ಬಿಪಿ ಕಂಟ್ರೋಲ್‌ಗೆ ಬರ್ತಾ ಇಲ್ವಾ, ರಕ್ತದೊತ್ತಡ ನಿಯಂತ್ರಿಸಲು ನೆರವಾಗುವ ನೈಸರ್ಗಿಕ ವಿಧಾನಗಳಿವು, ನೀವೂ ಟ್ರೈ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬಿಪಿ ಕಂಟ್ರೋಲ್‌ಗೆ ಬರ್ತಾ ಇಲ್ವಾ, ರಕ್ತದೊತ್ತಡ ನಿಯಂತ್ರಿಸಲು ನೆರವಾಗುವ ನೈಸರ್ಗಿಕ ವಿಧಾನಗಳಿವು, ನೀವೂ ಟ್ರೈ ಮಾಡಿ

ಬಿಪಿ ಕಂಟ್ರೋಲ್‌ಗೆ ಬರ್ತಾ ಇಲ್ವಾ, ರಕ್ತದೊತ್ತಡ ನಿಯಂತ್ರಿಸಲು ನೆರವಾಗುವ ನೈಸರ್ಗಿಕ ವಿಧಾನಗಳಿವು, ನೀವೂ ಟ್ರೈ ಮಾಡಿ

ಇತ್ತೀಚಿನ ದಿನಗಳಲ್ಲಿ ಬಿಪಿ ಅಥವಾ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಬಿಪಿ ನಿಯಂತ್ರಣದಲ್ಲಿಲ್ಲ ಎಂದರೆ ಪ್ರಾಣಕ್ಕೂ ಕುತ್ತಾಗಬಹುದು. ಬ್ಲಡ್ ಫ್ರೆಶರ್ ಅನ್ನು ನೈಸರ್ಗಿಕ ವಿಧಾನಗಳ ಮೂಲಕ ನಿಯಂತ್ರಿಸಲು ಇಲ್ಲಿದೆ ಒಂದಿಷ್ಟು ಸರಳ ಸಲಹೆ. ಹೈ ಬಿಪಿ, ಲೋ ಬಿಪಿ ಇದ್ದವರು ಗಮನಿಸಿ.

ರಕ್ತದೊತ್ತಡ ನಿಯಂತ್ರಿಸಲು ನೆರವಾಗುವ ಕೆಲವು ನೈಸರ್ಗಿಕ ವಿಧಾನಗಳಿವು
ರಕ್ತದೊತ್ತಡ ನಿಯಂತ್ರಿಸಲು ನೆರವಾಗುವ ಕೆಲವು ನೈಸರ್ಗಿಕ ವಿಧಾನಗಳಿವು (PC: Canva)

ಬ್ಲಡ್ ಫ್ರೆಶರ್ ಅಥವಾ ರಕ್ತದೊತ್ತಡ ನಿಯಂತ್ರಣದಲ್ಲಿ ಇಲ್ಲ ಎಂದರೆ ಪಾರ್ಶ್ವವಾಯು, ಹೃದಯಾಘಾತದಂತಹ ಗಂಭೀರ ಸಮಸ್ಯೆಗಳು ಎದುರಾಗಬಹುದು. ಹೈ ಬಿಪಿ ಹಾಗೂ ಲೋ ಬಿಪಿ ಈ ಎರಡೂ ಡೇಂಜರ್‌. ಆದರೆ ಇತ್ತೀಚಿನ ದಿನಗಳಲ್ಲಿ ಬಿಪಿ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅಧಿಕ ರಕ್ತದೊತ್ತಡ ಸಮಸ್ಯೆಯು ಪ್ರಪಂಚದಾದ್ಯಂತ ಹಲವರ ಸಾವಿಗೆ ಕಾರಣವಾಗಿದೆ. ಇದಕ್ಕೆ ಪ್ರಮುಖ ಕಾರಣ ಅತಿಯಾದ ಒತ್ತಡ ಹಾಗೂ ಕಳಪೆ ಜೀವನಶೈಲಿ.

ರಕ್ತದೊತ್ತಡ ಕಡಿಮೆಯಾಗುವುದಕ್ಕಿಂತ ಹೈ ಬಿಪಿ ಅಥವಾ ಅಧಿಕ ರಕ್ತದೊತ್ತಡ ಬಹಳ ಅಪಾಯಕಾರಿ. ಇದನ್ನು ನಿಯಂತ್ರಿಸಲು ಸರಿಯಾದ ಮಾರ್ಗಗಳನ್ನು ಕಂಡುಕೊಳ್ಳಬೇಕು. ಔಷಧಿಗಳನ್ನು ಸೇವಿಸದೇ ನೈಸರ್ಗಿಕ ವಿಧಾನ ಹಾಗೂ ಕೆಲವು ಮನೆಮದ್ದುಗಳ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ರಕ್ತದೊತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡುವ ವಿಧಾನಗಳು ಇಲ್ಲಿವೆ ನೋಡಿ.

ವ್ಯಾಯಾಮದ ದಿನಚರಿ

ರಕ್ತದೊತ್ತಡ ನಿಯಂತ್ರಣದಲ್ಲಿ ಇರಬೇಕು ಎಂದರೆ ದೈನಂದಿನ ವ್ಯಾಯಾಮದ ದಿನಚರಿಯನ್ನು ರೂಢಿಸಿಕೊಳ್ಳುವುದು ಅಗತ್ಯ. ಪ್ರತಿದಿನ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಜಡ ಜೀವನಶೈಲಿಯಿಂದ ನಮ್ಮನ್ನು ದೂರ ಮಾಡುತ್ತದೆ. ಇದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿ ಇರಿಸುವ ಜೊತೆಗೆ ಮಧುಮೇಹ ಹಾಗೂ ಹೃದಯದ ಸಂಬಂಧಿ ಸಮಸ್ಯೆಗಳಿಂದಲೂ ದೂರವಿರಬಹುದು. ವಾಕಿಂಗ್, ಜಾಗಿಂಗ್, ಸ್ವಿಮ್ಮಿಂಗ್ ಇವು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಬಹಳ ಉತ್ತಮ.

ಆಹಾರ ಕ್ರಮಗಳು

ರಕ್ತದೊತ್ತಡ ನಿಯಂತ್ರಿಸಲು ನಾವು ಸೇವಿಸುವ ಆಹಾರದ ಮೇಲೂ ಗಮನ ಹರಿಸಬೇಕು. ತರಕಾರಿ, ಹಣ್ಣುಗಳು ಹಾಗೂ ಧಾನ್ಯಗಳ ಸೇವನೆಗೆ ಹೆಚ್ಚು ಒತ್ತು ನೀಡಬೇಕು. ಕಡಿಮೆ ಕೊಬ್ಬಿನಾಂಶ ಇರುವ ಡೇರಿ ಉತ್ಪನ್ನಗಳು, ಲೀನ್ ಮೀಟ್‌, ಮೀನು ಹಾಗೂ ಒಣ ಹಣ್ಣುಗಳ ಸೇವನೆಗೆ ಒತ್ತು ನೀಡಬೇಕು. ಅಧಿಕ ಸ್ಯಾಚುರೇಟೆಡ್ ಅಂಶ ಇರುವ ಆಹಾರಗಳು, ಸಂಸ್ಕರಿತ ಆಹಾರಗಳು, ಅಧಿಕ ಕೊಬ್ಬಿನಾಂಶ ಇರುವ ಡೇರಿ ಉತ್ಪನ್ನಗಳು ಹಾಗೂ ಮಾಂಸಾಹಾರದ ಸೇವನೆಗೆ ಕಡಿವಾಣ ಹಾಕಬೇಕು.

ಉಪ್ಪಿನಾಂಶ ಸೇವನೆ ಕಡಿಮೆ ಮಾಡುವುದು

ಸೋಡಿಯಂ ಅಥವಾ ಉಪ್ಪಿನಾಂಶ ಸೇವನೆಗೆ ಕಡಿವಾಣ ಹಾಕುವುದು ಕೂಡ ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೆಲವರಲ್ಲಿ ಹೆಚ್ಚು ಸೋಡಿಯಂ ಸೇವಿಸುವುದರಿಂದ ದೇಹವು ದ್ರವವನ್ನು ಉಳಿಸಿಕೊಳ್ಳಲು ಕಾರಣವಾಗುತ್ತದೆ. ಇದು ರಕ್ತದೊತ್ತಡದಲ್ಲಿ ತೀವ್ರ ಏರಿಕೆಗೆ ಕಾರಣವಾಗುತ್ತದೆ. ಸಂಸ್ಕರಿಸಿದ ಆಹಾರಗಳಲ್ಲಿ ಉಪ್ಪಿನಾಂಶ ಪ್ರಮಾಣ ಹೆಚ್ಚಿರುತ್ತದೆ. ಆ ಕಾರಣಕ್ಕೆ ಇದರ ಸೇವನೆಗೆ ಕಡಿವಾಣ ಹಾಕುವುದು ಉತ್ತಮ. ಉಪ್ಪಿನ ಬದಲು ರುಚಿಯಾಗಿ ಗಿಡಮೂಲಿಕೆಗಳು ಅಥವಾ ಮಸಾಲೆಗಳನ್ನೂ ಬಳಸಬಹುದು.

ತೂಕ ನಿರ್ವಹಣೆ

ರಕ್ತದೊತ್ತಡ ನಿಯಂತ್ರಿಸಲು ತೂಕ ನಿರ್ವಹಣೆ ಕೂಡ ಬಹಳ ಮುಖ್ಯವಾಗುತ್ತದೆ. ಅಧಿಕ ತೂಕವು ರಕ್ತದೊತ್ತಡ ಹೆಚ್ಚು, ಕಡಿಮೆಯಾಗಲು ಕಾರಣವಾಗುತ್ತದೆ. ಹೆಚ್ಚಾಗಿ ಅಧಿಕ ತೂಕವು ರಕ್ತದೊತ್ತಡ ಏರಿಕೆಗೆ ಕಾರಣವಾಗುತ್ತದೆ. ತೂಕ ನಿರ್ವಹಣೆಯ ಜೊತೆಗೆ ಬೆಲ್ಲಿ ಫ್ಯಾಟ್ ಕರಗಿಸುವುದು ಕೂಡ ರಕ್ತದೊತ್ತಡ ನಿಯಂತ್ರಣದಲ್ಲಿ ಇರಲು ಸಹಾಯ ಮಾಡುತ್ತದೆ. ಸೊಂಟದ ಸುತ್ತಳತೆಯು ಪುರುಷರಲ್ಲಿ 40 ಇಂಚುಗಳಗಿಂತ ಕಡಿಮೆ ಇರಬೇಕು, ಮಹಿಳೆಯರಲ್ಲಿ 35 ಇಂಚುಗಳಿಗಿಂತ ಕಡಿಮೆ ಇರಬೇಕು ಎಂದು ಹೇಳಲಾಗುತ್ತದೆ.

ಧೂಮಪಾನ ತ್ಯಜಿಸಿ

ಧೂಮಪಾನ ಮಾಡುವುದು ಕೂಡ ಅಧಿಕ ರಕ್ತದೊತ್ತಡ ಸಮಸ್ಯೆಗೆ ಕಾರಣವಾಗುತ್ತದೆ. ಪ್ರತಿ ಸಿಗರೇಟು ಕೂಡ ಸೇದಿ ಮುಗಿಸಿದ ನಂತರವೂ ಕೆಲವು ಹೊತ್ತಿನ ತನಕ ರಕ್ತದೊತ್ತಡವನ್ನು ತಾತ್ಕಲಿಕವಾಗಿ ಹೆಚ್ಚಿಸುತ್ತದೆ. ನೀವು ನಿಯಮಿತವಾಗಿ ಧೂಮಪಾನ ಮಾಡುತ್ತಿದ್ದರೆ, ನಿಮ್ಮ ರಕ್ತದೊತ್ತಡವನ್ನು ದೀರ್ಘಕಾಲದವರೆಗೆ ಹೆಚ್ಚಿಸಬಹುದು. ಧೂಮಪಾನ ಮಾಡುವ ಅಧಿಕ ರಕ್ತದೊತ್ತಡ ಹೊಂದಿರುವವರಲ್ಲಿ ಹೃದಯಾಘಾತ ಮತ್ತು ಸ್ಟ್ರೋಕ್ ಸಮಸ್ಯೆ ಹೆಚ್ಚು ಕಾಡಬಹುದು. ಇದರೊಂದಿಗೆ ಧೂಮಪಾನದ ಹೊಗೆ ನಿಮ್ಮ ದೇಹವನ್ನು ಸೇರುವುದು ಕೂಡ ಅಪಾಯಕಾರಿ. ಧೂಮಪಾನ ತ್ಯಜಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ.

ಮದ್ಯ ಸೇವನೆ ಮಿತಿಗೊಳಿಸಿ

ಮದ್ಯಪಾನ ಮಾಡುವುದು ಕೂಡ ಆರೋಗ್ಯಕ್ಕೆ ಅಪಾಯಕಾರಿ. ಅತಿಯಾಗಿ ಮದ್ಯ ಸೇವಿಸುವುದು ಆರೋಗ್ಯಕ್ಕೆ ಹಾನಿಕರ. ಇದರಿಂದ ರಕ್ತದೊತ್ತಡದಲ್ಲಿ ಏರುಪೇರಾಗಬಹುದು. ಅತಿಯಾಗಿ ಕುಡಿಯುವುದು ರಕ್ತದೊತ್ತಡದ ಔಷಧಿಗಳ ಪರಿಣಾಮವನ್ನು ಕಡಿಮೆ ಮಾಡಬಹುದು. ಹಾಗಾಗಿ ಮದ್ಯಪಾನ ಸೇವನೆಗೆ ಮಿತಿ ಹೇರಬೇಕು.

ಒತ್ತಡ ನಿರ್ವಹಣೆ

ಬಿಪಿ ನಿಯಂತ್ರಣದಲ್ಲಿ ಇರಬೇಕು ಎಂದರೆ ಒತ್ತಡ ನಿರ್ವಹಣೆ ಅತಿ ಅಗತ್ಯ. ಒತ್ತಡ ನಿರ್ವಹಿಸುವ ಹಾಗೂ ರಿಲ್ಯಾಕ್ಸೇಷನ್ ತಂತ್ರಗಳನ್ನು ಅಳವಡಿಸಿಕೊಳ್ಳಿ. ಯೋಗ, ಧ್ಯಾನ ಮಾಡುವ ಮೂಲಕ ಮನಸ್ಸನ್ನು ಹಿಡಿತದಲ್ಲಿ ಇರಿಸಿಕೊಳ್ಳಿ. ರಕ್ತದೊತ್ತಡ ನಿಯಂತ್ರಣದಲ್ಲಿ ಇರಲು ಒತ್ತಡ ನಿರ್ವಹಣೆ ಅತಿ ಅಗತ್ಯ.

ಅಧಿಕ ರಕ್ತದೊತ್ತಡದ ಅಪಾಯಗಳು

ಅಧಿಕ ರಕ್ತದೊತ್ತಡ ಅಥವಾ ಹೈ ಬಿಪಿ ಸಮಸ್ಯೆ ಇರುವವರು ಈ ಸಮಸ್ಯೆಯನ್ನು ಹಾಗೆ ಬಿಟ್ಟರೆ ಪಾರ್ಶ್ವವಾಯು, ಹೃದಯಾಘಾತ ಮತ್ತು ಮೂತ್ರಪಿಂಡದ ಹಾನಿ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ನಿಯಮಿತವಾಗಿ ವೈದ್ಯರನ್ನು ಭೇಟಿ ಮಾಡುವುದು, ರಕ್ತದೊತ್ತಡ ಪರೀಕ್ಷೆ ಬಹಳ ಮುಖ್ಯ. ವೈದ್ಯರು 130/80 mm Hg ಗಿಂತ ಹೆಚ್ಚಿನ ರಕ್ತದೊತ್ತಡ ಅಥವಾ ಬಿಪಿ ಇರುವುದನ್ನು ಅಧಿಕ ರಕ್ತದೊತ್ತಡ ಎಂದು ಪರಿಗಣಿಸುತ್ತಾರೆ. ಇದನ್ನು ನಿಯಂತ್ರಿಸಲು ಅಶ್ವಗಂಧ, ಮೆಂತ್ಯ, ತುಳಸಿ, ಅರ್ಜುನ ತೊಗಟೆ, ಅಗಸೆಬೀಜ, ಬೆಳುಳ್ಳಿ ಮುಂತಾದ ಮನೆಮದ್ದುಗಳನ್ನೂ ಕೂಡ ಟ್ರೈ ಮಾಡಬಹುದು. ಆದರೆ ಇದನ್ನು ಸೇವಿಸುವ ಮುನ್ನ ತಜ್ಞರಿಂದ ಸಲಹೆ ಪಡೆಯಬೇಕು.

(ಗಮನಿಸಿ: ಈ ಲೇಖನವು ಸಾಮಾನ್ಯಜ್ಞಾನವನ್ನು ಆಧರಿಸಿದ ಮಾಹಿತಿಯನ್ನು ಒಳಗೊಂಡಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ)

Whats_app_banner