Cooking Oil: ಕೊಲೆಸ್ಟ್ರಾಲ್ ನಿಯಂತ್ರಿಸುವ ಅಡುಗೆ ಎಣ್ಣೆಗಳಿವು, ಹೃದಯದ ಆರೋಗ್ಯ ಸುರಕ್ಷಿತವಾಗಿರಲು ಇವುಗಳ ಬಳಕೆ ಬೆಸ್ಟ್
ಇತ್ತೀಚಿನ ದಿನಗಳಲ್ಲಿ ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚುತ್ತಿದೆ. ಯಾರ ಬಾಯಲ್ಲಿ ಕೇಳಿದರೂ ಕೆಟ್ಟ ಕೊಲೆಸ್ಟ್ರಾಲ್ ಬಗ್ಗೆಯೇ ಮಾತು. ಕೊಲೆಸ್ಟ್ರಾಲ್ ಹೃದಯದ ಆರೋಗ್ಯಕ್ಕೆ ಬಹಳ ಅಪಾಯಕಾರಿ, ಹಾಗಾಗಿ ಇದನ್ನ ನಿಯಂತ್ರಿಸುವುದು ಮುಖ್ಯವಾಗುತ್ತದೆ. ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಾಯ ಮಾಡುವ 4 ಬೆಸ್ಟ್ ಅಡುಗೆ ಎಣ್ಣೆಗಳ ಬಗ್ಗೆ ಇಲ್ಲಿದೆ ಮಾಹಿತಿ.
ಇತ್ತೀಚಿನ ದಿನಗಳಲ್ಲಿ ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಗಳು ಕಾಡುವುದು ಹೆಚ್ಚಾಗಿದೆ. ಪ್ರತಿ ಮನೆಗಳಲ್ಲೂ ಮಧುಮೇಹ, ರಕ್ತದೊತ್ತಡ, ಸ್ಥೂಲಕಾಯದಂತಹ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಕಾಣಬಹುದು. ಈ ಎಲ್ಲದರ ನಡುವೆ ಇತ್ತೀಚೆಗೆ ಕೊಲೆಸ್ಟ್ರಾಲ್ ಸಮಸ್ಯೆ ಕೂಡ ಹೆಚ್ಚಾಗಿದೆ. ಕೊಲೆಸ್ಟ್ರಾಲ್ ಸಮಸ್ಯೆಗೆ ಜೀವನಶೈಲಿಯೇ ಮುಖ್ಯ ಕಾರಣವಾಗುತ್ತಿದೆ.
ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದರಿಂದ, ರಕ್ತನಾಳಗಳು ನಿರ್ಬಂಧಿಸಲು ಪ್ರಾರಂಭಿಸುತ್ತವೆ. ಇದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವಲ್ಲಿ ಆಹಾರವು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ವಿಶೇಷವಾಗಿ ಕರಿದ ಪದಾರ್ಥಗಳನ್ನು ತಿನ್ನುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು. ಹಾಗಂತ ಎಣ್ಣೆಯೇ ಬಳಸದೇ ಅಡುಗೆ ಮಾಡಲು ಸಾಧ್ಯವಿಲ್ಲ. ಕೊಲೆಸ್ಟ್ರಾಲ್ ನಿಯಂತ್ರಿಸುವ ಅಡುಗೆ ಎಣ್ಣೆ ಬಳಸುವುದರಿಂದ ಕೊಲೆಸ್ಟ್ರಾಲ್ ಹೆಚ್ಚುತ್ತೆ ಅನ್ನುವ ಭಯವೂ ಇರುವುದಿಲ್ಲ, ಹೃದಯದ ಆರೋಗ್ಯವೂ ಜೋಪಾನವಾಗಿರುತ್ತೆ. ಅಂತಹ ಎಣ್ಣೆ ಯಾವುದು ನೋಡಿ.
ಆಲಿವ್ ಎಣ್ಣೆ
ಆಲಿವ್ ಎಣ್ಣೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ತ್ವಚೆ, ಕೂದಲಿನ ಆರೈಕೆ ಹಾಗೂ ಒಟ್ಟಾರೆ ಆರೋಗ್ಯಕ್ಕೆ ಇದು ಬಹಳ ಉತ್ತಮ. ಆಲಿವ್ ಎಣ್ಣೆಯಲ್ಲಿ ಆರೋಗ್ಯಕರ ಕೊಬ್ಬಿನಾಂಶ ಹೇರಳವಾಗಿ ಕಂಡುಬರುತ್ತವೆ, ಇದು ದೇಹದ ಪ್ರತಿಯೊಂದು ಅಂಗಕ್ಕೂ ಪ್ರಯೋಜನಕಾರಿಯಾಗಿದೆ. ಆಹಾರದಲ್ಲಿ ಆಲಿವ್ ಎಣ್ಣೆಯನ್ನು ಬಳಸುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಆರೋಗ್ಯವನ್ನು ಉತ್ತಮವಾಗಿಡುತ್ತದೆ.
ಕಡಲೆಕಾಯಿ ಎಣ್ಣೆ
ಕಡಲೆಕಾಯಿ ಎಣ್ಣೆ ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನಂಜುನಿರೋಧಕ, ಸಂಕೋಚಕ, ಆಂಟಿಸ್ಪಾಸ್ಮೊಡಿಕ್ ಗುಣಲಕ್ಷಣಗಳು ಕಡಲೆಕಾಯಿ ಎಣ್ಣೆಯಲ್ಲಿ ಕಂಡುಬರುತ್ತವೆ. ಇದು ಗಟ್ಟಿಯಾಗುವುದಿಲ್ಲ, ಈ ಕಾರಣದಿಂದಾಗಿ ಇದು ಹೃದಯ ರೋಗಿಗಳಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಚಳಿಗಾಲದಲ್ಲಿ, ಹೆಚ್ಚಿನ ಎಣ್ಣೆಗಳು ಹೆಪ್ಪುಗಟ್ಟಲು ಪ್ರಾರಂಭಿಸುತ್ತವೆ ಆದರೆ ಕಡಲೆಕಾಯಿ ಎಣ್ಣೆಯು ಹಾಗೆಯೇ ಉಳಿಯುತ್ತದೆ, ಆದ್ದರಿಂದ ಚಳಿಗಾಲದಲ್ಲಿ ಇದನ್ನು ತಿನ್ನುವುದು ತುಂಬಾ ಪ್ರಯೋಜನಕಾರಿಯಾಗಿದೆ. ದೇಹವನ್ನು ಬೆಚ್ಚಗಿಡುವುದರ ಜೊತೆಗೆ ಪೌಷ್ಟಿಕಾಂಶವನ್ನೂ ನೀಡುತ್ತದೆ. ಇದಲ್ಲದೆ, ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಎಳ್ಳಿನ ಎಣ್ಣೆ
ಎಳ್ಳೆಣ್ಣೆ ಸೇವನೆಯು ಹೃದ್ರೋಗಿಗಳಿಗೆ ಮತ್ತು ಅಧಿಕ ಕೊಲೆಸ್ಟ್ರಾಲ್ ಇರುವವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಅಪರ್ಯಾಪ್ತ ಕೊಬ್ಬುಗಳು, ಮೊನೊಸಾಚುರೇಟೆಡ್ ಮತ್ತು ಬಹುಅಪರ್ಯಾಪ್ತ ಕೊಬ್ಬುಗಳು ಎಳ್ಳಿನ ಎಣ್ಣೆಯಲ್ಲಿ ಕಂಡುಬರುತ್ತವೆ. ಇದು ಒಟ್ಟಾರೆ ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಬಿಳಿ ಅಥವಾ ಕಪ್ಪು ಎಳ್ಳು ಬೀಜಗಳ ಎಣ್ಣೆಯನ್ನು ಸೇವಿಸಬಹುದು. ಚಳಿಗಾಲದಲ್ಲಿ ಎಳ್ಳೆಣ್ಣೆ ಬಳಕೆಯು ದೇಹ ಬೆಚ್ಚಗಿರಲು ಸಹಕಾರಿ.
ಆವಕಾಡೊ ಎಣ್ಣೆ
ಆವಕಾಡೊ ಎಣ್ಣೆ ಹೃದ್ರೋಗಿಗಳಿಗೂ ತುಂಬಾ ಪ್ರಯೋಜನಕಾರಿ. ಆಂಟಿಆಕ್ಸಿಡೆಂಟ್ ಗುಣಗಳಿಂದ ತುಂಬಿರುವ ಆವಕಾಡೊ ಎಣ್ಣೆ ಹೃದಯವನ್ನು ಬಲಪಡಿಸುತ್ತದೆ. ಈ ಎಣ್ಣೆಯಲ್ಲಿ ಲುಟೀನ್‌ನಂತಹ ಆರೋಗ್ಯಕರ ಉತ್ಕರ್ಷಣ ನಿರೋಧಕ ಗುಣಗಳು ಕಂಡುಬರುತ್ತವೆ, ಇದು ಆರೋಗ್ಯಕ್ಕೆ ಮಾತ್ರವಲ್ಲ, ಕಣ್ಣುಗಳಿಗೂ ತುಂಬಾ ಪ್ರಯೋಜನಕಾರಿಯಾಗಿದೆ. ಹೆಚ್ಚಿದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡಲು ಆವಕಾಡೊ ಎಣ್ಣೆಯನ್ನು ಬಳಸಬಹುದು. ಆದಾಗ್ಯೂ, ಈ ಎಣ್ಣೆಯು ಸ್ವಲ್ಪ ದುಬಾರಿಯಾಗಿದೆ, ಆದ್ದರಿಂದ ಇದನ್ನು ಪ್ರತಿದಿನ ಬಳಸುವುದರಿಂದ ದುಬಾರಿ ಎನ್ನಿಸಬಹುದು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
ವಿಭಾಗ