ಪ್ಲಾಸ್ಟಿಕ್ ತ್ಯಜಿಸಿ.
ಸ್ವಚ್ಛ ನೀರಿನಲ್ಲಿ ಶುಚಿಗೊಳಿಸಿ: ಮೊಳಕೆ ಭರಿಸಲು ಕಾಳುಗಳನ್ನು ನೀರಿನಲ್ಲಿ ನೆನೆಸಿಡುವ ಮೊದಲು, ನೀರು ಸ್ವಚ್ಛವಾಗಿದೆಯೇ ಪರಿಶೀಲಿಸಿ. ಟ್ಯಾಪ್ ಮೂಲಕ ಬಂದಿರುವ ನೀರು ಗಡಸಾಗಿದ್ದರೆ ಅದನ್ನು ಕುದಿಸಿ, ನಂತರ ಬಳಸಿ, ಇಲ್ಲವೇ ಫಿಲ್ಟರ್ ನೀರನ್ನು ಬಳಸಿ ಕಾಳುಗಳನ್ನು ನೆನೆ ಹಾಕಿ. ನಗರಗಳಲ್ಲಿ ಪಾಲಿಕೆಯ ಟ್ಯಾಪ್ ನೀರಿನಲ್ಲಿ ಹೆಚ್ಚಿನ ಕ್ಲೋರಿನ್ ಅಂಶವೂ ಇರಬಹುದು. ಹೀಗಾಗಿ ಎಚ್ಚರಿಕೆ ಅಗತ್ಯ.
ನೆನೆಸುವ ಮೊದಲು ಕಾಳುಗಳನ್ನು ತೊಳೆಯಿರಿ: ಮೊಳಕೆ ಭರಿಸಲು ಕಾಳುಗಳನ್ನು ನೆನೆಹಾಕುವ ಮೊದಲು ಸ್ವಚ್ಛವಾಗಿ ತೊಳೆದುಕೊಳ್ಳಿ. ನೆನೆಸಿದ ಬಳಿಕ ಚೆನ್ನಾಗಿ ತೊಳೆದು, ಒಣಗಿಸಲು ಮರೆಯಬೇಡಿ. ಹಿಂದಿನ ದಿನ ನೆನೆಹಾಕಿದ ಕಾಳುಗಳನ್ನು ಇಂದು ಸೇವಿಸುವಿರಾದರೆ, ದಿನಕ್ಕೆ ಕನಿಷ್ಠ ಎರಡು ಬಾರಿ ತೊಳೆಯುವುದು ಅಗತ್ಯ. ಬೇಸಿಗೆಯಲ್ಲಂತೂ ಪ್ರತಿ ಆರು ಗಂಟೆಗೊಮ್ಮೆ ತೊಳೆದು ನಂತರ ಸೇವಿಸಿ.
ಸಾಕಷ್ಟು ಸಮಯ ನೆನೆಸಲು ಮರೆಯಬೇಡಿ: ಮೊಳಕೆ ಕಾಳುಗಳನ್ನು ನೀರಿನಲ್ಲಿ ನೆನೆಸಿಟ್ಟ ಬಳಿಕ, ಕನಿಷ್ಠ ಆರು ಗಂಟೆ ಹಾಗೆಯೇ ಬಿಡಿ. ರಾತ್ರಿಪೂರ್ತಿ ಇದ್ದರೂ ಚಿಂತೆಯಿಲ್ಲ. ಪ್ರತಿಯೊಂದು ಕಾಳು ಕೂಡ ವಿಭಿನ್ನವಾಗಿದ್ದು, ಪ್ರತ್ಯೇಕವಾಗಿ ನೆನೆಸುವುದು ಉತ್ತಮ. ಯಾಕೆಂದರೆ, ಒಂದೊಂದು ಕಾಳು ನೆನೆದು ಮೊಳಕೆಯೊಡೆಯಲು ಬೇಕಾಗುವ ಸಮಯದಲ್ಲಿ ವ್ಯತ್ಯಾಸವಿರುತ್ತದೆ.
ಸೇವಿಸುವ ಮೊದಲು ಗಮನಿಸಿ: ಚೆನ್ನಾಗಿ ತೊಳೆದು, ಒಣಗಿಸಿದ್ದರೂ, ಮೊಳಕೆ ಕಾಳನ್ನು ಸೇವಿಸುವ ಮೊದಲೊಮ್ಮೆ ಗಮನಿಸಿ. ಅದರಲ್ಲಿ ಯಾವುದೇ ಧಾನ್ಯ, ಕಾಳು ಬಣ್ಣ ಬಿಟ್ಟಿಲ್ಲ ಮತ್ತು ವಾಸನೆ ಬರುತ್ತಿಲ್ಲ ಎನ್ನುವುದನ್ನು ನೋಡಿಕೊಳ್ಳಿ.
ಹಸಿಯಾಗಿ ಸೇವಿಸುವ ಮೊದಲು: ಹಲವರಿಗೆ ವಾತ ಮತ್ತು ಕಫದ ಸಮಸ್ಯೆಯಿರಬಹುದು. ಮೊಳಕೆ ಕಾಳುಗಳನ್ನು ನೆನೆಸಿದ ಬಳಿಕ ಹಾಗೆಯೇ ಸೇವಿಸಿದರೆ, ಅವರಿಗೆ ಸಮಸ್ಯೆಯಾಗಬಹುದು. ಅಂತಹ ತೊಂದರೆ ಇರುವವರು ಶೀತವಾಗುವುದನ್ನು ತಡೆಯಲು, ಮೊಳಕೆ ಕಾಳುಗಳನ್ನು ಹದವಾಗಿ ಬೇಯಿಸಿ, ಇಲ್ಲವೇ ಬಿಸಿಮಾಡಿ ಸೇವಿಸುವುದು ಉತ್ತಮ.
ಆಹಾರ ವಿಷವಾಗಬಹುದು ಬಗ್ಗೆ ಎಚ್ಚರ: ಸಾಕಷ್ಟು ಎಚ್ಚರಿಕೆ ವಹಿಸಿದ್ದರೂ, ಕೆಲವೊಮ್ಮೆ ಆಹಾರ ಕೆಟ್ಟು ಅದರಿಂದ ಸಮಸ್ಯೆಯಾಗುವುದಿದೆ. ಅದರಲ್ಲೂ ಈಗ ಮಾರುಕಟ್ಟೆಗಳಲ್ಲಿ ದೊರೆಯುವ ರೆಡಿ ಟು ಈಟ್ ಸ್ಪ್ರೌಟ್ಸ್ ಪ್ಯಾಕೆಟ್‌ಗಳನ್ನು ಸೇವಿಸುವ ಮೊದಲು ಸರಿಯಾಗಿ ಗಮನಿಸಿ. ಅವುಗಳನ್ನು ಸೂಕ್ತ ರೀತಿಯಲ್ಲಿ ಪ್ಯಾಕ್ ಮಾಡಿ, ಶೇಖರಿಸಲಾಗಿದೆಯೇ ಎಂದು ತಿಳಿದುಕೊಳ್ಳಿ. ಅದರಲ್ಲಿ ಕೆಲವೊಮ್ಮೆ ಸಾಲ್ಮೊನೆಲ್ಲ, ಲಿಸ್ಟರಿಯಾದಂತಹ ಬ್ಯಾಕ್ಟೀರಿಯ ಸೇರಿಕೊಂಡಿರುತ್ತದೆ. ಅದರಿಂದ ನಿಮ್ಮ ಹೊಟ್ಟೆ ಕೆಡಬಹುದು. ಜತೆಗೆ, ಮಾಲ್, ಸೂಪರ್ ಮಾರ್ಕೆಟ್‌ಗಳಲ್ಲಿ ದೊರೆಯುವ ಸ್ಪ್ರೌಟ್ ಪ್ಯಾಕ್, ಆಫರ್, ಕ್ಲಿಯರೆನ್ಸ್ ಸೇಲ್ ಬಗೆಗೂ ಗಮನ ಹರಿಸಿದರೆ, ಆರೋಗ್ಯಕ್ಕೆ ಉತ್ತಮ.