Beetroot Recipe: ತೂಕ ಇಳಿಕೆಗೆ ಬೆಸ್ಟ್ ಕೆಂಪು ಕೆಂಪು ಬೀಟ್ರೂಟ್; ಆಹಾರಕ್ರಮದಲ್ಲಿ ಸೇರಿಸಿಕೊಳ್ಳಲು ಇಲ್ಲಿದೆ 6 ರೀತಿಯ ಬೀಟ್ರೂಟ್ ರೆಸಿಪಿ
ತೂಕ ಇಳಿಕೆ ವಿಷಯ ಬಂದಾಗ ಮೊದಲು ಹುಡುಕುವುದು ತೂಕ ಇಳಿಕೆಯ ಆಹಾರಗಳನ್ನು. ಕೆಲವು ಆಹಾರಗಳು ಕ್ಯಾಲೋರಿಯನ್ನು ಹೆಚ್ಚಿಸುತ್ತವೆ. ಇನ್ನು ಕೆಲವು ತ್ವರಿತವಾಗಿ ತೂಕ ಇಳಿಕೆಗೆ ಸಹಾಯ ಮಾಡುತ್ತವೆ. ಅವುಗಳಲ್ಲಿ ಬೀಟ್ರೂಟ್ ಅತ್ಯುತ್ತಮವಾಗಿದೆ. ಬೀಟ್ರೂಟ್‌ನಿಂದ ತಯಾರಿಸಬಹುದಾದ 6 ರೆಸಿಪಿಗಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳಿ.

ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳುವ ಸಲುವಾಗಿ ಆಹಾರಗಳನ್ನು ಹುಡುಕುವುದು, ವ್ಯಾಯಾಮ ಮತ್ತು ಚಟುವಟಿಕೆಗಳನ್ನು ಮಾಡುವುದು ಎಲ್ಲಡೆ ಕಂಡುಬರುವ ವಿಷಯವಾಗಿದೆ. ತೂಕದ ಬಗ್ಗೆ ತಲೆಕೆಡಿಸಿಕೊಳ್ಳುವವರು ನಮ್ಮಲ್ಲಿ ಬಹಳಷ್ಟು ಜನರಿದ್ದಾರೆ. ತೂಕ ಇಳಿಸಿಕೊಳ್ಳುವುದೇ ಒಂದು ದೊಡ್ಡ ಸವಾಲಿನಂತೆ ಅವರಿಗೆ ಕಾಣುತ್ತದೆ. ಅದಕ್ಕಾಗಿ ಅವರು ತೂಕ ನಷ್ಟಕ್ಕೆ ಸಹಾಯ ಮಾಡುವ ಆಹಾರಗಳನ್ನು ಹುಡುಕುತ್ತಿರುತ್ತಾರೆ. ತೂಕ ಇಳಿಕೆಗೆ ಅತ್ಯುತ್ತಮವಾಗಿರುವ ಆಹಾರಗಳಲ್ಲಿ ಬೀಟ್ರೂಟ್ ಸಹ ಒಂದು. ನೆಲದಡಿಯಲ್ಲಿ ಬೆಳೆಯುವ ಈ ಗಡ್ಡೆ ಹೆಚ್ಚುವರಿ ಕ್ಯಾಲೋರಿಗಳನ್ನು ಕರಗಿಸಲು ಸಹಾಯ ಮಾಡುತ್ತದೆ. ಇದಲ್ಲದೇ ಬೀಟ್ರೂಟ್ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಯಕೃತ್ತನ್ನು ನಿರ್ವಿಷಗೊಳಿಸುತ್ತದೆ. ಇದು ಫೈಬರ್‌ನಿಂದ ಸಮೃದ್ಧವಾದ ಆಹಾರವಾದ್ದರಿಂದ ನಿತ್ಯದ ಡಯಟ್‌ನಲ್ಲಿ ಸೇರಿಸಿಕೊಳ್ಳಲು ಉತ್ತಮವಾಗಿದೆ.
ತೂಕ ಇಳಿಕೆಗೆ ಬೀಟ್ರೂಟ್ ಅತ್ಯುತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ಹೆಚ್ಚಿನ ಫೈಬರ್ ಅಂಶಗಳು ಕಡುಬಯಕೆಗಳನ್ನು ತಡೆಯುತ್ತದೆ. ಬೀಟ್ರೂಟ್‌ನಲ್ಲಿರುವ ನೈಟ್ರೇಟ್‌ಗಳು ವ್ಯಾಯಾಮದ ಸಮಯದಲ್ಲಿ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮೂಲಕ ಹೆಚ್ಚುವರಿ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಬೀಟ್ರೂಟ್ ಜ್ಯೂಸ್ ದೇಹದ ತೂಕವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಹೇಳುತ್ತದೆ. ಬೀಟ್ರೂಟ್ ಅನ್ನು ನಿಮ್ಮ ನಿತ್ಯದ ಡಯಟ್‌ನಲ್ಲಿ ಸೇರಿಸಿಕೊಳ್ಳಲು ನಿಮಗೆ ಸಹಾಯವಾಗುವ 6 ಬಗೆಯ ರೆಸಿಪಿಗಳು ಇಲ್ಲಿವೆ.
1. ಬೀಟ್ರೂಟ್ ಸ್ಮೂಥಿ
ಒಂದು ಬೀಟ್ರೂಟ್ ಅನ್ನು ಕತ್ತರಿಸಿ, ಬೇಯಿಸಿಕೊಳ್ಳಿ. ಈಗ ಅದನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಅದಕ್ಕೆ ಸ್ಟ್ರಾಬೆರಿ, ಅರ್ಧ ಬಾಳೆಹಣ್ಣು, ಅರ್ಧ ಕಪ್ ಪಾಲಕ್ ಮತ್ತು ಒಂದು ಕಪ್ ಹಾಲು ಸೇರಿಸಿಕೊಳ್ಳಿ. ಒಂದು ಚಮಚ ನಿಂಬೆ ರಸ ಮತ್ತು ಶುಂಠಿ ಚೂರನ್ನು ಸೇರಿಸಿ. ಇವಿಷ್ಟನ್ನು ನಯವಾಗಿ ರುಬ್ಬಿಕೊಳ್ಳಿ. ಅಗತ್ಯವಿದ್ದರೆ ಸ್ವಲ್ಪ ಹಾಲು ಅಥವಾ ನೀರು ಸೇರಿಸಿಕೊಳ್ಳಿ. ರುಚಿಯಾದ ಬೀಟ್ರೂಟ್ ಸ್ಮೂಥಿ ಸವಿಯಲು ರೆಡಿ.
2. ಬೀಟ್ರೂಟ್ ಸೂಪ್
ಒಂದು ಬಾಣಲೆಗೆ ಒಂದು ಚಮಚ ಆಲಿವ್ ಎಣ್ಣೆಯನ್ನು ಹಾಕಿ. ಅದು ಬಿಸಿಯಾದ ನಂತರ ಕತ್ತರಿಸಿದ 1 ಈರುಳ್ಳಿ ಮತ್ತು 2 ಎಸಳು ಬೆಳ್ಳುಳ್ಳಿಯನ್ನು ಸೇರಿಸಿ ಹುರಿದುಕೊಳ್ಳಿ. ಅದಕ್ಕೆ ಸಿಪ್ಪೆ ತೆಗೆದ ಕತ್ತರಿಸಿದ ಬೀಟ್ರೂಟ್ ಮತ್ತು 1 ಇಂಚ ಶುಂಠಿಯನ್ನು ಸೇರಿಸಿ ಮೃದುವಾಗುವವರೆಗೆ ಹುರಿಯಿರಿ. ಅದಕ್ಕೆ 4 ಕಪ್ ನೀರು ಸೇರಿಸಿ, ಸುಮಾರು 20-25 ನಿಮಿಷಗಳವರೆಗೆ ಚೆನ್ನಾಗಿ ಕುದಿಯಲು ಬಿಡಿ. ಮಿಶ್ರಣ ಆರಿದ ಮೇಲೆ ಅದನ್ನ ಮಿಕ್ಸಿ ಜಾರ್‌ಗೆ ಹಾಕಿಕೊಂಡು ನಯವಾಗಿ ರುಬ್ಬಿಕೊಳ್ಳಿ. ಈಗ ಇದನ್ನು ಒಂದು ಪಾತ್ರೆಗೆ ವರ್ಗಾಯಿಸಿ. ಅದಕ್ಕೆ ಸ್ವಲ್ಪ ಪೆಪ್ಪರ್ ಪೌಡರ್, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಇನ್ನೊಮ್ಮೆ ಕುದಿಸಿ. ಸಬ್ಬಸಿಗೆ ಸೊಪ್ಪು ಅಥವಾ ಪಾರ್ಸ್ಲಿ ಎಲೆಗಳನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ. ಹೀಗೆ ಬೀಟ್ರೂಟ್ ಸೂಪ್ ತಯಾರಿಸಿ.
3. ಬೀಟ್ರೂಟ್ ಜ್ಯೂಸ್
ಒಂದು ಜ್ಯೂಸರ್ ಜಾರ್‌ಗೆ ಕತ್ತರಿಸಿದ ಬೀಟ್ರೂಟ್, ಸೇಬು, ಕ್ಯಾರೆಟ್ ಮತ್ತು ಶುಂಠಿಯನ್ನು ಹಾಕಿ. ಅದಕ್ಕೆ ಸ್ವಲ್ಪ ನೀರು ಸೇರಿಸಿ ಜ್ಯೂಸ್ ತಯಾರಿಸಿಕೊಳ್ಳಿ. ಶೋಧಕದ ಸಹಾಯದಿಂದ ಶೋಧಿಸಿಕೊಳ್ಳಿ. ತಾಜಾ ಬೀಟ್ರೂಟ್ ಜ್ಯೂಸ್ ಅನ್ನು ತಕ್ಷಣ ಸವಿಯಿರಿ.
4. ಬೀಟ್ರೂಟ್ ಮತ್ತು ಬೇಳೆಕಾಳುಗಳ ಸಲಾಡ್
ಮೊದಲಿಗೆ ಬೀಟ್ರೂಟ್ ಅನ್ನು ಸಿಪ್ಪೆ ತೆಗೆದು ತುರಿದುಕೊಳ್ಳಿ. ಅಥವಾ ಬೇಯಿಸಿ, ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಅದನ್ನು ಒಂದು ಬೌಲ್‌ಗೆ ಹಾಕಿ. ಅದಕ್ಕೆ ಬೇಯಿಸಿದ ಬೇಳೆಕಾಳುಗಳನ್ನು ಸೇರಿಸಿ. ಬಾದಾಮಿ ಅಥವಾ ವಾಲ್ನಟ್ ಅನ್ನು ಸೇರಿಸಿಕೊಳ್ಳಿ. ಅದಕ್ಕೆ ಒಂದು ಚಮಚ ಆಲಿವ್ ಎಣ್ಣೆ, ಕರಿಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮೇಲಿನಿಂದ ಕತ್ತರಿಸಿದ ಕತ್ತೊಂಬರಿ ಸೊಪ್ಪನ್ನು ಸೇರಿಸಿ. ರುಚಿಯಾದ ಸಲಾಡ್ ತಿನ್ನಿ.
5. ಬೀಟ್ರೂಟ್ ಪ್ಯಾನ್ ಕೇಕ್
ಒಂದು ಬೌಲ್‌ಗೆ 1 ಕಪ್ ಗೋಧಿ ಹಿಟ್ಟು, 1 ಚಮಚ ಬೇಕಿಂಗ್ ಪೌಡರ್ ಮತ್ತು 1/4 ಚಮಚ ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಮುತ್ತೊಂದು ಬೌಲ್‌ನಲ್ಲಿ 1 ಕಪ್ ಹಾಲು ಮತ್ತು ಮೊಟ್ಟೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅದಕ್ಕೆ 1/4 ಕಪ್ ಬೀಟ್ರೂಟ್ ರಸ, ವೆನಿಲ್ಲಾ ಎಸೆನ್ಸ್ ಸೇರಿಸಿ. ಈಗ ಇದಕ್ಕೆ ತಯಾರಿಸಿಟ್ಟುಕಂಡ ಹಿಟ್ಟನ್ನು ನಿಧಾನವಾಗಿ ಸೇರಿಸುತ್ತಾ ಬನ್ನಿ. ಚೆನ್ನಾಗಿ ಮಿಕ್ಸ್ ಮಾಡಿ. ಈಗ ನಾನ್‌ಸ್ಟಿಕ್ ಪ್ಯಾನ್‌ಗೆ ಎಣ್ಣೆ ಸವರಿ ಬಿಸಿಯಾಗಲು ಬಿಡಿ. ಕಾಲು ಕಪ್ ಅಳತೆಯಲ್ಲಿ ಈ ಮಿಶ್ರಣವನ್ನು ಪ್ಯಾನ್ ಮೇಲೆ ಹರಡಿ. 2-3 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಎರಡೂ ಕಡೆ ಬೇಯಿಸಿ. ತೂಕ ಇಳಿಕೆಗೆ ಬೆಸ್ಟ್ ಆದ ಬೀಟ್ರೂಟ್ ಪ್ಯಾನ್ ಕೇಕ್ ಸವಿಯಲು ರೆಡಿ.
6. ಬೀಟ್ರೂಟ್ ಸಲಾಡ್
ಬೀಟ್ರೂಟ್ ಅನ್ನು ಸಿಪ್ಪೆ ತೆಗೆದು ಬೇಯಿಸಿಕೊಳ್ಳಿ. ಅದನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಅದಕ್ಕೆ ಕತ್ತರಿಸಿದ ವಾಲ್ನಟ್ ಅಥವಾ ಬಾದಾಮಿ, ತುರಿದ ಚೀಸ್, ಕತ್ತರಿಸಿದ ಕೊತ್ತಂಬರಿ ಸೊಪ್ಪು, ಒಂದು ಚಮಚ ಆಲೀವ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕರಿಮೆಣಸಿನ ಪುಡಿ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು 30 ನಿಮಿಷಗಳ ಕಾಲ ಫ್ರಿಜ್‌ನಲ್ಲಿಡಿ. ತಂಪಾದ ಬೀಟ್ರೂಟ್ ಸಲಾಡ್ ಸವಿಯಿರಿ.
