ಹಳದಿ ಹಲ್ಲಿನ ಸಮಸ್ಯೆ ನಿವಾರಣೆ ಆಗ್ತಿಲ್ವಾ, ಅಡುಗೆಮನೆಯಲ್ಲಿರುವ ಈ ವಸ್ತು ಶಾಶ್ವತ ಪರಿಹಾರ ನೀಡುತ್ತೆ ಟ್ರೈ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹಳದಿ ಹಲ್ಲಿನ ಸಮಸ್ಯೆ ನಿವಾರಣೆ ಆಗ್ತಿಲ್ವಾ, ಅಡುಗೆಮನೆಯಲ್ಲಿರುವ ಈ ವಸ್ತು ಶಾಶ್ವತ ಪರಿಹಾರ ನೀಡುತ್ತೆ ಟ್ರೈ ಮಾಡಿ

ಹಳದಿ ಹಲ್ಲಿನ ಸಮಸ್ಯೆ ನಿವಾರಣೆ ಆಗ್ತಿಲ್ವಾ, ಅಡುಗೆಮನೆಯಲ್ಲಿರುವ ಈ ವಸ್ತು ಶಾಶ್ವತ ಪರಿಹಾರ ನೀಡುತ್ತೆ ಟ್ರೈ ಮಾಡಿ

ಹಳದಿ ಹಲ್ಲಿನ ಸಮಸ್ಯೆ ಕೆಲವರಿಗೆ ಆತ್ಮವಿಶ್ವಾಸ ಕುಗ್ಗಿಸುತ್ತದೆ. ಇದರಿಂದ ಆತ್ಮೀಯರ ಎದುರು ನಗುವುದು ಕಷ್ಟವಾಗುತ್ತದೆ. ಅಂಥವರಿಗೆ ಅಡುಗೆಮನೆಯಲ್ಲಿರುವ ಈ ವಸ್ತು ಶಾಶ್ವತ ಪರಿಹಾರ ನೀಡುತ್ತದೆ, ಪ್ರಯತ್ನಿಸಿ ನೋಡಿ.

ಹಳದಿ ಹಲ್ಲಿನ ಸಮಸ್ಯೆ ನಿವಾರಣೆ ಆಗ್ತಿಲ್ವಾ, ಅಡುಗೆಮನೆಯಲ್ಲಿನ ಈ ವಸ್ತು ಪರಿಹಾರ ನೀಡುತ್ತೆ
ಹಳದಿ ಹಲ್ಲಿನ ಸಮಸ್ಯೆ ನಿವಾರಣೆ ಆಗ್ತಿಲ್ವಾ, ಅಡುಗೆಮನೆಯಲ್ಲಿನ ಈ ವಸ್ತು ಪರಿಹಾರ ನೀಡುತ್ತೆ (PC: Canva)

ಮನುಷ್ಯನ ಮುಖಕ್ಕೆ ನಗುವೇ ಭೂಷಣ. ಆದರೆ ಕೆಲವರಿಗೆ ನಗುವುದು ಸವಾಲಾಗುತ್ತದೆ. ಅದಕ್ಕೆ ಕಾರಣ ಹಳದಿ ಹಲ್ಲಿನ ಸಮಸ್ಯೆ. ಹಲ್ಲಿನ ಹಳದಿ ಬಣ್ಣವು ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಎಷ್ಟೇ ಸ್ವಚ್ಛ ಮಾಡಿ ಹಲ್ಲುಜ್ಜಿದ್ದರೂ ಹಳದಿ ಹಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಕಷ್ಟವಾಗುತ್ತದೆ.

ಹಲ್ಲಿನ ಬಣ್ಣ ಹಳದಿಯಾಗಲು ಸರಿಯಾಗಿ ಹಲ್ಲುಜ್ಜದೇ ಇರುವುದು ಮಾತ್ರವಲ್ಲ, ಇದಕ್ಕೆ ಕಾರಣಗಳು ಹಲವಿರಬಹುದು. ಇದನ್ನು ಸರಿ ಪಡಿಸಲು ಎಷ್ಟೇ ಪ್ರಯತ್ನಪಟ್ಟರೂ ಹಲ್ಲಿನ ಬಣ್ಣ ಮತ್ತೆ ಹಳದಿಯಾಗಬಹುದು.

ಎಷ್ಟೋ ಜನರು ಹಳದಿ ಹಲ್ಲಿನ ಕಾರಣದಿಂದ ಇನ್ನೊಬ್ಬರ ಎದುರು ನಗಲು, ಬಾಯಿ ತೆರೆದು ಮಾತನಾಡಲೂ ಹಿಂಜರಿಯುತ್ತಾರೆ. ಇದಕ್ಕಾಗಿ ಸಾಕಷ್ಟು ಖರ್ಚು ಮಾಡಿದರೂ ಕೆಲವೊಮ್ಮೆ ಈ ಸಮಸ್ಯೆ ಮತ್ತೆ ಮರುಕಳಿಸುತ್ತದೆ. ಅದರ ಬದಲು ಅಂತಹವರು ಈ ಸಮಸ್ಯೆ ನಿವಾರಿಸಲು ಅಡುಗೆಮನೆಯಲ್ಲಿರುವ ಈ ಒಂದು ವಸ್ತುವನ್ನು ಬಳಸಬಹುದು, ಆ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.

ಯಾವುದು ವಸ್ತು ಎಂದರೆ ನಿಂಬೆಹಣ್ಣು. ಅಡುಗೆಮನೆಯಲ್ಲಿ ಸದಾ ಸಿಗುವ ನಿಂಬೆಯಿಂದ ಹಳದಿ ಹಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಹೇಗೆ ನೋಡೋಣ.

ನಿಂಬೆಯ ಸ್ವಚ್ಛತಾ ಗುಣ

ಹಲ್ಲುಗಳಿಂದ ಹಳದಿ ಬಣ್ಣವನ್ನು ತೆಗೆದುಹಾಕಲು ನಿಂಬೆ ಎಷ್ಟು ಉಪಯುಕ್ತವಾಗಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ನಿಂಬೆಹಣ್ಣು ಸಿಟ್ರಿಕ್ ಆಮ್ಲ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿದೆ. ಇದರರ್ಥ ನಿಂಬೆಗೆ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಕ್ತಿ ಇದೆ ಎಂದರ್ಥ. ಇದು ಕೊಳೆಯನ್ನು ಸಹ ತೆಗೆದುಹಾಕುತ್ತದೆ. ಹಾಗಾಗಿ ನಿಂಬೆಹಣ್ಣಿನಿಂದ ಹಲ್ಲುಗಳ ಮೇಲಿನ ಹಳದಿ ಕಲೆಗಳನ್ನು ಸುಲಭವಾಗಿ ತೆಗೆದುಹಾಕಬಹುದು.

ಹಳದಿ ಹಲ್ಲಿನ ಸಮಸ್ಯೆಗೆ ನಿಂಬೆಹಣ್ಣಿನ ಬಳಕೆ ಹೇಗೆ?

ಒಂದು ಸಣ್ಣ ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ನಿಂಬೆ ರಸ ಸೇರಿಸಿ. ಅದೇ ಬಟ್ಟಲಿನಲ್ಲಿ, ಒಂದು ಚಿಟಿಕೆ ಉಪ್ಪು ಮತ್ತು ಅರ್ಧ ಚಮಚ ತೆಂಗಿಎಣ್ಣೆ ಸೇರಿಸಿ. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಸ್ವಲ್ಪ ಹೊತ್ತು ಪಕ್ಕಕ್ಕೆ ಇರಿಸಿ. ಇದು ನೈಸರ್ಗಿಕ ಬ್ಲೀಚ್‌ನಂತೆ ಬದಲಾಗುತ್ತದೆ. ಈಗ ನಿಮ್ಮ ಬ್ರಷ್ ಅನ್ನು ಈ ಮಿಶ್ರಣದಲ್ಲಿ ಅದ್ದಿ ಮತ್ತು ಪ್ರತಿದಿನ ಹಲ್ಲುಗಳನ್ನು ಸ್ವಚ್ಛಗೊಳಿಸಲು ಪ್ರಯತ್ನಿಸಿ. ಇದನ್ನು ಎರಡು ಮೂರು ವಾರಗಳ ಕಾಲ ಮಾಡಿ. ಇದರಿಂದ ಬಹಳ ಬೇಗ ನಿಮ್ಮ ಹಲ್ಲುಗಳಲ್ಲಿ ಬಣ್ಣ ಬದಲಾಗುವುದನ್ನು ನೀವು ಗಮನಿಸಬಹುದು. ನಂತರ ನೀವು ಸಂತೋಷದಿಂದ ನಗಬಹುದು. ನಿಮ್ಮ ಹಳದಿ ಹಲ್ಲುಗಳ ಬಗ್ಗೆ ಮುಂದೆ ಚಿಂತಿಸಬೇಕಾಗಿಲ್ಲ.

ನಿಂಬೆಹಣ್ಣು ಮತ್ತು ಉಪ್ಪು

ನಿಂಬೆಹಣ್ಣಿನ ಬ್ಲೀಚಿಂಗ್ ಗುಣಗಳು ಹಲ್ಲುಗಳ ಮೇಲಿನ ಹಳದಿ ಕಲೆಗಳನ್ನು ಸುಲಭವಾಗಿ ತೆಗೆದು ಹಾಕುತ್ತದೆ. ಇದರೊಂದಿಗೆ ನಾವು ಉಪ್ಪನ್ನು ಸಹ ಬಳಸಬಹುದು. ನಿಂಬೆಹಣ್ಣಿನ ಜೊತೆ ಉಪ್ಪು ಕೂಡ ಅತ್ಯುತ್ತಮ ಔಷಧವಾಗುತ್ತದೆ. ಈ ಎರಡರ ಮಿಶ್ರಣವು ಹಲ್ಲುಗಳಿಂದ ಕೊಳೆಯನ್ನು ತೆಗೆದುಹಾಕುತ್ತವೆ. ಆದಾಗ್ಯೂ, ಈ ಎರಡರ ಸಂಯೋಜನೆಯಿಂದ ಬರುವ ರಸವನ್ನು ನುಂಗುವ ಬದಲು ಉಗುಳುವುದು ಬಹಳ ಮುಖ್ಯ. ಇದು ಅನೇಕ ಕೀಟಗಳು, ಬ್ಯಾಕ್ಟೀರಿಯಾಗಳು ಮತ್ತು ವೈರಸ್‌ಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ. ಇದರಿಂದ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.