ಕಂದು ಬಣ್ಣಕ್ಕೆ ತಿರುಗಿದ ಬಾಳೆಹಣ್ಣುಗಳು ಸೇವಿಸಲು ಯೋಗ್ಯವೇ: ಹೆಚ್ಚು ಮಾಗಿರುವ ಈ ಹಣ್ಣಿನ ಪ್ರಯೋಜನ ತಿಳಿದ್ರೆ ಅಚ್ಚರಿ ಪಡುವಿರಿ
ಬಾಳೆಹಣ್ಣುಗಳು ಸ್ವಾಭಾವಿಕವಾಗಿ ಸಿಹಿ ಸುವಾಸನೆ ಮತ್ತು ಮೃದುವಾದ ವಿನ್ಯಾಸಕ್ಕೆ ಹೆಸರುವಾಸಿಯಾದ ಜನಪ್ರಿಯ ಹಣ್ಣು ಎಂದರೆ ತಪ್ಪಲ್ಲ.ಬಾಳೆಹಣ್ಣುಗಳು ಹಣ್ಣಾಗುತ್ತಿದ್ದಂತೆ,ಅವುಗಳ ಪಿಷ್ಟಗಳು ಸಕ್ಕರೆ ಅಂಶಗಳಾಗಿ ರೂಪಾಂತರಗೊಳ್ಳುತ್ತವೆ. ಅಲ್ಲದೆ, ಹಳದಿ ಬಣ್ಣವಿದ್ದ ಸಿಪ್ಪೆ ಕಂದು ಬಣ್ಣಕ್ಕೆ ತಿರುಗುತ್ತವೆ. ಇವು ತಿನ್ನಲು ಎಷ್ಟು ಯೋಗ್ಯ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಹಣ್ಣುಗಳು ಆರೋಗ್ಯಕ್ಕೆ ಉತ್ತಮವಾಗಿದ್ದರೂ ಬಹುತೇಕರಿಗೆ ಇದು ಬಾಯಿಗೆ ರುಚಿಸುವುದಿಲ್ಲ. ದಿನಾ ಆಪಲ್, ಮುಸುಂಬಿ ಯಾರು ತಿಂತಾರೆ ಅಂತಾ ಅಸಡ್ಡೆ ಮಾಡುತ್ತಾರೆ. ದಾಳಿಂಬೆಯಾದ್ರೆ, ಅಯ್ಯೋ ಅದರ ಸಿಪ್ಪೆ ಯಾರು ತೆಗೆಯೋದು ಅಂತಾ ಸೋಮಾರಿತನ ಮಾಡುತ್ತಾರೆ. ಆದರೆ, ಬಾಳೆಹಣ್ಣು ಬಹುತೇಕರಿಗೆ ಪ್ರಿಯವಾಗಿದೆ ಎಂದರೆ ತಪ್ಪಲ್ಲ. ಊಟವಾದ ನಂತರ ಬಾಳೆಹಣ್ಣು ತಿನ್ನುವುದು ವಾಡಿಕೆಯಾಗಿದೆ. ಯಾವುದೇ ಶುಭ ಸಮಾರಂಭದಲ್ಲಿ ಊಟದ ಕೊನೆಗೆ ಬಾಳೆಹಣ್ಣನ್ನು ನೀಡಲಾಗುತ್ತದೆ. ಆದರೆ, ಈ ಬಾಳೆಹಣ್ಣುಗಳು ಸರಿಯಾಗಿ ಹಣ್ಣಾಗಿದ್ದಾಗ ಸಂತೋಷದಿಂದ ಆಸ್ವಾದಿಸುವವರು ಅದೇ, ಬಾಳೆಹಣ್ಣು ಹೆಚ್ಚಾಗಿ ಮಾಗಿದ್ದರೆ ತಿನ್ನಲು ಹಿಂದೇಟು ಹಾಕುತ್ತಾರೆ.
ಹಸಿರು ಬಣ್ಣದಿಂದ ಹಳದಿ ಬಣ್ಣಕ್ಕೆ ಪರಿವರ್ತನೆಗೊಳ್ಳುವ ಈ ಬಾಳೆಹಣ್ಣುಗಳು ಅಂತಿಮವಾಗಿ ಕಂದು ಬಣ್ಣದ ಚುಕ್ಕೆಗಳಿಗೆ ತಿರುಗುತ್ತವೆ. ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ಬಹುತೇಕ ಮಂದಿ ತಿನ್ನಲು ಇಷ್ಟಪಡುವುದಿಲ್ಲ. ಆದರೆ ಮಾಗಿದ ಬಾಳೆಹಣ್ಣುಗಳು ಪೋಷಕಾಂಶಗಳಿಂದ ತುಂಬಿರುತ್ತದೆ. ಹೆಚ್ಚು ಹಣ್ಣಾಗುತ್ತಿದ್ದಂತೆ ಬಾಳೆಹಣ್ಣಿನಲ್ಲಿರುವ ಪಿಷ್ಟದ ಅಂಶವು ಸಕ್ಕರೆಯಾಗಿ ಪರಿವರ್ತನೆಗೊಳ್ಳುತ್ತದೆ. ಅವುಗಳನ್ನು ಮತ್ತಷ್ಟು ಸಿಹಿಯಾಗಿಸುವುದಲ್ಲದೆ, ರುಚಿಯನ್ನೂ ಹೆಚ್ಚಿಸುತ್ತದೆ. ಮಾಗಿದ ಬಾಳೆಹಣ್ಣುಗಳು ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಮತ್ತು ಹೃದಯದ ಆರೋಗ್ಯವನ್ನು ಬೆಂಬಲಿಸುವ ಉತ್ಕರ್ಷಣ ನಿರೋಧಕಗಳನ್ನು ಸಹ ಹೊಂದಿರುತ್ತವೆ. ಹೆಚ್ಚು ಹಣ್ಣಾದ ಬಾಳೆಹಣ್ಣು ಹಲವಾರು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಅವು ಯಾವ್ಯಾವು ಇಲ್ಲಿ ತಿಳಿದುಕೊಳ್ಳಿ:
ಪೊಟ್ಯಾಶಿಯಮ್: ಮಾಗಿದ ಬಾಳೆಹಣ್ಣುಗಳಲ್ಲಿ ಪೊಟ್ಯಾಶಿಯಮ್ ಅಂಶ ಹೆಚ್ಚಿರುತ್ತದೆ. ಇದು ರಕ್ತದೊತ್ತಡ, ಸ್ನಾಯುವಿನ ಕಾರ್ಯ ಮತ್ತು ನರಗಳ ಸಂಕೇತವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಫೈಬರ್: ಮಾಗಿದ ಬಾಳೆಹಣ್ಣಿನಲ್ಲಿ ಫೈಬರ್ ಅಂಶ ಹೆಚ್ಚಾಗುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಲ್ಲದೆ, ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.
ವಿಟಮಿನ್‍ಗಳು: ಮಾಗಿದ ಬಾಳೆಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಬಿ-6 ಮತ್ತು ವಿಟಮಿನ್ ಎ ಸೇರಿದಂತೆ ವಿವಿಧ ಜೀವಸತ್ವಗಳನ್ನು ಹೊಂದಿರುತ್ತದೆ. ಇದು ದೇಹದ ಪ್ರತಿರಕ್ಷಣಾ ಕಾರ್ಯ, ಚಯಾಪಚಯ ಮತ್ತು ದೃಷ್ಟಿ ಆರೋಗ್ಯಕ್ಕೆ ಉತ್ತಮ.
ಉತ್ಕರ್ಷಣಾ ನಿರೋಧಕಗಳು: ಬಾಳೆಹಣ್ಣುಗಳು ಮತ್ತಷ್ಟು ಹಣ್ಣಾಗುತ್ತಿದ್ದಂತೆ ಇದರಲ್ಲಿ ಉತ್ಕರ್ಷಣಾ ನಿರೋಧಕ ಮಟ್ಟಗಳು ಹೆಚ್ಚಾಗಬಹುದು. ಇದು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತದ ವಿರುದ್ಧ ರಕ್ಷಣೆ ನೀಡುತ್ತದೆ.
ಮಾಗಿದ (ಕಂದುಬಣ್ಣಕ್ಕೆ ತಿರುಗಿದ) ಬಾಳೆಹಣ್ಣುಗಳು ಸೇವಿಸಲು ಯೋಗ್ಯವೇ?
ಮಾಗಿದ ಬಾಳೆಹಣ್ಣುಗಳಲ್ಲಿ ಹಲವು ಪೋಷಕಾಂಶಗಳಿದ್ದರೂ ಅವುಗಳನ್ನು ಸೇವಿಸಬಹುದು. ಆದರೆ, ಈ ಅಂಶಗಳನ್ನು ಪರಿಶೀಲಿಸಿ:
ಮಾಗಿದ ಬಾಳೆಹಣ್ಣಿನಲ್ಲಿ ಬಿಳಿ, ಬೂದು ಬಣ್ಣ: ಮಾಗಿದ ಬಾಳೆಹಣ್ಣಿನಲ್ಲಿ ಕಂದು ಕಲೆಗಳಿರುವುದು ಸಾಮಾನ್ಯ. ಸಣ್ಣ ಕಂದು ಬಣ್ಣದ ಚುಕ್ಕೆಗಳು ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವುದಿಲ್ಲ. ಆದರೆ, ಬಿಳಿ, ಹಸಿರು, ನೀಲಿ, ಅಥವಾ ಕಪ್ಪು ಬಣ್ಣದ ಅಚ್ಚು ಕಂಡುಬಂದರೆ ಅಂಥವುಗಳನ್ನು ಸೇವಿಸುವುದು ಒಳ್ಳೆಯದಲ್ಲ. ಹೆಚ್ಚಿನ ಆರ್ದ್ರತೆ ಅಥವಾ ಅಸಮರ್ಪಕ ಶೇಖರಣಾ ಪರಿಸ್ಥಿತಿಗಳಿಂದಾಗಿ ಇವು ಬೆಳೆಯುತ್ತದೆ. ಈ ರೀತಿ ಇರುವ ಬಾಳೆಹಣ್ಣನ್ನು ಸೇವಿಸುವುದರಿಂದ ಅಲರ್ಜಿ ಉಂಟಾಗುವುದು ಅಥವಾ ಜಠರಗರುಳಿನ ಅಸ್ವಸ್ಥತೆ ಸೇರಿದಂತೆ ಇನ್ನಿತರೆ ಸಮಸ್ಯೆ ಉಂಟಾಗಬಹುದು.
ಹೆಚ್ಚಿನ ಸಕ್ಕರೆ ಮಟ್ಟ: ಮಾಗಿದ ಬಾಳೆಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಮಟ್ಟ ಹೆಚ್ಚಿರುತ್ತದೆ. ಹೀಗಾಗಿ ನೈಸರ್ಗಿಕವಾಗಿ ಸಿಹಿಯಾಗಿರುತ್ತವೆ. ಬಾಳೆಹಣ್ಣಿನಲ್ಲಿ ಫ್ರಕ್ಟೋಸ್, ಗ್ಲೂಕೋಸ್ ಮತ್ತು ಸುಕ್ರೋಸ್ ಅನ್ನು ಹೊಂದಿದೆ. ಇವು ಹೆಚ್ಚು ಹಣ್ಣಾಗುತ್ತಿದ್ದಂತೆ, ಅವುಗಳಲ್ಲಿರುವ ಪಿಷ್ಟಗಳು ಸಕ್ಕರೆಗಳಾಗಿ ಪರಿವರ್ತನೆಗೊಳ್ಳುತ್ತವೆ. ಮಧ್ಯಮ ಮಾಗಿದ ಬಾಳೆಹಣ್ಣು ಸುಮಾರು 14 ಗ್ರಾಂ ಸಕ್ಕರೆ ಅಂಶವನ್ನು ಹೊಂದಿರುತ್ತದೆ. ಮಾಗಿದ ಬಾಳೆಹಣ್ಣಿನಲ್ಲಿ ಸಕ್ಕರೆ ಅಂಶ ಮತ್ತಷ್ಟು ಹೆಚ್ಚಿರುತ್ತದೆ. ಹೀಗಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವವರಿಗೆ ಅಥವಾ ಮಧುಮೇಹಿಗಳು ಮಿತವಾಗಿ ಸೇವಿಸುವುದು ಒಳಿತು.
ವಿನ್ಯಾಸ: ಕೆಲವರು ಹೆಚ್ಚು ಹಣ್ಣಾಗದ ಗಟ್ಟಿಯಾಗಿರುವ ಬಾಳೆಹಣ್ಣುಗಳನ್ನು ಸೇವಿಸಲು ಬಯಸುತ್ತಾರೆ. ಇವು ಮಾಗಿದ ಬಾಳೆಹಣ್ಣುಗಳಿಗೆ ಹೋಲಿಸಿದರೆ ಕಡಿಮೆ ಸಿಹಿ ಹೊಂದಿರುತ್ತದೆ. ಅಲ್ಲದೆ ವಿನ್ಯಾಸವು ಆಕರ್ಷಣೀಯವಾಗಿರುತ್ತದೆ. ಆದರೆ, ಮಾಗಿದ ಬಾಳೆಹಣ್ಣುಗಳ ವಿನ್ಯಾಸವು ಅಷ್ಟಾಗಿ ಆಕರ್ಷಣೀಯವಾಗಿ ಕಾಣಿಸದಿರಬಹುದು. ಹಾಗಂತ ಇದು ತಿನ್ನಲು ಯೋಗ್ಯವಿಲ್ಲವೆಂದಲ್ಲ. ಪೌಷ್ಠಿಕಾಂಶ ಹಾಗೂ ಸುರಕ್ಷತೆಯ ಮೇಲೆ ವಿನ್ಯಾಸವು ಯಾವುದೇ ಪರಿಣಾಮ ಬೀರುವುದಿಲ್ಲ.
ಮಾಗಿದ ಬಾಳೆಹಣ್ಣನ್ನು ತಿನ್ನಲು ಇಷ್ಟವಾಗದಿದ್ದರೆ ಸಿಹಿ-ತಿಂಡಿ, ದೋಸೆ, ಸ್ಮೂಥಿಗಳನ್ನು ತಯಾರಿಸಿ ಸವಿಯಬಹುದು. ಒಟ್ಟಾರೆಯಾಗಿ ವಿನ್ಯಾಸ ಮತ್ತು ರುಚಿಗಳ ಬದಲಾವಣೆ ಹೊರತುಪಡಿಸಿದರೆ ಮಾಗಿದ ಬಾಳೆಹಣ್ಣುಗಳು ತಿನ್ನಲು ಯೋಗ್ಯವಾಗಿದೆ. ಹಾಗೆಯೇ ಬಾಳೆಹಣ್ಣು ಸೇವನೆಯ ಮೊದಲು ಸರಿಯಾದ ಶೇಖರಣೆಯನ್ನು ಅನುಸರಿಸುವುದು ಬಹಳ ಅತ್ಯಗತ್ಯ.
ವಿಭಾಗ