ದೇಹಕ್ಕೆ ಶಕ್ತಿ ನೀಡುತ್ತೆ ಶೇಂಗಾ ಬೀಜ: ಪ್ರತಿದಿನ ಸ್ನಾಕ್ಸ್‌ನಂತೆ ತಿಂದ್ರೆ ಸಿಗುತ್ತೆ ಸಿಕ್ಕಾಪಟ್ಟೆ ಆರೋಗ್ಯ ಪ್ರಯೋಜನ
ಶೇಂಗಾ ಭಾರತೀಯರಿಗೆಲ್ಲ ಚಿರಪರಿಚಿತವಿರುವ ಒಂದು ದ್ವಿದಳ ಧಾನ್ಯ. ಅಡುಗೆಯಲ್ಲಿ ಬಳಕೆಯಾಗುವ ಶೇಂಗಾ ಒಂದು ಉತ್ತಮ ದೇಸಿ ಸ್ನಾಕ್ಸ್ ಕೂಡಾ ಹೌದು. ಸಂಜೆಯ ಚಹಾ ಅಥವಾ ಕಾಫಿಯ ಜೊತೆ ತಿನ್ನುವ ಶೇಂಗಾ ಬೀಜದಲ್ಲಿ ಅನೇಕ ಆರೋಗ್ಯ ಪ್ರಯೋಜನಗಳು ಅಡಗಿವೆ. ಶೇಂಗಾ ಬೀಜವನ್ನು ನಿಯಮಿತವಾಗಿ ತಿನ್ನುವುದರಿಂದ ಬಹಳಷ್ಟು ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ.

ಶೇಂಗಾ ಬೀಜ ಅಥವಾ ಕಡಲೆಕಾಯಿ ಇದು ಭಾರತೀಯರ ಪ್ರತಿ ಅಡುಗೆಮನೆಯಲ್ಲಿ ಕಂಡುಬರುವ ಸಾಮಾನ್ಯ ವಸ್ತು. ಶೇಂಗಾಕ್ಕೂ ನಮಗೂ ಬಹಳ ನಂಟಿದೆ. ಬೆಳಗ್ಗಿನ ಅವಲಕ್ಕಿ, ಚಿತ್ರಾನ್ನ ಮುಂತಾದವುಗಳಿಗೆ ಶೇಂಗಾ ಇಲ್ಲವೆಂದರೆ ರುಚಿಸುವುದೇ ಇಲ್ಲ. ಮನೆಗೆ ಬಂದ ಅತಿಥಿಗಳಿಗೆ ಚಹಾದ ಜೊತೆ ಕೊಡಬಹುದಾದ ಉತ್ತಮ ದೇಸಿ ಸ್ನಾಕ್ಸ್ ಕೂಡಾ ಹೌದು. ಇದರಿಂದ ತಯಾರಿಸುವ ಚಟ್ನಿ ಪುಡಿ ಚಪಾತಿ, ರೊಟ್ಟಿಗೆ ಬೆಸ್ಟ್ ಕಾಂಬಿನೇಷನ್ ಆಗಿದೆ. ಶೇಂಗಾ ಬೀಜವು (Peanuts) ಒಂದು ದ್ವಿದಳ ಧಾನ್ಯ. ಶೇಂಗಾ ಬೀಜದಿಂದ ಉಂಡೆ, ಚಿಕ್ಕಿ, ಹೋಳಿಗೆ ಮುಂತಾದ ಸಿಹಿ ತಿನಿಸುಗಳನ್ನು ತಯಾರಿಸುತ್ತಾರೆ. ಮಸಾಲೆ ಶೇಂಗಾ, ಕುದಿಸಿದ ಹಸಿ ಶೇಂಗಾ, ಹುರಿದ ಶೇಂಗಾ ಬೀಜವನ್ನು ಸಂಜೆಯ ಸ್ನಾಕ್ಸ್‌ಗೆ ತಿನ್ನಲಾಗುತ್ತದೆ. ಇದು ಹಲವಾರು ಆರೋಗ್ಯ ಪ್ರಯೋಜನಗಳಿಂದ ತುಂಬಿದೆ. ಡ್ರೈ ನಟ್ಸ್‌ಗಳಲ್ಲಿ ಕಂಡುಬರುವ ಪ್ರೋಟೀನ್, ಕೊಬ್ಬು ಮತ್ತು ಪೋಷಕಾಂಶಗಳು ಇದರಲ್ಲೂ ಇವೆ. ಅದಕ್ಕಾಗಿಯೇ ಇದನ್ನು ಬಡವರ ಬಾದಾಮಿ ಎಂದು ಕರೆಯಲಾಗುತ್ತದೆ. ಶೇಂಗಾವನ್ನು ನಿಯಮಿತವಾಗಿ ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಅನಾರೋಗ್ಯಕರ ಸ್ನಾಕ್ಸ್ ತಿನ್ನುವ ಬದಲಿಗೆ ಶೇಂಗಾವನ್ನು ತಿನ್ನಬಹುದು. ಇದರಿಂದ ತೂಕ ನಷ್ಟ, ಕೊಲೆಸ್ಟ್ರಾಲ್ ಇಳಿಕೆ, ಹೃದಯದ ಆರೋಗ್ಯ ಮುಂತಾದ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ.
ಶೇಂಗಾ ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು
ತೂಕ ನಷ್ಟ: ಏನನ್ನಾದರೂ ತಿಂದ್ರೂ ಕೂಡಾ ತೂಕ ಏರಿಕೆಯಾಗಬಾರದು ಅಂದ್ರೆ ಅದಕ್ಕೆ ಒಂದು ಹಿಡಿ ಶೇಂಗಾವನ್ನು ತಿನ್ನಿರಿ. ಶೇಂಗಾ ಅಥವಾ ಶೇಂಗಾದಿಂದ ತಯಾರಿಸುವ ಪೀನಟ್ ಬಟರ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕವನ್ನು ಕಾಪಾಡಿಕೊಳ್ಳಬಹುದಾಗಿದೆ. ವಾರದಲ್ಲಿ ಕನಿಷ್ಠ ಎರಡು ಬಾರಿ ಶೇಂಗಾವನ್ನು ತಿನ್ನುವವರಿಗೆ ಬೊಜ್ಜು ಬರುವ ಸಾಧ್ಯತೆ ಕಡಿಮೆ ಎಂದು ಅಧ್ಯಯನಗಳು ತಿಳಿಸಿವೆ. ಬೆಳಗ್ಗಿನ ಬ್ರೆಡ್‌ನೊಂದಿಗೆ ಪೀನಟ್ ಬಟರ್ ಅನ್ನು ತಿನ್ನುವುದರಿಂದ ಅತಿಯಾಗಿ ತಿನ್ನುವ ಕಡುಬಯಕೆ ಕಡಿಮೆಯಾಗುತ್ತದೆ.
ಕೊಲೆಸ್ಟ್ರಾಲ್ ಇಳಿಕೆ: ಶೇಂಗಾ ಅಥವಾ ಕಡಲೆಕಾಯಿಯನ್ನು ಪ್ರತಿದಿನ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ, ಅದರಿಂದ ಉಂಟಾಗುವ ಅನೇಕ ಖಾಯಿಲೆಗಳನ್ನು ತಡೆಯುತ್ತದೆ. ಶೇಂಗಾದಲ್ಲಿ ಕಂಡುಬರುವ ಮೊನೊ ಅನ್‌ಸ್ಯಾಚುರೇಟೆಡ್ ಕೊಬ್ಬಿನ ಆಮ್ಲವಾದ ಒಲಿಕ್ ಆಮ್ಲವು LDL ಮಟ್ಟವನ್ನು ಕಡಿಮೆ ಮಾಡಲು ಮತ್ತು HDL ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಹೃದಯದ ಕಾಯಿಲೆಗಳನ್ನು ತಡೆಯುತ್ತದೆ ಮತ್ತು ರಕ್ತದಲ್ಲಿನ ಆರೋಗ್ಯಕರ ಲಿಪಿಡ್ ಪ್ರೊಫೈಲ್ ಅನ್ನು ಉತ್ತೇಜಿಸುತ್ತದೆ. ಇದರಿಂದ ಪಾರ್ಶ್ವವಾಯು ತಗಲುವ ಅಪಾಯ ಕಡಿಮೆಯಾಗುತ್ತದೆ.
ವಯಾಸ್ಸಾಗುವಿಕೆಯನ್ನು ತಡೆಯುತ್ತದೆ: ಕೊಲೆಜಿನ್ ಉತ್ಪಾದಿಸಲು ಅಗತ್ಯವಾಗಿರುವ ವಿಟಮಿನ್ ಸಿ ಶೇಂಗಾದಲ್ಲಿ ಹೇರಳವಾಗಿದೆ. ಇದು ಚರ್ಮದ ಸ್ಥಿತಿಸ್ಥಾಪಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಚರ್ಮ ಸುಕ್ಕುಗಟ್ಟುವುದು ಮತ್ತು ಬಣ್ಣ ಕಳೆದುಕೊಳ್ಳುವುದನ್ನು ತಡೆಯುತ್ತದೆ. ಹಾಗಾಗಿ ಶೇಂಗಾವು ವಯಸ್ಸಾಗುವಿಕೆಯನ್ನು ತಡೆಯಲು ಸಹಕಾರಿಯಾಗಿದೆ.
ಕ್ಯಾನ್ಸರ್ ತಡೆಗಟ್ಟುತ್ತದೆ: ಶೇಂಗಾವು ಪಿ–ಕೌಮಾರಿಕ್ ಆಸಿಡ್ ಎಂಬ ಫಾಲಿಫಿನಾಲಿಕ್ ಆಂಟಿಆಕ್ಸಿಡೆಂಟ್‌ನಿಂದ ಸಮೃದ್ಧವಾಗಿದೆ. ಇದು ಕಾರ್ಸೆನೊಜೆನಿಕ್ ನೈಟ್ರೋಸಮೈನಿಸ್ ರಚನೆಯನ್ನು ಸೀಮಿತಗೊಳಿಸುತ್ತದೆ. ಆ ಮೂಲಕ ಹೊಟ್ಟೆಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಶೇಂಗಾವು ರೆಸ್ಟೆರಾಟ್ರೊಲ್‌ನ ಅತ್ಯುತ್ತಮ ಮೂಲವಾಗಿದೆ. ಇದು ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ.
ಪಾರ್ಶ್ವವಾಯು ಅಪಾಯ ತಡೆಯುತ್ತದೆ: ಶೇಂಗಾದಲ್ಲಿ ರಕ್ತನಾಳಗಳ ಕಾರ್ಯವಿಧಾನವನ್ನು ಬದಲಾಯಿಸುವ ರೆಸ್ವೆರಾಟ್ರೋಲ್ ಕಂಡುಬರುತ್ತದೆ. ಇದು ನೈಟ್ರಿಕ್ ಆಕ್ಸೆಡ್ ಮತ್ತು ವೆಸೊಡಿಲೇಟರ್ ಹಾರ್ಮೋನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದ ಪಾರ್ಶ್ವವಾಯು ಅಪಾಯ ಕಡಿಮೆಯಾಗುತ್ತದೆ. ಶೆಂಗಾವು ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಆರೋಗ್ಯ ಕಾಪಾಡುತ್ತದೆ.
ಖಿನ್ನತೆಯನ್ನು ದೂರ ಮಾಡುತ್ತದೆ: ಶೇಂಗಾ ಒಂದು ಬೆಸ್ಟ್ ಸ್ನಾಕ್ಸ್. ಹುರಿದ ಶೇಂಗಾವನ್ನು ಬಾಯಿಗೆ ಹಾಕುತ್ತಿದ್ದರೆ ಬೇಸರವೂ ದೂರವಾಗುತ್ತದೆ ಎಂದು ಹೇಳುತ್ತಾರೆ. ಇದರಲ್ಲಿರುವ ಟ್ರೈಪ್ಟೋಫನ್, ಸೆರೊಟೊನಿನ್ ಬಿಡುಗಡೆಯಾಗುವುದನ್ನು ಹೆಚ್ಚಿಸುತ್ತದೆ. ಇದು ಖಿನ್ನತೆಯ ವಿರುದ್ಧ ಹೋರಾಡಲು ಸಹಾಯಮಾಡುತ್ತದೆ. ಕಡಿಮೆ ಸೆರೊಟಿನಿನ್ ಮಟ್ಟವು ಖಿನ್ನತೆಯನ್ನುಂಟು ಮಾಡುತ್ತದೆ. ಶೇಂಗಾದಿಂದ ಸಿಗುವ ಅನೇಕ ಆರೋಗ್ಯ ಪ್ರಯೋಜನಗಳಿಂದ ಇದನ್ನು ನಿಯಮಿತವಾಗಿ ಡಯಟ್‌ನಲ್ಲಿ ಸೇರಿಸಿಕೊಳ್ಳಬಹುದಾಗಿದೆ.
