ಉಡುಪಿ, ಮಂಗಳೂರು ಬ್ಲಡ್‌ಬ್ಯಾಂಕ್‌ಗಳಲ್ಲಿ ರಕ್ತದ ಕೊರತೆ; ನಿಮಗೂ ರಕ್ತದಾನ ಮಾಡುವ ಆಸೆ ಇದ್ದರೆ ಈ ವಿಚಾರಗಳು ತಿಳಿದಿರಲಿ
ಉಡುಪಿ ಹಾಗೂ ಮಂಗಳೂರಿನ ಬ್ಲಡ್‌ಬ್ಯಾಂಕ್‌ಗಳಲ್ಲಿ ರಕ್ತದ ಅಭಾವ ಎದುರಾಗಿದೆ. ರಕ್ತದಾನಿಗಳಿಗಾಗಿ ಬ್ಲಡ್‌ಬ್ಯಾಂಕ್‌ಗಳು ಎದುರು ನೋಡುತ್ತಿವೆ. ನೀವು ರಕ್ತ ಕೊಡಬೇಕು ಅಂತಿದ್ರೆ ಈ ವಿಚಾರ ತಿಳಿದುಕೊಂಡಿರಿ.

ರಕ್ತದಾನ ಮಹಾದಾನ ಎನ್ನುವ ಮಾತು ನೀವು ಕೇಳಿರಬಹುದು. ವರ್ಷಕ್ಕೊಮ್ಮೆಯಾದ್ರೂ ರಕ್ತದಾನ ಮಾಡಬೇಕು, ಇದು ಆರೋಗ್ಯ ದೃಷ್ಟಿಯಿಂದಲೂ ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಕೆಲವರು ಪ್ರತಿ ವರ್ಷ ತಪ್ಪದೇ ರಕ್ತದಾನ ಮಾಡುತ್ತಾರೆ. ನಾವು ನೀಡುವ ರಕ್ತವು ಇನ್ಯಾವುದೋ ಜೀವ ಉಳಿಸಲು ನೆರವಾಗಬಹುದು. ಆದರೆ ಇತ್ತೀಚೆಗೆ ರಾಜ್ಯದ ಕೆಲ ಬ್ಲಡ್‌ಬ್ಯಾಂಕ್‌ಗಳು ರಕ್ತದ ಕೊರತೆಯನ್ನು ಎದುರಿಸುತ್ತಿವೆ.
ಉಡುಪಿ ಹಾಗೂ ಮಂಗಳೂರಿನ ಬ್ಲಡ್ ಬ್ಯಾಂಕ್‌ಗಳಲ್ಲಿ ರಕ್ತದ ಅಭಾವ ಎದುರಾಗಿದೆ. ಇಲ್ಲಿನ ಬ್ಲಡ್ ಬ್ಯಾಂಕ್ ಅಧಿಕಾರಿಗಳು ರಕ್ತದಾನಿಗಳಿಗಾಗಿ ಎದುರು ನೋಡುತ್ತಿದ್ದಾರೆ, ಅಲ್ಲದೇ ರಕ್ತದಾನ ಅಭಿಯಾನಗಳನ್ನೂ ಮಾಡುತ್ತಿದ್ದಾರೆ. ನೀವು ರಕ್ತದಾನ ಮಾಡಲು ಬಯಸಿದರೆ ಇದಕ್ಕೂ ಮುನ್ನ ಕೆಲವು ವಿಚಾರಗಳನ್ನು ತಿಳಿದುಕೊಂಡಿರಬೇಕು. ರಕ್ತದಾನ ಮಾಡಲು ಯಾರು ಅರ್ಹರು, ಯಾರು ರಕ್ತದಾನ ಮಾಡಬಹುದು, ರಕ್ತ ತೆಗೆದುಕೊಳ್ಳುವ ಮುನ್ನ ಯಾವೆಲ್ಲಾ ಅಂಶಗಳನ್ನು ಪರಿಗಣಿಸಲಾಗುತ್ತದೆ ಎಂಬ ವಿವರಗಳು ಇಲ್ಲಿದೆ.
ಯಾರು ರಕ್ತದಾನ ಮಾಡಬಹುದು
18 ರಿಂದ 65 ವರ್ಷದ ಒಳಗಿನ ಯಾರು ಬೇಕಾದರೂ ರಕ್ತದಾನ ಮಾಡಬಹುದು. ಆದರೆ ಅವರ ತೂಕ ಕನಿಷ್ಠ 45 ಕೆಜಿಗಿಂತ ಹೆಚ್ಚಿರಬೇಕು. ಕೆಲವು ಕಡೆ ಗರಿಷ್ಠ ವಯಸ್ಸಿನ ವ್ಯತ್ಯಾಸ ಇರಬಹುದು.
ರಕ್ತ ನೀಡುವವರ ಆರೋಗ್ಯ ಸ್ಥಿತಿ
ರಕ್ತದಾನಿಗಳು ಆರೋಗ್ಯವಂತರಾಗಿರಬೇಕು. ಯಾವುದೇ ಸಾಂಕ್ರಾಮಿಕ ಕಾಯಿಲೆಗಳು ಹಾಗೂ ಇತರ ಕಾಯಿಲೆಗಳಿಂದ ಮುಕ್ತರಾಗಿರಬೇಕು.
ರಕ್ತದಾನಿಗಳ ಹಿಮೊಗ್ಲೋಬಿನ್ ಪ್ರಮಾಣ ಎಷ್ಟಿರಬೇಕು?
ಸಾಮಾನ್ಯವಾಗಿ ರಕ್ತದಾನ ಮಾಡಲು ಕನಿಷ್ಠ ಹಿಮೋಗ್ಲೋಬಿನ್ ಮಟ್ಟ ಅಗತ್ಯವಾಗಿರುತ್ತದೆ. ಹಿಮೊಗ್ಲೋಬಿನ್ ಮಿತಿಯು ಸ್ಥಳ ಮತ್ತು ದಾನಿಯ ಲಿಂಗವನ್ನು ಅವಲಂಬಿಸಿ ಬದಲಾಗುತ್ತದೆ. ಮಹಿಳೆಯರಿಗೆ 12.0 ಗ್ರಾಂ/ಡೆಸಿಲೀಟರ್, ಪುರುಷರಿಗೆ 13.0 ಗ್ರಾಂ/ಡೆಸಿಲೀಟರ್ ಹಿಮೊಗ್ಲೋಬಿನ್ ಇರಬೇಕು ಎಂದು ಹೇಳಲಾಗುತ್ತದೆ.
ರಕ್ತದಾನ ಮಾಡುವ ಮುನ್ನ ಗಮನಿಸಬೇಕಾದ ಇತರ ಪ್ರಮುಖ ಅಂಶಗಳು
ಕಳೆದೊಂದು ವರ್ಷದಲ್ಲಿ - ರೇಬೀಸ್‌ಗೆ ಚಿಕಿತ್ಸೆ ಪಡೆದಿರಬಾರದು ಹಾಗೂ ಹೆಪಟೈಟಿಸ್ ಬಿ ಇಮ್ಯೂನ್ ಗ್ಲೋಬ್ಯುಲಿನ್ ಪಡೆದಿಬಾರದು.
ಕಳೆದ ಆರು ತಿಂಗಳುಗಳಲ್ಲಿ - ಹಚ್ಚೆ, ಕಿವಿ ಅಥವಾ ಚರ್ಮದ ಯಾವುದೇ ಭಾಗದಲ್ಲಿ ಚುಚ್ಚುವಿಕೆ ಅಥವಾ ಅಕ್ಯುಪಂಕ್ಚರ್ ಮಾಡಿಸಿಕೊಂಡಿರಬಾರದು. ರಕ್ತ ಅಥವಾ ರಕ್ತ ಸಂಬಂಧಿತ ಉತ್ಪನ್ನಗಳನ್ನು ಪಡೆದಿರಬಾರದು. ಗಂಭೀರ ಅನಾರೋಗ್ಯ ಹಾಗೂ ಯಾವುದೇ ರೀತಿ ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗಿರಬಾರದು. ಹೆಪಟೈಟಿಸ್ ಅಥವಾ ಕಾಮಾಲೆ ಇರುವ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿರಬಾರದು.
ಕಳೆದ ಮೂರು ತಿಂಗಳುಗಳಲ್ಲಿ - ರಕ್ತದಾನ ಮಾಡಿರಬಾರದು ಅಥವಾ ಮಲೇರಿಯಾಕ್ಕೆ ಚಿಕಿತ್ಸೆ ಪಡೆದಿರಬಾರದು.
ಕಳೆದ ಒಂದು ತಿಂಗಳಲ್ಲಿ - ಯಾವುದೇ ಲಸಿಕೆ ಪಡೆದಿರಬಾರದು.
ಕಳೆದ 48 ಗಂಟೆಗಳಲ್ಲಿ - ಯಾವುದೇ ಪ್ರತಿಜೀವಕಗಳು (ಆಂಟಿಬಯೋಟಿಕ್ಸ್) ಅಥವಾ ಯಾವುದೇ ಇತರ ಔಷಧಿಗಳನ್ನು (ಅಲೋಪತಿ ಅಥವಾ ಆಯುರ್ವೇದ ಅಥವಾ ಸಿದ್ಧ ಅಥವಾ ಹೋಮಿಯೋಪತಿ) ತೆಗೆದುಕೊಂಡಿರಬಾರದು.
ಕಳೆದ 24 ಗಂಟೆಗಳು - ಆಲ್ಕೊಹಾಲ್‌ಯುಕ್ತ ಪಾನೀಯಗಳು ಸೇವಿಸಿ ಇರಬಾರದು.
ಕಳೆದ 72 ಗಂಟೆಗಳಲ್ಲಿ - ದಂತ ಚಿಕಿತ್ಸೆ ಪಡೆದಿರುವುದು ಅಥವಾ ಆಸ್ಪಿರಿನ್ ಔಷಧಿ, ಮಾತ್ರೆ ತೆಗೆದುಕೊಂಡಿರಬಾರದು.
ರಕ್ತ ಕೊಡುವ ಹೊತ್ತಿನಲ್ಲಿ- ಕೆಮ್ಮು, ಇನ್ಫ್ಲುಯೆನ್ಸ ಅಥವಾ ಗಂಟಲು ನೋವು, ನೆಗಡಿಯಿಂದ ಬಳಲುತ್ತಿರಬಾರದು.
- ಗರ್ಭಿಣಿಯರು, ಮಗುವಿಗೆ ಹಾಲೂಡಿಸುವ ತಾಯಂದಿರು ರಕ್ತದಾನ ಮಾಡುವಂತಿಲ್ಲ
- ಹೆಣ್ಣುಮಕ್ಕಳು ಮುಟ್ಟಿನ ದಿನಗಳಲ್ಲಿ ರಕ್ತದಾನ ಮಾಡುವಂತಿಲ್ಲ.
- ರಕ್ತದಾನ ಮಾಡುವ ಮುನ್ನ ಮಧುಮೇಹದಿಂದ ಮುಕ್ತರಾಗಿರಬೇಕು. ಎದೆ ನೋವು, ಹೃದಯ ಕಾಯಿಲೆ ಅಥವಾ ಅಧಿಕ ರಕ್ತದೊತ್ತಡ, ಕ್ಯಾನ್ಸರ್, ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಅಥವಾ ರಕ್ತ ಕಾಯಿಲೆ, ನಿರಂತರ ಜ್ವರ, ತೂಕ ಇಳಿಕೆ, ಆಯಾಸ, ರಾತ್ರಿ ಹೊತ್ತು ಅತಿಯಾಗಿ ಬೆವರುವುದು, ಬಾಯಿಯಲ್ಲಿ ಬಿಳಿ ಕಲೆ ಹೊಂದಿರುವುದು, ಕುತ್ತಿಗೆ ಅಥವಾ ತೊಡೆಸಂದುಗಳಲ್ಲಿ ದುಗ್ಧರಸ ಗ್ರಂಥಿಗಳು ಹಿಗ್ಗುವಿಕೆ ಇಂತಹವರು ರಕ್ತದಾನ ಮಾಡುವಂತಿಲ್ಲ.
- ಕ್ಷಯ, ಶ್ವಾಸನಾಳದ ಆಸ್ತಮಾ ಅಥವಾ ಅಲರ್ಜಿಕ್ ಅಸ್ವಸ್ಥತೆ, ಯಕೃತ್ತಿನ ಕಾಯಿಲೆ, ಮೂತ್ರಪಿಂಡ ಕಾಯಿಲೆ, ಫಿಟ್ಸ್ ಅಥವಾ ಮೂರ್ಛೆ ಹೋಗುವುದು ಮುಂತದ ಸಮಸ್ಯೆ ಇರುವವರು ರಕ್ತದಾನ ಮಾಡುವಂತಿಲ್ಲ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
ವಿಭಾಗ