ಪೂಜೆಗೆ ಬಳಸಿದ ದಾಸವಾಳ ಹೂಗಳನ್ನ ಎಸೆಯಬೇಡಿ; ಅಂದ, ಆರೋಗ್ಯ ಹೆಚ್ಚಿಸಿಕೊಳ್ಳಲು ಇದನ್ನು ಹೇಗೆಲ್ಲಾ ಬಳಸಬಹುದು ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಪೂಜೆಗೆ ಬಳಸಿದ ದಾಸವಾಳ ಹೂಗಳನ್ನ ಎಸೆಯಬೇಡಿ; ಅಂದ, ಆರೋಗ್ಯ ಹೆಚ್ಚಿಸಿಕೊಳ್ಳಲು ಇದನ್ನು ಹೇಗೆಲ್ಲಾ ಬಳಸಬಹುದು ನೋಡಿ

ಪೂಜೆಗೆ ಬಳಸಿದ ದಾಸವಾಳ ಹೂಗಳನ್ನ ಎಸೆಯಬೇಡಿ; ಅಂದ, ಆರೋಗ್ಯ ಹೆಚ್ಚಿಸಿಕೊಳ್ಳಲು ಇದನ್ನು ಹೇಗೆಲ್ಲಾ ಬಳಸಬಹುದು ನೋಡಿ

ನವರಾತ್ರಿ ಸಮಯದಲ್ಲಿ ವಿವಿಧ ಹೂಗಳಿಂದ ದುರ್ಗಾದೇವಿಯನ್ನು ಅಲಂಕರಿಸಿ ಪೂಜೆ ಸಲ್ಲಿಸಲಾಗುತ್ತದೆ. ನವರಾತ್ರಿಯಲ್ಲಿ ದೇವಿಗೆ ದಾಸವಾಳ ಹೂ ಅರ್ಪಿಸುವ ಪದ್ಧತಿಯೂ ಇದೆ. ಹೀಗೆ ದೇವರಮುಡಿಗಿಟ್ಟ ದಾಸವಾಳವನ್ನು ಎಸೆಯಬೇಡಿ. ಇದನ್ನು ಅಂದ ಹೆಚ್ಚು ಜೊತೆಗೆ ಆರೋಗ್ಯ ವೃದ್ಧಿಸಿಕೊಳ್ಳಲು ಹೇಗೆಲ್ಲಾ ಬಳಸಬಹುದು ನೋಡಿ.

ದಾಸವಾಳ ಹೂವಿನ ಪ್ರಯೋಜನಗಳು
ದಾಸವಾಳ ಹೂವಿನ ಪ್ರಯೋಜನಗಳು

ಹಿಂದೂ ಧರ್ಮದಲ್ಲಿ ಹಬ್ಬ–ಹರಿದಿನಗಳು, ಪೂಜಾ ದಿನಗಳು ಹೂವುಗಳಿಲ್ಲ ಎಂದರೆ ಪರಿಪೂರ್ಣವಾಗುವುದಿಲ್ಲ, ದೇವಾನುದೇವತೆಗಳಿಗೆ ಹೂ ಅರ್ಪಿಸಿಯೇ ಪೂಜೆ ಸಲ್ಲಿಸುವುದು ವಾಡಿಕೆ. ಈಗಂತೂ ನವರಾತ್ರಿ ಹಬ್ಬ ನಡೆಯುತ್ತಿದೆ. ದುರ್ಗಾಮಾತೆಗೆ ಬಗೆ ಬಗೆಯ ಹೂ ಸಮರ್ಪಿಸಿ ಪೂಜೆ ಮಾಡಲಾಗುತ್ತದೆ. ದುರ್ಗಾಮಾತೆಗೆ ದಾಸವಾಳ ಹೂ ಅತ್ಯಂತ ಪ್ರಿಯವಾದದ್ದು. 9 ದಿನಗಳಲ್ಲಿ ಪೂಜೆಯಲ್ಲಿ ದಾಸವಾಳ ಅರ್ಪಿಸಿಯೇ ಅರ್ಪಿಸಿರುತ್ತಾರೆ.

ಪೂಜೆ ಮುಗಿದ ಬಳಿಕ ದೇವಿಯ ಮುಡಿಗಿಟ್ಟ ಹೂವನ್ನು ಎಸೆಯಲಾಗುತ್ತದೆ. ಆದರೆ ಹಾಗೆ ಮಾಡುವ ಬದಲು ದಾಸವಾಳನ್ನು ಎಸೆಯದೇ ಸಂಗ್ರಹಿಸಿ ಇಡಿ. ಇದರಿಂದ ಆರೋಗ್ಯದ ಜೊತೆಗೆ ಅಂದವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ದಾಸವಾಳದ ಹೂವಿನಿಂದ ಅಂದು ಹಾಗೂ ಆರೋಗ್ಯವನ್ನು ಹೇಗೆಲ್ಲಾ ಕಾಪಾಡಿಕೊಳ್ಳಬಹುದು ಎಂಬ ವಿವರ ಇಲ್ಲಿದೆ. ದಾಸವಾಳದ ಹೂ ಹಾಗೂ ಎಲೆಗಳನ್ನು ಹಿಂದಿನ ಕಾಲದಿಂದಲೂ ಔಷಧ ರೂಪದಲ್ಲಿ ಬಳಸಲಾಗುತ್ತಿತ್ತು. ಹಾಗಾದರೆ ದಾಸವಾಳದ ಮರುಬಳಕೆ ಹೇಗೆ ನೋಡಿ.

ದಾಸವಾಳದ ಹಿನ್ನೆಲೆ

ದಾಸವಾಳದ ಹೂವುಗಳು ಮಲ್ಚೇಸಿ ಕುಟುಂಬಕ್ಕೆ ಸೇರಿದ ಸಸ್ಯಗಳಾಗಿವೆ. ಅವು ನಮ್ಮ ದೇಶದಲ್ಲಿ ಮತ್ತು ಚೀನಾ, ಮಲೇಷ್ಯಾ ಮತ್ತು ಸುಡಾನ್‌ನಂತಹ ಉಷ್ಣವಲಯದ ದೇಶಗಳಲ್ಲಿ ಕಂಡುಬರುತ್ತವೆ. ದಾಸವಾಳದ ಹೂವುಗಳು ಮಾತ್ರವಲ್ಲದೆ ಗಿಡದ ಪ್ರತಿಯೊಂದು ಭಾಗವೂ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ.

ದಾಸವಾಳದ ಭಾಗಗಳನ್ನು ವಿವಿಧ ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ಅವುಗಳಲ್ಲಿ ಕ್ಯಾಲ್ಸಿಯಂ, ಪ್ರೊಟೀನ್, ತಾಮ್ರ, ಮೆಗ್ನೀಸಿಯಮ್, ಕಬ್ಬಿಣ, ಸತು, ಪೊಟ್ಯಾಸಿಯಮ್, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ 6, ವಿಟಮಿನ್ ಕೆ ಮುಂತಾದ ಪೋಷಕಾಂಶಗಳಿವೆ.

ದಾಸವಾಳದ ಹೂವುಗಳು ಆಂಟಿಮೈಕ್ರೊಬಿಯಲ್, ಆಂಟಿ-ಜೆನೊಟಾಕ್ಸಿಕ್, ಮಧುಮೇಹ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ. ಇದು ಚರ್ಮವನ್ನು ರಕ್ಷಿಸುತ್ತದೆ. ಅನೇಕ ರೋಗಗಳನ್ನು ಕಡಿಮೆ ಮಾಡುತ್ತದೆ.

ದಾಸವಾಳದ ಹೂವಿನ ಚಹಾ

ದಾಸವಾಳದಿಂದ ತಯಾರಿಸಿದ ಚಹಾವು ಅನೇಕ ರೋಗಗಳನ್ನು ಗುಣಪಡಿಸುತ್ತದೆ. ದೇವರಿಗೆ ಬಳಸಿದ ದಾಸವಾಳದ ಹೂಗಳನ್ನು ಒಣಗಿಸಿ ಸಂಗ್ರಹಿಸಿ, ಅದನ್ನು ಪುಡಿ ಮಾಡಿಟ್ಟುಕೊಳ್ಳಿ. ದಿನಕ್ಕೊಮ್ಮೆ ಈ ಪುಡಿಯಿಂದ ಟೀ ಮಾಡಿದರೆ ತುಂಬಾ ಒಳ್ಳೆಯದು. ದೇಹವನ್ನು ತಂಪಾಗಿಡಲು, ಹೊಟ್ಟೆಯಲ್ಲಿ ಕಿರಿಕಿರಿಯನ್ನು ತಡೆಯಲು, ರಕ್ತ ಪರಿಚಲನೆ ತೊಂದರೆಗಳನ್ನು ತಡೆಗಟ್ಟಲು ಮತ್ತು ಉಸಿರಾಟದ ತೊಂದರೆಗಳನ್ನು ಕಡಿಮೆ ಮಾಡಲು ಇದು ತುಂಬಾ ಉಪಯುಕ್ತವಾಗಿದೆ.

ಕೂದಲಿನ ಆರೋಗ್ಯಕ್ಕೆ ದಾಸವಾಳ

ಕೂದಲು ಮೃದುವಾಗಿ ಮತ್ತು ಸದಾ ಹೊಳೆಯುತ್ತಿರಬೇಕು ಅಂದ್ರೆ ದಾಸವಾಳದ ಹೂವಿನಿಂದ ಪೇಸ್ಟ್‌ ತಯಾರಿಸಿ ಕೂದಲಿಗೆ ಹಚ್ಚಿಕೊಳ್ಳಿ. ಇದು ಕೂದಲನ್ನು ರೇಷ್ಮೆಯಂತೆ ಮೃದುವಾಗಿಸುತ್ತದೆ. ದಾಸವಾಳದ ಹೂವಿನ ಹೇರ್‌ಮಾಸ್ಕ್‌ ತಯಾರಿಸಲು, ಹೂವುಗಳಿಂದ ಪೇಸ್ಟ್ ತಯಾರಿಸಿ. ಆ ಪೇಸ್ಟ್‌ನಲ್ಲಿ ಮೊಸರು ಮತ್ತು ನೆಲ್ಲಿಕಾಯಿ ಪೌಡರ್ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನ ಬೇರುಗಳು ಗಟ್ಟಿಯಾಗುತ್ತವೆ.

ದಾಸವಾಳದ ಫೇಸ್‌ಮಾಸ್ಕ್

ದಾಸವಾಳದ ಹೂವುಗಳಿಂದ ಫೇಸ್ ಮಾಸ್ಕ್ ತಯಾರಿಸಬಹುದು. ದಾಸವಾಳದ ಹೂವನ್ನು ಜೇನುತುಪ್ಪದೊಂದಿಗೆ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಇದು ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ. ಚರ್ಮದ ಮೇಲೆ ಶುಷ್ಕತೆ ಮತ್ತು ಕಲೆಗಳಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ದಾಸವಾಳದ ಪೇಸ್ಟ್ ಮಾಡಿ ಅದಕ್ಕೆ ಮೊಸರು ಅಥವಾ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಚರ್ಮವು ನೈಸರ್ಗಿಕವಾಗಿ ಹೊಳೆಯುತ್ತದೆ. ದಾಸವಾಳದ ಹೂಗಳನ್ನು ಒಣಗಿಸಿ ಪುಡಿ ಮಾಡಿ, ಇದನ್ನು ಡಬ್ಬಿಯಲ್ಲಿ ಸಂಗ್ರಹಿಸಿ ಇಡಿ. ಅದರಿಂದ ನಿಮಗೆ ಬೇಕಾದಾಗ ಫೇಸ್‌ಮಾಸ್ಕ್ ತಯಾರಿಸಿ ಬಳಸಬಹುದು.

ದಾಸವಾಳವು ಹೆಚ್ಚು ವಯಸ್ಸಾದ ವಿರೋಧಿ ಗುಣಗಳನ್ನು ಹೊಂದಿದೆ. ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಇದರಿಂದ ಸುಟ್ಟಗಾಯಗಳು ಬೇಗನೆ ಗುಣವಾಗುತ್ತವೆ. ಚರ್ಮದಲ್ಲಿ ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದರಿಂದ ತ್ವಚೆಯು ನವತಾರುಣ್ಯದಲ್ಲಿ ಇದ್ದಂತೆ ಕಾಣುತ್ತದೆ. ಇದು ನೈಸರ್ಗಿಕವಾಗಿ ತ್ವಚೆ ಹೊಳಪನ್ನು ಹೆಚ್ಚಿಸುತ್ತದೆ.

ದಾಸವಾಳದ ಹೂವುಗಳಿಂದ ಈ ಎಲ್ಲಾ ಪ್ರಯೋಜನಗಳು ಇರುವ ಕಾರಣ ಪೂಜೆ ಬಳಸಿದ ದಾಸವಾಳವನ್ನು ಎಸೆಯಬೇಡಿ. ಇದರಿಂದ ಇದನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಇದರಿಂದ ಮೇಲೆ ಹೇಳಿದಂತೆ ಬಳಸಿ ಅಂದ, ಆರೋಗ್ಯ ಹಾಗೂ ಕೂದಲಿನ ರಕ್ಷಣೆಯನ್ನು ಮಾಡಿಕೊಳ್ಳಬಹುದು. ಆದರೆ ಕೊಳೆತ ಹೂವಿನ ಬಳಕೆ ಉತ್ತಮವಲ್ಲ, ನೆನಪಿರಲಿ.

Whats_app_banner