ಬರೀ ಮೊಸರು ಇಷ್ಟ ಇಲ್ವ; ನಿತ್ಯ ಅಡುಗೆಯಲ್ಲಿ ಈ 4 ವಿಧದಲ್ಲಿ ಬಳಸಿ ನೋಡಿ, ಆರೋಗ್ಯ ಭಾಗ್ಯ ನಿಮ್ಮದು
ಮೊಸರಿನಲ್ಲಿ ಹಲವು ಆರೋಗ್ಯ ಪ್ರಯೋಜನಗಳಿವೆ. ಆದರೆ ಬರೀ ಮೊಸರು ಬಾಯಿಗೆ ರುಚಿಸಲ್ಲ. ಹೀಗಾಗಿ ದೈನಂದಿನ ಆಹಾರದಲ್ಲಿ ಮೊಸರನ್ನು ವಿವಿಧ ರೀತಿಯಲ್ಲಿ ಬಳಸಬಹುದು. ನಿಮಗಾಗಿ ನಾಲ್ಕು ವಿಧಾನವನ್ನು ಇಲ್ಲಿ ಕೊಡಲಾಗಿದೆ.
ಅಡುಗೆ ಮನೆಯಲ್ಲಿ ಮೊಸರು ಹೆಚ್ಚು ಬಳಕೆಯಾಗುತ್ತದೆ. ಆಹಾರ ತಯಾರಿ ಮಾತ್ರವಲ್ಲದೆ ಸೌಂದರ್ಯ ಮತ್ತು ಕೂದಲಿನ ಆರೈಕೆಗೂ ಮೊಸರು ಬಳಕೆ ಮಾಡಲಾಗುತ್ತದೆ. ಹಲವು ಅಡುಗೆಗಳಿಗೆ ಬಳಕೆಯಾಗುವ ಮೊಸರು ಆರೋಗ್ಯಕ್ಕೂ ಪ್ರಯೋಜನಕಾರಿ. ಪಾನೀಯವಾಗಿ ಮತ್ತು ಬಗೆಬಗೆಯ ಆಹಾರದ ಸ್ವರೂಪದಲ್ಲಿ ಮೊಸರು ಬಳಕೆಯಾಗುತ್ತದೆ. ಮೊಸರನ್ನವನ್ನು ಇಷ್ಟಪಡದವರ ಸಂಖ್ಯೆ ತುಂಬಾ ಕಡಿಮೆ. ಇದೇ ವೇಳೆ ರಾಯಿತಾ, ಮಜ್ಜಿಗೆ, ಲಸ್ಸಿ ಸೇರಿದಂತೆ ವಿವಿಧ ರೀತಿಯಲ್ಲಿ ಹೊಟ್ಟೆ ಸೇರುವ ಮೊಸರನ್ನು ಇನ್ನೂ ವೈವಿಧ್ಯ ರೀತಿಯಲ್ಲಿ ಹೊಟ್ಟೆಗೆ ಇಳಿಸಬಹುದು.
ಮೊಸರಿನಲ್ಲಿ ಹಲವು ಪೌಷ್ಟಿಕಾಂಶಗಳಿವೆ. ಇದು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದ್ದು, ಸ್ನಾಯುಗಳ ದುರಸ್ತಿ ಮತ್ತು ಬೆಳವಣಿಗೆಗೆ ಅಗತ್ಯ ಆಹಾರವಾಗಿದೆ. ಇದರಲ್ಲಿ ದೇಹಕ್ಕೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳಿವೆ. ಕ್ಯಾಲ್ಸಿಯಂ ಹೇರಳವಾಗಿರುವ ಮೊಸರು ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು. ಹಲ್ಲುಗಳು ಬಲವಾಗಿರಲು ಇದು ಒಳ್ಳೆಯದು. ಮೊಸರಿನಲ್ಲಿ ಪ್ರೋಬಯಾಟಿಕ್ ಇದ್ದು, ಕರುಳಿನ ಆರೋಗ್ಯವನ್ನು ಸಮತೋಲನಗೊಳಿಸುವ ಮೂಲಕ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಪೋಷಕಾಂಶಗಳ ಸಂಯೋಜನೆಯು ಮೂಳೆಯ ಆರೋಗ್ಯವನ್ನು ಬೆಂಬಲಿಸುವುದು ಮಾತ್ರವಲ್ಲದೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ದೈನಂದಿನ ಆಹಾರದಲ್ಲಿ ಮೊಸರನ್ನು ವಿವಿಧ ರೀತಿಯಲ್ಲಿ ಬಳಸಬಹುದು. ಸಾಮಾನ್ಯವಾಗಿ ಜನರು ಊಟದ ವೇಳೆ ಮೊಸರು ಸೇವಿಸುತ್ತಾರೆ. ಇದರ ಜೊತೆಗೆ ಈ ರೀತಿಯಲ್ಲಿ ಹೊಟ್ಟೆಗಿಳಿಸಬಹುದು.
ಮೊಸರನ್ನ
ಸುಲಭವಾಗಿ ಮಾಡಬಹುದಾದ ಡಿಶ್ ಇದು. ಮೊಸರನ್ನಕ್ಕೆ ಅಭಿಮಾನಿ ಬಳಗವೇ ಇದೆ ಎಂದರೆ ತಪ್ಪಲ್ಲ. ಮಾಡಿಟ್ಟಿರುವ ಅನ್ನವಿದ್ದರೆ ಸುಲಭವಾಗಿ ಮಾಡಬಹುದು. ಅನ್ನಕ್ಕೆ ಮೊಸರು ಮಿಶ್ರಣಮಾಡಿ. ರುಚಿ ಹೆಚ್ಚಿಸಲು ದಾಳಿಂಬೆ ಬೀಜ ಮತ್ತು ದ್ರಾಕ್ಷಿ ಸೇರಿಸಬಹುದು. ಇದಕ್ಕೆ ಸಾಸಿವೆ, ಕರಿಬೇವು, ಮತ್ತು ಹಸಿರು ಮೆಣಸಿನಕಾಯಿ ಒಗ್ಗರಣೆ ಹಾಕಿದರೆ ಇನ್ನಷ್ಟು ರುಚಿಕರ. ಹೊಟ್ಟೆಯನ್ನು ತಂಪಾಗಿಸುತ್ತದೆ. ಅಜೀರ್ಣ ಸಮಸ್ಯೆ ಇದ್ದರೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಸ್ಮೂಥಿಗಳು ಅಥವಾ ಲಸ್ಸಿ
ಬಾಳೆಹಣ್ಣು ಅಥವಾ ಮಾವಿನ ಹಣ್ಣುಗಳಂತಹ ಹಣ್ಣುಗಳೊಂದಿಗೆ ಮೊಸರನ್ನು ಮಿಶ್ರಣ ಮಾಡಿ ಸ್ಮೂಥಿ ತಯಾರಿಸಿ. ಇದರ ಹೊರತಾಗಿ ಮೊಸರಿಗೆ ಸಿಹಿ ಸೇರಿಸಿ ಲಸ್ಸಿ ಮಾಡಿಯೂ ಕುಡಿಯಬಹುದು. ಇಂಥಾ ರಿಫ್ರೆಶ್ ಪಾನೀಯವು ದೇಹವನ್ನು ಹೈಡ್ರೀಕರಿಸುವ ಜೊತೆಗೆ ಪೋಷಕಾಂಶ ಒದಗಿಸುತ್ತದೆ.
ರಾಯಿತ
ಬಾಯಿ ರುಚಿ ಹೋಗಿದ್ದರೆ ಸರಳವಾಗಿ ರಾಯಿತ ಮಾಡಿ ಸೇವಿಸಬಹುದು. ಸೌತೆಕಾಯಿ, ಕ್ಯಾರೆಟ್ ಅಥವಾ ಟೊಮೆಟೊವನ್ನು ಸಣ್ಣದಾಗಿ ಕೊಚ್ಚಿಕೊಂಡು, ಅದಕ್ಕೆ ಮೊಸರನ್ನು ಸೇರಿಸಿ. ಈರುಳ್ಳಿ ಕೂಡಾ ಹಾಕಬಹುದು. ಉಪ್ಪು ಹಾಕಿ ಕೊನೆಗೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರಾಯಿತ ರೆಡಿ.
ಮ್ಯಾರಿನೇಷನ್
ಮಾಂಸಾಹಾರಿ ಆಹಾರ ತಯಾರಿಸುವಾಗ ಮೊಸರನ್ನು ಮ್ಯಾರಿನೇಡ್ ಮಾಡಲು ಬಳಸಲಾಗುತ್ತದೆ. ಇದರ ನೈಸರ್ಗಿಕ ಆಮ್ಲೀಯತೆಯು ಮಾಂಸವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ ಆಹಾರದ ರುಚಿ ಹೆಚ್ಚಿಸುತ್ತದೆ. ಚಿಕನ್, ಮಟನ್ ಸೇರಿದಂತೆ ವಿವಿಧ ಬಿರಿಯಾನಿ ತಯಾರಿಕೆ ವೇಳೆ ಹೆಚ್ಚು ಬಳಕೆಯಾಗುತ್ತದೆ.
ಇನ್ನಷ್ಟು ರೆಸಿಪಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ? ಸೋಂಕು ತಡೆಯಲು ಇಲ್ಲಿದೆ ಟಿಪ್ಸ್