ಕ್ಯಾನ್ಸರ್‌ ಕೋಶಗಳ ಕಣ್ಣಾಮುಚ್ಚಾಲೆ ಆಟ, ಚಿಕಿತ್ಸೆ ಬಳಿಕವೂ ದೇಹದೊಳಗೆ ಅವಿತು ರೋಗ ಮರುಕಳಿಸುವ ಸಾಧ್ಯತೆ: ಅಧ್ಯಯನ ವರದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕ್ಯಾನ್ಸರ್‌ ಕೋಶಗಳ ಕಣ್ಣಾಮುಚ್ಚಾಲೆ ಆಟ, ಚಿಕಿತ್ಸೆ ಬಳಿಕವೂ ದೇಹದೊಳಗೆ ಅವಿತು ರೋಗ ಮರುಕಳಿಸುವ ಸಾಧ್ಯತೆ: ಅಧ್ಯಯನ ವರದಿ

ಕ್ಯಾನ್ಸರ್‌ ಕೋಶಗಳ ಕಣ್ಣಾಮುಚ್ಚಾಲೆ ಆಟ, ಚಿಕಿತ್ಸೆ ಬಳಿಕವೂ ದೇಹದೊಳಗೆ ಅವಿತು ರೋಗ ಮರುಕಳಿಸುವ ಸಾಧ್ಯತೆ: ಅಧ್ಯಯನ ವರದಿ

ಕ್ಯಾನ್ಸರ್ ಜಗತ್ತನ್ನು ಕಾಡುವ ಮಾರಕ ರೋಗಗಳಲ್ಲಿ ಒಂದು, ಇದರಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಸ್ತನ ಕ್ಯಾನ್ಸರ್ ಕೂಡ ಒಂದು ವಿಧ. ಈ ಕ್ಯಾನ್ಸರ್‌ನ ಕೋಶಗಳು ಹಲವು ವರ್ಷಗಳವರೆಗೆ ದೇಹದಲ್ಲಿ ಅಡಗಿರುವುದು ಮಾತ್ರವಲ್ಲ, ಯಶಸ್ವಿ ಚಿಕಿತ್ಸೆಯ ನಂತರವೂ ರೋಗ ಮರುಕಳಿಸಲು ಕಾರಣವಾಗುತ್ತಿದೆ ಎಂದು ಅಘಾತಕಾರಿ ವಿಚಾರವೊಂದನ್ನು ಹೊರ ಹಾಕಿದೆ ಇತ್ತೀಚಿನ ವರದಿ.

ಕ್ಯಾನ್ಸರ್
ಕ್ಯಾನ್ಸರ್ (PC: Canva)

ಜಗತ್ತಿನಲ್ಲಿ ಅತಿ ಹೆಚ್ಚು ಜನರ ಸಾವಿಗೆ ಕಾರಣವಾಗುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಕ್ಯಾನ್ಸರ್ ಅಗ್ರಸ್ಥಾನದಲ್ಲಿದೆ. ಅದರಲ್ಲೂ ಮಹಿಳೆಯರನ್ನು ಹೆಚ್ಚಾಗಿ ಸ್ತನ ಕ್ಯಾನ್ಸರ್ ಕಾಡುತ್ತಿದೆ. ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ. ಸ್ತನ ಕ್ಯಾನ್ಸರ್ ಅತ್ಯಂತ ಸವಾಲಿನ ಆರೋಗ್ಯ ಸ್ಥಿತಿಗಳಲ್ಲಿ ಒಂದಾಗಿದ್ದರೂ, ಇದನ್ನು ಸೂಕ್ತ ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಬಹುದಾಗಿದೆ. ಆದರೆ ಇತ್ತೀಚಿನ ಅಧ್ಯಯನವೊಂದು ಸ್ತನ ಕ್ಯಾನ್ಸರ್‌ಗೆ ಸಂಬಂಧಪಟ್ಟ  ಅಘಾತಕಾರಿ ಅಂಶವೊಂದನ್ನು ಹೊರ ಹಾಕಿದೆ.

ಈ ಅಧ್ಯಯನದ ಪ್ರಕಾರ ಕೆಲವು ಸ್ತನ ಕ್ಯಾನ್ಸರ್‌ನ ಕೋಶಗಳು ಚಿಕಿತ್ಸೆಯ ನಂತರವೂ ಬಹಳ ವರ್ಷಗಳವರೆಗೆ ಅಥವಾ ದಶಕಗಳವರೆಗೆ ದೇಹದಲ್ಲಿ ಸುಪ್ತ ಸ್ಥಿತಿಯಲ್ಲಿ ಉಳಿಯಬಹುದು, ನಂತರ ರೋಗ ಮರುಕಳಿಸುವಿಕೆಗೆ ಕಾರಣವಾಗಬಹುದು.  ಈಸ್ಟ್ರೊಜೆನ್ ರಿಸೆಪ್ಟರ್-ಪಾಸಿಟಿವ್ ಸ್ತನ ಕ್ಯಾನ್ಸರ್ ಹೊಂದಿರುವ ರೋಗಿಗಳಲ್ಲಿ ಈ ಸಾಧ್ಯತೆ ಹೆಚ್ಚಿರುತ್ತದೆ. ಏಕೆಂದರೆ ಕೆಲವು ಸ್ಲೀಪರ್ ಕ್ಯಾನ್ಸರ್ ಕೋಶಗಳು ವಿಶಿಷ್ಟ ಕಾರ್ಯವಿಧಾನ ಹೊಂದಿದ್ದು ಅವುಗಳು ಸುಲಭವಾಗಿ ಪತ್ತೆಯಾಗದಂತೆ ಅಡಗಿಕೊಂಡಿರುತ್ತವೆ. 

ಅಧ್ಯಯನ ಮತ್ತು ಪರಿಣಾಮ

“ಯಶಸ್ವಿ ಶಸ್ತ್ರಚಿಕಿತ್ಸೆ ಹಾಗೂ ಚಿಕಿತ್ಸೆಯ ನಂತರ ರೋಗಿಗಳಿಗೆ ರೋಗಗಳ ನಿರ್ಮೂಲನೆಯ ಭರವಸೆ ಮೂಡಬಹುದು, ಆದರೂ ವಾಸ್ತವವು ಹೆಚ್ಚು ಸಂಕೀರ್ಣವಾಗಿರಬಹುದು” ಎಂದು ಮಿಷಿಗನ್ ಯೂನಿವರ್ಸಿಟಿಯ ಡಾ. ಲ್ಯೂಕರ್ ಎನ್ನುವವರ ತಂಡ ನಡೆಸಿದ ಅಧ್ಯಯನವು ಬಹಿರಂಗಪಡಿಸುತ್ತದೆ. ಈಸ್ಟ್ರೊಜೆನ್ ರಿಸೆಪ್ಟರ್-ಪಾಸಿಟಿವ್ ಸ್ತನ ಕ್ಯಾನ್ಸರ್‌ನಲ್ಲಿ, ಸುಪ್ತ ಕ್ಯಾನ್ಸರ್ ಕೋಶಗಳು ಮೂಳೆ ಮಜ್ಜೆಯಲ್ಲಿ ದೀರ್ಘಕಾಲದವರೆಗೆ ಪತ್ತೆಯಾಗದೇ ಇರುತ್ತವೆ. ಈ ಜೀವಕೋಶಗಳು ಚಿಕಿತ್ಸೆಗಳ ಉಪಸ್ಥಿತಿಯಲ್ಲಿಯೂ ಬದುಕಲು ಮತ್ತು ಅಭಿವೃದ್ಧಿ ಹೊಂದಲು ತಮ್ಮ ಪರಿಸರವನ್ನು ಬಳಸಿಕೊಳ್ಳುತ್ತವೆ.

ಕ್ಯಾನ್ಸರ್ ಕೋಶಗಳ ಬೆಳವಣಿಗೆಯಲ್ಲಿ ಜಿಐವಿ ಪ್ರೊಟೀನ್‌ ಪಾತ್ರ

ಸಂಶೋಧನೆಯು ಜಿಐವಿ ಅಥವಾ ಗಿರ್ಡಿನ್ ಎಂಬ ಪ್ರಮುಖ ಪ್ರೊಟೀನ್ ಅನ್ನು ಗುರುತಿಸಿದೆ. ಇದು ಈ ಕ್ಯಾನ್ಸರ್ ಕೋಶಗಳು ಬದುಕುಳಿಯಲು ಸಹಾಯ ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಸಾಮಾನ್ಯವಾಗಿ ಬಳಸುವ ಚಿಕಿತ್ಸೆಯಾದ ಟಾಮೋಕ್ಸಿಫೆನ್‌ನಂತಹ ಈಸ್ಟ್ರೊಜೆನ್-ಉದ್ದೇಶಿತ ಚಿಕಿತ್ಸೆಗಳಿಗೆ ಜಿಐವಿ ಕೋಶಗಳನ್ನು ಪ್ರತಿರೋಧಿಸುತ್ತದೆ. ಪ್ರಯೋಗಾಲಯದ ಪ್ರಯೋಗಗಳ ಮೂಲಕ, ಮೂಳೆ ಮಜ್ಜೆಯಲ್ಲಿನ ಮೆಸೆಂಕಿಮಲ್ ಕೋಶಗಳಿಂದ ಅಗತ್ಯವಾದ ಪ್ರೋಟೀನ್‌ಗಳನ್ನು ಹೊರತೆಗೆಯಲು ಕ್ಯಾನ್ಸರ್ ಕೋಶಗಳು ಸೆಲ್ಯುಲಾರ್ ಸುರಂಗಗಳನ್ನು ರೂಪಿಸುತ್ತವೆ ಎಂದು ಸಂಶೋಧಕರು ಕಂಡುಹಿಡಿದ್ದಾರೆ. ಈ ವಿಶಿಷ್ಟವಾದ ಪರಸ್ಪರ ಕ್ರಿಯೆಯು ಅವುಗಳನ್ನು ಸುಪ್ತ ಸ್ಥಿತಿಯಲ್ಲಿರಲು ಅನುಮತಿಸುತ್ತದೆ. ನಂತರದ ಹಂತಗಳಲ್ಲಿ ಇವು ಸಕ್ರಿಯವಾಗಬಹುದು. 

ಸುಧಾರಿತ ಚಿಕಿತ್ಸೆಗಳ ಅಗತ್ಯ

ಈ ಅಧ್ಯಯನವು ವೈದ್ಯಕೀಯ ಸಮುದಾಯಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಸ್ಲೀಪರ್ ಕೋಶಗಳು ಹೇಗೆ ಬದುಕುಳಿಯುತ್ತವೆ ಮತ್ತು ಚಿಕಿತ್ಸೆಯಿಂದ ತಪ್ಪಿಸಿಕೊಳ್ಳುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮೂಲಕ, ಈ ಸುಪ್ತ ಕೋಶಗಳನ್ನು ನಿರ್ದಿಷ್ಟವಾಗಿ ಗುರಿಯಾಗಿಸುವ ಹೊಸ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಸಂಶೋಧಕರು ತಿಳಿಸಿದ್ದಾರೆ. ಇಂತಹ ಸಂಶೋಧನೆಗಳಿಂದ ಕ್ಯಾನ್ಸರ್ ಆರೈಕೆಯಲ್ಲಿ ಕ್ರಾಂತಿಯನ್ನುಂಟು ಮಾಡಲು ಸಾಧ್ಯವಿದೆ. ಇದರಿಂದ ಮರುಕಳಿಸುವಿಕೆಯ ಅಪಾಯವು ಕಡಿಮೆಯಾಗುತ್ತದೆ.  

ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವ ವಿಧಾನ

ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಚೇತರಿಕೆ ಸಾಧ್ಯವಿದೆ. ಆ ಕಾರಣಕ್ಕಾಗಿ ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವ ಈ ವಿಧಾನಗಳ ಬಗ್ಗೆ ತಿಳಿದುಕೊಂಡಿರಿ.

ಸ್ವಯಂ-ಪರೀಕ್ಷೆ: ಯಾವುದೇ ಅಸಾಮಾನ್ಯ ಗಡ್ಡೆಗಳು, ಸ್ತನದ ಗಾತ್ರ ದಪ್ಪವಾಗುವುದು ಅಥವಾ ಚರ್ಮದ ರಚನೆಯಲ್ಲಿ ಬದಲಾವಣೆಗಳು ಸ್ತನ ಕ್ಯಾನ್ಸರ್ ಸೂಚಕವಾಗಿರಬಹುದು. ಇದನ್ನು ಪತ್ತೆಹಚ್ಚಲು ನಿಯಮಿತವಾಗಿ ಸ್ತನ ಸ್ವಯಂ-ಪರೀಕ್ಷೆಗಳನ್ನು ಮಾಡಿ.

ಕ್ಲಿನಿಕಲ್ ಸ್ಕ್ರೀನಿಂಗ್: ನೀವು 40 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಅಥವಾ ಸ್ತನ ಕ್ಯಾನ್ಸರ್‌ನ ಕುಟುಂಬದ ಇತಿಹಾಸವನ್ನು ಹೊಂದಿದ್ದರೆ ನಿಯಮಿತ ಮ್ಯಾಮೊಗ್ರಾಮ್ ಪರೀಕ್ಷೆ ಮಾಡಿಸಿ. 

ರೋಗಲಕ್ಷಣಗಳನ್ನು ಗಮನಿಸಿ: ಮೊಲೆತೊಟ್ಟುಗಳ ಸ್ರವಿಸುವಿಕೆ, ಸ್ತನ ನೋವು, ಕೆಂಪು ಮತ್ತು ಊತದಂತಹ ಎಚ್ಚರಿಕೆಯ ಚಿಹ್ನೆಗಳನ್ನು ನಿರ್ಲಕ್ಷ್ಯ ಮಾಡದಿರಿ. 

ತಜ್ಞರನ್ನು ಸಂಪರ್ಕಿಸಿ: ಯಾವುದೇ ರೋಗಲಕ್ಷಣಗಳನ್ನು ಗುರುತಿಸಿದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ತಡ ಮಾಡದಿರಿ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

–––

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.

 

Whats_app_banner