ಹೃದಯಾಘಾತದ ಅಪಾಯ ಕಡಿಮೆಯಾಗಲು ಪ್ರತಿದಿನ ಪಾಲಿಸಬೇಕಾದ ಈ 5 ಸರಳ ಅಭ್ಯಾಸಗಳಿವು; ಹೃದ್ರೋಗ ತಜ್ಞರ ಸಲಹೆ
ಕನ್ನಡ ಸುದ್ದಿ  /  ಜೀವನಶೈಲಿ  /  ಹೃದಯಾಘಾತದ ಅಪಾಯ ಕಡಿಮೆಯಾಗಲು ಪ್ರತಿದಿನ ಪಾಲಿಸಬೇಕಾದ ಈ 5 ಸರಳ ಅಭ್ಯಾಸಗಳಿವು; ಹೃದ್ರೋಗ ತಜ್ಞರ ಸಲಹೆ

ಹೃದಯಾಘಾತದ ಅಪಾಯ ಕಡಿಮೆಯಾಗಲು ಪ್ರತಿದಿನ ಪಾಲಿಸಬೇಕಾದ ಈ 5 ಸರಳ ಅಭ್ಯಾಸಗಳಿವು; ಹೃದ್ರೋಗ ತಜ್ಞರ ಸಲಹೆ

ಹೃದಯಾಘಾತ ಇತ್ತೀಚೆಗೆ ಹಲವರ ಪ್ರಾಣಕ್ಕೆ ಕುತ್ತು ತರುತ್ತಿದೆ. ನೀವು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಿಕೊಳ್ಳಲು ಬಯಸಿದರೆ ನಿಮ್ಮ ಹೃದಯದ ಆರೋಗ್ಯದಲ್ಲಿ ಬಹಳ ದೊಡ್ಡ ಬದಲಾವಣೆ ತರುವ ಸರಳ ದೈನಂದಿನ ಅಭ್ಯಾಸಗಳ ಮೇಲೆ ಗಮನ ಹರಿಸಿ. ಹೃದ್ರೋಗ ತಜ್ಞ ಡಾ. ಜ್ಯಾಕ್ ವುಲ್ಫ್ಸನ್ ನೀಡಿರುವ ಸಲಹೆ ಇಲ್ಲಿದೆ.

ಹೃದಯಾಘಾತದ ಅಪಾಯ ತಪ್ಪಿಸಲು ಈ 5 ಸರಳ ಅಭ್ಯಾಸಗಳನ್ನು ತಪ್ಪದೇ ಪಾಲಿಸಿ; ತಜ್ಞರ ಸಲಹೆ
ಹೃದಯಾಘಾತದ ಅಪಾಯ ತಪ್ಪಿಸಲು ಈ 5 ಸರಳ ಅಭ್ಯಾಸಗಳನ್ನು ತಪ್ಪದೇ ಪಾಲಿಸಿ; ತಜ್ಞರ ಸಲಹೆ

ಇತ್ತೀಚಿನ ವರ್ಷಗಳಲ್ಲಿ ಪ್ರಪಂಚದಾದ್ಯಂತ ಹಲವರು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಎಳೆ ವಯಸ್ಸಿನಲ್ಲೇ ಸೂಚನೆ ನೀಡದೆ ಹೃದಯಾಘಾತವೆಂಬ ಮಾರಿ ಪ್ರಾಣಕ್ಕೆ ಕುತ್ತು ತರುತ್ತಿದೆ. ವಿಶ್ವದಾದ್ಯಂತ ಜನರ ಸಾವಿಗೆ ಪ್ರಮುಖ ಕಾರಣಗಳಲ್ಲಿ ಹೃದಯಾಘಾತವು ಒಂದಾಗಿದೆ. ಆದರೆ ಹೃದಯಾಘಾತ ತಪ್ಪಿಸಲು ಸಾಧ್ಯವೇ ಇಲ್ಲ ಎಂದಲ್ಲ. ಹೃದಯಾಘಾತಕ್ಕೆ ಕಾರಣವಾಗುವ ಅಪಾಯಕಾರಿ ಅಂಶಗಳು ನಮ್ಮ ನಿಯಂತ್ರಣದಲ್ಲಿಯೇ ಇವೆ. ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ಹೃದಯಾಘಾತದ ಸಾಧ್ಯತೆ ಕಡಿಮೆ ಮಾಡಬಹುದು. ಮಾತ್ರವಲ್ಲ ಇದರಿಂದ ದೀರ್ಘಕಾಲದವರೆಗೆ ಹೃದಯ ಆರೋಗ್ಯ ಚೆನ್ನಾಗಿರುವಂತೆ ನೋಡಿಕೊಳ್ಳಬಹುದು.

ಹೃದ್ರೋಗ ತಜ್ಞರಾದ ಡಾ. ಜ್ಯಾಕ್ ವುಲ್ಫ್ಸನ್ ಎನ್ನುವವರು ತಮ್ಮ ಇನ್‌ಸ್ಟಾಗ್ರಾಂ ಫಾಲೋವರ್ಸ್‌ಗಾಗಿ ಆರೋಗ್ಯ ಮತ್ತು ಸ್ವಾಸ್ಥ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಏಪ್ರಿಲ್ 30 ರ ಅವರ ಪೋಸ್ಟ್‌ನಲ್ಲಿ, ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುವ 5 ಸರಳ ಆದರೆ ಪರಿಣಾಮಕಾರಿ ಹಂತಗಳ ಬಗ್ಗೆ ಅವರು ವಿವರಣೆ ನೀಡಿದ್ದಾರೆ.

ಹೊರಗೆ ಹೋಗಿ

ಡಾ. ಜ್ಯಾಕ್‌ ಹೇಳುವಂತೆ ನೀವು ಹೊರಾಂಗಣದಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ. ತಾಜಾ ಗಾಳಿ, ನೈಸರ್ಗಿಕ ಬೆಳಕು ಮತ್ತು ಚಲನೆಯು ನಿಮ್ಮ ಹೃದಯ ಮತ್ತು ಒಟ್ಟಾರೆ ಯೋಗಕ್ಷೇಮದ ಮೇಲೆ ಅದ್ಭುತ ಪರಿಣಾಮ ಬೀರುತ್ತದೆ.

ಉತ್ತಮ ನಿದ್ದೆ ಪಡೆಯಿರಿ

ನೀವು ಪ್ರಸ್ತುತ ಯಾವುದೇ ಸಮಯದಲ್ಲಿ ಮಲಗುತ್ತಿದ್ದರೂ ಒಂದು ಗಂಟೆ ಮುಂಚೆ ಮಲಗಿ ಎಂದು ಅವರು ಸಲಹೆ ನೀಡುತ್ತಾರೆ. ಗುಣಮಟ್ಟದ ನಿದ್ದೆ ಹೃದಯಕ್ಕೆ ಅಗತ್ಯವಿರುವ ವಿಶ್ರಾಂತಿಯನ್ನು ನೀಡುತ್ತದೆ ಮತ್ತು ಉತ್ತಮ ಚೇತರಿಕೆ ಮತ್ತು ಹಾರ್ಮೋನ್ ಸಮತೋಲನವನ್ನು ಬೆಂಬಲಿಸುತ್ತದೆ.

ಸ್ಕ್ರೀನ್‌ ಟೈಮ್‌ ಕಡಿಮೆ ಮಾಡಿ

ತಂತ್ರಜ್ಞಾನದ ಬಳಕೆಯನ್ನು ಮಿತಿಗೊಳಿಸಿ ಎಂದು ಜ್ಯಾಕ್‌ ಸಲಹೆ ನೀಡುತ್ತಾರೆ. ತಂತ್ರಜ್ಞಾನದ ಅತಿಯಾದ ಬಳಕೆಯು ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ತಂತ್ರಜ್ಞಾನ ಬಳಕೆ ಕಡಿಮೆ ಮಾಡಿದಷ್ಟೂ, ನಿಮ್ಮ ಆರೋಗ್ಯ ಸುಧಾರಿಸುತ್ತದೆ ಎಂದು ಜ್ಯಾಕ್‌ ಸಲಹೆ ನೀಡುತ್ತಾರೆ. ಸ್ಕ್ರೀನ್‌ ಟೈಮ್‌ (ಮೊಬೈಲ್‌, ಟಿವಿ, ಕಂಪ್ಯೂಟರ್) ನೋಡುವುದು ಕಡಿಮೆ ಮಾಡುವುದರಿಂದ ಉತ್ತಮ ನಿದ್ದೆ, ಒತ್ತಡ ಕಡಿಮೆಯಾಗುತ್ತದೆ, ಜೊತೆಗೆ ಹೃದಯಕ್ಕೆ ಆರೋಗ್ಯಕರ ಎನ್ನಿಸುವ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಲು ಸಾಧ್ಯ ಎಂದು ಅವರು ಸಲಹೆ ನೀಡುತ್ತಾರೆ.

ಹೊರಗೆ ಬರಿಗಾಲಿನಲ್ಲಿ ನಿಲ್ಲಿ

ಹೊರಗೆ ಬರಿಗಾಲಿನಲ್ಲಿ ನಿಂತುಕೊಳ್ಳಿ, ಇದನ್ನು ಗ್ರೌಂಡಿಂಗ್ ಎಂದು ಕರೆಯಲಾಗುತ್ತದೆ, ಮತ್ತು ಇದು ನಿಮ್ಮ ಹೃದಯಕ್ಕೆ ಒಳ್ಳೆಯದು" ಎಂದು ಡಾ. ಜ್ಯಾಕ್ ಹೇಳುತ್ತಾರೆ. ಅಂದರೆ ಮಣ್ಣಿನಲ್ಲಿ ಬರಿಗಾಲಿನಲ್ಲಿ ನಿಲ್ಲುವ ಅಭ್ಯಾಸ ಮಾಡಬೇಕು. ಗ್ರೌಂಡಿಂಗ್ ಅಥವಾ ಭೂಮಿಯೊಂದಿಗೆ ಸಂಪರ್ಕ ಸಾಧಿಸುವುದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ.

ಕೃತಜ್ಞರಾಗಿರುವುದನ್ನು ಅಭ್ಯಾಸ ಮಾಡಿ

ದಿನಕ್ಕೆ ಒಮ್ಮೆಯಾದರೂ ದೇವರಿಗೆ ಕೃತಜ್ಞತೆ ಸಲ್ಲಿಸಿ ಎಂದು ಸಲಹೆ ನೀಡುತ್ತಾರೆ ಡಾ. ಜ್ಯಾಕ್‌. ಕೃತಜ್ಞತೆಗಾಗಿ ಸಮಯ ತೆಗೆದುಕೊಳ್ಳುವುದರಿಂದ ಒತ್ತಡ ಕಡಿಮೆ ಮಾಡಬಹುದು, ಮನಸ್ಥಿತಿ ಸುಧಾರಿಸಬಹುದು ಮತ್ತು ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಸುಧಾರಿಸಬಹುದು.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.