ಕ್ಯಾನ್ಸರ್ ಕುರಿತ ಸತ್ಯ–ಮಿಥ್ಯಗಳು; ಈ ಕಾಯಿಲೆಯ ಬಗ್ಗೆ ಪ್ರತಿಯೊಬ್ಬರು ತಪ್ಪದೇ ತಿಳಿಯಬೇಕಾದ ಮಾಹಿತಿಯಿದು
ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಕೂಡ ಒಂದು. ಇದು ಹಲವರ ಸಾವಿಗೆ ಕಾರಣವಾಗುತ್ತಿದೆ. ಹಾಗಂತ ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ಪಡೆದರೆ, ಕ್ಯಾನ್ಸರ್ ಅನ್ನು ಗುಣಪಡಿಸಲು ಸಾಧ್ಯವಿದೆ. ಕ್ಯಾನ್ಸರ್ ಬಗ್ಗೆ ಜನರಿಗೆ ಇರುವ ಕೆಲವು ತಪ್ಪುಕಲ್ಪನೆಗಳು, ಕ್ಯಾನ್ಸರ್ ಸತ್ಯ–ಮಿಥ್ಯಗಳ ಬಗ್ಗೆ ವೈದ್ಯರು ನೀಡಿದ ಮಾಹಿತಿ ಇಲ್ಲಿದೆ.
ವಿಶ್ವದಾದ್ಯಂತ ಹಲವರ ಸಾವಿಗೆ ಕಾರಣವಾಗುತ್ತಿರುವ ಕಾಯಿಲೆ ಕ್ಯಾನ್ಸರ್. ಈ ಬಗ್ಗೆ ಜನರಲ್ಲಿ ಹಲವಾರು ತಪ್ಪುಕಲ್ಪನೆಗಳಿವೆ. ಕ್ಯಾನ್ಸರ್ ಗುಣಪಡಿಸಲಾಗದ ಕಾಯಿಲೆ ಎಂಬುದು ನಿಜವಾದರೂ ಇದು ರಕ್ತದಿಂದ ಹರಡುತ್ತದೆ, ಬಾಯಾಪ್ಸಿ ನಂತರ ಕ್ಯಾನ್ಸರ್ ಪ್ರಮಾಣ ಹೆಚ್ಚುತ್ತದೆ, ಇದು ಕುಟುಂಬಸ್ಥರಿಂದ ಹರಡುತ್ತದೆ ಎಂಬುದೆಲ್ಲಾ ತಪ್ಪುಕಲ್ಪನೆಗಳಾಗಿವೆ. ಕ್ಯಾನ್ಸರ್ ಕುರಿತ ಸತ್ಯ–ಮಿಥ್ಯಗಳ ಬಗ್ಗೆ ಮಂಗಳೂರಿನ ವೈದ್ಯರಾದ ಡಾ. ಕಾರ್ತಿಕ್ ಕೆ.ಎಸ್ ಅವರು ಬರೆದ ಲೇಖನ ಇಲ್ಲಿದೆ.
ಕ್ಯಾನ್ಸರ್ ಮಾರಣಾಂತಿಕ, ಅದೊಂದು ಮರಣದಂಡನೆ
ಕ್ಯಾನ್ಸರ್ ಸುತ್ತಲೂ ಸಾಕಷ್ಟು ಹತಾಶಭಾವ ತುಂಬಿಕೊಂಡಿದೆ. ಕ್ಯಾನ್ಸರ್ ಒಂದು ಮರಣದಂಡನೆ ಎಂದು ಜನರು ಭಾವಿಸುತ್ತಾರೆ. ಈ ಕಾಯಿಲೆಯ ಬಗ್ಗೆ ಜಾಗೃತಿ ಮತ್ತು ಪರೀಕ್ಷೆಯು (ಸ್ಕ್ರೀನಿಂಗ್) ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಕ್ಯಾನ್ಸರ್‌ಗೆ ಆರಂಭಿಕ ಹಂತದಲ್ಲಿ ಚಿಕಿತ್ಸೆ ನೀಡಿದ್ದಾದರೆ, ಈ ರೋಗ ವಾಸಿಯಾಗಿ, ರೋಗಿಯು ಬದುಕಿ ಉಳಿಯುವ ಸಾಧ್ಯತೆಗಳು ಹೆಚ್ಚು.
ಶಸ್ತ್ರಚಿಕಿತ್ಸೆಯಿಲ್ಲದೆ ಕ್ಯಾನ್ಸರ್ ಗುಣಪಡಿಸಬಹುದು
ʻಲಿಂಫೋಮಾ‘ ಸೇರಿದಂತೆ ರಕ್ತ ಸಂಬಂಧಿತ ಕ್ಯಾನ್ಸರ್‌ಗಳಲ್ಲಿ ಶಸ್ತ್ರಚಿಕಿತ್ಸೆಯ ಪಾತ್ರ ಬಹಳ ಕಡಿಮೆ. ಇದು ರೋಗನಿರ್ಣಯ ಅಥವಾ ಬೆಂಬಲಿತ ಚಿಕಿತ್ಸೆಗಷ್ಟೇ ಆ ಕಾಯಿಲೆ ಸೀಮಿತವಾಗಿದೆ. ಆದರೆ, ಗಡ್ಡೆಗಳನ್ನು ಒಳಗೊಂಡ ಇತರೆ ಕಾನ್ಸರ್‌ಗಳ ವಿಚಾರದಲ್ಲಿ ಶಸ್ತ್ರಚಿಕಿತ್ಸೆಯು ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲಿ ಇದು ಶಮನಕಾರಿ ಚಿಕಿತ್ಸೆಯ ಪ್ರಮುಖ ಭಾಗವಾಗಿರುತ್ತದೆ.
ಕ್ಯಾನ್ಸರ್‌ನಲ್ಲಿ ಕನಿಷ್ಠ ಚಿಕ್ಕದಾಗಿ ಗಾಯ ಮಾಡುವ ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲ
ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ಹಿಂದೆ ಒಂದು ತತ್ವವಿದೆ. ಆದಾಗ್ಯೂ, ಕೆಲವೊಂದು ಆಯ್ದ ಪ್ರಕರಣಗಳಲ್ಲಿ ಕನಿಷ್ಠ ಕೊಯ್ಯುವಿಕೆ ಒಳಗೊಂಡ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸಬಹುದು: ಅವುಗಳೆಂದರೆ ಲ್ಯಾಪರೋಸ್ಕೋಪಿಕ್ ಅಥವಾ ರೊಬೊಟಿಕ್.
ಎಲ್ಲಾ ಗಂಟುಗಳು/ ಗೆಡ್ಡೆಗಳು ಕ್ಯಾನ್ಸರ್
ಎಲ್ಲಾ ಗಂಟುಗಳು ಅಥವಾ ಗೆಡ್ಡೆಗಳು ಕ್ಯಾನ್ಸರ್ ಆಗಿರಬೇಕಾಗಿಲ್ಲ. ಆದರೆ ಹೆಚ್ಚಿನ ಗಡ್ಡೆ ರೂಪದ ಕ್ಯಾನ್ಸರ್‌ಗಳು ಗಂಟು ಅಥವಾ ಗೆಡ್ಡೆಗಳಾಗಿ ಉದ್ಭವಿಸುತ್ತವೆ ಅಥವಾ ಇರುತ್ತವೆ. ಆದ್ದರಿಂದ ಚಿಕಿತ್ಸೆಯನ್ನು ಪ್ರಾರಂಭಿಸುವ ಮೊದಲು ನಿರುಪದ್ರವಿ ಗೆಡ್ಡೆ ಮತ್ತು ಅಪಾಯಕಾರಿ ಗೆಡ್ಡೆಯ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಬಹಳ ಮುಖ್ಯ.
ಕ್ಯಾನ್ಸರ್ ಅನುವಂಶಿಕ ಕಾಯಿಲೆ
ಕ್ಯಾನ್ಸರ್ ಕುಟುಂಬಗಳಲ್ಲಿ ಒಬ್ಬರಿಂದ ಒಬ್ಬರಿಗೆ ಬರುತ್ತದೆ: ಕೇವಲ ಸುಮಾರು ಶೇ 3-5 ಕ್ಯಾನ್ಸರ್‌ಗಳು ಮಾತ್ರ ಅನುವಂಶಿಕವಾಗಿ ಬರುತ್ತದೆ. ಇದು ಬಹಳ ಸಣ್ಣ ಭಾಗ ಮತ್ತು ಕುಟುಂಬದಲ್ಲಿ ಅದು ಕಂಡು ಬಂದಾಗ ಸಾಕಷ್ಟು ಸ್ಪಷ್ಟವಾಗಿ ಅದರ ಮೂಲ ತಿಳಿದುಬಿಡುತ್ತದೆ. ಇಂತಹ ಕ್ಯಾನ್ಸರ್‌ಗಳು ತಲೆಮಾರುಗಳಾದ್ಯಂತ ಕಾಣಿಸಿಕೊಳ್ಳುತ್ತವೆ, ಇದು ಒಂದೇ ರೀತಿಯ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ.
ಕ್ಯಾನ್ಸರ್ ಪುನರಾವರ್ತನೆಯಾಗುತ್ತದೆ – ರೋಗ ಮರುಕಳಿಸುತ್ತದೆ
ವೈಜ್ಞಾನಿಕವಾಗಿ ಮತ್ತು ಅಂತರರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟ ಶಿಷ್ಟಾಚಾರದ ಆಧಾರದ ಮೇಲೆ ಚಿಕಿತ್ಸೆ ನೀಡಿದಾಗ, ಪುನರಾವರ್ತನೆಯ ಸಾಧ್ಯತೆಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ. ಪುನರಾವರ್ತನೆಯನ್ನು ಗಮನಿಸಲು ಚಿಕಿತ್ಸೆಯ ಆರಂಭಿಕ ಭಾಗದ ಬಳಿಕ ರೋಗಿಗಳನ್ನು ನಿಯಮಿತವಾಗಿ ಮರುಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆರಂಭಿಕ ಹಂತದ ರೋಗಗಳು, ಪುನರಾವರ್ತನೆಯ ಸಾಧ್ಯತೆಗಳು ಕಡಿಮೆ.
ಕ್ಯಾನ್ಸರ್ ಗುಣಪಡಿಸಲು ಸಾಧ್ಯವಿಲ್ಲ
ಹೆಚ್ಚಿನ ಕ್ಯಾನ್ಸರ್‌ಗಳ ಮುನ್ಸೂಚನೆಯು ರೋಗನಿರ್ಣಯದ ಹಂತವನ್ನು ಆಧರಿಸಿದೆ. ಆರಂಭಿಕ ಹಂತದ ಕ್ಯಾನ್ಸರ್ ಹೊಂದಿರುವ ರೋಗಿಗಳು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಾರೆ. ಜಾಗೃತಿ ಮತ್ತು ತಪಾಸಣೆಯು ಮುನ್ನರಿವು ಮತ್ತು ಗುಣಪಡಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.
ಬಯಾಪ್ಸಿಯ ನಂತರ ಕ್ಯಾನ್ಸರ್ ಹರಡುತ್ತದೆ
ಬಯಾಪ್ಸಿ ರೋಗನಿರ್ಣಯದ ಒಂದು ವಿಧಾನವಾಗಿದೆ. ರೋಗದ ನಿಖರವಾದ ಪ್ರಕಾರವನ್ನು ಕಂಡುಹಿಡಿಯಲು ಬಯಾಪ್ಸಿ ನಮಗೆ ಸಹಾಯ ಮಾಡುತ್ತದೆ. ಇದು ಚಿಕಿತ್ಸಾ ಯೋಜನೆ ಮತ್ತು ಚಿಕಿತ್ಸೆಯನ್ನು ಸುಗಮಗೊಳಿಸುತ್ತದೆ.
ಕ್ಯಾನ್ಸರ್ ಒಂದು ಸಾಂಕ್ರಾಮಿಕ ರೋಗ
ಸೋಂಕುಗಳಿಗಿಂತ ಕ್ಯಾನ್ಸರ್ ಭಿನ್ನವಾದುದು. ಅದು ಸಾಂಕ್ರಾಮಿಕವಲ್ಲ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಚಿಕಿತ್ಸೆ ಮತ್ತು ಚೇತರಿಕೆಯ ಸಮಯದಲ್ಲಿ ಆರೈಕೆದಾರರು ರೋಗಿಗಳನ್ನು ಪೂರ್ಣ ಹೃದಯದಿಂದ ಬೆಂಬಲಿಸಬೇಕು. ರೋಗ ಹರಡುವಿಕೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.
ಕ್ಯಾನ್ಸರ್ ಚಿಕಿತ್ಸೆ ಸದಾ ನೋವಿನಿಂದ ಕೂಡಿರುತ್ತದೆ
ಪ್ರಾರಂಭದಲ್ಲಿ ಕ್ಯಾನ್ಸರ್ ನೋವಿನಿಂದ ಕೂಡಿರುವುದಿಲ್ಲ. ಕ್ಯಾನ್ಸರ್ ಎಂದ ಮೇಲೆ ಅದು ನೋವಿನಿಂದ ಕೂಡಿರಲೇಬೇಕು ಎಂಬುದು ಬಹುತೇಕ ಜನರ ಭಾವನೆಯಷ್ಟೇ. ಕ್ಯಾನ್ಸರ್ ಮುಂದುವರೆದಂತೆ ಅದು ನೋವಿನಿಂದ ಕೂಡಿರಬಹುದು. ಆದ್ದರಿಂದ, ಯಾವುದೇ ಗಂಟು ಮತ್ತು ಗೆಡ್ಡೆಗಳನ್ನು ಪರೀಕ್ಷಿಸುವುದು ಮುಖ್ಯ, ಅದು ನೋವಿನಿಂದ ಕೂಡಿಲ್ಲದಿದ್ದರೂ ಸಹ.
(ಬರಹ: ಡಾ. ಕಾರ್ತಿಕ್ ಕೆ.ಎಸ್., ಕನ್ಸಲ್ಟೆಂಟ್ ಸರ್ಜಿಕಲ್ ಆಂಕಾಲಜಿ, ಕೆಎಂಸಿ ಆಸ್ಪತ್ರೆ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಮಂಗಳೂರು)